ಬುಧವಾರ, ಜುಲೈ 6, 2022
22 °C
ಮಂಗಗಳ ಉಪಟಳ ನಿಯಂತ್ರಣಕ್ಕೆ ಸರ್ಕಾರದ ಕ್ರಮ

ಹೊಸನಗರ: ಮಂಗಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಬಂತು ಸಂಚಾರ ಘಟಕ

ರವಿ ನಾಗರಕೊಡಿಗೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ಮಲೆನಾಡಿನಲ್ಲಿ ಮಂಗಗಳ ಹಾವಳಿ ತಡೆಗೆ ಸರ್ಕಾರ ಮುಂದಾಗಿದ್ದು, ಸಂತಾನಶಕ್ತಿ ಹರಣ ಚಿಕಿತ್ಸೆಗೆ ಆಂಬುಲೆನ್ಸ್ ಸಿದ್ಧವಾಗಿದೆ. ಇದರಲ್ಲಿ ಸಂಚಾರ ಚಿಕಿತ್ಸಾ ಘಟಕದ ಸೌಲಭ್ಯ ಇದೆ.

ಮಲೆನಾಡಿನ ಭಾಗದಲ್ಲಿ ಮಂಗಗಳ ಉಪಟಳಕ್ಕೆ ಅಂತ್ಯ ಹಾಡಲು ರಾಜ್ಯ ಸರ್ಕಾರ 2020-21ನೇ ಸಾಲಿನಲ್ಲಿ ಮಂಗಗಳ ಪುನರ್ವಸತಿ ಯೋಜನೆಯಡಿ ₹ 25 ಲಕ್ಷ ಅನುದಾನ ನೀಡಿತ್ತು. ಇದರನ್ವಯ ಕಳೆದ ವರ್ಷ ಹೊಸನಗರ ತಾಲ್ಲೂಕಿನ ನಗರ ಹೋಬಳಿಯಲ್ಲಿ ಪ್ರಾಯೋಗಿಕವಾಗಿ ಮಂಗಗಳನ್ನು ಹಿಡಿದು ಸಂತಾನಶಕ್ತಿ‌ ಹರಣ ಚಿಕಿತ್ಸೆಗೆ ಒಳಪಡಿಸಲಾಗಿತ್ತು. 

ಇದಕ್ಕಾಗಿ ಪಶುವಿದ್ಯಾಲಯ ವಿಶ್ವವಿದ್ಯಾಲಯದ ಅಡಿಯಲ್ಲಿ ವೈದ್ಯರಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಸಂತಾನಶಕ್ತಿ‌ ಹರಣ ಚಿಕಿತ್ಸೆಗೆ ಸುಸಜ್ಜಿತ ಸಂಚಾರ ವಾಹನ ಸಿದ್ಧವಾಗಿದೆ.

₹ 25 ಲಕ್ಷ ಅನುದಾನದಲ್ಲಿ ₹ 18 ಲಕ್ಷವನ್ನು ಪಶುಪಾಲನಾ ಇಲಾಖೆಗೆ ವರ್ಗಾಯಿಸಲಾಗಿತ್ತು. ಇದೀಗ ವಾಹನ
ದಲ್ಲಿ ಶಸ್ತ್ರಚಿಕಿತ್ಸಾ ಘಟಕ ಸಜ್ಜುಗೊಂಡಿದೆ. ಆಧುನಿಕ ಶೈಲಿಯಲ್ಲಿ ಚಿಕಿತ್ಸಾ ಘಟಕ ನಿರ್ಮಾಣಗೊಂಡಿದೆ. ಇಲ್ಲಿನ ನಗರ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಆಂಬುಲೆನ್ಸ್‌ ಇದೆ ಎಂದು ಸಾಗರದ ಡಿಎಫ್ಒ ಎಂ. ರಾಮಕೃಷ್ಣಪ್ಪ ತಿಳಿಸಿದರು.

ಕಾರ್ಯನಿರ್ವಹಣೆ ಹೇಗೆ?: ಈಗಾಗಲೇ ಮಂಗಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಮಾಡಿ ಬೋನಿನಲ್ಲಿಟ್ಟು ನಿರ್ವಹಣೆ ಮಾಡಲು 30 ಬೋನ್‌ಗಳ ಸಿದ್ಧತೆ ಮಾಡಲಾಗಿದ್ದು, ಸಾಗರ ವಿಭಾಗ ವ್ಯಾಪ್ತಿಯ 10 ವಲಯಗಳಿಗೆ ಆದ್ಯತೆ ಅನುಸಾರ ಹಂಚಿಕೆ ಮಾಡಲಾಗಿದೆ. ಮಂಗಗಳ ವಿಪರೀತ ಕಾಟ ಕಂಡುಬಂದಲ್ಲಿ ಅಲ್ಲಿಗೆ ತೆರಳಿ ಮಂಗಗಳನ್ನು ಹಿಡಿದು ಸಂಚಾರಿ ವಾಹನದಲ್ಲಿ ಸಂತಾನಶಕ್ತಿ ಹರಣ ಚಿಕಿತ್ಸೆ ನೀಡಿ, ಬೋನ್‌ಗಳಿಗೆ ಸ್ಥಳಾಂತರಿಸಿ ಆರೋಗ್ಯದ ಮೇಲೆ ನಿಗಾ ಇಡುವುದು. ಬಳಿಕ ಆರೋಗ್ಯ ಚೇತರಿಸಿಕೊಂಡ ಬಳಿಕ ಎಲ್ಲಿಂದ ಮಂಗಗಳನ್ನು ಹಿಡಿಯಲಾಗಿರುತ್ತದೆಯೋ ಅದೇ ಜಾಗಕ್ಕೆ ಮಂಗಗಳನ್ನು ರವಾನಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ವೈದ್ಯರು ಮತ್ತು ಚಾಲಕರ ನೇಮಕ: ಸಂಚಾರಿ ಚಿಕಿತ್ಸಾ ಘಟಕಕ್ಕೆ ಬೇಕಾಗಿರುವ ವೈದ್ಯರು ಮತ್ತು ಚಾಲಕರ ನೇಮಕಾತಿ ಇನ್ನೂ ಆಗಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಅರಣ್ಯ ಇಲಾಖೆ ಅಧಿಕಾರಿಗಳು ಜಿಲ್ಲಾ ಆರೋಗ್ಯ ಅಧಿಕಾರಿಗಳ ಜೊತೆ ಸಮಾಲೋಚನೆಯಲ್ಲಿದ್ದಾರೆ. ಈಗಾಗಲೇ ಕಳೆದ ವರ್ಷ ಕೆಲ ವೈದ್ಯರಿಗೆ ಸಂತಾನಶಕ್ತಿ ಹರಣ ಚಿಕಿತ್ಸೆಯ ತರಬೇತಿ ನೀಡಲಾಗಿದೆ. ವಾಹನಕ್ಕೆ ವೈದ್ಯರ ಸಂಖ್ಯೆ ಮತ್ತು ಸಿಬ್ಬಂದಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಡಿಎಫ್ಒ ಎಂ. ರಾಮಕೃಷ್ಣಪ್ಪ ವಿವರಿಸಿದರು.

ಮಲೆನಾಡು ಭಾಗದಲ್ಲಿ ಮಂಗಗಳ ಉಪಟಳ ತಡೆಗೆ ‘ಮಂಕಿ ಪಾರ್ಕ್‌’ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಮಧ್ಯೆ ಮಂಗಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಸದ್ದು ಮಾಡಿದೆ. ಮಂಗಗಳ ಹಾವಳಿಯಿಂದ ಕೋಟ್ಯಂತರ ರೂಪಾಯಿ ರೈತರ ಬೆಳೆ ಹಾನಿಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಯೋಜನೆ ಎಷ್ಟು ಫಲಕಾರಿ ಆಗುತ್ತದೆ ಎಂಬುದು ಕಾದು ನೋಡಬೇಕು ಎನ್ನುತ್ತಾರೆ ಸಂಪೇಕಟ್ಟೆಯ ರೈತ ಕುಮಾರ.

ಮಲೆನಾಡಿಗರ ಕೂಗಿಗೆ ಸ್ಪಂದನ

ಮಲೆನಾಡಿನ ತಾಲ್ಲೂಕುಗಳಾದ ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿಯಲ್ಲಿ ಮಂಗಗಳ ಉಪಟಳ ಹೆಚ್ಚಾಗಿದ್ದು, ಇದರಿಂದ ದೃತಿಗೆಟ್ಟಿದ್ದ ರೈತರು ಸರ್ಕಾರಕ್ಕೆ ಬಗೆ ಬಗೆಯಲ್ಲಿ ಮನವಿ ನೀಡಿದ್ದರು. ಕಳೆದ ವರ್ಷ ಬೃಹತ್ ಪ್ರತಿಭಟನೆಯನ್ನು ನಡೆಸಿ ಸರ್ಕಾರದ ಗಮನ ಸೆಳೆದಿದ್ದರು. ಇದರ ಪರಿಣಾಮವಾಗಿ ಸರ್ಕಾರ ‘ಮಂಕಿಪಾರ್ಕ್’ ಸ್ಥಾಪನೆಗೆ ಅನುಮೋದನೆ ನೀಡಿತ್ತು.
ಆದರೆ ಹೊಸನಗರ, ಸಾಗರ ತಾಲ್ಲೂಕಿನಲ್ಲಿ ಮಂಕಿಪಾರ್ಕ್‌ಗೆ ಸ್ಥಳೀಯರ ವಿರೋಧ ವ್ಯಕ್ತಪಡಿಸಿದ್ದರಿಂದ ಅದು ನನೆಗುದಿಗೆ ಬಿದ್ದಿತ್ತು. ಈಗ ಸಂತಾನಶಕ್ತಿಹರಣ ಚಿಕಿತ್ಸೆಗೆ ಸರ್ಕಾರ ಮುಂದಾಗಿದೆ.

***

ಮಂಗಗಳ ಸಂತಾನಶಕ್ತಿಹರಣ ಚಿಕಿತ್ಸೆ ಮೂಲಕ ಇಲ್ಲಿಯ ರೈತರ ತೊಂದರೆಗೆ ಸರ್ಕಾರ ಸ್ಪಂದಿಸಬೇಕು. ಮುಂದಿನ ದಿನಗಳಲ್ಲಾದರೂ ಮಂಕಿಪಾರ್ಕ್ ನಿರ್ಮಾಣ ಆಗಬೇಕಿದೆ.

-ಕುಮಾರ, ರೈತ, ಸಂಪೇಕಟ್ಟೆ

ಈಗಾಗಲೇ ಬೋನ್‌ಗಳನ್ನು ತಯಾರಿಸಲಾಗಿದ್ದು, 10 ವಲಯಗಳಿಗೆ ಸರಬರಾಜು ಮಾಡಲಾಗಿದೆ. ಅರಣ್ಯ ಇಲಾಖೆಯ ನಿರಂತರ ಪ್ರಯತ್ನದಿಂದ ಆಂಬುಲೆನ್ಸ್ ಬಂದಿದೆ. ಯೋಜನೆಗೆ ಜನರ ಸಹಕಾರ ಮುಖ್ಯ.
-ಎಂ.ಪಿ. ಆದರ್ಶ, ವಲಯ ಅರಣ್ಯಾಧಿಕಾರಿ

ಸಂಚಾರ ಚಿಕಿತ್ಸಾ ಘಟಕಕ್ಕೆ ಚಾಲನೆ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಬೋನ್‌ ಹಂಚಿಕೆ, ಸಿಬ್ಬಂದಿ ನಿರ್ವಹಣೆ, ಚಿಕಿತ್ಸೆಯ ಬಗ್ಗೆ ಪಶು ಇಲಾಖೆಯೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ.

-ಎಂ. ರಾಮಕೃಷ್ಣಪ್ಪ, ಡಿಎಫ್ಒ, ಸಾಗರ ವಿಭಾಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು