ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಳು ಮಟ್ಟದ ಭಾಷೆ ಕಾಂಗ್ರೆಸ್‌ ಸೋಲಿಗೆ ಕಾರಣವಾಗಲಿದೆ: ಈಶ್ವರಪ್ಪ

Last Updated 28 ಅಕ್ಟೋಬರ್ 2020, 16:45 IST
ಅಕ್ಷರ ಗಾತ್ರ

ಶಿವಮೊಗ್ಗ: ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಕೀಳು ಮಟ್ಟದ ಭಾಷೆಯೇ ಅವರ ಸೋಲಿಗೆ ಕಾರಣವಾಗಲಿದೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ಕುಟುಕಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ನಾಯಕರ ಹೇಳಿಕೆಗಳು, ವೈಯಕ್ತಿಕ ಟೀಕೆಗಳು ನುರಿತ ರಾಜಕಾರಣಿ ನೀಡುವ ಹೇಳಿಕೆಗಳಂತಿಲ್ಲ. ಅವರು ಕಡಿಮೆ ಮತ ಗಳಿಸಲು ಬಳಸುವ ಭಾಷೆಯೇ ಕಾರಣವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ನಾಲ್ಕು ವಿಧಾನ ಪರಿಷತ್ ಕ್ಷೇತ್ರದ ಚುನಾವಣೆ ಮತ್ತು ಎರಡು ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರಗಳಲ್ಲಿ ಹಾಗೂ ಆರ್.ಆರ್. ನಗರ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು, ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಗಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸುವ ವಿಶ್ವಾಸವಿದೆ ಎಂದು ಹೇಳಿದರು.

‘ಶಿರಾದಲ್ಲಿ ಜೆಡಿಎಸ್– ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿವೆ ಎಂದು ಕಾಂಗ್ರೆಸ್‌ ಆರೋಪ ಮಾಡುತ್ತಿದ್ದು, ಅವರು ಸೋಲನ್ನು ಒಪ್ಪಿಕೊಂಡಿದ್ದಾರೆ. ಜೆಡಿಎಸ್ ರಾಜಕೀಯ ಪಕ್ಷವಾಗಿ ಸ್ಪರ್ಧಿಸುವುದು, ಬಿಡುವುದು ಅದರ ನಾಯಕರಿಗೆ ಬಿಟ್ಟ ವಿಚಾರ. ಬಿಜೆಪಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಸೋಲುವ ಭಯದಲ್ಲಿ ಕಾಂಗ್ರೆಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದರು.

ಗ್ರಾ.ಪಂ ಚುನಾವಣೆ ಮುಂದೂಡಿದರೆ ಒಳ್ಳೆಯದು:ಕೊರೊನಾ ಕಾರಣಕ್ಕೆ ಶಾಲೆಗಳನ್ನು ಯಾವಾಗ ಆರಂಭ ಮಾಡಬೇಕು ಎಂದು ಸರ್ಕಾರ ಚಿಂತನೆ ನಡೆಸುತ್ತಿದೆ. ಈಗಲೇ ಶಾಲೆಗಳನ್ನು ಆರಂಭಿಸುವುದು ಬೇಡ ಎಂದು ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಂತೆ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ಸರ್ಕಾರ ತಯಾರಿದೆ. ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದರೆ ಕೊರೊನಾ ಉಲ್ಬಣವಾಗಬಹುದು ಎಂಬ ಭಯ ಗ್ರಾಮೀಣ ಭಾಗದ ಜನರಲ್ಲಿದೆ. ಹೀಗಾಗಿ ಚುನಾವಣೆ ಮುಂದೂಡಿದರೆ ಒಳ್ಳೆಯದು ಎಂದು ಸಚಿವ ಕೆ.ಎಸ್‌.ಈಶ್ವರಪ್ಪ ಅಭಿಪ್ರಾಯಪಟ್ಟರು.

ನ್ಯಾಯಾಲಯ ಮತ್ತು ಚುನಾವಣಾ ಆಯೋಗದ ಆದೇಶಕ್ಕೆ ಬದ್ಧವಾಗಲೇಬೇಕು. ಸದ್ಯದ ಪರಿಸ್ಥಿತಿಯಲ್ಲಿ ಚುನಾವಣೆ ಮುಂದೂಡುವುದು ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಇದು ಕೇವಲ ಬಿಜೆಪಿ ಅಭಿಪ್ರಾಯವಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಅಭಿಪ್ರಾಯವೂ ಇದೇ ಆಗಿದೆ. ಈಗಾಗಲೇ ಆರೋಗ್ಯ ಸಚಿವರು ಮಾರ್ಚ್‍ವರೆಗೆ ಚುನಾವಣೆ ಮುಂದೂಡಬೇಕು ಎಂದು ಹೇಳಿದ್ದಾರೆ. ಗ್ರಾಮೀಣ ಜನರ ಅಪೇಕ್ಷೆಯೂ ಇದೇ ಆಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT