ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಶೀಘ್ರ ಬಿಡುಗಡೆ: ಬಿಎಸ್‌ವೈ
ಶಿವಮೊಗ್ಗ: ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಅಂತಿಮ ಪಟ್ಟಿ ಶೀಘ್ರ ಬಿಡುಗಡೆ ಆಗಲಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಭಾನುವಾರ ನಾನು ದೆಹಲಿಗೆ ಹೋಗುತ್ತಿದ್ದೇನೆ. ನಾಳೆ ಸಂಜೆ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಒಂದು ಸುತ್ತಿನ ಸಭೆ ಆಗಿದೆ. ನಾಳೆ ಬಹುತೇಕ ಅಂತಿಮ ಪಟ್ಟಿ ಸಿದ್ಧವಾಗಲಿದೆ ಎಂದರು. ಜೆಡಿಎಸ್ ಗೆ ಸ್ಥಾನಗಳ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು ಯಾರು ಯಾರಿಗೆ ಯಾವ ಕ್ಷೇತ್ರ ಕೊಡುತ್ತಾರೆಯೋ ಗೊತ್ತಿಲ್ಲ. ಕ್ಷೇತ್ರ ಹಂಚಿಕೆ ಬಗ್ಗೆ ಅಂತಿಮ ಚರ್ಚೆ ನಡೆಯುತ್ತಿದ್ದು ನಾಳೆ ತೀರ್ಮಾನ ಕೈಗೊಳ್ಳಲಾಗುವುದು. ಹಾಲಿ ಸಂಸದರಿಗೆ ಟಿಕೆಟ್ ನೀಡಲಾಗುವುದಿಲ್ಲ ಎಂಬ ಚರ್ಚೆ ನಡೆದಿಲ್ಲ. ನಾಳೆ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದರು. ಶಿವಮೊಗ್ಗ ಕ್ಷೇತ್ರದಿಂದ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ ಸಂತೋಷವೇ. ಕಾಂಗ್ರೆಸ್‌ನಿಂದ ಯಾರಾದರೂ ಅಭ್ಯರ್ಥಿ ಸ್ಪರ್ಧಿಸಲೇಬೇಕಲ್ಲವೇ ಎಂದು ಮಾರ್ಮಿಕವಾಗಿ ನುಡಿದರು.