ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿ.ಚಂದ್ರಶೇಖರನ್‌ ಆತ್ಮಹತ್ಯೆ ಪ್ರಕರಣ: ‘ಸಾಹೇಬ’ರಿಂದ ಬಂದ ನೆರವಿನ ಸಂದೇಶ

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರನ್‌ ಕುಟುಂಬದವರಿಗೆ ಸಾಂತ್ವನ ಹೇಳಿದ ಸಚಿವ ನಾಗೇಂದ್ರ ಅವರ ವಿಶೇಷಾಧಿಕಾರಿ.
Published 28 ಮೇ 2024, 23:25 IST
Last Updated 28 ಮೇ 2024, 23:25 IST
ಅಕ್ಷರ ಗಾತ್ರ

ಶಿವಮೊಗ್ಗ: ಆತ್ಮಹತ್ಯೆ ಮಾಡಿಕೊಂಡಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರಶೇಖರನ್‌ ಅವರ ಇಲ್ಲಿನ ಕೆಂಚಪ್ಪ ಲೇಔಟ್‌ನಲ್ಲಿನ ಮನೆಗೆ ಮಂಗಳವಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರ ವಿಶೇಷಾಧಿಕಾರಿ ಚಂದ್ರಗಿರಿ ವೆಂಕಟಗಿರಿ ದಳವಾಯಿ (ಸಿ.ವಿ.ದಳವಾಯಿ) ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

‘ಸಾಹೇಬರು (ಸಚಿವ ಬಿ.ನಾಗೇಂದ್ರ) ನಿಮ್ಮ ಕುಟುಂಬಕ್ಕೆ ಎಲ್ಲ ರೀತಿಯ ನೆರವು ಕೊಡಲು ಹಾಗೂ ಚಂದ್ರಶೇಖರನ್‌ ಸಾವಿಗೆ ನ್ಯಾಯ ಕೊಡಿಸಲು ನಿರ್ಧರಿಸಿದ್ದಾರೆ. ಅವರ ಪ್ರತಿನಿಧಿಯಾಗಿ ಬಂದಿದ್ದೇನೆ. ನಿಮ್ಮ ಅಹವಾಲನ್ನು ಅವರ ಗಮನಕ್ಕೆ ತರುತ್ತೇನೆ’ ಎಂದು ಚಂದ್ರಶೇಖರನ್‌ ಪತ್ನಿ ಕವಿತಾ ಅವರಿಗೆ ಸಿ.ವಿ.ದಳವಾಯಿ ತಿಳಿಸಿದರು. 

‘ಪತಿ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ಅವರ ಮೇಲೆ ಆಪಾದನೆ ಹೊರಿಸಿ ಬಹಳಷ್ಟು ಒತ್ತಡ ಹಾಕಿ ಜೀವ ತೆಗೆದಿದ್ದಾರೆ. ಅದಕ್ಕೆ ಯಾವ ನ್ಯಾಯ ಕೊಡುತ್ತೀರಿ’ ಎಂದು ಕವಿತಾ ಪ್ರಶ್ನಿಸಿದರು.

‘ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ ಅವರ ಗಮನಕ್ಕೆ ಬಾರದೇ ನಿಗಮದಲ್ಲಿ ಅವ್ಯವಹಾರ ನಡೆಯಲು ಸಾಧ್ಯವೇ. ಗಂಡನ ಸಾವಿಗೆ ನ್ಯಾಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಬಂಗಾರ ಅಡವಿಟ್ಟಿದ್ದರು:

‘ಪತಿ ಎಂಟು ವರ್ಷಗಳಿಂದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೋವಿಡ್ ಸಂದರ್ಭದಲ್ಲಿ ಒಂದೂವರೆ ತಿಂಗಳು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಎಂಟು ತಿಂಗಳು ಆಕ್ಸಿಜನ್ ಸಿಲಿಂಡರ್ ನೆರವು ಪಡೆದು ಬದುಕಿದ್ದರು. ಆಗ ಆದ ಖರ್ಚಿಗಾಗಿ ಮನೆಯಲ್ಲಿದ್ದ ಚಿನ್ನದ ಒಡವೆಗಳನ್ನು ಅಡವಿಟ್ಟಿದ್ದರೇ ಹೊರತು ನಿಗಮದಿಂದ ನಯಾ ಪೈಸೆ ಪಡೆದಿರಲಿಲ್ಲ’ ಎಂದು ಹೇಳಿದರು.

‘ಮಕ್ಕಳ ಶಿಕ್ಷಣ, ಸಂಸಾರದ ಖರ್ಚು ನಿಭಾಯಿಸಲು ನಾನೂ ದಿನಗೂಲಿಯಡಿ ಕೆಲಸಕ್ಕೆ ಹೋಗುತ್ತಿದ್ದೇನೆ. ಬರುವ ಆದಾಯದಲ್ಲಿ ಬೆಂಗಳೂರಿನಲ್ಲಿ ಕುಟುಂಬ ನಿರ್ವಹಣೆ ಮಾಡುವುದು ಕಷ್ಟ ಎಂದು ನಮಗಾಗಿ ಶಿವಮೊಗ್ಗದಲ್ಲಿ ಬಿಟ್ಟು ಸಣ್ಣ ಕೊಠಡಿ ಬಾಡಿಗೆ ಪಡೆದಿದ್ದರು. ಅಷ್ಟೊಂದು ಪ್ರಾಮಾಣಿಕ ವ್ಯಕ್ತಿ ಈಗ ಹೀಗೆ ಮಾಡಿಕೊಂಡಿದ್ದಾರೆ. ಅವರ ಮೇಲೆ ಎಷ್ಟು ಒತ್ತಡ ಇತ್ತು ಎಂಬುದು ಇದರಿಂದ ಮನದಟ್ಟಾಗುತ್ತದೆ’ ಎಂದು ಕವಿತಾ ಆಕ್ರೋಶ ವ್ಯಕ್ತ ಪಡಿಸಿದರು.

ಎರಡು ದಿನ ಮನೆಯಲ್ಲೇ ಇದ್ದರು

ಚಂದ್ರಶೇಖರನ್‌ ಮೇ 24ರ ರಾತ್ರಿ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದಿದ್ದರು. ಎರಡು ದಿನ ಸರ್ಕಾರಿ ರಜೆ ಇದ್ದ ಕಾರಣ ಮನೆಯಲ್ಲಿಯೇ ಉಳಿದಿದ್ದರು. ಚಂದ್ರಶೇಖರನ್‌ ಹಾಗೂ ಕವಿತಾ ದಂಪತಿಗೆ ಇಬ್ಬರು ಪುತ್ರರು. ಹಿರಿಯ ಪುತ್ರ ಬೆಂಗಳೂರಿನಲ್ಲಿ ಹೋಟೆಲ್ ಮ್ಯಾನೇಜ್‌ಮೆಂಟ್‌ ಓದುತ್ತಿದ್ದು, ಮತ್ತೊಬ್ಬ ಪುತ್ರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ. ಕವಿತಾ ಶಿವಮೊಗ್ಗದ ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆಯಲ್ಲಿ ದಿನಗೂಲಿ ಮೇಲೆ ಕಂಪ್ಯೂಟರ್ ಆಪರೇಟರ್ ಆಗಿದ್ದಾರೆ.

ಎಫ್‌ಐಆರ್ ಬದಲಾವಣೆ

ಪತಿಯ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕವಿತಾ ಸೋಮವಾರ ಮಧ್ಯಾಹ್ನ ನೀಡಿದ ದೂರು ಆಧರಿಸಿ ‘ಅಸಹಜ’ ಸಾವು ಪ್ರಕರಣ ದಾಖಲಿಸಲಾಗಿತ್ತು. ನಂತರ ಶವಪರೀಕ್ಷೆ ನಡೆಸಿ ಕುಟುಂಬದವರಿಗೆ ಒಪ್ಪಿಸಲಾಗಿತ್ತು.

ಅಂತ್ಯಕ್ರಿಯೆ ನಂತರ ಮನೆಗೆ ಮರಳಿ ಪರಿಶೀಲಿಸಿದಾಗ ರಾತ್ರಿ ಮರಣಪತ್ರ ದೊರೆತಿತ್ತು. ಅದನ್ನು ಆಧರಿಸಿ ಕವಿತಾ ಮತ್ತೊಮ್ಮೆ ದೂರು ನೀಡಿದ್ದರು. ಅದರ ಅನ್ವಯ ತಡರಾತ್ರಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಮೂವರು ಅಧಿಕಾರಿಗಳ ವಿರುದ್ಧ ಮತ್ತೊಂದು ಎಫ್‌ಐಅರ್ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

‘ಕಾಂಗ್ರೆಸ್ ಭ್ರಷ್ಟಾಚಾರದ ಪಿತಾಮಹ’

ಕಲಬುರಗಿ: ‘ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಪಿತಾಮಹ ಎಂಬುದು ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ₹ 187 ಕೋಟಿ ಹಗರಣ ಮತ್ತು ಈ ಸಂಬಂಧ ಮರಣಪತ್ರ ಬರೆದು ಚಂದ್ರಶೇಖರನ್‌ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ರುಜುವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.

ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಅವರು ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡಬೇಕು. ನ್ಯಾಯಾಂಗ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT