ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ರೌಡಿ ಚಟುವಟಿಕೆಗೆ ಅಂಕುಶ: ಗೃಹ ಸಚಿವ ಆರಗ ಜ್ಞಾನೇಂದ್ರ

ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆಯ ಹೊಸ ಕಟ್ಟಡ ಉದ್ಘಾಟನೆ
Last Updated 5 ಜನವರಿ 2023, 6:24 IST
ಅಕ್ಷರ ಗಾತ್ರ

ಶಿವಮೊಗ್ಗ: ‘ರಾಜ್ಯದಲ್ಲಿ ರೌಡಿ ಚಟುವಟಿಕೆಯನ್ನು ಬೇರು ಸಹಿತ ಕಿತ್ತು ಎಸೆಯುತ್ತೇವೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ನಗರದಲ್ಲಿ ಬುಧವಾರ ಪೂರ್ವ ಸಂಚಾರ ಪೊಲೀಸ್ ಠಾಣೆಯ ಹೊಸ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ‘ಶಿವಮೊಗ್ಗ ಜಿಲ್ಲೆಯಲ್ಲಿ 53 ರೌಡಿಶೀಟರ್‌ಗಳನ್ನು ಗಡಿಪಾರು ಮಾಡಿದ್ದೇವೆ. ಮರ್ಯಾದಸ್ಥ ಜನ ತಲೆಎತ್ತಿ ನಿರ್ಭೀತಿಯಿಂದ ಓಡಾಡುವ ವಾತಾವರಣವಿದೆ. ರೌಡಿಗಳು ಮತ್ತು ಪೊಲೀಸರು ಒಟ್ಟಿಗಿರಲು ಸಾಧ್ಯವೇ ಇಲ್ಲ’ ಎಂದು ಹೇಳಿದರು.

‘ಈ ಹಿಂದೆ ರಾಜ್ಯದ ದೊಡ್ಡ ದೊಡ್ಡ ರೌಡಿಗಳು ಶಿವಮೊಗ್ಗದಲ್ಲೇ ಇದ್ದರು. ಶಿವಮೊಗ್ಗ ರೌಡಿ ಬಿಲ್ಡಿಂಗ್ ಸೆಂಟರ್ ಆಗಿತ್ತು. ಈಗ ಆ ವಾತಾವರಣ ಇಲ್ಲ’ ಎಂದು ತಿಳಿಸಿದರು.

‘₹ 1.81 ಕೋಟಿ ವೆಚ್ಚದಲ್ಲಿ ಈ ಠಾಣೆಯ ಕಟ್ಟಡ ಲೋಕಾರ್ಪಣೆಗೊಂಡಿದೆ. 15 ವರ್ಷಗಳ ಹಿಂದೆ ಇಡೀ ರಾಜ್ಯದ ಜನರ ಹಿತವನ್ನು ಕಾಯುವ ಪೊಲೀಸ್ ಇಲಾಖೆ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ವರ್ಷಕ್ಕೆ 5 ಠಾಣೆಗಳು ನಿರ್ಮಾಣವಾಗುತ್ತಿದ್ದವು. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ ₹ 200 ಕೋಟಿ ವೆಚ್ಚದಲ್ಲಿ 117 ಹೊಸ ಠಾಣೆಗಳನ್ನು ನಿರ್ಮಿಸಲಾಗಿದೆ. ಡಬಲ್ ಬೆಡ್ ರೂಂನ 48 ಕ್ವಾರ್ಟರ್ಸ್‌ಗಳನ್ನು ಶಿವಮೊಗ್ಗದಲ್ಲಿ ನಿರ್ಮಿಸಲಾಗಿದೆ’
ಎಂದರು.

‘ಆನಂದಪುರ 12, ಕೋಣಂದೂರು 12, ತೀರ್ಥಹಳ್ಳಿ 12, ಶಿವಮೊಗ್ಗ 12 ಕಟ್ಟಡಗಳ ನಿರ್ಮಿಸಿದ್ದೇವೆ. ತೀರ್ಥಹಳ್ಳಿಯಲ್ಲಿ ಹಳೆಯ ಪೊಲೀಸ್ ಸ್ಟೇಶನ್ ಒಡೆದು ₹ 4 ಕೋಟಿ ವೆಚ್ಚದಲ್ಲಿ ಹೊಸದಾಗಿ ನಿರ್ಮಿಸಿದ್ದೇವೆ. ₹ 3.5 ಕೋಟಿ ವೆಚ್ಚದಲ್ಲಿ ತೀರ್ಥಹಳ್ಳಿಯಲ್ಲಿ ನೂತನ ಅಗ್ನಿ ಶಾಮಕ ಠಾಣೆ ನಿರ್ಮಾಣ ಆಗುತ್ತಿದೆ’ ಎಂದರು.

‘ಶಿವಮೊಗ್ಗ ನಗರ ಬೆಳೆಯುತ್ತಿದ್ದು ಇಲ್ಲಿಗೆ ಎರಡು ಉಪವಿಭಾಗ ಕೊಟ್ಟಿದ್ದೇವೆ. ಇಬ್ಬರು ಡಿವೈಎಸ್‌ಪಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಪರಾಧ ಪ್ರಮಾಣ ಹೆಚ್ಚಿದ್ದರೂ ಶಿಕ್ಷೆಯ ಪ್ರಮಾಣ ಕಡಿಮೆ ಇತ್ತು. ಕಾರಣ ಸಾಕ್ಷಿಗಳು ಸಿಗುತ್ತಿರಲಿಲ್ಲ. ಅದಕ್ಕಾಗಿ ತರಬೇತಿ ಪಡೆದ 206 ಜನ ಸೀನ್ ಆಫ್ ಕ್ರೈಂ ಅಧಿಕಾರಿಗಳನ್ನು ಪ್ರತಿ ತಾಲ್ಲೂಕಿಗೆ ನಿಯೋಜಿಸಿದ್ದು, ಶಿವಮೊಗ್ಗಕ್ಕೆ ₹ 10 ಕೋಟಿ ವೆಚ್ಚದಲ್ಲಿ ಎಫ್‌ಎಸ್‌ಎಲ್ ಲ್ಯಾಬ್ ಕೂಡ ಬರುತ್ತಿದೆ’ ಎಂದರು.

ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ‘ಜಿಲ್ಲೆಯಲ್ಲಿ ಸಾಕಷ್ಟು ಗಾಂಜಾ ಓಡಾಡುತ್ತಿದೆ. ಅದನ್ನು ಬಿಗಿ ಮಾಡಬೇಕು. ಈ ಬಾರಿಯ ಬಜೆಟ್‌ನಲ್ಲಿ ಪೊಲೀಸರ ಬೇಡಿಕೆಗಳ ಈಡೇರಿಸಲು ಹೆಚ್ಚಿನ ಮೊತ್ತ ಕಾಯ್ದಿರಿಸಬೇಕು’ ಎಂದು ಸಲಹೆ
ನೀಡಿದರು.

ಶಾಸಕ ಆಯನೂರು ಮಂಜುನಾಥ್ ಮಾತನಾಡಿ, ‘ಶಿವಮೊಗ್ಗದಲ್ಲಿ ಕಮಿಷನರೇಟ್ ಆರಂಭಿಸಲು ಹೇಳಿದರು. ಪೋಕ್ಸೊ ಪ್ರಕರಣಗಳು ಶಿವಮೊಗ್ಗದಲ್ಲಿ ಜಾಸ್ತಿ ಇವೆ. ಪೊಲೀಸರನ್ನು ಸಶಕ್ತರನ್ನಾಗಿ ಮಾಡಿ ಅಪರಾಧ ಮುಕ್ತ ಜಿಲ್ಲೆಯನ್ನಾಗಿ ಮಾಡಿ’ ಎಂದರು.
ದಾವಣಗೆರೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್, ಎಸ್‌ಪಿ ಜಿ.ಕೆ. ಮಿಥುನ್ ಕುಮಾರ್, ಎಎಸ್‌ಪಿ ರೋಹನ್ ಜಗದೀಶ್, ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀ ಶಂಕರ್‌ನಾಯ್ಕ್, ಪಾಲಿಕೆ ಸದಸ್ಯ ಪ್ರಭುರಾಜ್ ಇದ್ದರು.

‘ಕಾರಿಗೆ ಸಿಲುಕಿ ನಾಯಿ ಸತ್ತರೂ ರಾಜೀನಾಮೆ ಕೇಳುತ್ತಾರೆ’

‘ಡಾ.ರಾಜ್‌ಕುಮಾರ್ ಸತ್ತಾಗ ಅಂತ್ಯಕ್ರಿಯೆ ಸಂದರ್ಭದಲ್ಲಿ ಆರು ಜನ ಮೃತಪಟ್ಟಿದ್ದರು. ಆದರೆ ಪುನೀತ್‌ರಾಜ್‌ ಕುಮಾರ್ ಹಾಗೂ ಸಿದ್ಧೇಶ್ವರ ಸ್ವಾಮೀಜಿ ನಿಧನರಾದಾಗ ಲಕ್ಷಾಂತರ ಜನ ಸೇರಿದರೂ ಯಾವುದೇ ಲೋಪವಿಲ್ಲದೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ‘ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

‘ಪಿಎಸ್‌ಐ ಹಗರಣ ಬಯಲಿಗೆಳೆದು ಮೊಟ್ಟ ಮೊದಲ ಬಾರಿಗೆ ಐಪಿಎಸ್ ದರ್ಜೆ ಅಧಿಕಾರಿ ಡಿವೈಎಸ್‌ಪಿ ಸೇರಿದಂತೆ 107 ಜನರನ್ನು ಜೈಲಿಗಟ್ಟಿದ್ದೇವೆ. ಶಿಕ್ಷಕರ ನೇಮಕಾತಿ ಹಗರಣವನ್ನು ಕಾಂಗ್ರೆಸ್ ಸರ್ಕಾರದ ಸಂದರ್ಭದಲ್ಲಿ ಮುಚ್ಚಿ ಹಾಕುವ ಪ್ರಯತ್ನ ನಡೆದಿತ್ತು. ಅದನ್ನು ಕೂಡ ಬಯಲಿಗೆಳೆದು 57 ಜನರನ್ನು ಬಂಧಿಸಿದ್ದೇವೆ. ಗೃಹ ಇಲಾಖೆ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೂ ಯಾವುದೋ ವಾಹನದ ಅಡಿ ನಾಯಿ ಬಿದ್ದು ಸತ್ತರೂ ಗೃಹ ಸಚಿವರ ರಾಜೀನಾಮೆ ಕೇಳುತ್ತಾರೆ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT