ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಗುವಳಿದಾರರ ಹಿತರಕ್ಷಣೆಗೆ ಬದ್ಧ: ಮಧು ಬಂಗಾರಪ್ಪ

Published 5 ಮಾರ್ಚ್ 2024, 12:59 IST
Last Updated 5 ಮಾರ್ಚ್ 2024, 12:59 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಅನ್ನ ನೀಡುವ ರೈತರಿಗೆ ಮೋಸ ಆಗದಂತೆ ಜಾಗೃತಿ ವಹಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಮಧು ಬಂಗಾರಪ್ಪ ತಿಳಿಸಿದರು.

ಇಲ್ಲಿ ₹ 13.5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಗ್ರಾಮೀಣಾಭಿವೃದ್ಧಿ ಭವನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ರೈತ ಸಮಸ್ಯೆಗಳು ಸಾಕಷ್ಟಿವೆ. ಕಾನೂನು ತೊಡಕುಗಳ ಕಾರಣ ಬಗೆಹರಿಸಲು ಸ್ವಲ್ಪ ಕಾಲಾವಕಾಶ ಬೇಕು. ರಾಜ್ಯ ಸರ್ಕಾರದ ಹಂತದಲ್ಲಿ ಬಹುತೇಕ ತೊಡಕುಗಳು ನಿವಾರಣೆಯಾಗಿದ್ದು, ಕೇಂದ್ರದ ಅನುಮತಿ ಬೇಕಿದೆ. ನ್ಯಾಯಾಲಯದಲ್ಲೂ ಪ್ರಕರಣಗಳ ವಿಚಾರಣೆ ಬಾಕಿ ಇವೆ. ಶೀಘ್ರ ಸಮಸ್ಯೆ ಬಗೆಹರಿಸಿ ಅರಣ್ಯ ಭೂ ಸಾಗುವಳಿದಾರರ ಹಿತ ರಕ್ಷಿಸಲಾಗುವುದು. ಹಕ್ಕುಪತ್ರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮೇಗರವಳ್ಳಿ–ಸೋಮೇಶ್ವರ ಮಾರ್ಗವಾಗಿ 10.5 ಕಿ.ಮೀ.ವರೆಗೆ ಸುರಂಗದ ನೀಲನಕ್ಷೆ ಸಿದ್ಧವಾಗಿದ್ದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಶಾಶ್ವತವಾಗಿ ಮೂಲಸೌಕರ್ಯ ಒದಗಿಸುವ ಯೋಜನೆಗಳನ್ನು ರೂಪಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಗ್ರಾಮೀಣಾಭಿವೃದ್ಧಿ ಭವನ ನಿರ್ಮಾಣದ ಶ್ರೇಯಸ್ಸು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.‌ ಯಡಿಯೂರಪ್ಪ ಅವರಿಗೆ ಸೇರುತ್ತದೆ. ಒಂದೇ ಸೂರಿನಲ್ಲಿ ಹಲವು ಕಚೇರಿ ತರುವ ಕನಸು ನನಸಾಗಿದೆ. ರಾಜಕಾರಣದಲ್ಲಿ ಟೀಕೆ ವಿಷಯಾಧಾರಿತ ಆಗಿರಬೇಕು. ತೀರಾ ವೈಯಕ್ತಿಕ ಈರ್ಶೆಗಳಿಗೆ ಅವಕಾಶ ಕೊಡಬಾರದು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಎಸ್. ರುದ್ರೇಗೌಡ, ಎಂಎಡಿಬಿ ಅಧ್ಯಕ್ಷ ಆರ್.ಎಂ.‌ ಮಂಜುನಾಥ ಗೌಡ, ಮಾಜಿ ಶಾಸಕ ಕಡಿದಾಳು ದಿವಾಕರ್‌, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಮೇಶ್‌ ಮಾತನಾಡಿದರು.

ತಹಶೀಲ್ದಾರ್‌ ಬಿ.ಜಿ. ಜಕ್ಕನಗೌಡರ್‌, ಇಓ ಶೈಲಾ ಎನ್‌, ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಆರ್‌. ಗಣೇಶ್‌, ಆರ್‌ಡಿಪಿಆರ್‌ ಇಇ ವಿಜಯಕುಮಾರ್‌ ವೈ.ಎನ್.‌ ಉಪಸ್ಥಿತರಿದ್ದರು.

ಟೀಕೆಗೆ ಗುರಿಯಾದ ಹೋಮ

ಗ್ರಾಮೀಣಾಭಿವೃದ್ಧಿ ಭವನ ಉದ್ಘಾಟನೆಯ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ಕಚೇರಿಯಲ್ಲಿ ಹೋಮ ನಡೆಸಿದ್ದು ಸಾರ್ವಜನಿಕವಾಗಿ ಟೀಕೆಗೆ ಗುರಿಯಾಯಿತು. ಸಂವಿಧಾನಿಕವಾಗಿ ರಚನೆಯಾದ ಕಚೇರಿಯಲ್ಲಿ ಒಂದು ಧರ್ಮಕ್ಕೆ ಸೀಮಿತವಾದ ಧಾರ್ಮಿಕ ಕಾರ್ಯಕ್ರಮ ಆಚರಿಸುವುದು ಎಷ್ಟು ಸರಿ ಎಂಬ ಪ್ರಶ್ನೆಗಳು ಕೇಳಿ ಬಂದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT