ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಪಿಎಂ ನೆಡುತೋಪು ಒತ್ತುವರಿಗೆ ರಹದಾರಿ

ನಾಲ್ಕು ದಶಕಗಳ ಗುತ್ತಿಗೆ ಅವಧಿ ಮುಕ್ತಾಯವಾದರೂ ನಿರ್ಧಾರ ತೆಗೆದುಕೊಳ್ಳದ ಸರ್ಕಾರ
Last Updated 29 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ

ಶಿವಮೊಗ್ಗ:ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ (ಎಂಪಿಎಂ) ಕಚ್ಚಾ ಸಾಮಗ್ರಿ ಪೂರೈಸಲು 44 ವರ್ಷಗಳ ಹಿಂದೆ ನೀಡಲಾಗಿದ್ದ 22,500 ಹೆಕ್ಟೇರ್ ನೆಡುತೋಪುಗಳ ಒಪ್ಪಂದದಅವಧಿ ತಿಂಗಳ ಹಿಂದೆಯೇ ಮುಕ್ತಾಯವಾಗಿದ್ದರೂ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳದ ಪರಿಣಾಮ ಒತ್ತುವರಿಗೆ ಅವಕಾಶ ಮಾಡಿಕೊಟ್ಟಂತಾಗಿದೆ.

ನೆಡುತೋಪುಗಳನ್ನು ಬೆಳೆಸಲು ರಾಜ್ಯ ಸರ್ಕಾರ 1976ರಲ್ಲಿ ಎಂಪಿಎಂಗೆ ಹಲವು ನಿಬಂಧನೆಗಳಿಗೆ ಒಳಪಡಿಸಿ 30 ಸಾವಿರ ಹೆಕ್ಟೇರ್ನೀಡಿತ್ತು. 1980ರ ಅರಣ್ಯ ಸಂರಕ್ಷಣಾ ಕಾಯ್ದೆ, ಪರಿಸರ ಸೂಕ್ಷ್ಮ ವಲಯ, ಜೀವವೈವಿಧ್ಯ ತಾಣ ಯೋಜನೆಗಳಿಂದಾಗಿ ಶೆಟ್ಟಿಹಳ್ಳಿ, ಶರಾವತಿ ಅಭಯಾರಣ್ಯದ ವ್ಯಾಪ್ತಿಯ 109 ನೆಡುತೋಪುಗಳನ್ನು ಮರಳಿ ವನ್ಯಜೀವಿ ವಿಭಾಗದ ವಶಕ್ಕೆ ಪಡೆಯಲಾಗಿತ್ತು. 1980ರಲ್ಲಿ ಆದ ತಿದ್ದುಪಡಿ ಒಪ್ಪಂದದಂತೆ 22,500 ಹೆಕ್ಟೇರ್ ಒಳಗೊಂಡ ನೆಡುತೋಪುಗಳು ಎಂಪಿಎಂ ಅಧೀನದಲ್ಲಿವೆ.

ಒಂದು ಕಾಲದಲ್ಲಿ ಮುಂಬೈ ಷೇರು ಮಾರುಕಟ್ಟೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಈ ಕಾರ್ಖಾನೆ ಪೈಪೋಟಿ ಎದುರಿಸಲಾಗದೆ ನಷ್ಟದ ಹಾದಿಯಲ್ಲಿ ಸಾಗಿತ್ತು. ಐದುವರ್ಷಗಳಿಂದ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ.ನೆಡುತೋಪು ಮರಗಳನ್ನು ಮಾರಾಟ ಮಾಡಿ ಸಿಬ್ಬಂದಿ ಬಾಕಿ ವೇತನ ಪಾವತಿಸಲಾಗಿದೆ.25 ಲಕ್ಷ ಮರಗಳು ಕಟಾವಾಗದೆ ಉಳಿದಿವೆ.

ರಕ್ಷಣಾ ಕಾವಲುಗಾರರೇ ಇಲ್ಲ:ನೆಡುತೋಪುಗಳ ಸಂರಕ್ಷಣೆಗಾಗಿ ಎಂಪಿಎಂ 800ಕ್ಕೂ ಹೆಚ್ಚು ಕಾವಲುಗಾರರನ್ನು ನೇಮಿಸಿಕೊಂಡಿತ್ತು.ಐದುವರ್ಷಗಳಿಂದ ಕಾರ್ಖಾನೆ ಬಾಗಿಲು ಮುಚ್ಚಿದ ಕಾರಣ ಅವರಿಗೆ ವೇತನ ಪಾವತಿಸಲು ಸಾಧ್ಯವಾಗಿಲ್ಲ. ಈಗ ಕಾವಲುಗಾರರರೇ ಇಲ್ಲವಾಗಿದೆ. ಹಲವೆಡೆ ನೆಡುತೋಪುಗಳನ್ನು ನಾಶ ಮಾಡಲಾಗುತ್ತಿದೆ. ಮರಗಳನ್ನು ಕಡಿದುಅಡಿಕೆ,ಶುಂಠಿ ಹಾಕಲಾಗುತ್ತಿದೆ.

ಸ್ವಾಭಾವಿಕಕಾಡಿಗಾಗಿ ಹೋರಾಟ:ನೆಡುತೋಪುಗಳನ್ನು ಅರಣ್ಯ ಇಲಾಖೆ ಮರಳಿ ವಶಕ್ಕೆ ಪಡೆದು, ಆ ಪ್ರದೇಶದಲ್ಲಿ ಸ್ವಾಭಾವಿಕ ಕಾಡು, ಹಣ್ಣು ಹಂಪಲು, ಸ್ಥಳೀಯ ಜಾತಿಯ ಮರ, ಔಷಧೀಯ ಸಸ್ಯಗಳನ್ನು ಬೆಳೆಸಬೇಕು ಎಂದುಮಲೆನಾಡಿನ ಪ್ರಗತಿಪರರು, ಪರಿಸರವಾದಿಗಳು, ಅರಣ್ಯ ವಾಸಿಗಳು 25 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ‘ನಮ್ಮ ಊರಿಗೆ ಅಕೇಶಿಯಾ ಬೇಡ ಒಕ್ಕೂಟ’ ರಚಿಸಿಕೊಂಡು ಆರು ತಿಂಗಳಿನಿಂದ ನಿರಂತರವಾಗಿ ಸರಣಿ ಸಭೆಗಳು, ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಏಕಜಾತಿಯ ನೆಡುತೋಪುಗಳಿಂದ ಸೂಕ್ಷ್ಮ ಪರಿಸರ,ಜೀವಸಂಕುಲದ ಮೇಲೆ ಆಗುತ್ತಿರುವ ಪರಿಣಾಮ, ಪ್ರಾಕೃತಿಕ ಅವಘಡ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ಅಧ್ಯಯನ ಕೇಂದ್ರ ಎಚ್ಚರಿಸಿದೆ.ನೆಡುತೋಪುಗಳ ಪ್ರಸ್ತುತ ಸ್ಥಿತಿಗತಿ, ಒತ್ತುವರಿ, ವಿಸ್ತೀರ್ಣ, ಅಲ್ಲಿರುವ ಮರಗಳು, ಅವುಗಳಮೌಲ್ಯ ಕುರಿತು ಅರಣ್ಯ ಇಲಾಖೆ ವರದಿ ನೀಡಿದ್ದರೂ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.

ಪುನಃ ಗುತ್ತಿಗೆ ನೀಡುವ ಚಿಂತನೆ:ಖಾಸಗಿ ಸಹಭಾಗಿತ್ವದಲ್ಲಿ ಎಂಪಿಎಂ ಪುನಶ್ಚೇತನಕ್ಕೆ ಪ್ರಕ್ರಿಯೆಗಳು ಆರಂಭವಾಗಿವೆ. ಹಿಂದೆ ಅರಣ್ಯ ಭೂಮಿ ಗುತ್ತಿಗೆ ನೀಡುವಾಗ ವಿಧಿಸಿದ್ದ ಷರತ್ತುಗಳನ್ನು ಪಾಲಿಸಿಲ್ಲ. ಕೋರ್ಟ್‌ಆದೇಶವನ್ನೂ ಪಾಲಿಸಿಲ್ಲ ಎಂಬ ದೂರುಗಳ ಮಧ್ಯೆಯೂಮತ್ತೆ ಗುತ್ತಿಗೆ ನೀಡುವ ಕುರಿತು ಚರ್ಚೆ ನಡೆಯುತ್ತಿದೆ.

ಪ್ರತಿಕ್ರಿಯೆ

ಜೀವ ಸಂಕುಲಕ್ಕೆ ಕಂಟಕವಾದ ಅಕೇಶಿಯದಿಂದ ಮಲೆನಾಡಿಗೆ ಮುಕ್ತಿ ದೊರಕಿಸಬೇಕು. ಸ್ವಾಭಾವಿಕ ಕಾಡು ಬೆಳೆಸಬೇಕು. ನೆಡುತೋಪು ರಕ್ಷಣಾ ಸಿಬ್ಬಂದಿಯನ್ನು ಅರಣ್ಯ ಇಲಾಖೆ ನೌಕರರನ್ನಾಗಿ ಪರಿಗಣಿಸಬೇಕು.
- ಕೆ.ಪಿ. ಶ್ರೀಪಾಲ್, ಸಂಚಾಲಕರು, ನಮ್ಮ ಊರಿಗೆ ಅಕೇಶಿಯಾ ಬೇಡ ಒಕ್ಕೂಟ

ಖಾಸಗಿ ಕಂಪನಿಗಳಿಗೆ ಎಂಪಿಎಂ ಗುತ್ತಿಗೆ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಟೆಂಡರ್ ಪ್ರಕ್ರಿಯೆ ಅ.12ಕ್ಕೆ ಪೂರ್ಣಗೊಳ್ಳಲಿದೆ. ನಂತರ ನೆಡುತೋಪುಗಳ ಬಳಕೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು.
- ಬಿ.ವೈ. ರಾಘವೇಂದ್ರ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT