ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಇಂದಿರಾ ಕ್ಯಾಂಟೀನ್‌: ನಿರ್ವಹಣೆಯ ಹೊರೆ, ಸಿಬ್ಬಂದಿಗೆ ಸಿಗದ ವೇತನ

Published 26 ಫೆಬ್ರುವರಿ 2024, 5:34 IST
Last Updated 26 ಫೆಬ್ರುವರಿ 2024, 5:34 IST
ಅಕ್ಷರ ಗಾತ್ರ

ಶಿವಮೊಗ್ಗ: ಜಿಲ್ಲೆಯಲ್ಲಿ ಬಡವರು ಹಾಗೂ ಕೂಲಿ ಕಾರ್ಮಿಕರ ಹಸಿವು ನೀಗಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳ ಸಿಬ್ಬಂದಿಗೆ ವೇತನ ನೀಡದಿರುವ ಕಾರಣಕ್ಕೆ ಕ್ಯಾಂಟೀನ್‌ಗಳು ಬಾಗಿಲು ಮುಚ್ಚುವ ಸ್ಥಿತಿ ತಲುಪಿವೆ.

ಗುತ್ತಿಗೆದಾರರು 3 ತಿಂಗಳಿನಿಂದ ಸಿಬ್ಬಂದಿಗೆ ವೇತನ ನೀಡಿಲ್ಲ. ವೇತನ ಕೇಳಲು ಮುಂದಾದರೆ, ಉಡಾಫೆ ಉತ್ತರ ನೀಡುತ್ತಿದ್ದಾರೆ. ಇದನ್ನು ನಾವು ಆಲಿಸಬಹುದು. ಆದರೆ, ಕುಟುಂಬ ಸದಸ್ಯರು ಕೇಳುವುದಿಲ್ಲ. ಜಿಲ್ಲಾಡಳಿತಕ್ಕೂ ತಿಳಿಸಲಾಗಿದೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ ಎನ್ನುವುದು ಅಡುಗೆ ಸಿಬ್ಬಂದಿಯ ಅಳಲು.

ಜಿಲ್ಲೆಯಲ್ಲಿ 7 ಇಂದಿರಾ ಕ್ಯಾಂಟೀನ್‌ಗಳು ಇವೆ. ಶಿವಮೊಗ್ಗ ನಗರದಲ್ಲಿ 4, ಸಾಗರದಲ್ಲಿ 1, ಭದ್ರಾವತಿಯಲ್ಲಿ 2 ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ನಗರ ವ್ಯಾಪ್ತಿಯ 4 ಕ್ಯಾಂಟೀನ್ ನಿರ್ವಹಣೆಯ ಹೊಣೆ ಹೊತ್ತ ಗುತ್ತಿಗೆದಾರರಿಗೆ ಕಳೆದ ಒಂದು ವರ್ಷದಿಂದ ಸರ್ಕಾರದಿಂದ ಹಣ ಬಿಡುಗಡೆಗೊಂಡಿಲ್ಲ. ಇದರಿಂದ, ಗುತ್ತಿಗೆದಾರರು ಕೈಯಿಂದ ಹಣ ವ್ಯಯಿಸಿ ಕ್ಯಾಂಟೀನ್ ನಿರ್ವಹಣೆ ಮಾಡುತ್ತಿದ್ದಾರೆ.

‘ಶಿವಮೊಗ್ಗ ನಗರದ 4 ಕ್ಯಾಂಟೀನ್‌ಗಳಿಗೆ ₹ 40 ಲಕ್ಷ, ಸಾಗರದಲ್ಲಿ 1 ಕ್ಯಾಂಟೀನ್‌ಗೆ ₹ 10 ಲಕ್ಷ, ಭದ್ರಾವತಿಯ 2 ಕ್ಯಾಂಟೀನ್‌ಗಳಿಗೆ ಸರ್ಕಾರದಿಂದ ₹ 30 ಲಕ್ಷ ಬಿಲ್ ಪಾವತಿ ಆಗಬೇಕು. ಇಲ್ಲಿ ಗುತ್ತಿಗೆ ಅವಧಿ ಮುಗಿದು ಒಂದು ವರ್ಷ ಪೂರ್ಣಗೊಂಡಿದೆ. ಆದರೂ, ಸರ್ಕಾರದಿಂದ ಹಣ ಬಿಡುಗಡೆ ಆಗಿಲ್ಲ. ಇದರಿಂದ, ಸಿಬ್ಬಂದಿಗೆ ಸಂಬಳ ನೀಡಲು ಸಮಸ್ಯೆ ಎದುರಾಗಿದೆ’ ಎಂದು ಗುತ್ತಿಗೆದಾರ ಸಿದ್ದನಗೌಡ ಬೀರಾದಾರ ‘ಪ್ರಜಾವಾಣಿ’ಗೆ ಎದುರು ಅಳಲು ತೋಡಿಕೊಂಡರು.

ಗುತ್ತಿಗೆದಾರರ ಹಿಂದೇಟು ಹಾಗೂ ಇಂದಿರಾ ಕ್ಯಾಂಟೀನ್ ಟೆಂಡರ್ ಪ್ರಕಿಯೆಯ ವಿಳಂಬದಿಂದ ಗುತ್ತಿಗೆ ಅವಧಿ ಮುಗಿದರೂ ಕ್ಯಾಂಟೀನ್‌ಗಳ ನಿರ್ವಹಣೆಯ ಅವಧಿ ಮುಂದುವರಿದಿದೆ. ಸರ್ಕಾರ ಇತ್ತ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದರು.

ನಗರ ವ್ಯಾಪ್ತಿಯ ಅಡುಗೆ ತಯಾರಿಕಾ ಘಟಕದಲ್ಲಿ 8 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 3 ತಿಂಗಳಿನಿಂದ ವೇತನ ನೀಡಿಲ್ಲ. ಇಲ್ಲಿನ ವೇತನ ನಂಬಿಕೊಂಡು ಜೀವನ ನಡೆಸುವವರು ಇದ್ದಾರೆ. ಗುತ್ತಿಗೆದಾರರು ಈ ಬಗ್ಗೆ ಗಮನಹರಿಸಬೇಕು ಎಂದು ನಗರ ವ್ಯಾಪ್ತಿಯ ಇಂದಿರಾ ಕ್ಯಾಂಟಿನ್ ನಿರ್ವಾಹಕ ಪಿ.ಸಿ. ದೇವರಾಜ್ ಹೇಳಿದರು.

‘ಗುತ್ತಿಗೆದಾರರು ಸಿಬ್ಬಂದಿ ಕರೆಗೆ ಸ್ಪಂದಿಸುವುದಿಲ್ಲ. ತಿಂಗಳ ಪೂರ್ತಿಯ ಸಂಬಳ ಕೇಳಿದರೆ, ಬ್ಯಾಂಕ್ ಖಾತೆಗೆ ಅರ್ಧದಷ್ಟು ಹಣ ಹಾಕುವುದಾಗಿ ತಿಳಿಸುತ್ತಾರೆ. ಇದರಿಂದ, ಕುಟುಂಬ ನಿರ್ವಹಣೆ ಸಾಧ್ಯವಿಲ್ಲ. ಗುತ್ತಿಗೆದಾರರನ್ನು ನೇರವಾಗಿ ಭೇಟಿ ಆಗಬೇಕೆಂದರೆ, ಅವರು, ಜಿಲ್ಲೆಗೆ ಬರುವುದೇ ವಿರಳ. ನಾವು ಜನರ ಹೊಟ್ಟೆ ತುಂಬಿಸುತ್ತೇವೆ. ಆದರೆ, ನಮ್ಮ ಹೊಟ್ಟೆ ತುಂಬಿಸುವವರು ಯಾರು’ ಎಂದು ಬಿ.ಎಚ್.ರಸ್ತೆಯ ಕೃಷ್ಣಕೆಫೆ ಬಳಿಯ ಇಂದಿರಾ ಕ್ಯಾಂಟೀನ್ ಅಡುಗೆ ಸಿಬ್ಬಂದಿ ಸವಿತಾ ಪ್ರಶ್ನಿಸಿದರು.

‘ಮಧ್ಯಾಹ್ನ ಊಟ ಮಾಡಲು ಕೃಷ್ಣ ಕೆಫೆ ಬಳಿಯ ಇಂದಿರಾ ಕ್ಯಾಂಟೀನ್‌ಗೆ ತೆರಳಿದೆವು. ಆದರೆ, ಸಿಬ್ಬಂದಿ ಊಟ ಬಡಿಸಲು ಹಿಂದೇಟು ಹಾಕಿದರು. ಕೆಲವರು ಊಟ ಮಾಡದೆ ಹಾಗೇ ಹಿಂದಿರುಗಿದರು. ಇದಕ್ಕೆ ನೇರವಾಗಿ ಗುತ್ತಿಗೆದಾರರಿಗೆ ಕರೆ ಮಾಡಿ ಸಮಸ್ಯೆ ಬಗ್ಗೆ ತಿಳಿಸಿದೆವು. ಅದಕ್ಕೆ ಗುತ್ತಿಗೆದಾರರು ನೀವೆ ಊಟ ಬಡಿಸಿಕೊಳ್ಳಿ’ ಎಂದು ಪ್ರತಿಕ್ರಿಯಿಸಿದರು. ನಂತರ ಸ್ವಲ್ಪ ಸಮಯದ ಬಳಿಕ ಸಿಬ್ಬಂದಿ ಊಟ ಬಡಿಸಲು ಮುಂದಾದರು ಎಂದು ಸ್ಥಳೀಯರಾದ ವಿನಾಯಕ ತಿಳಿಸಿದರು.

ಶಿವಮೊಗ್ಗ ಬಿ.ಎಚ್.ರಸ್ತೆಯ ಕೃಷ್ಣಕೆಫೆ ಬಳಿಯ ಇಂದಿರಾ ಕ್ಯಾಂಟೀನ್‌ನಲ್ಲಿ ಜನರ ಊಟಕ್ಕಾಗಿ ಕಾಯುತ್ತಿರುವುದು
ಶಿವಮೊಗ್ಗ ಬಿ.ಎಚ್.ರಸ್ತೆಯ ಕೃಷ್ಣಕೆಫೆ ಬಳಿಯ ಇಂದಿರಾ ಕ್ಯಾಂಟೀನ್‌ನಲ್ಲಿ ಜನರ ಊಟಕ್ಕಾಗಿ ಕಾಯುತ್ತಿರುವುದು

ಬದಲಾಗದ ಆಹಾರದ ಮೆನು 

ಜಿಲ್ಲೆಯಲ್ಲಿ ಪ್ರಸ್ತುತ 2018ರಲ್ಲಿ ಆದೇಶಿಸಿದ ಆಹಾರದ ಮೆನು ಚಾಲ್ತಿಯಲ್ಲಿದೆ. ಆದರೆ ಸರ್ಕಾರ ಕಳೆದ ಡಿಸೆಂಬರ್ ತಿಂಗಳಲ್ಲಿ ಆಹಾರದ ಮೆನುವಿನಲ್ಲಿ ಬದಲಾವಣೆಗೊಳಿಸಿ ರಾಗಿ ಮುದ್ದೆ ಇಡ್ಲಿ ಮಂಗಳೂರು ಬನ್ಸ್ ಬಿಸಿಬೇಳೆ ಬಾತ್‌ ಸೇರಿದಂತೆ ಪುಲಾವ್ ಖಾರಾಬಾತ್‌ ಪೊಂಗಲ್‌ ಬ್ರೆಡ್‌ ಜಾಮ್‌ ಚೌಚೌಬಾತ್‌ ನೀಡಬೇಕು. ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿ ರಾಗಿಮುದ್ದೆ ಚಪಾತಿ ಅನ್ನ ಸಾಂಬಾರು ನೀಡಬೇಕು ಎಂದು ಆದೇಶ ಹೊರಡಿಸಿದೆ. ಆದರೆ ಇದು ಜಿಲ್ಲೆಯ ಇಂದಿರಾ ಕ್ಯಾಂಟೀನ್‌ಗಳಲ್ಲಿ ಲಭ್ಯವಿಲ್ಲ. ಕಳಪೆ ಆಹಾರ ಪೂರೈಕೆ: ಆರೋಪ ‘ನಗರದ ಇಂದಿರಾ ಕ್ಯಾಂಟೀನ್‌ಗಳಿಗೆ ಹಳೆಯ ಮೆನುವಿನ ಪ್ರಕಾರವೂ ಆಹಾರ ಪೂರೈಕೆ ಆಗುತ್ತಿಲ್ಲ. ಅದೇ ರೀತಿ ಆಹಾರ ಗುಣಮಟ್ಟದಲ್ಲಿಯೂ ಕಳಪೆ ಆಗಿದೆ. ಆಹಾರದಲ್ಲಿ ಗುಣ ಮಟ್ಟ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳು ಸೂಚಿಸುತ್ತಾರೆ. ಆದರೆ ಗುತ್ತಿಗೆದಾರರು ಸರ್ಕಾರದ ವಿರುದ್ಧ ಆರೋಪಿಸುತ್ತಾರೆ. ಇದು ಬದಲಾಗಬೇಕು. ಬಡವರ ಹಸಿವು ನೀಗಿಸಲು ಸಮರ್ಪಕವಾದ ಆಹಾರ ಪೂರೈಸುವ ನಿಟ್ಟಿನಲ್ಲಿ ಗುತ್ತಿಗೆದಾರರು ಕ್ರಮ ಕೈಗೊಳ್ಳಬೇಕು’ ಎಂದು ಹೆಸರು ಬಹಿರಂಗಪಡಿಸಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದರು.

ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಯ ಗುತ್ತಿಗೆ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಗುತ್ತಿಗೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಆಹಾರ ಮೆನುವಿನಲ್ಲಿ ಬದಲಾವಣೆ ಆಗಲಿದೆ.
-ನದಾಫ್ ವಹಿದಾ, ಕಾರ್ಯನಿರ್ವಾಹಕ ಎಂಜಿನಿಯರ್ ಜಿಲ್ಲಾಡಳಿತ‌‌
ಹಿಂದಿನ ಗುತ್ತಿಗೆದಾರರ ಅಡಿಯಲ್ಲಿಯೇ ಇಂದಿರಾ ಕ್ಯಾಂಟೀನ್‌ ನಡೆಯುತ್ತಿದೆ. ಭದ್ರಾವತಿ ತಾಲ್ಲೂಕು ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ವೇತನ ನೀಡಲಾಗಿದೆ.
– ಆರ್.ಬಿ.ಸತೀಶ್, ಆರೋಗ್ಯ ಅಧಿಕಾರಿ ನಗರಸಭೆ ಭದ್ರಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT