ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಕಲ್ಪಿಸಲು ಒತ್ತಾಯ: ಪ್ರತಿಭಟನೆ

Last Updated 28 ಜುಲೈ 2021, 4:05 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ಶರಾವತಿ ಹಿನ್ನೀರಿನ ಪ್ರದೇಶವಾದ ಕರೂರು–ಭಾರಂಗಿ ಹೋಬಳಿ ವ್ಯಾಪ್ತಿಯ ಗ್ರಾಮಗಳಿಗೆ ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ನೆಟ್‌ವರ್ಕ್ ಹೋರಾಟಗಾರರ ಯುವ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಇಲ್ಲದೆ ಇರುವುದನ್ನು ಖಂಡಿಸಿ ಕುದರೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಸ್ಥರು ಹಮ್ಮಿ ಕೊಂಡಿರುವ ‘ನೋ ನೆಟ್‌ವರ್ಕ್– ನೋ ವೋಟಿಂಗ್’ ಅಭಿಯಾನಕ್ಕೆ ಪ್ರತಿಭಟನ ಕಾರರು ಬೆಂಬಲ ಸೂಚಿಸಿದರು.

ಹೊಸಕೊಪ್ಪ ಗ್ರಾಮದ ಮುಖ್ಯ ವೃತ್ತದಲ್ಲಿ ಸೇರಿದ ಪ್ರತಿಭಟನಕಾರರು ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿ ಪಂಚಾಯಿತಿ ಮುಂಭಾಗದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಯುವ ಮುಖಂಡ ರಾಘವೇಂದ್ರ, ‘ಈ ಭಾಗದ ಶೇ 70ರಷ್ಟು ಭೂ ಪ್ರದೇಶದಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ಸಿಗುತ್ತಿಲ್ಲ. ಇದರಿಂದ ಎಲ್ಲ ವಯಸ್ಸಿನ ಹಾಗೂ ವರ್ಗದ ಜನರು ಒಂದಲ್ಲಾ ಒಂದು ರೀತಿಯ ಸಂಕಟ ಎದುರಿಸುವಂತಾಗಿದೆ. ಸರ್ಕಾರ ಈ ಭಾಗದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಒತ್ತಾಯಿಸಿದರು.

‘ಪಡಿತರ, ಆರೋಗ್ಯ ತುರ್ತು ಸೇವೆ ಹೀಗೆ ಎಲ್ಲದಕ್ಕೂ ಸರ್ಕಾರ ಡಿಜಿಟಲ್ ವ್ಯವಸ್ಥೆಯನ್ನು ನೆಚ್ಚಿಕೊಂಡಿದೆ. ನೆಟ್‌ವರ್ಕ್ ಇದ್ದರೆ ಮಾತ್ರ ಕೆಲವು ಸೇವೆಗಳು ಲಭ್ಯ ಎನ್ನುವ ಅನಿವಾರ್ಯ ಸೃಷ್ಟಿಸಲಾಗಿದೆ. ಆದರೆ, ಗ್ರಾಮೀಣ ಜನರಿಗೆ ನೆಟ್‌ವರ್ಕ್ ಸೌಲಭ್ಯ ಕಲ್ಪಿಸದೆ ಅವರನ್ನು ಸೌಲಭ್ಯಗಳಿಂದ ವಂಚಿತರನ್ನಾಗಿಸುವ ಹುನ್ನಾರ ನಡೆದಿದೆ’ ಎಂದು ದೂರಿದರು.

ಯುವ ಬರಹಗಾರ ಆದರ್ಶ ಕಪ್ಪದೂರು, ‘ನಮ್ಮ ಸರ್ಕಾರಗಳು ನಗರ ಪ್ರದೇಶಗಳನ್ನು ಮಾತ್ರ ಊರು ಎಂದು ಪರಿಗಣಿಸಿದಂತೆ ಕಾಣುತ್ತಿದೆ. ಆಧುನಿಕ ಯುಗದಲ್ಲೂ ನಮ್ಮ ಭಾಗದ ಜನರು 2–ಜಿ ನೆಟ್‌ವರ್ಕ್ ಪಡೆಯಲು ಗುಡ್ಡ, ಬೆಟ್ಟ ಏರಬೇಕಾಗಿದೆ ಎಂಬುದು ನಾಚಿಕೆಗೇಡಿನ ಸಂಗತಿಯಾಗಿದೆ’ ಎಂದರು.

‘ಇಲ್ಲಿನ ಜನರಿಗೆ ಮೊಬೈಲ್ ನೆಟ್‌ವರ್ಕ್ ಸೌಲಭ್ಯ ಸಿಗುವವರೆಗೂ ಹೋರಾಟ ನಿರಂತರವಾಗಿ ನಡೆಯಲಿದೆ. ಈ ಹೋರಾಟ ಪಕ್ಷಾತೀತವಾಗಿದ್ದು, ಅಗತ್ಯ ಬಿದ್ದಲ್ಲಿ ದೊಡ್ಡ ಮಟ್ಟದ ಹೋರಾಟ ಸಂಘಟಿಸಲಾಗುವುದು’ ಎಂದು ಪ್ರಸನ್ನ ಕುಮಾರ್ ಭಟ್ ತಿಳಿಸಿದರು.

ಪಂಚಾಯಿತಿ ಅಧ್ಯಕ್ಷ ಮಂಜಪ್ಪ, ಸದಸ್ಯ ರಾಮಚಂದ್ರ ಹಾಬಿಗೆ, ಮಾಜಿ ಅಧ್ಯಕ್ಷ ಸುಧೀಂದ್ರ, ಭೋಗರಾಜ್, ಚರಣ್, ಸುದೇಶ್, ಶಶಿಕಾಂತ್, ಮಂಜು, ದಿನೇಶ್, ಸುಜಿತ್, ಜಯಂತ್, ಚೇತನ್, ಪ್ರಶಾಂತ್, ಪ್ರದೀಪ್, ವಿಘ್ನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT