ಶಿವಮೊಗ್ಗ: ತಾಲ್ಲೂಕಿನ ತುಂಗಾ–ಭದ್ರಾ ನದಿಗಳ ಸಂಗಮ ಸ್ಥಳವಾದ ಕೂಡಲಿಯಲ್ಲಿರುವ ಮಠದಲ್ಲಿದ್ದ ಶಾರದಾಂಬೆ ದೇವಿಯ ಎರಡು ಚಿನ್ನದ ಪಾದುಕೆಗಳನ್ನು ಕಳವು ಮಾಡಲಾಗಿದೆ.
ಪಾದುಕೆಗಳು ಒಂದು ಕೆ.ಜಿ ತೂಕದ್ದಾಗಿದ್ದು, ಒಟ್ಟು ₹ 60 ಲಕ್ಷ ಮೌಲ್ಯ ಹೊಂದಿವೆ.
ಕೂಡಲಿ ಮಠದಲ್ಲಿ ಪರಂಪರಾಗತವಾಗಿ ಇರುವ ಈ ಪಾದುಕೆಗಳು ಹಾಗೂ ಬೆಳ್ಳಿಯ ಮುದ್ರೆಯನ್ನು ಮಠದ ಬೀರುವಿನಿಲ್ಲಿ ಇರಿಸಲಾಗಿತ್ತು. ಅವು ಕಳುವಾಗಿದೆ ಎಂದು ಮಠದ ಪ್ರಮುಖ ರಮೇಶ ಹುಲ್ಮನಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
‘ಮಠದ ಪೀಠಾಧಿಪತಿ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಶ್ರೀಗಳು ಹಿಂದಿನ ಚಾತುರ್ಮಾಸ್ಯ ಹಾಗೂ ಅನಾರೋಗ್ಯದ ನಿಮಿತ್ತ ಎಂಟು ತಿಂಗಳ ಕಾಲ ದಾವಣಗೆರೆ ಹಾಗೂ ಬೆಂಗಳೂರಿನಲ್ಲಿ ವಾಸವಿದ್ದರು. ಈ ಬಾರಿಯ ಚಾತುರ್ಮಾಸ್ಯದ ಕಾರಣ ಶ್ರೀಗಳು ಜುಲೈನಲ್ಲಿ ಕೂಡಲಿ ಮಠಕ್ಕೆ ಬಂದು ವಾಸ್ತವ್ಯ ಹೂಡಿದ್ದರು.
ಈಚೆಗೆ ದೇವಸ್ಥಾನದ ಹುಂಡಿಯನ್ನು ತೆಗೆದು ಕಾಣಿಕೆ ಹಣವನ್ನು ಬ್ಯಾಂಕ್‌ಗೆ ಜಮೆ ಮಾಡುವ ಮುನ್ನ ಶ್ರೀಗಳ ಸೂಚನೆಯಂತೆ ಬೀರುವಿನಲ್ಲಿ ಇಡಲುಮುಂದಾಗಿದ್ದೆವು. ಆಗ ಬೀಗದ ಕೈನಲ್ಲಿ ವ್ಯತ್ಯಾಸ ಆಗಿದ್ದು ಗಮನಕ್ಕೆ ಬಂತು. ಪರಿಶೀಲಿಸಿದಾಗ ಪಾದುಕೆಗಳು ಕಳವು ಆಗಿದ್ದು ಗೊತ್ತಾಗಿದೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.