ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯಿಂದ ನಡೆದ ಲಕ್ಷ್ಮೀ ಪೂಜೆ

ಅಂಗಡಿ, ಮನೆ, ಹೋಟೆಲ್‌ಗಳಲ್ಲಿ ದೀಪಾವಳಿ ಸಂಭ್ರಮ l ಇಂದು ಬಲಿಪಾಡ್ಯಮಿ
Last Updated 5 ನವೆಂಬರ್ 2021, 5:22 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರ ಸೇರಿ ಜಿಲ್ಲೆಯಾದ್ಯಂತ ಗುರುವಾರ ಅಂಗಡಿ, ಮನೆ, ಹೋಟೆಲ್‌ಗಳಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಕಂಡು ಬಂದಿತು. ಶ್ರದ್ಧಾ-ಭಕ್ತಿಯಿಂದ ಲಕ್ಷ್ಮೀ ಪೂಜೆ ಮಾಡುವ ಮೂಲಕ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು.

ಅಂಗಡಿಗಳು, ಶೋರೂಂಗಳು, ಗ್ಯಾರೇಜ್‌ಗಳು, ಕಚೇರಿಗಳು, ಸೇರಿದಂತೆ ಹಲವರು ಲಕ್ಷ್ಮಿ ಪೂಜೆ ಮಾಡಿದ್ದಾರೆ. ಕೆಲವರು ಸಂಜೆ ಲಕ್ಷ್ಮೀ ಪೂಜೆ ನೆರವೇರಿಸಿದರು. ಕೆಲವರು ನರಕ ಚತುರ್ಥಿ ದಿನವಾದ ಬುಧವಾರ ತಡ ರಾತ್ರಿಯೇ ಮನೆಗಳಲ್ಲಿ ಲಕ್ಷ್ಮೀ ಪೂಜೆ ನಡೆಸಿದರೆ, ಗುರುವಾರ ಬೆಳಿಗ್ಗೆ, ಮಧ್ಯಾಹ್ನ ಮತ್ತಷ್ಟು ಜನರು ಪೂಜೆ ಮಾಡಿದರು.

ಗುರುವಾರವೂ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂದಿತು. ದಿನಸಿ, ಬಟ್ಟೆ ಅಂಗಡಿಗಳು, ಪಟಾಕಿ ಸ್ಟಾಲ್‌ಗಳ ಮುಂದೆ ಜನಸಂದಣಿ ಇತ್ತು. ಹೊಸಬಟ್ಟೆ, ಪೂಜಾ ಸಾಮಗ್ರಿ, ಪಟಾಕಿ ಖರೀದಿ ಭರಾಟೆ ಜೋರಾಗಿತ್ತು.

ಹಲವು ವೃತ್ತಗಳಲ್ಲಿ ಬಾಳೆಕಂದು, ಉತ್ರಾಣಿ, ಮಾವಿನಸೊಪ್ಪು, ಬಗೆಬಗೆಯ ಹೂವುಗಳು, ಕುಂಬಳಕಾಯಿಗಳನ್ನು ಖರೀದಿಸಿದರು. ಈ ಬಾರಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ಚೆಂಡು ಹೂವು ಬಂದಿದ್ದು, ನಗರದ ಹಲವಡೆ ಚೆಂಡು ಹೂವು ಮಾರಾಟ ಜೋರಾಗಿತ್ತು. ಅದರ ಜೊತೆಗೆ ಆಕಾಶಬುಟ್ಟಿ, ಹಣತೆಗಳ ಮಾರಾಟವೂ ಹೆಚ್ಚಿತ್ತು.

ಗಾಂಧಿ ಬಜಾರ್ ಸೇರಿ ಹಲವು ಪ್ರಮುಖ ರಸ್ತೆಗಳ ವರ್ತಕರು ತಮ್ಮ ಅಂಗಡಿ ಮಳಿಗೆಗಳ ಎದುರು ಶಾಮಿ ಯಾನ, ರಂಗೋಲಿ ಹಾಕಿವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು ಕಂಡು ಬಂತು. ಅನೇಕರು ತಮ್ಮ ಮನೆಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಿ, ಆಕಾಶಬುಟ್ಟಿ ಕಟ್ಟಿ ಬೆಳಕಿನ ಹಬ್ಬ ಆಚರಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಹಬ್ಬದ ಸಿದ್ಧತೆ ಜೋರಾಗಿತ್ತು. ಕೆಮ್ಮಣ್ಣು, ಉರುಮಂಜು ತಂದು ಮನೆಯ ಗೋಡೆಗಳಿಗೆ ಬಳಿಯುವುದು, ಬೇಸಾಯದ ಸಲಕರಣೆಗಳ ತೊಳೆದು ಒಟ್ಟಾಗಿ ಜೋಡಿಸಿಟ್ಟು ಪೂಜಿಸುವುದು ರೂಢಿಯಲ್ಲಿದೆ. ಕುಂಟೆ, ನೊಗ, ಎತ್ತಿನ ಗಾಡಿ, ನೇಗಿಲು ಮುಂತಾದ ಎಲ್ಲಾ ವ್ಯವಸಾಯ ಉಪಕರಣಗಳನ್ನು ರೈತರು ಬಹಳ ಶ್ರದ್ಧೆ, ಭಕ್ತಿಯಿಂದ ಪೂಜಿಸುವ ದೃಶ್ಯ ಕಂಡು ಬಂದಿದೆ.ಮಕ್ಕಳು ಹೊಸ ಬಟ್ಟೆ ಧರಿಸಿ ಕುಣಿದು ಕುಪ್ಪಳಿಸಿದರೆ ಪಟಾಕಿ ಸದ್ದು ಕೂಡ ಅಲ್ಲಲ್ಲಿ ಕೇಳಿ ಬರುತ್ತಿತ್ತು.

ಈ ಬಾರಿ ಪಟಾಕಿ ಹಾವಳಿ ಹೆಚ್ಚಾಗಿ ಇಲ್ಲದಿದ್ದರೂ ಕಡಿಮೆಯೇನೂಇರಲಿಲ್ಲ. ಹೆಚ್ಚು ಅಪಾಯಕಾರಿಯಲ್ಲದ ಹಸಿರು ಪಟಾಕಿಗಳನ್ನು ಜನರು ಖರೀದಿಸಿದ್ದಾರೆ. ಬೆಲೆ ಏರಿಕೆ ಮಧ್ಯೆಯೂ ದೀಪಾವಳಿ ಆಚರಿಸಲು ಜನರುಹೆಚ್ಚಿನ ಆಸಕ್ತಿ ತೋರಿದ್ದಾರೆ. ದೀಪಾವಳಿ ಸಂಭ್ರಮ ಮುಂದುವರಿದಿದೆ. ಶುಕ್ರವಾರ ಬಲಿಪಾಡ್ಯಮಿ ಇದ್ದು, ಹಬ್ಬಕ್ಕೆ ಮತ್ತಷ್ಟು ಮೆರುಗು ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT