ಸೋಮವಾರ, ಜೂನ್ 27, 2022
28 °C

ಕುವೆಂಪು ವಿವಿ: ಠಾಣೆ ಮೆಟ್ಟಿಲೇರಿದ ಕುಲಪತಿ–ಕುಲಸಚಿವರ ಜಗಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರ ಕುರ್ಚಿ ಜಗಳ ಬೀದಿಗೆ ಬಿದ್ದಿದ್ದು, ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಹಾಗೂ ಕುಲಸಚಿವ ಎಸ್‌.ಎಸ್‌.ಪಾಟೀಲ್‌ ಅವರು ಬುಧವಾರ ಭದ್ರಾವತಿ ಗ್ರಾಮಾಂತರ ಠಾಣೆಗೆ ದೂರು– ಪ್ರತಿ ದೂರು ನೀಡಿದ್ದಾರೆ.

ಸರ್ಕಾರ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವ ಎಸ್‌.ಎಸ್.ಪಾಟೀಲ್‌ ಅವರನ್ನು ಬದಲಿಸಿ, ಆ ಸ್ಥಾನಕ್ಕೆ ಸೋಮವಾರ ಕೆಎಎಸ್‌ ಅಧಿಕಾರಿ ಸಿ.ಎನ್.ಶ್ರೀಧರ್ ಅವರನ್ನು ವರ್ಗಾವಣೆ ಮಾಡಿತ್ತು. ಮಂಗಳವಾರ ವಿಶ್ವವಿದ್ಯಾಲಯಕ್ಕೆ ಬಂದ ಶ್ರೀಧರ್ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಈ ಮಧ್ಯೆ ಸರ್ಕಾರ ತಾನೇ ಹೊರಡಿಸಿದ್ದ ಪಾಟೀಲ್‌ ಅವರ ವರ್ಗಾವಣೆ ಆದೇಶವನ್ನು ಒಂದೇ ದಿನದಲ್ಲಿ ರದ್ದು ಮಾಡಿತ್ತು. ಬುಧವಾರ ಕಚೇರಿಗೆ ಬಂದ ಅವರು ಎಂದಿನಂತೆ ಕುಲಸಚಿವರ ಕರ್ತವ್ಯ ಆರಂಭಿಸಿದ್ದರು.

‘ಸರ್ಕಾರದ ಆದೇಶದಂತೆ ಶ್ರೀಧರ್ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಕಚೇರಿಯ ಬೀಗದ ಕೀ ಅವರ ಬಳಿ ಇತ್ತು. ಪಾಟೀಲ್‌ ಅವರು ತಮ್ಮ ಗಮನಕ್ಕೆ ತಾರದೇ ಬೀಗ ಒಡೆಸಿದ್ದಾರೆ. ನಿಯಮಬಾಹಿರವಾಗಿ ಕುರ್ಚಿ ಮೇಲೆ ಕುಳಿತಿದ್ದಾರೆ’ ಎಂದು ಕುಲಪತಿ ವೀರಭದ್ರಪ್ಪ ದೂರು ನೀಡಿದ್ದಾರೆ.

‘ತಮ್ಮ ಅನುಪಸ್ಥಿತಿಯಲ್ಲಿ ಕುಲಪತಿಗಳು ಶ್ರೀಧರ್ ಅವರಿಗೆ ಹುದ್ದೆಯ ಜವಾಬ್ದಾರಿ ವಹಿಸಿದ್ದಾರೆ. ಇದು ಕಾನೂನುಬಾಹಿರ. ಅಲ್ಲದೇ ತಮ್ಮ ವರ್ಗಾವಣೆ ಆದೇಶ ರದ್ದಾಗಿದೆ. ಹುದ್ದೆಯ ಹೊಣೆ ವರ್ಗಾಯಿಸದ ಕಾರಣ ನಾವೇ ಕುಲಸಚಿವರಾಗಿ ಮುಂದುವರಿದಿರುವೆ. ಅನಗತ್ಯ ಕಿರುಕುಳ ನೀಡುತ್ತಿರುವ ವೀರಭದ್ರಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಎಸ್‌.ಎಸ್.ಪಾಟೀಲ್‌ ದೂರು ಸಲ್ಲಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಇಬ್ಬರೂ ಸ್ಥಾನ ಅಲಂಕರಿಸಿದ್ದು, ಆಡಳಿತ ವ್ಯವಹಾರದಲ್ಲಿ ಹೊಂದಾಣಿಕೆ ಇರಲಿಲ್ಲ. ಇದು ವಿಶ್ವವಿದ್ಯಾಲಯದಲ್ಲಿ ಹಲವು ಅಹಿತಕರ ಬೆಳವಣಿಗೆಗಳಿಗೆ ಸಾಕ್ಷಿಯಾಗಿತ್ತು. ಸುಗಮ ಆಡಳಿತ ನಿರ್ವಹಣೆಗೂ ತೊಡಕಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು