ಬುಧವಾರ, ಮೇ 18, 2022
25 °C

ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಮಾಜದಲ್ಲಿ ಶಾಂತಿ ಕದಡುವ, ಕೋಮು ಸಂಘರ್ಷ ಹುಟ್ಟುಹಾಕುವ ಹೇಳಿಕೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಅವರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಎಚ್ಚರಿಸಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ರಾಜಕೀಯಕ್ಕೂ ಕಳಂಕ. ಅವರು ರಾಜೀನಾಮೆ ಕೊಟ್ಟು ಕನಿಷ್ಠ ತೀರ್ಥಹಳ್ಳಿ ಕ್ಷೇತ್ರದ ಮರ್ಯಾದೆ ಉಳಿಸಬೇಕು. ಹಿಂದೆ ನಂದಿತಾ ಪ್ರಕರಣದಲ್ಲೂ ಇಂತಹ ಹೇಳಿಕೆ ನೀಡುವ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಂಡಿದ್ದರು. ಕುವೆಂಪು, ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡ ಅವರು ಹುಟ್ಟಿದ ನೆಲದಲ್ಲಿ ಕೋಮುಭಾವನೆಯ ಇಂತಹ ವ್ಯಕ್ತಿಗಳು ಕಳಂಕ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಬೆಂಗಳೂರಿನ ಚಂದ್ರಶೇಖರ್ ಹತ್ಯೆ ಕುರಿತು ವಿರೋಧಾಬಾಸದ ಹೇಳಿಕೆ ನೀಡಿದ್ದಾರೆ. ಸಮಾಜದ ಶಾಂತಿಗೆ ಭಂಗ ತರುವ ಸಂಚು ಅವರ ಮಾತಲ್ಲಿದೆ. ಕೋಮುಭಾವನೆ →ಕೆರಳಿಸುವ ಇಂತಹ ಹೇಳಿಕೆಯಿಂದ→ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಕೋಮುವಾದ ನಿಯಂತ್ರಿಸಬೇಕಾದವರೇ ಕೋಮು
ದ್ವೇಷ ಸೃಷ್ಟಿಸುತ್ತಿದ್ದಾರೆ. ಗೃಹ ಸಚಿವರಾಗಿ ಜವಾಬ್ದಾರಿ ಮರೆತು ತಪ್ಪು ಮಾಹಿತಿಯ ಆಧಾರದಲ್ಲಿ ಹೇಳಿಕೆ ನೀಡಿದ್ದಾರೆ. ಅವರನ್ನು ಸಚಿವ ಸ್ಥಾನದಿಂದ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಕೆಟ್ಟ ಆಡಳಿತ ನೀಡುತ್ತಿದೆ. ಬಿಜೆಪಿ ನಾಯಕರು ಒಬ್ಬರಿಗಿಂತ ಒಬ್ಬರು ಕೋಮುವಾದ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಇದು ಸಂವಿಧಾನ ವಿರೋಧಿ. ಅದರಲ್ಲೂ ಆರಗ ಜ್ಞಾನೇಂದ್ರ ಅವರು ಅಸಂಬದ್ಧ, ಅಸಂವಿಧಾನಿಕ ಹೇಳಿಕೆ ನೀಡುತ್ತಿದ್ದಾರೆ. ಅವರ ಜತೆ ಸಿ.ಟಿ. ರವಿ, ಕೆ.ಎಸ್. ಈಶ್ವರಪ್ಪ ಅಂಥವರೂ ಸೇರಿಕೊಂಡು ಸಮಾಜದ ಶಾಂತಿ ಹಾಳುಮಾಡುತ್ತಿದ್ದಾರೆ. ಪ್ರತಿ ವಿಷಯದಲ್ಲೂ ಮೂಗುತೂರಿಸಿ ಧರ್ಮಗಳ ಮಧ್ಯೆ ಗೋಡೆ ಕಟ್ಟುತ್ತಿದ್ದಾರೆ. ಕೋಮುಗಲಭೆ ಸೃಷ್ಟಿಸುತ್ತಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ
ಎಂದು ಆತಂಕ ವ್ಯಕ್ತಪಡಿಸಿದರು.

ತೀರ್ಥಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರದ್ದೇ ಮೇಲುಗೈ ಆಗಿದೆ. ಕಲ್ಲು ಕ್ವಾರಿ, ಮರಳು ದಂಧೆಯಲ್ಲಿ ತೊಡಗಿದ್ದಾರೆ. ಹಣ ದೋಚುತ್ತಿದ್ದಾರೆ. ಈಚೆಗೆ ಶಿಕಾರಿಗೆ ಹೋದ ಸಮಯದಲ್ಲಿ ಗುಂಡೇಟು ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಉದ್ದೇಶಪೂರ್ವಕವಾಗಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಾಣಿ ಕೊಲ್ಲಲು ಹೋದವರಿಗೆ ಮನುಷ್ಯರನ್ನು ಕೊಲ್ಲುವ ಉದ್ದೇಶವಿರುತ್ತದೆಯೇ? ಪ್ರಕರಣ ಹಿಂದಕ್ಕೆ ಪಡೆಯಲು ಹಣದ ವ್ಯವಹಾರವೂ ನಡೆಯುತ್ತಿದೆ ಎಂದು ಆರೋಪಿಸಿದರು.

ವಿಧಾನಪರಿಷತ್‌ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಎಸ್‌.ಪಿ. ದಿನೇಶ್‌, ಹಾಪ್‌ಕಾಪ್ಸ್‌ ನಿರ್ದೇಶಕ ವಿಜಯಕುಮಾರ್ (ದನಿ), ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಸದಸ್ಯೆ ರೇಖಾ ರಂಗನಾಥ್, ಕಾಂಗ್ರೆಸ್‌ ಮುಖಂಡ ರಂಗೇಗೌಡ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು