ಬುಧವಾರ, ಮಾರ್ಚ್ 29, 2023
29 °C

ತ್ಯಾಜ್ಯ ಸೇವಿಸಿ ಹಸುಗಳ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ರಸ್ತೆ ಬದಿ ಹಾಕಿರುವ ತ್ಯಾಜ್ಯ ಸೇವಿಸಿ ಜಾನುವಾರು ಸಾವನ್ನಪ್ಪಿದ್ದು, ಘನ ತ್ಯಾಜ್ಯ ವಿಲೇವಾರಿಯಲ್ಲಿನ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಜನರು ಆರೋಪಿಸಿದ್ದಾರೆ.

ಶಿವಮೊಗ್ಗದ ಅನುಪಿನಕಟ್ಟೆ ಗ್ರಾಮದಲ್ಲಿ ಶನಿವಾರ ಐದು ಗೋವುಗಳು ಸಾವನ್ನಪ್ಪಿವೆ. ಇನ್ನಷ್ಟು ಗೋವುಗಳು ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿವೆ. ಪಶುವೈದ್ಯರು ಮತ್ತು ಸಿಬ್ಬಂದಿ ಮನೆಗೆ ಮೆನೆಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ.

ಶಿವಮೊಗ್ಗದ ಅನುಪಿನಕಟ್ಟೆಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕವಿದೆ. ಶಿವಮೊಗ್ಗ ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ಇಲ್ಲಿಯೇ ನಡೆಯಲಿದೆ. ತ್ಯಾಜ್ಯ ತುಂಬಿಕೊಂಡು ಬರುವ ವಾಹನಗಳು ಘಟಕದಲ್ಲಿ ತ್ಯಾಜ್ಯ ಸುರಿಯುವ ಬದಲು, ತುಂಗಾ ಎಡದಂಡೆ ಕಾಲುವೆ ಮೇಲೆ ಸುರಿದು ಹೋಗುತ್ತಿರುವ ಆರೋಪವಿದೆ. ಹೀಗೆ ಸುರಿದ ಕಸದ ರಾಶಿ ಮಧ್ಯೆ ಇದ್ದ ಆಹಾರ ಪದಾರ್ಥ ಸೇವಿಸಿ ಹಸುಗಳು ಸಾವನ್ನಪ್ಪಿವೆ.

ಅನುಪಿನಕಟ್ಟೆ ಗ್ರಾಮಸ್ಥರು ನಿತ್ಯ ಹಸುಗಳನ್ನು ಮೇಯಲು ಬಿಡುತ್ತಾರೆ. ಚಾನಲ್ ಸುತ್ತಮುತ್ತಲ ಪ್ರದೇಶದಲ್ಲಿ ಮೇಯಲು ಹೋಗಿ, ಹಿಂತಿರುಗಿದ್ದ ಹಸುಗಳು ಕೊಟ್ಟಿಗೆಯಲ್ಲಿ ಮಲಗಿದ್ದವು ಈಗ ಮೇಲೇಳದ ಸ್ಥಿತಿಗೆ ತಲುಪಿವೆ. ಸುಮಾರು ಐದು ಗೋವುಗಳು ಕೊಟ್ಟಿಗೆಯಲ್ಲೇ ಪ್ರಾಣ ಕಳೆದುಕೊಂಡಿವೆ. ಇನ್ನಷ್ಟು ಗೋವುಗಳು ಕುಳಿತಲ್ಲೇ ನರಳಾಡುತ್ತಿವೆ. ಕೆಲವು ದನಗಳು ಬಾಯಲ್ಲಿ ಹುಲ್ಲನ್ನು ಗಟ್ಟಿಯಾಗಿ ಕಚ್ಚಿಕೊಂಡು ನುಂಗಲಾಗದೆ, ಉಗುಳಲಾರದೆ ಒದ್ದಾಡುತ್ತಿವೆ.

‘ಕಸ ಸಂಗ್ರಹ ಮಾಡಿದ ವಾಹನಗಳು ಬೆಳಿಗ್ಗೆ ಮತ್ತು ರಾತ್ರಿ ವೇಳೆ ವಿಲೇವಾರಿ ಘಟಕಕ್ಕೆ ಬರುತ್ತವೆ. ಕೆಲವರು ಕಲ್ಯಾಣ ಮಂಟಪ, ಕಾರ್ಯಕ್ರಮದಲ್ಲಿ ಉಳಿದ ಆಹಾರವನ್ನು ತಂದು ಚಾನಲ್ ಪಕ್ಕದಲ್ಲಿ ಸುರಿಯಲಾಗುತ್ತದೆ. ನಾವು ಎಷ್ಟೇ ನಿಗಾ ವಹಿಸಿದರೂ ತಡೆಯಲು ಆಗುತ್ತಿಲ್ಲ. ದನಗಳನ್ನು ಮೇಯಲು ಬಿಟ್ಟಾಗ, ಅವು ಈ ಆಹಾರವನ್ನು ಸೇವಿಸುತ್ತವೆ’ ಎಂದು ಸ್ಥಳೀಯ ಸುರೇಶ್ ಆರೋಪಿಸಿದ್ದಾರೆ.

ಅನುಪಿನಕಟ್ಟೆಯಲ್ಲಿ ಬಹುತೇಕರು ಬ್ಯಾಂಕ್‌, ಸ್ವ ಸಹಾಯ ಸಂಘಗಳಲ್ಲಿ ಸಾಲ ಮಾಡಿ ಗೋವುಗಳನ್ನು ಖರೀದಿಸಿದ್ದರು. ಈಗ ಪ್ರೀತಿಯ ಗೋವುಗಳನ್ನು ಕಳೆದುಕೊಂಡು ಜನರು ಕಣ್ಣೀರು ಹಾಕುತ್ತಿದ್ದಾರೆ. ‘ಸಂಘದಿಂದ ₹ 50 ಸಾವಿರ ಸಾಲ ತಗೆದುಕೊಂಡು ಹಸು ಖರೀದಿ ಮಾಡಿದ್ದೆವು. ಈಗ ಹೀಗಾಗಿದೆ. ನಾವು ನಿನ್ನೆ ಹಬ್ಬ ಮಾಡಿಲ್ಲ. ಹಸುವಿನ ಆರೈಕೆ ಮಾಡಿಕೊಂಡಿದ್ದೇವೆ. ಹಸುವಿನಿಂದಲೇ ನಮ್ಮ ಜೀವನ ನಡೆಯುತ್ತಿತ್ತು. ಈಗ ಅದಿಲ್ಲ’ ಎಂಬುದು ದಾನಮ್ಮ ಅವರ ಅಳಲು.

ಸ್ಥಳಕ್ಕೆ ಉಪ ಮೇಯರ್, ಪೊಲೀಸ್ ಭೇಟಿ: ಸಾಲು ಸಾಲು ಗೋವುಗಳು ಸಾವನ್ನಪ್ಪುತ್ತಿದ್ದಂತೆ ಅನುಪಿನಕಟ್ಟೆ ಗ್ರಾಮಸ್ಥರು ಆಕ್ರೋಶಗೊಂಡರು. ಬೀದಿ
ಗಿಳಿದು ಪ್ರತಿಭಟಿಸಿದರು. ಕಸ ಸಾಗಣೆ ಮಾಡುತ್ತಿದ್ದ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ವಿಚಾರ ತಿಳಿಯುತ್ತಿದ್ದಂತೆ ತುಂಗಾ ನಗರ ಠಾಣೆ ಇನ್‌ಸ್ಪೆಕ್ಟರ್ ದೀಪಕ್ ಪರಿಶೀಲಿಸಿದರು.

ಕೋಟ್‌...

ಮಹಾನಗರ ಪಾಲಿಕೆಯಿಂದ ಜನರಿಗೆ ನ್ಯಾಯ ಕೊಡಿಸುತ್ತೇವೆ. ಸಂಬಂಧಿಸಿದ ಅಧಿಕಾರಿಗಳು ಕೂಡ ಇಲ್ಲಿಗೆ ಬಂದಿದ್ದಾರೆ. ಯಾರಿಗೆಲ್ಲ ಸಮಸ್ಯೆಯಾಗಿದೆ ಅನ್ನುವ ಕುರಿತು ಪಟ್ಟಿ ಸಿದ್ಧಪಡಿಸಲಾಗುತ್ತಿದೆ.

ಶಂಕರ್ ಗನ್ನಿ,ಉಪ ಮೇಯರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.