ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ ಕಡಿತಲೆ: ಪರಿಸರ ಕಾರ್ಯಕರ್ತರ ಅಸಮಾಧಾನ

ಸಾಗರ: ಹೆದ್ದಾರಿ ಪಕ್ಕದ ವೃಕ್ಷಗಳು; ತರಾತುರಿಯಲ್ಲಿ ಅಹವಾಲು ಸಭೆ ಕರೆದಿದ್ದಕ್ಕೆ ಆಕ್ಷೇಪ
Last Updated 4 ಸೆಪ್ಟೆಂಬರ್ 2021, 3:54 IST
ಅಕ್ಷರ ಗಾತ್ರ

ಸಾಗರ: ನಗರದ ಬಿ.ಎಚ್ ರಸ್ತೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರ ವಿಸ್ತರಣೆ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿನ 488 ಮರಗಳನ್ನು ತೆರವುಗೊಳಿಸುವ ಕುರಿತು ಅರಣ್ಯ ಇಲಾಖೆ ಶುಕ್ರವಾರ ಕರೆದಿದ್ದ ಸಾರ್ವಜನಿಕರ ಅಹವಾಲು ಸಭೆಯನ್ನು ತರಾತುರಿಯಲ್ಲಿ ಕರೆದಿರುವ ಇಲಾಖೆಯ ಕ್ರಮಕ್ಕೆ ಪರಿಸರ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪರಿಸರ ಕಾರ್ಯಕರ್ತ ಅಖಿಲೇಶ್ ಚಿಪ್ಪಳಿ ಮಾತನಾಡಿ, ‘488 ಮರಗಳು ಕಡಿತಲೆ ಆಗುವಂತಹ ಮಹತ್ವದ ವಿಷಯದ ಕುರಿತು ಸಾರ್ವಜನಿಕ ಅಹವಾಲು ಕೇಳುವ ಸಭೆಯ ಪ್ರಕ್ರಿಯೆಗೆ ಸಾಕಷ್ಟು ಸಮಯ ನೀಡಬೇಕಿತ್ತು. ಆ. 27ರಂದು ಪ್ರಕಟಣೆ ಹೊರಡಿಸಿ ಕೇವಲ ಆರು ದಿನಗಳ ನಂತರ ಸಭೆ ಕರೆದಿರುವ ಕ್ರಮ ಸರಿಯಲ್ಲ. ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಬೇಕಿತ್ತು’ ಎಂದು ಹೇಳಿದರು.

‘ತರಾತುರಿಯಲ್ಲಿ ಅರಣ್ಯ ಇಲಾಖೆ ಅಹವಾಲು ಕೇಳುವ ಸಭೆ ಕರೆದಿರುವುದನ್ನು ನೋಡಿದರೆ ಕೇವಲ ಔಪಚಾರಿಕತೆಗಾಗಿ ಸಭೆ ನಡೆಸುತ್ತಿರುವಂತೆ ಕಾಣುತ್ತಿದೆ. 488 ಬಲಿತ ಪಾರಂಪರಿಕ ಮರಗಳನ್ನು ತೆರವುಗೊಳಿಸದೆ ರಾಷ್ಟ್ರೀಯ ಹೆದ್ದಾರಿಯನ್ನು ಉನ್ನತೀಕರಣಗೊಳಿಸುವ ಸಾಧ್ಯತೆ ಬಗ್ಗೆ ಅರಣ್ಯ ಇಲಾಖೆ ಹೆದ್ದಾರಿ ಪ್ರಾಧಿಕಾರದೊಂದಿಗೆ ಮೊದಲು ಚರ್ಚೆ ನಡೆಸಬೇಕಿತ್ತು’ ಎಂದು ಅವರು ಪ್ರತಿಪಾದಿಸಿದರು.

‘ಸಾಗರ ನಗರ ವ್ಯಾಪ್ತಿಯಲ್ಲಿ ಹೆದ್ದಾರಿ ಪ್ರಾಧಿಕಾರದ ಯಾವ ಮಾನದಂಡದ ಪ್ರಕಾರ ಹೆದ್ದಾರಿ ವಿಸ್ತರಣೆ ಅಗತ್ಯವಿದೆ? ವಾಹನ ದಟ್ಟಣೆ ಯಾವ ಪ್ರಮಾಣದಲ್ಲಿದೆ ಎಂಬುದರ ಕುರಿತು ಅಂಕಿ ಅಂಶಗಳನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು. ಒಂದು ಪಾರಂಪರಿಕ ಮರವನ್ನು ಕಡಿದರೆ ₹ 74.50 ಲಕ್ಷ ಹಣ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಈ ಪ್ರಕಾರ ಹೆದ್ದಾರಿ ಪ್ರಾಧಿಕಾರ ಅರಣ್ಯ ಇಲಾಖೆಗೆ ₹ 364 ಕೋಟಿ ಪಾವತಿಸಲು ಸಿದ್ಧವಿದೆಯೆ?’ ಎಂದು ಪ್ರಶ್ನಿಸಿದರು.

‘488 ಮರಗಳನ್ನು ಕಡಿತಲೆ ಮಾಡಿದ್ದಕ್ಕೆ ಪರ್ಯಾಯವಾಗಿ ಮರ ಬೆಳೆಸುವ ಯೋಜನೆ ರೂಪಿಸ ಲಾಗಿದೆಯೇ? ಈ ಹಿಂದೆ ರಸ್ತೆ ವಿಸ್ತರಣೆ ಯಾದ ಪ್ರದೇಶಗಳಲ್ಲಿ ಪರ್ಯಾಯ ಮರಗಳನ್ನು ಬೆಳೆಸುವುದಾಗಿ ನೀಡಿದ್ದ ಭರವಸೆ ಈಡೇರಿದೆಯೇ? ಮರಗಳನ್ನು ತೆರವುಗೊಳಿಸುವ ಮುನ್ನ ಅದರಲ್ಲಿನ ಔಷಧೀಯ ಗುಣಗಳನ್ನು ಪಟ್ಟಿ ಮಾಡಲಾಗಿದೆಯೇ? ಮರಗಳು ತೆರವುಗೊಂಡರೆ ಅದನ್ನೇ ಅವಲಂಬಿಸಿರುವ ಪಕ್ಷಿಗಳು, ಜೀವವೈವಿಧ್ಯಕ್ಕೆ ಉಂಟಾಗುವ ಹಾನಿ ಕುರಿತು ಅಂದಾಜು ಮಾಡಲಾಗಿದೆಯೇ’ ಎಂದು ಅವರು ಕೇಳಿದರು.

ವೃಕ್ಷಲಕ್ಷ ಆಂದೋಲನದ ಬಿ.ಎಚ್.ರಾಘವೇಂದ್ರ, ‘ಈಗ ಉದ್ದೇಶಿಸಿ ರುವುದಕ್ಕಿಂತ ರಸ್ತೆ ವಿಸ್ತರಣೆ ಕಾರ್ಯವನ್ನು ಒಂದು ಮೀಟರ್‌ನಷ್ಟು ಕಡಿಮೆ ಮಾಡಿದರೆ ಸಾಕಷ್ಟು ಸಂಖ್ಯೆಯಲ್ಲಿ ಮರಗಳನ್ನು ರಕ್ಷಿಸಬಹುದು’ ಎಂದು ಅಭಿಪ್ರಾಯಪಟ್ಟರು.

ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್, ‘ಹೆದ್ದಾರಿ ವಿಸ್ತರಣೆಗಾಗಿ 488 ಮರಗಳ ಕಡಿತಲೆಯಾಗುತ್ತದೆ ಎಂದರೆ ಅದು ಕಡಿಮೆ ಸಂಖ್ಯೆಯೇನಲ್ಲ. ಆದರೆ, ಬೈಪಾಸ್ ಮೂಲಕ ಹೆದ್ದಾರಿ ಹಾದು ಹೋಗುವಂತೆ ಮಾಡಿದರೆ 4800ರಷ್ಟು ಮರಗಳನ್ನು ಕಡಿಯಬೇಕಾಗುತ್ತದೆ. ಕಡಿತಲೆಯಾಗುವ ಮರಗಳಿಗೆ ಪರ್ಯಾಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ಬೆಳೆಸುವ ಬಗ್ಗೆ ಖಾತ್ರಿಪಡಿಸಿಕೊಂಡು ರಸ್ತೆ ವಿಸ್ತರಣೆಗೆ ಅವಕಾಶ ಮಾಡಿಕೊಡಬಹುದು’ ಎಂದು ಅಭಿಪ್ರಾಯಪಟ್ಟರು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ‘ಸಾಗರ ತಾಲ್ಲೂಕು ರಾಜ್ಯದ ಪ್ರಮುಖ ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿದೆ. ಹೆದ್ದಾರಿಯಲ್ಲಿ ವಾಹನಗಳ ದಟ್ಟಣೆ ಹೆಚ್ಚುತ್ತಿದೆ. ಹೀಗಾಗಿ, ಶಾಸಕ ಹರತಾಳು ಹಾಲಪ್ಪ ಅವರು ರಸ್ತೆ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಿದ್ದಾರೆ. ರಸ್ತೆ ವಿಸ್ತರಣೆಗೂ ಅಪಸ್ವರ ಎತ್ತುವುದು ಸರಿಯಲ್ಲ’ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ‘ಎಲ್ಲ ಸಾರ್ವಜನಿಕರ ಅಭಿಪ್ರಾಯಗಳನ್ನು ಇಲಾಖೆಯ ಮೇಲಧಿಕಾರಿಗಳಿಗೆ ಕಳುಹಿಸಿ ಸೂಕ್ತ ಕ್ರಮ ಕೈಗೊಳ್ಳ ಲಾಗುವುದು. ಮರಗಳ ಸಂರಕ್ಷಣೆ ವಿಷಯದಲ್ಲಿ ಅರಣ್ಯ ಇಲಾಖೆ ರಾಜಿ ಮಾಡಿಕೊಳ್ಳುವುದಿಲ್ಲ. ಒಂದು ವೇಳೆ ಕಡಿತಲೆ ಅನಿವಾರ್ಯವಾದರೆ ಪರ್ಯಾಯವಾಗಿ ಹೆಚ್ಚಿನ ಮರಗಳನ್ನು ಬೆಳೆಸುವತ್ತ ಗಮನ ಹರಿಸಲಾಗುವುದು’ ಎಂದರು.

ನಗರಸಭೆ ಸದಸ್ಯ ಕೆ.ಆರ್.ಗಣೇಶ್ ಪ್ರಸಾದ್, ನಾದಿರಾ ಪರ್ವಿನ್, ಮಾಜಿ ಸದಸ್ಯ ರವಿ ಜಂಬಗಾರು, ಇಂಧನ ತಜ್ಞ ಶಂಕರ ಶರ್ಮ, ಪತ್ರಕರ್ತ ಎಚ್. ರಾಘವೇಂದ್ರ, ಕೆ.ವಿ.ಪ್ರವೀಣ್ ಮಾತನಾಡಿದರು.

ಸಹಾಯಕ ಅರಣ್ಯ ಸಂರಕ್ಷಣಾ ಧಿಕಾರಿ ಶ್ರೀಧರ್, ವಲಯ ಅರಣ್ಯಾಧಿ ಕಾರಿ ಪ್ರಮೋದ್ ಡಿ.ಆರ್. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾ ಯಕ ಎಂಜಿನಿಯರ್‌ ಸುನೀಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT