ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಮಾರವ್ಯಾಸನ ಸಾಹಿತ್ಯದಲ್ಲಿದೆ ಗ್ರಹಿಕೆಯಲ್ಲಿ ಮಾರ್ಪಾಡು ತರುವ ಗುಣ

Last Updated 7 ನವೆಂಬರ್ 2022, 7:27 IST
ಅಕ್ಷರ ಗಾತ್ರ

ಸಾಗರ: ನವರಸಗಳ ಜೊತೆಗೆ ಸೂಕ್ಷ್ಮವಾದ ಸ್ಥಳೀಯ ಸಾಂಸ್ಕೃತಿಕ ಅಂಶಗಳನ್ನು ತನ್ನ ಒಡಲಿನೊಳಗೆ ಹುದುಗಿಸಿಕೊಂಡಿರುವ ಕುಮಾರ ವ್ಯಾಸನ ಸಾಹಿತ್ಯದಲ್ಲಿ ಮನುಷ್ಯನ ಗ್ರಹಿಕೆಯನ್ನು ಮಾರ್ಪಾಡು ಮಾಡುವ ಗುಣವಿದೆ ಎಂದು ವಿಮರ್ಶಕ ಎಸ್.ಆರ್.ವಿಜಯಶಂಕರ್ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ‘ಕಲೆಗಳ ಸಂಗಡ ಮಾತುಕತೆ’ ಎಂಬ ಶೀರ್ಷಿಕೆಯಡಿ ಭಾನುವಾರ ನಡೆದ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ‘ಕುಮಾರ ವ್ಯಾಸನ ಕಾವ್ಯ’ ಕುರಿತು ಅವರು ಮಾತನಾಡಿದರು.

‘ಗ್ರಹಿಕೆಯಲ್ಲಿ ಮಾರ್ಪಾಡು ತರುವ ಜೊತೆಗೆ ಈಗಾಗಲೇ ಚಾಲ್ತಿಯಲ್ಲಿರುವ ಸಾಹಿತ್ಯವನ್ನು ಗ್ರಹಿಸುವ ಹೊಸ ಮಾರ್ಗಗಳನ್ನು ತೆರೆದಿಡುವುದು ಕೂಡ ಶ್ರೇಷ್ಠ ಸಾಹಿತ್ಯದ ಗುಣಲಕ್ಷಣವಾಗಿದೆ. ಇಂತಹ ಲಕ್ಷಣ ಕುಮಾರವ್ಯಾಸನ ಕಾವ್ಯದಲ್ಲಿದೆ’ ಎಂದು ಹೇಳಿದರು.

‘ಸಂಬಂಧಗಳ ಸಲಿಗೆಯ ಸಂಕೀರ್ಣತೆಯ ವಿಶ್ಲೇಷಣೆಯನ್ನು ಕುಮಾರವ್ಯಾಸ ಭಾರತದಲ್ಲಿ ದಟ್ಟವಾಗಿ ಕಾಣಬಹುದು. ಭಾಷೆಯ ಸೌಂದರ್ಯದ ಸಹಜ ಸೊಗಡಿನ ಜೊತೆಗೆ ಅಲ್ಲಿನ ಪ್ರತಿಯೊಂದು ಪದಗಳು ವಿಸ್ತೃತ ವ್ಯಾಖ್ಯಾನಕ್ಕೆ ಒಳಪಡುವಂತಹ ಸ್ವರೂಪ ಹೊಂದಿದೆ. ನಮ್ಮ ಮನಸ್ಸಿನೊಳಗೆ ನಡೆಯುವ ಭಾವ ಸಂಘರ್ಷವನ್ನು ದೇಸಿ ಶೈಲಿಯಲ್ಲಿ ನಿರೂಪಿಸುವುದು ಕುಮಾರ ವ್ಯಾಸನ ವಿಶೇಷವಾಗಿದೆ’ ಎಂದು ವಿಶ್ಲೇಷಿಸಿದರು.

ಕಾವ್ಯದಲ್ಲಿ ಅರ್ಥದ ಅನುರಣನ ಕಥನದ ಸ್ವರೂಪಕ್ಕೆ ಹೇಗೆ ಬಿಚ್ಚಿಕೊಳ್ಳುತ್ತದೆ ಎಂಬ ಮಾದರಿಗಳನ್ನು ಅಭ್ಯಾಸ ಮಾಡಲು ಕುಮಾರ ವ್ಯಾಸನ ಕಾವ್ಯ ಅತ್ಯುತ್ತಮವಾದ ಆಕರ ಒದಗಿಸುತ್ತದೆ. ಭಾಷೆಯ ಭಾವಾಭಿನಯದ ಪ್ರಯೋಗವನ್ನು ಹಲವು ರೀತಿಯ ಕ್ರಮಗಳಲ್ಲಿ ವ್ಯಕ್ತಪಡಿಸಿರುವುದು ಕೂಡಾ ಕವಿಯ ಹೆಚ್ಚುಗಾರಿಕೆಯಾಗಿದೆ ಎಂದು ವ್ಯಾಖ್ಯಾನಿಸಿದರು.

‘ಕಥನ, ಅಲಂಕಾರ, ಶಬ್ದಗಳ ಮೂಲಕ ಒಂದು ಸಂಗತಿಯೊಂದಿಗೆ ಮತ್ತೊಂದು ಸಂಗತಿಯ ಜೊತೆಗೆ ಸಾವಯವ ಸಂಬಂಧವನ್ನು ಏರ್ಪಡಿಸುವ ಪ್ರಕ್ರಿಯೆ ಕೂಡ ಕುಮಾರ ವ್ಯಾಸನ ಕಾವ್ಯದಲ್ಲಿ ನಡೆದಿದೆ. ವೈವಿಧ್ಯಮಯ ಭಾಷೆಯ ಬಳಕೆಯ ಜೊತೆಗೆ ಆತನ ಕಾವ್ಯದಲ್ಲಿ ಲಯ ವೈವಿಧ್ಯ ಕೂಡ ಇರುವುದು ಕಾವ್ಯ ಕುಸುರಿಯ ಕುಶಲತೆಗೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಬಣ್ಣಿಸಿದರು.

ಸಂವಾದದಲ್ಲಿ ಪಾಲ್ಗೊಂಡಿದ್ದ ಕತೆಗಾರ ವಿವೇಕ್ ಶಾನಭಾಗ, ‘ಸಂಬಂಧಗಳ ವ್ಯಾಖ್ಯಾನಕ್ಕೆ ಕುಮಾರ ವ್ಯಾಸನ ಕಾವ್ಯ ವಿಸ್ತೃತ ಅವಕಾಶ ಕಲ್ಪಿಸುವ ಆವರಣವನ್ನು ಹೊಂದಿದೆ ಎಂದರೆ, ಸಂಸ್ಕೃತ ವಿದ್ವಾಂಸ ಶ್ರೀ ರಾಮ್ ಭಟ್ ಪಾತ್ರಗಳ ಆಂತರ್ಯವನ್ನು ಹುಡುಕುವ ತುಡಿತ ಕುಮಾರ ವ್ಯಾಸನ ಕಾವ್ಯದಲ್ಲಿ ಎದ್ದು ಕಾಣುತ್ತದೆ’
ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT