ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಧಾನ ಪರಿಷತ್‌ ಚುನಾವಣೆ | ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು: ಸುಂದರೇಶ್

Published 27 ಮೇ 2024, 14:19 IST
Last Updated 27 ಮೇ 2024, 14:19 IST
ಅಕ್ಷರ ಗಾತ್ರ

ಶಿವಮೊಗ್ಗ: ‘ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ ಮತ್ತು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ.ಮಂಜುನಾಥ ಅವರು ಮೊದಲ ಪ್ರಾಶಸ್ತ್ಯ ಮತದಲ್ಲಿಯೇ ಗೆಲುವು ಸಾಧಿಸಲಿದ್ದಾರೆ’ ಎಂದು ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಸ್‌.ಸುಂದರೇಶ್‌ ಹೇಳಿದರು. 

‘ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪರ ವಾತಾವರಣ ನಿರ್ಮಾಣವಾಗಿದೆ. ಮತದಾರರು ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ಮುಂದಾಗಿದ್ದಾರೆ. ಮೈತ್ರಿ ಅಭ್ಯರ್ಥಿಗಳಿಗೆ ಈಗಾಗಲೇ ಸೋಲಿನ ಭಯ ಶುರುವಾಗಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. 

‘ಕಳೆದ ಬಾರಿ ಪವೀಧರರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಯನೂರು ಮಂಜುನಾಥ ಅವರು ಗೆದ್ದಿದ್ದರು. ಇದೀಗ ಅವರು ಈ ಬಾರಿ ಕಾಂಗ್ರೆಸ್‌ನಿಂದ ಚುನಾವಣೆ ಎದುರಿಸುತ್ತಿದ್ದಾರೆ. ಎಸ್.ಪಿ.ದಿನೇಶ್‌ ಅವರಿಗೆ ಕಾಂಗ್ರೆಸ್‌ ಪಕ್ಷದಿಂದ ಎರಡು ಬಾರಿ ಟಿಕೆಟ್‌ ನೀಡಿದರೂ ಅವರು ಸೋಲು ಅನುಭವಿಸಿದ್ದಾರೆ. ಆದರೆ, ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಇದ್ದಾರೆ. ನಾಮಪತ್ರ ವಾಪಸ್‌ ಪಡೆಯುವಂತೆ ಪಕ್ಷದ ನಾಯಕರು ಮಾಡಿದ ಮನವಿಗೆ ಸ್ಪಂದಿಸಿಲ್ಲ. ದಿನೇಶ್‌ ಅವರು ಬಿಜೆಪಿಗೆ ಸಹಕಾರ ಮಾಡಲು ನಿಂತಂತೆ ಕಾಣುತ್ತಿದೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ವಿಧಾನ ಪರಿಷತ್‌ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿಲು ವಾರ್ಡ್‌ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಇದಲ್ಲದೇ ಪಕ್ಷದ ವತಿಯಿಂದ ಸಾಕಷ್ಟು ಮತದಾರರ ನೋಂದಣಿ ಕೂಡ ಮಾಡಿಸಲಾಗಿದೆ. ಹೀಗಾಗಿಯೇ ನಮಗೆ ಗೆಲ್ಲುವ ಎಲ್ಲ ರೀತಿಯ ಅವಕಾಶಗಳು ಇವೆ’ ಎಂದರು. 

‘ಸರ್ಕಾರದಿಂದ ಈಗಾಗಲೇ ಯುವನಿಧಿ ಜಾರಿಗೊಳಿಸಲಾಗಿದೆ. ಪ್ರತಿ ತಿಂಗಳು ನಿರುದ್ಯೋಗಿ ಯುವಕರ ಖಾತೆಗೆ ₹ 3,000 ಜಮಾ ಮಾಡಲಾಗುತ್ತಿದೆ. ಇನ್ನು ಸರ್ಕಾರಿ ನೌಕರರ 7ನೇ ವೇತನ ಆಯೋಗದ ವರದಿ ಜಾರಿ ಸೇರಿ ಇನ್ನಿತರ ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿದೆ. ಸರ್ಕಾರ ನುಡಿದಂತೆ ನಡೆಯುತ್ತಿದೆ’ ಎಂದು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಜಿ.ಡಿ.ಮಂಜುನಾಥ, ಮಧು, ಚಂದ್ರಶೇಖರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT