ಗುರುವಾರ , ಜನವರಿ 20, 2022
15 °C
ಕರ್ನಾಟಕ ಸಂಘದ ವಾರ್ಷಿಕೋತ್ಸವ

ಬೇರನ್ನು ಮರೆಯುತ್ತಿರುವ ಹೊಸ ಚಿಗರು: ಸಾಹಿತಿ ಡಾ.ಜಯಪ್ರಕಾಶ್ ಮಾವಿನಕುಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಆಧುನಿಕ ಜೀವನದ ಒತ್ತಡದ ಬದುಕಿನಲ್ಲಿ ತಮ್ಮ ಅಂತರಂಗದ ಭಾವನೆ ಹಂಚಿಕೊಳ್ಳುವುದು ದಿನೇ ದಿನೇ ಕಡಿಮೆಯಾಗುತ್ತಿದೆ ಎಂದು ಸಾಹಿತಿ ಡಾ.ಜಯಪ್ರಕಾಶ್ ಮಾವಿನಕುಳಿ ಹೇಳಿದರು.

ಇಲ್ಲಿನ ಕರ್ನಾಟಕ ಸಂಘದಲ್ಲಿ ಶನಿವಾರ ನಡೆದ 91ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಒತ್ತಡದ ಬದುಕಿನಲ್ಲಿ ಮರೆವಿನ ಕಾಯಿಲೆ ಎಲ್ಲಡೆ ಆವರಿಸಿಕೊಂಡಿದೆ. ತಂದೆ ಮಗನನ್ನು ಮರೆಯುವುದು, ಅಣ್ಣ ತಮ್ಮನನ್ನು ಮರೆಯುವುದು, ನಮ್ಮ ಪೂರ್ವ ಇತಿಹಾಸಗಳನ್ನು ಮರೆಯುವುದು, ಸೊಗಡಿನ ಪರಂಪರೆ ಮರೆಯುವುದು, ಇದು ಮರೆಯುವ ಕಾಲವಾಗಿ ಬದಲಾಗಿದೆ. ಹಿಂದೆ ಒಂದು ಸಣ್ಣ ಸಹಾಯ ಮಾಡಿದರೂ ಸಾಯುವವರೆಗೆ ನೆನಪಿನಲ್ಲಿಟ್ಟುಕೊಳ್ಳುವ ಮನಸ್ಥಿತಿ ಇತ್ತು. ಈಗ ಸಂಬಂಧಿಗಳನ್ನೇ ಬಳಸಿ, ಬಿಸಾಕುವ ವಸ್ತುಗಳಂತೆ ಕಾಣುವ ಸಂಕಷ್ಟದ ಸಂಕೋಲೆಯಲ್ಲಿದ್ದೇವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಒಂಬತ್ತು ತಿಂಗಳು ಹೊತ್ತು, ಹೆತ್ತು ಸಾಕಿದ ತಂದೆ, ತಾಯಿಯನ್ನೇ ವೃದ್ಧಾಶ್ರಮದ ಪಾಲಾಗಿ ಮಾಡುತ್ತಿರುವ ಇಂದಿನ ಕಾಲದ ಮಕ್ಕಳು ಬೇರನ್ನು ಮರೆಯುತ್ತಿರುವ ಹೊಸ ಚಿಗರಿನಂತೆ ಬದುಕುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಒಳದೃಷ್ಟಿ ಮುಖ್ಯ: ‘ಮನುಷ್ಯನಿಗೆ ಒಳದೃಷ್ಟಿ ಮುಖ್ಯ. ಮನುಷ್ಯ ಕಣ್ಣಿಗೆ ಕಾಣಿಸುವುದೆಲ್ಲವನ್ನೂ ನೋಡಬಹುದು. ಆದರೆ, ಅದನ್ನು ಒಳದೃಷ್ಟಿಯಿಂದ ಅರಿತಾಗ ಮಾತ್ರ ವಾಸ್ತವ ತಿಳಿಯುತ್ತದೆ. ನಿಮ್ಮ ಒಳಗೊಳ್ಳುವಿಕೆ ಮತ್ತು ಬದ್ಧತೆ ಮೂಲಕ ನಿಮ್ಮ ಆಲೋಚನೆಗಳಿಗೆ ನೀವು ಮತ್ತಷ್ಟು ಆಳವನ್ನು ನೀಡುತ್ತಾ ಹೋದಂತೆ, ಅದೊಂದು ಅಸ್ತಿತ್ವದ ರೂಪವನ್ನು ಪಡೆದು, ಆ ವಾಸ್ತವವನ್ನು ನಿಜವಾಗಿ ನೀವು ಅನುಭವಿಸಲು ಸಾಧ್ಯವಾಗುವ ರೀತಿಯಲ್ಲಿ ನಿಮ್ಮನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಕರೆದೊಯ್ಯುತ್ತದೆ. ಇದೇ ನೋಡುವುದಕ್ಕೂ, ಕಾಣವುದಕ್ಕೂ ಇರುವ ವ್ಯತ್ಯಾಸ’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಕರ್ನಾಟಕ ಸಂಘದ ಅಧ್ಯಕ್ಷ ಎಚ್‌.ಡಿ. ಉದಯಶಂಕರಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಮೋಹನಶಾಸ್ತ್ರಿ, ಗೌರವ ಕಾರ್ಯದರ್ಶಿ ಪ್ರೊ.ಎಂ. ಆಶಾಲತಾ, ಕಾರ್ಯಕಾರಿ ಸಮಿತಿ ಸದಸ್ಯೆ ಕೆ. ಮಂಜುಳಾ ಇದ್ದರು.

ಡಾ.ಎಸ್‌.ಆರ್‌. ನಾಗರಾಜ್‌, ವಿದುಷಿ ವೀಣಾ ನಾಗರಾಜ್‌ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಇವರಿಗೆ ವಿದ್ವಾನ್‌ ಮಧುಮರುಳಿ ಮತ್ತೂರು ಅವರು ವಯೋಲಿನ್‌ನಲ್ಲಿ, ವಿದ್ವಾನ್‌ ಪಿ.ಎಸ್‌. ಶ್ರೀಧರ್ ಮೈಸೂರು ಅವರು ಮೃದಂಗದಲ್ಲಿ ಸಾಥ್ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು