ಸೊರಬ: ಖಾತೆ ಬದಲಾವಣೆಗಾಗಿ ಸಾರ್ವಜನಿಕರೊಬ್ಬರಿಂದ ಲಂಚ ಪಡೆಯುತ್ತಿದ್ದ ಪುರಸಭೆಯ ಕಂದಾಯ ವಿಭಾಗದ ಸೇವಾ ನಿರ್ವಾಹಕಿ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಈ ಮೊದಲು ಪೌರ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ಕಂದಾಯ ವಿಭಾಗದ ಸೇವಾ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿರುವ ಚಂದ್ರಕಲಾ ವ್ಯಕ್ತಿಯೊಬ್ಬರಿಂದ ₹ 15,000 ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ.
ಪುರಸಭೆ ವ್ಯಾಪ್ತಿಯ ಹೊಸಪೇಟೆ ಬಡಾವಣೆಯಲ್ಲಿ ನಿವೇಶನ ಖರೀದಿಸಿದ್ದ ಬೆಂಗಳೂರು ನಿವಾಸಿ ಭಾಸ್ಕರ ಶೆಟ್ಟಿ, ಖಾತೆ ಬದಲಾವಣೆಗೆ ಜೂನ್ 17ರಂದು ಅರ್ಜಿ ಸಲ್ಲಿಸಿದ್ದರು. ಅವರ ಸೋದರ ಕೆಲಸ ಮಾಡಿಕೊಡುವಂತೆ ಜೂನ್ 21ರಂದು ಕಚೇರಿಗೆ ಬಂದಾಗ ₹ 15,000 ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಮಂಜುನಾಥ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು
ಮಂಗಳವಾರ ಲಂಚ ಪಡೆಯುವ ವೇಳೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಚಂದ್ರಕಲಾ ಅವರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಲೋಕಾಯುಕ್ತ ಡಿವೈಎಸ್‍ಪಿ ಉಮೇಶ್ ಈಶ್ವರ ನಾಯ್ಕ್ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಲೋಕಾಯುಕ್ತ ಪಿಎಸ್ಐ ರಾಧಾಕೃಷ್ಣ, ಸಿಬ್ಬಂದಿ ಪ್ರಶಾಂತ್, ಪ್ರಸನ್ನ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.