ಸಾಗರ: ‘ಕಳೆದ 15 ವರ್ಷಗಳಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸದಸ್ಯರೇ ಆಯ್ಕೆಯಾಗಿದ್ದರೂ ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಿಸಲು ಯಾವುದೆ ಆಸಕ್ತಿ ತೋರಲಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಆರೋಪಿಸಿದರು.
ಇಲ್ಲಿನ ಈಡಿಗರ ಸಮುದಾಯ ಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಭೂರಹಿತ ಬಡವರಿಗೆ ಭೂಮಿಯ ಹಕ್ಕು ಕೊಡಿಸಿದ್ದು ಕಾಂಗ್ರೆಸ್ ಪಕ್ಷವೆ ಹೊರತು ಬಿಜೆಪಿಯಲ್ಲ. ಭೂರಹಿತರ ಪರವಾಗಿ ಧ್ವನಿ ಎತ್ತಬೇಕಿದ್ದ ಬಿಜೆಪಿಯ ಮುಖಂಡರು ಮೌನವಾಗಿರುವುದು ಬಿಜೆಪಿಯ ಬಡವರ ವಿರೋಧಿ ನೀತಿಗೆ ಸಾಕ್ಷಿಯಾಗಿದೆ’ ಎಂದು ಟೀಕಿಸಿದರು.
‘ಕಾಂಗ್ರೆಸ್ ನ ಪ್ರತಿಯೊಬ್ಬ ಕಾರ್ಯಕರ್ತರು ಲೋಕಸಭೆ ಚುನಾವಣೆಯಲ್ಲಿ ‘ನನ್ನ ಬೂತ್, ನನ್ನ ಜವಾಬ್ಧಾರಿ’ ಎಂಬ ಘೋಷಣೆಯಡಿ ಅವರ ವ್ಯಾಪ್ತಿಯ ಬೂತ್ ನಲ್ಲಿ ಲೀಡ್ ಬರುವಂತೆ ನೋಡಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನುಡಿದಂತೆ 5 ಗ್ಯಾರೆಂಟಿಗಳನ್ನು ನೀಡಿರುವುದರಿಂದ ಮತದಾರರ ಮುಂದೆ ಹೋಗುವ ನೈತಿಕ ಶಕ್ತಿ ನಮ್ಮೆಲ್ಲರಿಗೂ ಇದೆ’ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್, ‘ಶಿವಮೊಗ್ಗ ಜಿಲ್ಲೆಯ ಮಗಳಾಗಿರುವ ಕಾರಣಕ್ಕೆ ನನಗೆ ಮತ ಕೇಳುವ ಹಕ್ಕು ಇದೆ. ನನ್ನ ತಂದೆ ಎಸ್.ಬಂಗಾರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಹಲವು ಜನಪರ ಯೋಜನೆಗಳು ನನ್ನ ಕೈಹಿಡಿಯವು ವಿಶ್ವಾಸವಿದೆ. ಲೋಕಸಭೆಯಲ್ಲಿ ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರ ಧ್ವನಿಯಾಗುತ್ತೇನೆ’ ಎಂದರು.
ಚಿತ್ರನಟ ಶಿವರಾಜಕುಮಾರ್, ‘ನನ್ನ ತಂದೆ ರಾಜ್ ಕುಮಾರ್, ಮಾವ ಎಸ್.ಬಂಗಾರಪ್ಪ ಈ ಎರಡೂ ಕುಟುಂಬದವರು ಸಾಮಾಜಿಕ ಕಾಳಜಿಯನ್ನು ತೋರುತ್ತಲೆ ಬಂದಿದ್ದಾರೆ. ಈ ಎರಡೂ ಕುಟುಂಬಗಳಿಂದ ಸಾಮಾಜಿಕ ಕಳಕಳಿ ಹೇಗಿರಬೇಕು ಎಂಬುದನ್ನು ಅಭ್ಯರ್ಥಿ ಗೀತಾ ಕಲಿತಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಅವರ ಪರವಾಗಿ ಅತ್ಯುತ್ತಮ ವಾತಾವರಣ ನಿರ್ಮಾಣವಾಗಿದ್ದು ಜನರ ನಂಬಿಕೆ ಉಳಿಸಿಕೊಳ್ಳುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ’ ಎಂದು ಹೇಳಿದರು.
ಮಾಜಿ ಸಂಸದ ಆಯನೂರು ಮಂಜುನಾಥ್, ‘ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಭಾರೀ ಅಭಿವೃದ್ದಿ ಮಾಡಿರುವುದಾಗಿ ಪ್ರಚಾರ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಆಗಿರುವುದು ಯಡಿಯೂರಪ್ಪ ಹಾಗೂ ಈಶ್ವರಪ್ಪ ಕುಟುಂಬದ ಅಭಿವೃದ್ಧಿಯೆ ಹೊರತು ಶಿವಮೊಗ್ಗದ್ದಲ್ಲ. ಶಿವಮೊಗ್ಗದಲ್ಲಿ ನಿರ್ಮಿಸಿರುವ ಎಲ್ಲಾ ಮೇಲ್ಸೆತುವೆಗಳು ಯಡಿಯೂರಪ್ಪ ಹಾಗೂ ಈಶ್ವರಪ್ಪ ಕುಟುಂಬದ ಆಸ್ತಿಗಳಿಗೆ ಸಹಾಯ ಮಾಡುವ ಸ್ಥಳದಲ್ಲೆ ಇವೆ’ ಎಂದು ತಿಳಿಸಿದರು.
‘ಚಿತ್ರನಟ ಶಿವರಾಜಕುಮಾರ್ ಮುಖಕ್ಕೆ ಬಣ್ಣ ಹಚ್ಚಿದರೆ ಕೆ.ಎಸ್.ಈಶ್ವರಪ್ಪ ನಾಲಿಗೆಗೆ ಬಣ್ಣ ಹಚ್ಚುವವರಾಗಿದ್ದಾರೆ. ಅವರ ಬಂಡಾಯ ರಾಜಕೀಯ ನಾಟಕವಾಗಿದ್ದು ತಮ್ಮ ಸ್ಪರ್ಧೆಯ ಮೂಲಕ ಹಿಂದುಳಿದವರ ಮತ ಪಡೆದು ಬಿಜೆಪಿಗೆ ಅನುಕೂಲ ಮಾಡಿಕೊಡಲು ಅವರು ಹುನ್ನಾರ ನಡೆಸಿದ್ದಾರೆ. ಈ ತಂತ್ರಗಾರಿಕೆಯನ್ನು ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯಗಳು ಅರ್ಥ ಮಾಡಿಕೊಳ್ಳಬೇಕು’ ಎಂದರು.
ಶಾಸಕ ಗೋಪಾಲಕೃಷ್ಣ ಬೇಳೂರು, ‘ಸಾಗರದಲ್ಲಿ ಈಡಿಗರ ಸಮಾವೇಶದ ಹೆಸರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೂ. 3 ಕೋಟಿ ಹಣ ಖರ್ಚು ಮಾಡಿ ಸನ್ಮಾನಿಸಲಾಗಿದೆ. ಆದರೆ ಈ ಸಮಾವೇಶಕ್ಕೆ ಬಿಜೆಪಿ ಮುಖಂಡರನ್ನು ಹೊರತುಪಡಿಸಿ ಬೇರೆಯವರನ್ನು ಕರೆದಿಲ್ಲ. ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಅವರನ್ನು ಸಮಾವೇಶಕ್ಕೆ ಕಡೆಗಣಿಸಿದ್ದು ಯಾಕೆ’ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಭೆಯನ್ನು ಉದ್ಘಾಟಿಸಿದರು. ಪ್ರಮುಖರಾದ ಕಲಸೆ ಚಂದ್ರಪ್ಪ, ಐ.ಎನ್.ಸುರೇಶ್ ಬಾಬು, ಬಿ.ಆರ್.ಜಯಂತ್, ಆರ್.ಎಂ.ಮಂಜುನಾಥ ಗೌಡ, ಕಲಗೋಡು ರತ್ನಾಕರ್, ಅನಿತಾಕುಮಾರಿ, ಸುಮಂಗಲಾ ರಾಮಕೃಷ್ಣ, ಎನ್.ಉಷಾ, ರವಿಕುಮಾರ ಗೌಡ, ಅಶೋಕ್ ಬೇಳೂರು ಇದ್ದರು.
ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಬರಲಿ:
ಆಯನೂರು ಸವಾಲು ಸಂಸದ ಬಿ.ವೈ.ರಾಘವೇಂದ್ರ ಅವರಿಂದ ಶಿವಮೊಗ್ಗದ ಅಭಿವೃದ್ದಿಯಾಗಿದೆ ಎಂದು ಬಿಜೆಪಿಯವರು ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಶಿವಮೊಗ್ಗದ ಯಾವುದೆ ವೃತ್ತದಲ್ಲಿ ನಿಂತು ಒಂದು ಕಲ್ಲು ಎಸೆದರೆ ಅದು ಯಡಿಯೂರಪ್ಪ ಅಥವಾ ಈಶ್ವರಪ್ಪ ಕುಟುಂಬಕ್ಕೆ ಸೇರಿದ ಆಸ್ತಿಯ ಮೇಲೆ ಬೀಳುತ್ತದೆ ಎಂಬ ಮಾತು ಎಲ್ಲರ ಬಾಯಲ್ಲಿದೆ. ಅದೆ ಸಾಗರ ತಾಲ್ಲೂಕಿನ ಯಾವುದೆ ಹಳ್ಳಿಯಲ್ಲಿ ಒಂದು ಕಲ್ಲು ಎಸೆದರೆ ಕಾಗೋಡು ತಿಮ್ಮಪ್ಪ ನೀಡಿರುವ ಹಕ್ಕುಪತ್ರದ ಮನೆಯ ಮೇಲೆ ಬೀಳುತ್ತದೆ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಮಾರ್ಮಿಕವಾಗಿ ನುಡಿದರು. ಶಿವಮೊಗ್ಗದಲ್ಲಿ ಆಸ್ತಿ ಮಾಡುವ ವಿಷಯದಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಕುಟುಂಬ ಸಮಬಾಳು ಸಮಪಾಲು ಎಂಬ ತತ್ವ ಅನುಸರಿಸಿದೆ. ಅಭಿವೃದ್ಧಿ ಕುರಿತು ಬಹಿರಂಗ ಚರ್ಚೆಗೆ ಅವರು ಬರಲಿ. ಸಾರ್ವಜನಿಕವಾಗಿ ಉತ್ತರಿಸುತ್ತೇನೆ ಎಂದು ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.