ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಬಡವರ ಪರ ಯೋಜನೆ ರೂಪಿಸುವ ಪಕ್ಷ: ಮಧು ಬಂಗಾರಪ್ಪ

ಸನ್ಮಾನ ಸ್ವೀಕರಿಸಿದ ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಅಭಿಮತ
Last Updated 4 ಆಗಸ್ಟ್ 2021, 15:19 IST
ಅಕ್ಷರ ಗಾತ್ರ

ಶಿವಮೊಗ್ಗ: ಕಾಂಗ್ರೆಸ್‌ ಬಡವರ ಪರವಾದ ಪಕ್ಷ. ಬಡವರಿಗಾಗಿ ನೂರಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದಕ್ಕಾಗಿ ಪಕ್ಷದ ಮೇಲೆ ವಿಶೇಷ ಪ್ರೀತಿ ಇದೆ ಎಂದು ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಬಂಗಾರಪ್ಪ ಅವರು ಕಾಂಗ್ರೆಸ್‌ನಲ್ಲಿದ್ದಾಗಲೇ ಮುಖ್ಯಮಂತ್ರಿ ಸ್ಥಾನ ಲಭಿಸಿತ್ತು. ಜನನಾಯಕರಾಗಿದ್ದ ತಂದೆ ಹಲವು ಯೋಜನೆ ಜಾರಿಗೆ ತಂದಿದ್ದರು. ಅವರ ಪುತ್ರನಾಗಿ ಅದೇ ಹಾದಿಯಲ್ಲಿ ಸಾಗುವೆ. ಎಲ್ಲರೂ ಒಟ್ಟಾಗಿ ಕಾಂಗ್ರೆಸ್ ಬಲಪಡಿಸಬೇಕು. ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸಬೇಕು.ಬಡವರ ಉದ್ಧಾರ ಆಗುವುದೇ ಕಾಂಗ್ರೆಸ್‌ನಿಂದ ಎಂದು ಪ್ರತಿಪಾದಿಸಿದರು.

ಕಾಗೋಡು ತಿಮ್ಮಪ್ಪ ಸೇರಿದಂತೆ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರ ಜತೆ ಸೇರಿ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕಿದೆ. ಜಿಲ್ಲೆಯಲ್ಲಿ ಕಳೆದುಕೊಂಡಿರುವ ಕಾಂಗ್ರೆಸ್ ಸಾಮ್ರಾಜ್ಯ ಮತ್ತಷ್ಟು ವಿಸ್ತರಿಸುವ ಅಗತ್ಯವಿದೆ. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಜನರಿಗೆತಲುಪಿಸುವ ಕೆಲಸವಾಗಬೇಕು. ಬೇರುಮಟ್ಟದಿಂದ ಪಕ್ಷ ಮತ್ತಷ್ಟು ಗಟ್ಟಿಗೊಳಿಸಬೇಕು. ಹೋರಾಟಗಳು ಅನಿವಾರ್ಯವಾದರೆ ಜಿಲ್ಲೆಯಿಂದಲೇ ಆರಂಭಿಸಬೇಕು. ಕೇವಲ ಅಧಿಕಾರಕ್ಕಾಗಿ ಅಲ್ಲ. ಜನರ ಕಷ್ಟಗಳ ನಿವಾರಣೆಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕಿದೆ. ಅಧಿಕಾರದ ಅಹಂಕಾರದಿಂದ ಮೆರೆಯುತ್ತಿರುವ ಬಿಜೆಪಿ ಸರ್ಕಾರಕ್ಕೆ ಜನರ ಮೂಲಕವೇ ಉತ್ತರ ಕೊಡಬೇಕಿದೆ ಎಂದರು.

‘ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರನ್ನು ಕರೆದು ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ, ಸಮಾವೇಶದ ಮೂಲಕ ಪಕ್ಷ ಸೇರಬೇಕು ಎಂದುಕೊಂಡಿದ್ದೆ. ಆದರೆ, ಕೋವಿಡ್ ಕಾರಣ ಅದು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ನಾಯಕರು ತೋರಿದ ಪ್ರೀತಿ ಅನನ್ಯ. ಅದ್ದೂರಿಯಾಗಿಯೇ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಪ್ರಾಥಮಿಕ ಸದಸ್ಯತ್ವ ಪಡೆದಿದ್ದೇನೆ ಎಂದು ಕೃತಜ್ಞತೆ ಸಲ್ಲಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ಮಧು ಬಂಗಾರಪ್ಪ, ಆರ್‌.ಎಂ.ಮಂಜುನಾಥ ಗೌಡ ಅವರು ಪಕ್ಷಕ್ಕೆ ಬಂದಿರುವುದು ಮತ್ತಷ್ಟು ಬಲ ತಂದಿದೆ. ಇಬ್ಬರ ಶಕ್ತಿ ಬಳಸಿಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಪ್ರಬಲವಾಗಿ ಸಂಘಟಿಸಲಾಗುವುದು ಎಂದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕರಾದ ಬಿ.ಕೆ.ಸಂಗಮೇಶ್ವರ, ಆರ್.ಪ್ರಸನ್ನಕುಮಾರ್, ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಬೇಳೂರು ಗೋಪಾಲಕೃಷ್ಣ, ಅಪೆಕ್ಸ್‌ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಸೂಡಾ ಮಾಜಿ ಅಧ್ಯಕ್ಷ ಎನ್‌.ರಮೇಶ್, ಪದವೀಧರರ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್, ಮುಖಂಡರಾದ ಎಸ್‌.ರಾಜಶೇಖರ್, ಶ್ರೀನಿವಾಸ್ ಕರಿಯಣ್ಣ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT