ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಡವಾಳಶಾಹಿಗಳಿಂದ ಸಂತ್ರಸ್ತರ ಬದುಕು ವಿನಾಶ

ನಾಡಿ ಮಿಡಿತ ಕೃತಿಯ ಸಂವಾದ ಕಾರ್ಯಕ್ರಮದಲ್ಲಿ ಸಾಹಿತಿ ಮೋಹನ್ ಚಂದ್ರಗುತ್ತಿ ಬೇಸರ
Published 10 ಮಾರ್ಚ್ 2024, 15:55 IST
Last Updated 10 ಮಾರ್ಚ್ 2024, 15:55 IST
ಅಕ್ಷರ ಗಾತ್ರ

ಶಿವಮೊಗ್ಗ:‘ಮುಳುಗಡೆ ಸಂತ್ರಸ್ತರ ಬದುಕು ನೋಡುಗರಿಗೆ ಸಾಧಾರಣ ಅನಿಸಬಹುದು. ಆದರೆ, ಒಳಸುಳಿಯ ಬದುಕ ಚಿತ್ರಣ ಶೋಚನಿಯ ಸ್ಥಿತಿ ತಲುಪಿದೆ ಎಂದು ಸಾಹಿತಿ ಮೋಹನ್ ಚಂದ್ರಗುತ್ತಿ ಬೇಸರ ವ್ಯಕ್ತಪಡಿಸಿದರು.

ಪ್ರಜ್ಞಾ ಜಿಲ್ಲಾ ವೇದಿಕೆ ವತಿಯಿಂದ ಇಲ್ಲಿನ ಪ್ರಜ್ಞಾ ಬುಕ್ ಗ್ಯಾಲರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಾಹಿತಿ ನಾ.ಡಿಸೋಜ ಅವರ ನಾಡಿ ಮಿಡಿತ ಸಮಗ್ರ ಕೃತಿಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲಾಭದ ಉದ್ದೇಶಕ್ಕೆ ಬಂಡವಾಳಶಾಹಿಗಳು ನಡೆಸಿದ ಕ್ರೌರ್ಯ, ಸ್ಥಳೀಯ ಜನ ಜೀವನ, ಸಂಸ್ಕೃತಿಯಯನ್ನು ನಗಣ್ಯಗೊಳಿಸಿದೆ. ಇದರಿಂದ ಸಂತ್ರಸ್ತರು ಅಸಹಾಯಕತೆಯಿಂದ ಜೀವನ ನಡೆಸುತ್ತಿದ್ದಾರೆ. ಆಧುನಿಕತೆ ಪ್ರಕೃತಿಯನ್ನು ನಾಶ ಪಡಿಸುತ್ತಿದೆ. ಆದರೂ, ನಮ್ಮ ವ್ಯವಸ್ಥೆಯಲ್ಲಿ ಅಭಿವೃದ್ಧಿಯನ್ನು ಒಪ್ಪಿ, ಅಪ್ಪಿಕೊಂಡು ಹೆಜ್ಜೆ ಹಾಕುತ್ತಿದ್ದೇವೆ ಎಂದರು.

ರಾಜ್ಯಕ್ಕೆ ಬೆಳಕು ನೀಡಿದ ಮುಳುಗಡೆ ಸಂತ್ರಸ್ತರು ಕತ್ತಲ ಕೋಣೆಯಲ್ಲಿ ಬಂಧಿಯಾಗಿದ್ದಾರೆ. ಇಲ್ಲಿನ 3,847ಕ್ಕೂ ಹೆಚ್ಚು ಕುಟುಂಬಗಳ ಒಡಲ ಸಂಕಟ ಸರ್ಕಾರಕ್ಕೆ ಅರಿವಾಗಬೇಕು. ಇಲ್ಲವಾದರೆ, ಸಮಸ್ಯೆಗಳು ಬಗೆಹರಿಯುವುದಲ್ಲ ಎಂದರು.

ಪ್ರಕೃತಿ ನಾಶದಿಂದ ವಿನಾಶದ ಅಂಚು ತಲುಪಿದ್ದೇವೆ. ಶರಾವತಿ ಜಲಾಶಯ ನಿರ್ಮಾಣಗೊಂಡು 70 ವರ್ಷ ಪೂರ್ಣಗೊಂಡಿದೆ. ನದಿಯಲ್ಲಿ ಶೇ 40 ಹೂಳು ತುಂಬಿದೆ. ಮುಂದಿನ 50 ವರ್ಷಕ್ಕೆ ಜಲಾಶಯ ಸಂಪೂರ್ಣ ಹೂಳು ತುಂಬಿ ಮುಚ್ಚಿಕೊಳ್ಳಲಿದೆ. ಇದರಿಂದ, ಜಲಮೂಲಗಳನ್ನು ಉಳಿಸಬೇಕಾದ ಸವಾಲು ಎದುರಾಗಿದೆ ಎಂದು ಸುವ್ವಿ ಪ್ರಕಾಶನ ಮುಖ್ಯಸ್ಥ ಬಿ.ಎನ್.ಸುನೀಲ್ ಕುಮಾರ್ ಹೇಳಿದರು.

ಸಾಹಿತಿ ಆರ್.ರತ್ನಯ್ಯ ಮಾತನಾಡಿ, ಸಾಹಿತಿ ನಾ.ಡಿಸೋಜ ಅವರು ಮುಂದಿನ ತಲೆ ಮಾರಿಗೆ ಉತ್ತಮ ಸಂದೇಶ ನೀಡಿದ್ದಾರೆ. ಅವರ ಚಿಂತನೆಗಳನ್ನು ಇಂದಿನ ಯುವಪೀಳಿಗೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರಜ್ಞಾ ಜಿಲ್ಲಾ ವೇದಿಕೆಯ ಸೂರ್ಯ ಪ್ರಕಾಶ್ ಇದ್ದರು.

ಸಮಸ್ಯೆಗಳನ್ನು ಸಂಭ್ರಮಿಸುತ್ತಿದ್ದೇವೆ

ಪ್ರಸ್ತುತ ಬರಗಾಲ ಕ್ಷಾಮಾದಂತಹ ವಿಚಾರಗಳನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಿದ್ದೇವೆ. ಸಮಸ್ಯೆಗಳನ್ನು ಪರಿಹರಿಸುವ ಬದಲು ಇದರಿಂದ ಹಣ ಸಂಪಾದಿಸುತ್ತಿದ್ದೇವೆ ಎಂದು ಕಮಲಾ ನೆಹರು ಕಾಲೇಜು ಪ್ರಾಚಾರ್ಯ ನಾಗಭೂಷಣ್ ಹೇಳಿದರು. ಸಮಾಜವನ್ನು ಬದಲಾವಣೆಗೊಳಿಸಬೇಕಿದ್ದ ವಿದ್ಯಾರ್ಥಿ ಸಮೂಹ ಕರೋನದ ಬಳಿಕ ಮಿತಿ ಮೀರಿ ವರ್ತಿಸುತ್ತಿದ್ದಾರೆ. ಆಧುನಿಕತೆಯ ಹೆಸರಿನಲ್ಲಿ ಪ್ರಕೃತಿಯ ಮೇಲೆ ನಿರಂತರ ಅತ್ಯಾಚಾರ ನಡೆಸಲಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT