ಬುಧವಾರ, ಏಪ್ರಿಲ್ 14, 2021
31 °C
ಚಂದ್ರಶೇಖರ್ ಕುಟುಂಬದಿಂದ ಚಂದದ ಕೃಷಿ

ಸಣ್ಣಮನೆ ಗ್ರಾಮದಲ್ಲೊಂದು ‘ದೊಡ್ಡ’ ಕೃಷಿ ಕುಟುಂಬ

ಎಂ.ರಾಘವೇಂದ್ರ Updated:

ಅಕ್ಷರ ಗಾತ್ರ : | |

Prajavani

ಸಾಗರ: ಅದೊಂದು ಬರೋಬ್ಬರಿ 44 ಸದಸ್ಯರ ಕುಟುಂಬ. ಅವರೆಲ್ಲರೂ ವಾಸವಾಗಿರುವುದು ಒಂದೇ ಸೂರಿನಡಿ. ಮನೆಯ ಹಿಂದೆ ಮುಂದೆ ಮುಗಿಲಿಗೆ ಮುಖ ಮಾಡಿ ಬಾನೆತ್ತರಕ್ಕೆ ಬೆಳೆದಿರುವ ಅಡಿಕೆ, ತೆಂಗಿನ ಮರಗಳು, ಸುತ್ತಲೂ ನಳನಳಿಸುವ ಹಚ್ಚ ಹಸಿರಿನ ನಡುವೆಯೊಂದು ಹೆಂಚಿನ ಮನೆ...

ಈ ದೃಶ್ಯವನ್ನು ನೀವು ಕಣ್ತುಂಬಿಕೊಳ್ಳಬೇಕು ಎಂದರೆ ಸಾಗರ ತಾಲ್ಲೂಕಿನ ಹಿರೇನೆಲ್ಲೂರು ಸಮೀಪದ ಸಣ್ಣಮನೆ ಗ್ರಾಮಕ್ಕೆ ಬರಬೇಕು. ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ, ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ ಎಂಬ ಮಾತು ಇಲ್ಲಿಗೆ ಬಂದರೆ ಸುಳ್ಳು ಎಂದೆನಿಸುತ್ತದೆ.

ಸಣ್ಣಮನೆ ಗ್ರಾಮದ ಚಂದ್ರಶೇಖರ್ ಅವರು 1982ರಲ್ಲಿ ಬಿ.ಎ. ಪದವಿ ಪೂರೈಸಿದಾಗ ಅವರೆದುರು ಸರ್ಕಾರಿ ನೌಕರಿ ಅಥವಾ ಕೃಷಿ ಈ ಎರಡು ಆಯ್ಕೆಗಳಿದ್ದವು. ತಂದೆ ಗಳಿಸಿದ ಅಲ್ಪ ಪ್ರಮಾಣದ ಕೃಷಿ ಭೂಮಿಯಲ್ಲಿ ವ್ಯವಸಾಯವನ್ನೇ ಇಷ್ಟಪಟ್ಟು ಆಯ್ಕೆ ಮಾಡಿಕೊಂಡ ಚಂದ್ರಶೇಖರ್ ಅಲ್ಲಿಂದ ಹಿಂದಕ್ಕೆ ತಿರುಗಿ ನೋಡಲೇ ಇಲ್ಲ.

ಅಡಿಕೆ, ಭತ್ತ, ಶುಂಠಿ, ಅನಾನಸ್, ಕಾಳುಮೆಣಸು, ಶೇಂಗಾ, ಜೋಳ, ಗೆಣಸು, ಮೆಣಸು, ತರಕಾರಿ ಹೀಗೆ ತರಹೇವಾರಿ ಬೆಳೆಗಳನ್ನು ತಮ್ಮ 27 ಎಕರೆ ಪ್ರದೇಶದಲ್ಲಿ ಚಂದ್ರಶೇಖರ್ ಬೆಳೆಯುತ್ತಿದ್ದಾರೆ. 30 ಆಕಳು, 10 ಎಮ್ಮೆ ಇರುವ ಅವರ ಕೊಟ್ಟಿಗೆ ಮೂಲಕವೇ ಕೃಷಿಗೆ ಬೇಕಾದ ಸಾವಯವ ಗೊಬ್ಬರ ತಯಾರಾಗುತ್ತದೆ. ಹೀಗಾಗಿ ಗೊಬ್ಬರದ ವಿಷಯದಲ್ಲಿ ಅವರು ಸ್ವಾವಲಂಬಿ.

ತಮ್ಮ ತೋಟದ ನಡುವೆ ದೊಡ್ಡ ಗಾತ್ರದ ಚಿಲುಮೆಯೊಂದನ್ನು ನಿರ್ಮಿಸುವ ಮೂಲಕ ಕೊಳವೆ ಬಾವಿಯಿಂದ ಬರುವ ನೀರನ್ನು ಅಲ್ಲಿ ಸಂಗ್ರಹಿಸುವ ದಾರಿಯನ್ನು ಚಂದ್ರಶೇಖರ್ ಕಂಡುಕೊಂಡಿದ್ದಾರೆ. ಚಿಲುಮೆಯಲ್ಲಿ ಸಂಗ್ರಹವಾದ ನೀರನ್ನು ಸ್ಪ್ರಿಂಕ್ಲರ್ ಮೂಲಕ ತೋಟಕ್ಕೆ ಹಾಯಿಸುತ್ತಾರೆ.

ಮಲೆನಾಡಿನಲ್ಲಿ ಕೃಷಿಗೆ ಇರುವ ಮುಖ್ಯ ಸಮಸ್ಯೆ ಎಂದರೆ ಕೂಲಿ ಕಾರ್ಮಿಕರದ್ದು. ಚಂದ್ರಶೇಖರ್ ಅವರ ಕುಟುಂಬದ ಹೆಚ್ಚಿನ ಸದಸ್ಯರು ಕೃಷಿ ಕೆಲಸದಲ್ಲಿ ಸ್ವತಃ ಭಾಗಿಯಾಗುವುದರಿಂದ ಅವರಿಗೆ ಈ ಸಮಸ್ಯೆ ಅಷ್ಟಾಗಿ ಕಾಡಿಲ್ಲ. ಕೊಯ್ಲಿನಂತಹ ಸಂದರ್ಭದಲ್ಲಿ ಮಾತ್ರ ಕೂಲಿಯಾಳುಗಳನ್ನು ಅವರು ಆಶ್ರಯಿಸಿದ್ದಾರೆ.

ಪ್ರತಿ ವರ್ಷ ಮಳೆಗಾಲದಲ್ಲಿ ವರದಾ ನದಿ ಪ್ರವಾಹದಿಂದ ಚಂದ್ರಶೇಖರ್ ಅವರಿಗೆ ಸೇರಿದ ಕೃಷಿಭೂಮಿಯ ಒಂದು ಭಾಗ ಸಂಪೂರ್ಣವಾಗಿ ಜಲಾವೃತಗೊಳ್ಳುತ್ತದೆ.

‘ವರದಾ ನದಿಗೆ ಚೆಕ್ ಡ್ಯಾಂ ನಿರ್ಮಿಸಿದಲ್ಲಿ ಬೆಳೆ ನಷ್ಟ ತಪ್ಪಿಸುವ ಜೊತೆಗೆ ಅಂತರ್ಜಲ ವೃದ್ಧಿಗೂ ಸಹಕಾರಿಯಾಗುತ್ತದೆ’ ಎಂಬುದು ಚಂದ್ರಶೇಖರ್ ಅವರ ಅಭಿಪ್ರಾಯ.

ಅಡಿಕೆ ಸಸಿಗಳ ಪೋಷಣೆಯನ್ನು ಸ್ವತಃ ಮಾಡುವ ಚಂದ್ರಶೇಖರ್ ಕುಟುಂಬ ಹೈನುಗಾರಿಕೆಯನ್ನು ಕೂಡ ನಿರ್ವಹಿಸುತ್ತಿದೆ. ಜಿಲ್ಲಾಮಟ್ಟದ ಉತ್ತಮ ಕೃಷಿಕ ಪ್ರಶಸ್ತಿಯನ್ನು ಕೃಷಿ ಇಲಾಖೆಯಿಂದ ಪಡೆದಿರುವ ಚಂದ್ರಶೇಖರ್‌ಗೆ ತಾವು ಕೃಷಿಕನಾಗಿರುವ ಬಗ್ಗೆ ಅಪಾರ ಹೆಮ್ಮೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು