ಶಿವಮೊಗ್ಗ: ನೂತನ ಪಿಂಚಣಿ ಯೋಜನೆ (ಎನ್‌ಪಿಎಸ್) ನೌಕರರ ಸಂಘದ ಶಿವಮೊಗ್ಗ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಭಾಕರ್, ‘ಬದುಕಿಗೆ ವಿದಾಯ ಹೇಳುತ್ತಿದ್ದೇನೆ’ ಎಂದು ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಸಂದೇಶ ರವಾನಿಸಿ ನಾಪತ್ತೆ ಆಗಿದ್ದಾರೆ. ಈ ಬಗ್ಗೆ ಇಲ್ಲಿನ ಕೋಟೆ ಪೊಲೀಸ್ ಠಾಣೆಯಲ್ಲಿ ಅವರ ಪತ್ನಿ ದೂರು ದಾಖಲಿಸಿದ್ದಾರೆ.
ವಾಟ್ಸ್‌ಆ್ಯಪ್‌ನಲ್ಲಿ ಬೆಳಗಿನ ಜಾವ 4.28ಕ್ಕೆ ಮೊದಲ ಮತ್ತು ಬೆಳಿಗ್ಗೆ 8.13ಕ್ಕೆ ಎರಡನೇ ಸಂದೇಶ ರವಾನೆಯಾಗಿದೆ. ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿರುವ ಪ್ರಭಾಕರ್, ತಮ್ಮ ಸಾವಿಗೆ ಹಲವರು ಕಾರಣ ಎಂದು ಬರೆದಿದ್ದಾರೆ.
‘10 ವರ್ಷಗಳಿಂದ ಜಿಲ್ಲೆಯಲ್ಲಿ ಎನ್‌ಪಿಎಸ್ ನೌಕರರ ಸಂಘ ಕಟ್ಟಿ ಬೆಳೆಸಿದ್ದೇನೆ. ಜನವರಿಯಲ್ಲಿ ಜಿಲ್ಲಾ ಮಟ್ಟದ ಎನ್‌ಪಿಎಸ್ ನೌಕರರ ಸಮಾವೇಶ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಿದ್ದೇ ನನ್ನ ವೃತ್ತಿ ಬದುಕಿಗೆ ಹಿನ್ನಡೆಯಾಯಿತು. ಈ ಸಮಸ್ಯೆ ನಿಭಾಯಿಸುವಲ್ಲಿ ಮಾನಸಿಕವಾಗಿ ವಿಫಲವಾಗಿದ್ದು, ಬದುಕಿಗೆ ವಿದಾಯ ಹೇಳಲು ಬಯಸಿದ್ದೇನೆ. ಕುಟುಂಬಕ್ಕೆ ಸಹಾಯ ಮಾಡಿ’ ಎಂದು ಮೊದಲ ಸಂದೇಶದಲ್ಲಿ ಮನವಿ ಮಾಡಿದ್ದಾರೆ.
‘ನನಗೆ ಹಿಂಬಡ್ತಿ ನೀಡಿದ್ದಲ್ಲದೇ, ನಿಯಮಗಳಲ್ಲಿ ವೇತನ ಸಂರಕ್ಷಣೆಗೆ ಅವಕಾಶವಿದ್ದರೂ ಅದು ಪಾಲನೆಯಾಗಿಲ್ಲ. ಸರಿಯಾದ ಸಮಯಕ್ಕೆ ಅಂತಿಮ ವೇತನ ಪ್ರಮಾಣಪತ್ರದ ಸೇವಾವಹಿ ಕಳುಹಿಸದೇ ಇರುವುದರಿಂದ 6 ತಿಂಗಳಿಂದ ವೇತನ ದೊರೆಯದೇ ನರಕಯಾತನೆ ಅನುಭವಿಸಿದ್ದೇನೆ’ ಎಂದು ಬರೆದಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಅವರ ಸಹಚರರಾದ ಮೋಹನ್ ಕುಮಾರ್, ಆರ್.ಬಸವನಗೌಡ, ಹಿಂದಿನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ಆಪ್ತ ಕಾರ್ಯದರ್ಶಿ ಎ.ಆರ್. ರವಿ, ಸರ್ಕಾರದ ಅಧೀನ ಕಾರ್ಯದರ್ಶಿ ಮಹಾಂತಯ್ಯ, ಹೊನ್ನಾಳಿ ಬಿಇಒ ನಂಜರಾಜ ಅವರ ಹೆಸರನ್ನು 2ನೇ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.