ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ | ಮಳೆಯ ಆರ್ಭಟ; ಶಾಲಾ ಕೊಠಡಿಗಳು ಶಿಥಿಲ

ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಶೇ 8ರಷ್ಟು ಹೆಚ್ಚು ಮಳೆ
Published : 2 ಸೆಪ್ಟೆಂಬರ್ 2024, 5:59 IST
Last Updated : 2 ಸೆಪ್ಟೆಂಬರ್ 2024, 5:59 IST
ಫಾಲೋ ಮಾಡಿ
Comments

ಶಿವಮೊಗ್ಗ: ಮಲೆನಾಡಿನಲ್ಲಿ ಕಳೆದ ವರ್ಷ ಮುನಿಸಿಕೊಂಡಿದ್ದ ಮಳೆರಾಯ ಈ ವರ್ಷ ತುಸು ಹೆಚ್ಚೇ ಪ್ರೀತಿ ತೋರಿದ್ದಾನೆ. ಈ ಬಾರಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 8ರಷ್ಟು ಮಳೆ ಹೆಚ್ಚು ಸುರಿದಿದೆ. ಜೂನ್ 1ರಿಂದ ಆಗಸ್ಟ್‌ ಕೊನೆಯವರೆಗೆ ವಾಡಿಕೆಯಂತೆ 175.4 ಸೆಂ.ಮೀ. ಮಳೆ ಆಗಬೇಕಿತ್ತು. ಆದರೆ 188.8 ಸೆಂ.ಮೀ ದಾಖಲಾಗಿದೆ.

ಮಳೆಯ ಆರ್ಭಟಕ್ಕೆ ನದಿ, ಹಳ್ಳ–ಕೊಳ್ಳ, ಜಲಾಶಯ ಎಲ್ಲವೂ ಮೈದುಂಬಿವೆ. ಹಸಿರು ಹಾದಿ ಎಲ್ಲೆಲ್ಲೂ ಗರಿಬಿಚ್ಚಿದೆ. ಸಮೃದ್ಧಿಯ ಹಾದಿಯ ಜೊತೆಗೆ ವಿಪರೀತ ಮಳೆ, ಹಾನಿಯನ್ನೂ ತಂದೊಡ್ಡಿದೆ. ವಾಣಿಜ್ಯ ಬೆಳೆ ಅಡಿಕೆ, ಆಹಾರ ಬೆಳೆಗಳಾದ ಮೆಕ್ಕೆಜೋಳ, ಭತ್ತ, ಶುಂಠಿ, ತರಕಾರಿಗೂ ರೋಗ ಬಾಧೆ ಕಾಡುತ್ತಿವೆ. ರಚ್ಚೆ ಹಿಡಿದು ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ರಸ್ತೆ, ಕಾಲುಸಂಕಗಳು ಹಾಳಾಗಿವೆ. ಸರ್ಕಾರಿ ಕಚೇರಿ, ಆಸ್ಪತ್ರೆ ಕಟ್ಟಡಗಳು ಸೋರುತ್ತಿವೆ ಜೊತೆಗೆ ಬಹಳಷ್ಟು ಶಾಲಾ ಕಟ್ಟಡಗಳು ಹಾನಿಗೀಡಾಗಿವೆ.

ಸಮೀಕ್ಷೆಯಂತೆ ಜಿಲ್ಲೆಯಲ್ಲಿ ಈ ಬಾರಿಯ ಮಳೆಗಾಲದಲ್ಲಿ 274 ಶಾಲಾ ಕಟ್ಟಡಗಳು ಹಾನಿಗೀಡಾಗಿವೆ. ಬಹಳಷ್ಟು ಶಿಥಿಲಗೊಂಡಿವೆ. ಗೋಡೆಗಳು ದುರ್ಬಲಗೊಂಡಿವೆ. ಅಪಾಯದ ಕಾರಣ ಕೆಲವು ಕಡೆ ಬಳಕೆ ಮಾಡದೇ ಉಳಿದಿದ್ದ ಕೊಠಡಿಗಳು ಕುಸಿದಿವೆ. ಹಾನಿಗೀಡಾದ ಶಾಲಾ ಕಟ್ಟಡ ಹಾಗೂ ಕೊಠಡಿಗಳನ್ನು ಇಲಾಖೆಯ ಅನುದಾನ ಹಾಗೂ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ನೆರವಿನಡಿ ದುರಸ್ತಿ ಮಾಡಲು, ಹೊಸ ಕೊಠಡಿಗಳ ಕಟ್ಟಿಕೊಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಜಿಲ್ಲೆಯಲ್ಲಿ ಆಯ್ದ ತಾಲ್ಲೂಕುಗಳಲ್ಲಿ ಶಾಲೆಗಳ ಹಾನಿಯ ಸ್ಥಿತಿಗತಿಯ ಬಗ್ಗೆ ಈ ವಾರದ ನಮ್ಮ ಜನ ನಮ್ಮ ಧ್ವನಿ ಅಂಕಣದಲ್ಲಿ ಕಿರಿದಾಗಿ ಬೆಳಕು ಚೆಲ್ಲಲಾಗಿದೆ.

ಸಾಗರ: ಭಾರಿ ಮಳೆ, 85 ಶಾಲಾ ಕಟ್ಟಡಗಳಿಗೆ ಹಾನಿ

ಸಾಗರ ತಾಲ್ಲೂಕಿನಲ್ಲಿ ಈ ವರ್ಷ ಸುರಿದ ಭಾರೀ ಮಳೆಯಿಂದ ಒಟ್ಟು 85 ಸರ್ಕಾರಿ ಶಾಲಾ ಕಟ್ಟಡಗಳಿಗೆ ಹಾನಿ ಉಂಟಾಗಿದೆ.
ಶಾಲಾ ಕಟ್ಟಡದ ಚಾವಣಿ, ಗೋಡೆ, ಅಡುಗೆ ಕೋಣೆ, ಕಾಂಪೌಂಡ್, ಶೌಚಾಲಯ ಹೀಗೆ ವಿವಿಧ ಭಾಗಗಳಿಗೆ ಮಳೆಯಿಂದ ಹಾನಿಯಾಗಿದೆ.

ಜುಲೈ ತಿಂಗಳಲ್ಲಿ ವಾಡಿಕೆಗಿಂತ ವಿಪರೀತ ಪ್ರಮಾಣದಲ್ಲಿ ಮಳೆಯಾದ ಕಾರಣ ಸತತವಾಗಿ 8 ದಿನಗಳ ಕಾಲ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಈ ಮೂಲಕ ಮಕ್ಕಳ ಸುರಕ್ಷತೆಗೆ ಒತ್ತು ನೀಡಲಾಗಿತ್ತು.

ಶಾಲೆಯ ಕಟ್ಟಡಗಳಿಗೆ ಹಾನಿ ಸಂಭವಿಸಿದ್ದರೂ ಎಲ್ಲಿಯೂ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಅಡುಗೆ ಸಿಬ್ಬಂದಿಗೆ ತೊಂದರೆ ಉಂಟಾಗಿಲ್ಲ. ‘ಯಾವ್ಯಾವ ಭಾಗದಲ್ಲಿ, ಯಾವ ಪ್ರಮಾಣದಲ್ಲಿ ಶಾಲೆಯ ಕಟ್ಟಡಗಳಿಗೆ ಹಾನಿ ಉಂಟಾಗಿದೆ ಎನ್ನುವ ಬಗ್ಗೆ ತಾಲ್ಲೂಕು ಆಡಳಿತಕ್ಕೆ ವರದಿ ಸಲ್ಲಿಸಲಾಗಿದೆ. ದುರಸ್ತಿ ಕಾರ್ಯ ಶೀಘ್ರ ಕೈಗೊಳ್ಳಲಾಗುವುದು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಈ. ಪರಶುರಾಮಪ್ಪ ತಿಳಿಸಿದ್ದಾರೆ.

ಶಿಕಾರಿಪುರ: ಮಳೆಗೆ ಶಿಥಿಲಗೊಂಡ ಶಾಲಾ ಕೊಠಡಿ

ಶಿಕಾರಿಪುರ ತಾಲ್ಲೂಕಿನಲ್ಲಿ ಅಧಿಕ ಮಳೆ ಸುರಿಯುತ್ತಿರುವ ಪರಿಣಾಮ ತಾಲ್ಲೂಕಿನ ಕೆಲವು ಗ್ರಾಮಗಳ ಸರ್ಕಾರಿ ಶಾಲಾ ಕೊಠಡಿಗಳು ಶಿಥಿಲಗೊಂಡಿವೆ.

ತಾಲ್ಲೂಕಿನಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದ ಕೆಲವು ಶಾಲಾ ಕೊಠಡಿಗಳು ಶಿಥಿಲಗೊಂಡು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡಚಣೆಯಾಗಿದೆ. ಕೆಲವು ಶಾಲೆಗಳಲ್ಲಿ ಅಡುಗೆ ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಶಾಲೆ ಗೋಡೆ ಕುಸಿದು ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ. ಶಿಕ್ಷಣ ಇಲಾಖೆ ಸಿಬ್ಬಂದಿ ತಾಲ್ಲೂಕಿನಲ್ಲಿ ಸುಮಾರು 45 ಶಾಲಾ ಕೊಠಡಿಗಳ ದುರಸ್ತಿಗೆಗೆ ಉಪನಿರ್ದೇಶಕರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.

ಕಳೆದ ವರ್ಷ ಹಾನಿಗೀಡಾಗಿದ್ದ ಸುಮಾರು 32 ಶಾಲೆಗಳ ದುರಸ್ತಿಗಾಗಿ ವಿಶೇಷ ಅಭಿವೃದ್ಧಿಗಾಗಿ ತಾಲ್ಲೂಕುಗಳ ಯೋಜನೆ ಅಡಿ ₹1.10 ಕೋಟಿ ಅನುದಾನ ಬಿಡುಗಡೆಯಾಗಿದೆ. 2024–25ನೇ ಸಾಲಿನಲ್ಲಿ ಜಿಲ್ಲಾ ಪಂಚಾಯತ್‌ ರಾಜ್ಯ ಹಣಕಾಸು ಆಯೋಗದಡಿ ತಾಲ್ಲೂಕಿಗೆ ಪ್ರಥಮ ಆದ್ಯತೆಯಲ್ಲಿ 6 ಸರ್ಕಾರಿ ಶಾಲೆಗಳ ಕೊಠಡಿಗಳನ್ನು ದುರಸ್ತಿಪಡಿಸಲು ಅನುದಾನ ಬಿಡುಗಡೆಯಾಗಿದೆ. ಪ್ರಸ್ತುತ ಕಳಿಸಿರುವ 42 ಶಾಲಾ ಕೊಠಡಿಗಳ ದುರಸ್ತಿ ಕಾರ್ಯಕ್ಕೆ ಸರ್ಕಾರ ಅನುದಾನ ನೀಡಬೇಕಾಗಿದೆ ಎಂದು ಇಲಾಖೆಯ ಮೂಲಗಳು ಹೇಳುತ್ತವೆ.

ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆಗೆ ಒತ್ತು ನೀಡುವಂತೆ ಶಿಕ್ಷಣ ಇಲಾಖೆಯ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಶಿಕ್ಷಣ ಇಲಾಖೆಯ ವರದಿ ಆಧರಿಸಿ ದುರಸ್ತಿ ಕಾರ್ಯಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು.
ಗೋಪಾಲಕೃಷ್ಣ ಬೇಳೂರು. ಶಾಸಕ ಸಾಗರ
ಮಳೆಯಿಂದ ಯಾವುದೇ ಶಾಲಾ ಕಟ್ಟಡ ಕುಸಿದಿಲ್ಲ. ಗೋಡೆ ಕಾಂಪೌಂಡ್ ಚಾವಣಿಗೆ ಹಾನಿಯಾಗಿದೆ. ದುರಸ್ತಿಗೆ ಕ್ರಮ ಕೈಗೊಂಡಿದ್ದೇವೆ.
ಮಂಜುನಾಥ್, ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT