ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯನ ಶೈಲಿಯಲ್ಲಿ ಸ್ವಂತಿಕೆ ಬೆಳೆಸಿಕೊಳ್ಳಿ

ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಸಂಗೀತ ಗಾಯಕಿ ಪೂರ್ಣಿಮಾ ಭಟ್ ಕುಲಕರ್ಣಿ ಸಲಹೆ
Last Updated 7 ನವೆಂಬರ್ 2022, 7:28 IST
ಅಕ್ಷರ ಗಾತ್ರ

ಸಾಗರ: ‘ಸಂಗೀತ ಕ್ಷೇತ್ರದಲ್ಲಿ ಗಾಯಕರು ಕೇವಲ ಅನುಕರಣೆಗೆ ಸೀಮಿತವಾಗದೆ ಗಾಯನ ಶೈಲಿಯಲ್ಲಿ ತಮ್ಮದೇ ಆದ ಸ್ವಂತಿಕೆಯನ್ನು ಬೆಳೆಸಿಕೊಳ್ಳಬೇಕು’ ಎಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಿ ಪೂರ್ಣಿಮಾ ಭಟ್ ಕುಲಕರ್ಣಿ ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ಕಲೆಗಳ ಸಂಗಡ ಮಾತುಕತೆ ಎಂಬ ಶೀರ್ಷಿಕೆಯಡಿ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಭಾನುವಾರ ಹಿಂದೂಸ್ತಾನಿ ಸಂಗೀತ ಗಾಯನದ ನಂತರ ನಡೆದ ಪ್ರಾತ್ಯಕ್ಷಿಕೆಯಲ್ಲಿ ಅವರು ಮಾತನಾಡಿದರು.

‘ಗಾಯಕರಿಗೆ ಗೊತ್ತಿದ್ದೊ, ಗೊತ್ತಿಲ್ಲದಂತೆಯೊ ಅವರ ಮೇಲೆ ಮತ್ತೊಬ್ಬರ ಪ್ರಭಾವ ಆಗಿಯೇ ಇರುತ್ತದೆ. ಹೀಗೆ ಯಾರು ನಮ್ಮನ್ನು ಪ್ರಭಾವಿಸಿರುತ್ತಾರೆಯೊ ಅವರ ಅನುಕರಣೆಗೆ ನಮ್ಮ ಗಾಯನ ಶೈಲಿ ಸೀಮಿತವಾಗಬಾರದು. ಹೀಗಾದರೆ ನಮ್ಮ ಗಾಯನ ಪ್ರತಿಭೆಗೆ ನಾವೇ ಮಿತಿ ಅಳವಡಿಸಿಕೊಂಡಂತಾಗುತ್ತದೆ’ ಎಂದರು.

‘ಕರ್ನಾಟಕದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜರಾದ ಮಲ್ಲಿಕಾರ್ಜುನ ಮನ್ಸೂರ್, ಭೀಮಸೇನ ಜೋಷಿ, ಗಂಗೂಬಾಯಿ ಹಾನಗಲ್, ಕುಮಾರ ಗಂಧರ್ವ, ಪಂಡಿತ ಬಸವರಾಜ ರಾಜಗುರು ಅವರನ್ನು ಒಂದು ಘರಾನಾಕ್ಕೆ ಸೀಮಿತಗೊಳಿಸುವುದು ಸರಿಯೇ’ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸೃಜನಶೀಲತೆಯೇ ಸಂಗೀತದ ಜೀವಾಳ. ಈ ದಿಗ್ಗಜರೆಲ್ಲ ತಮ್ಮ ಸೃಜನಶೀಲ ಪ್ರತಿಕ್ರಿಯೆಯ ಮೂಲಕವೇ ಘರಾನಾಗಳ ಮಿತಿಯನ್ನು ದಾಟಿದ್ದಾರೆ’ ಎಂದು ಹೇಳಿದರು.

‘ಪುರುಷ ದೃಷ್ಟಿಕೋನದಿಂದಲೇ ಎಲ್ಲವನ್ನೂ ನೋಡುವ ಪ್ರವೃತ್ತಿ ಸರಿಯಲ್ಲ. ಕಾಲ ಬದಲಾದಂತೆ ಈ ದೃಷ್ಟಿಕೋನದಲ್ಲಿ ಬದಲಾವಣೆ ಕಾಣುತ್ತಿದೆ ಎಂಬುದಕ್ಕೆ ಪುರುಷ ಕ್ರಿಕೆಟಿಗರಿಗೆ ಸಮಾನಾದ ಸಂಭಾವನೆಯನ್ನು ಮಹಿಳಾ ಕ್ರಿಕೆಟಿಗರಿಗೆ ನೀಡಲು ತೀರ್ಮಾನಿಸಿರುವುದು ಒಂದು ಉದಾಹರಣೆಯಾಗಿದೆ’ ಎಂದರು.

‘ಸಂಗೀತದಲ್ಲಿ ವಿಜ್ಞಾನ, ಗಣಿತ ಕೂಡಾ ಇದೆ. ನಮ್ಮ ಅಂತರಂಗದೊಳಗೆ ರಾಗ, ಸ್ವರ, ತಾಳಗಳನ್ನು ಇಳಿಸಿಕೊಂಡಾಗ ಸಂಗೀತ ನಮ್ಮನ್ನು ಧ್ಯಾನಸ್ಥ ಸ್ಥಿತಿಗೆ ಕರೆದೊಯ್ಯುತ್ತದೆ. ಸಂಗೀತದ ಎಲ್ಲಾ ಪ್ರಕಾರಗಳಿಗೂ ತನ್ನದೆ ಆದ ಸೌಂದರ್ಯವಿದೆ. ಹೀಗಾಗಿ ಶಾಸ್ತ್ರೀಯ ಸಂಗೀತಗಾರರು ಸುಗಮ ಸಂಗೀತ, ವಚನ ಗಾಯನ, ಭಾವಗೀತೆ ಪ್ರಕಾರಗಳಲ್ಲಿ ಹಾಡುವುದರಲ್ಲಿ ತಪ್ಪೇನೂ ಇಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

ತಬಲಾವಾದಕ ಪಂಡಿತ್ ಗೋಪಾಲಕೃಷ್ಣ ಹೆಗಡೆ ಇದ್ದರು. ಸಂಗೀತ ವಿಮರ್ಶಕಿ ದೀಪಾ ಗಣೇಶ್ ನಿರ್ವಹಿಸಿದರು. ನಂತರ ಶಿವರಾಮ ಕಾರಂತ ರಂಗ ಮಂದಿರದಲ್ಲಿ ನೀನಾಸಂ ತಿರುಗಾಟ ನಾಟಕ ‘ಮುಕ್ತಧಾರಾ’ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT