ಶಿವಮೊಗ್ಗ: ಮಲೆನಾಡಿನಲ್ಲಿ ಈ ಬಾರಿ ಸುರಿದ ಉತ್ತಮ ಮಳೆಯಿಂದ ರೈತ ಸಮೂಹದಲ್ಲಿ ಸಂಭ್ರಮ ಮನೆ ಮಾಡಿದೆ. ಈಗ ಮಳೆ ಕೊಂಚ ಬಿಡುವು ನೀಡಿದ್ದು, ಜಮೀನುಗಳಲ್ಲಿ ಭತ್ತ ನಾಟಿ ಕಾರ್ಯ ಬಿರುಸುಗೊಂಡಿದೆ.

ಜಿಲ್ಲೆಯಲ್ಲಿ 77,556 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದೆ. ಈಗಾಗಲೇ 10,000 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ನಡೆದಿದೆ. ಬಹುಪಾಲು ಕೃಷಿಕರು ಭತ್ತದ ಸಸಿ ಮಡಿಗಳನ್ನು ಸಿದ್ಧಗೊಳಿಸಿ ಇಟ್ಟುಕೊಂಡಿದ್ದು, ಕೆಲ ದಿನಗಳಲ್ಲಿ ನಾಟಿ ಕಾರ್ಯ ಶುರುಮಾಡಲಿದ್ದಾರೆ.

ಆಯನೂರು, ಹಣಗೆರೆ, ಕೆರೆಹಳ್ಳಿ, ಕುಂಸಿ, ಮಂಡಘಟ್ಟ, ರೇವಚಿಕೊಪ್ಪ, ತುಪ್ಪೂರು, ಕೊರಗಿ, ಚೋರಡಿ ಭಾಗಗಳಲ್ಲಿ ರೈತರು ನಾಟಿ ಕಾರ್ಯಕ್ಕೆ ಟ್ರ್ಯಾಕ್ಟರ್ಗಳ ಮೂಲಕ ಭೂಮಿ ಸಿದ್ಧಗೊಳಿಸುತ್ತಿರುವ ದೃಶ್ಯ ಈಗ ಸಾಮಾನ್ಯವಾಗಿದೆ.

ತೀರ್ಥಹಳ್ಳಿ ಹಾಗೂ ಸಾಗರ ತಾಲ್ಲೂಕುಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಅಂಜನಾಪುರ ಹಾಗೂ ಅಂಬ್ಲಿಗೊಳ ಜಲಾಶಯಗಳು ಭರ್ತಿಯಾಗಿವೆ. ಇದರಿಂದ ಭತ್ತ ಬೆಳೆಯಲು ಅನುಕೂಲವಾಗಿದ್ದು, ಅಚ್ಚುಕಟ್ಟು ಭಾಗದ ರೈತರು ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಕೆಲವು ರೈತರು ನಾಟಿ ಕಾರ್ಯ ಮುಗಿಸಿದ್ದಾರೆ.

‘ಜಿಲ್ಲೆಯ ರೈತರು ಹಿಂದೆಲ್ಲಾ ಜಯ, ಜ್ಯೋತಿ, ಸಹ್ಯಾದ್ರಿ ಭತ್ತದ ತಳಿಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದರು. ಈ ಬಾರಿ ಅಭಿಲಾಷ ತಳಿಯ ಭತ್ತ ಬೆಳೆಯಲು ಹೆಚ್ಚು ಆಸಕ್ತಿ ತೋರಿದ್ದಾರೆ. ಈ ಬಾರಿ 1,500 ಕ್ವಿಂಟಲ್ ಅಭಿಲಾಷ ಭತ್ತದ ತಳಿಯ ಬೀಜವನ್ನು ಇಲಾಖೆಯಿಂದ ರೈತರಿಗೆ ವಿತರಿಸಲಾಗಿದೆ. ಜತೆಗೆ ‘1001,’ ‘1110’ ತಳಿಯ ಬಿತ್ತನೆ ಬೀಜವನ್ನು ರೈತರು ಹೆಚ್ಚಾಗಿ ಖರೀದಿಸಿದ್ದಾರೆ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ನಾಟಿಗೆ ಸಿದ್ಧತೆ ಜೋರು:

ರೈತರು ಭತ್ತದ ನಾಟಿಗಾಗಿ ವಾರದ ಮುನ್ನವೇ ಬದುಗಳನ್ನು ಕಡಿದು, ಅವುಗಳಿಗೆ ಮಣ್ಣು ಕೊಟ್ಟು ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ನಾಟಿ ಕಾರ್ಯದ ಹಿಂದಿನ ದಿನ ಸಸಿ ಕೀಳುವ ಮೂಲಕ ನಿಯಮಿತವಾಗಿ ಕಟ್ಟುಗಳನ್ನು ಕಟ್ಟಿ ಮೆದೆಗಳ ಲೆಕ್ಕದಲ್ಲಿ ಎತ್ತಿಟ್ಟುಕೊಳ್ಳುತ್ತಾರೆ. ನಾಟಿಗಾಗಿ ಹಿಂದಿನ ದಿನವೇ ಕೊಟ್ಟೆ ಕಡುಬು, ಉಂಡೆ ಕಡುಬು, ಮಾಂಸಾಹಾರದ (ಕೋಳಿ, ಮೀನು) ಸಿದ್ಧತೆಯಲ್ಲಿ ಮಹಿಳೆಯರು ತೊಡಗುತ್ತಾರೆ.

ದೂರದೂರಲ್ಲಿ ನೆಲೆಸಿರುವ ಮಕ್ಕಳು, ಮೊಮ್ಮಕ್ಕಳು ಈ ಸಂದರ್ಭದಲ್ಲಿ ಪಾಲ್ಗೊಂಡು ಕೆಸರಿನ, ಮಣ್ಣಿನ ಘಮ ಸವಿದು, ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತಾರೆ. ಅಕ್ಕಪಕ್ಕದ ಮನೆಯ ಮಹಿಳೆಯರು ಪರಸ್ಪರ ನೆರವು ನೀಡಿ, ಮುಯ್ಯಾಳಿನ ಮೂಲಕ ನಾಟಿ ಕಾರ್ಯ ಮಾಡುತ್ತಾರೆ. ಹೆಣ್ಣುಮಕ್ಕಳು ಹಾಡು ಹೇಳುತ್ತ ನಾಟಿ ಕಾರ್ಯದಲ್ಲಿ ತೊಡಗುತ್ತಾರೆ.

ನಾಟಿ ಕಾರ್ಯಕ್ಕೆ ಗದ್ದೆ ಸಿದ್ಧಪಡಿಸಲು ಈ ಹಿಂದೆ ಎತ್ತು– ಕೋಣಗಳನ್ನು ಬಳಸುತ್ತಿದ್ದರು. ಈಗ ಟ್ರ್ಯಾಕ್ಟರ್, ಟಿಲ್ಲರ್ಗಳು ಗದ್ದೆಯನ್ನು ಹದಗೊಳಿಸುತ್ತವೆ. ನಂತರ ಎತ್ತುಗಳ (ನಳ್ಳಿ) ಸಹಾಯದಿಂದ ಗದ್ದೆಯ ಮಣ್ಣನ್ನು ಸಮತಟ್ಟು ಮಾಡಿ ಗೊಬ್ಬರ, ಕಳೆನಾಶಕ ಹಾಕಿ ಸಸಿ ನೆಡಲಾಗುತ್ತದೆ.

ಸಸಿ ಮಡಿಯಲ್ಲಿ ಬೀಜ ಬಿತ್ತಿದ 25 ದಿನದೊಳಗೆ ನಾಟಿ ಮಾಡಬೇಕು. ರೈತರು ನ್ಯಾನೊ ಡಿಎಪಿ ಬಳಸುವುದರಿಂದ ಬೇರು ಸದೃಢಗೊಳ್ಳುತ್ತವೆ
ಕಿರಣ್ ಕುಮಾರ್ ಜಂಟಿ ನಿರ್ದೇಶಕ ಕೃಷಿ ಇಲಾಖೆ

ಇಳಿಮುಖವಾಗುತ್ತಿದೆ ‘ಭತ್ತದ ಬೆಳೆ’:

ಜಿಲ್ಲೆಯಲ್ಲಿ ಭತ್ತ ಬೆಳೆಯುವ ಭೂ ಪ್ರದೇಶ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ವಾಣಿಜ್ಯ ಬೆಳೆಯಾದ ಅಡಿಕೆ ಭತ್ತದ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತಿದೆ. ಪ್ರತೀ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಪ್ರತಿ ವರ್ಷ 500 ರಿಂದ 1000 ಹೆಕ್ಟೇರ್ ಭತ್ತ ಬೆಳೆಯುವ ಪ್ರದೇಶ ಕ್ಷಿಣಿಸುತ್ತಿದೆ. ಶಿಕಾರಿಪುರದಲ್ಲಿ 2024-25ನೇ ಸಾಲಿನಲ್ಲಿ 11369 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು. 10000 ಹೆಕ್ಟೇರ್ ಭತ್ತ ನಾಟಿ ಮಾಡಲಾಗಿದೆ. ಈ ಬಾರಿ ಕೆಲವು ರೈತರು ಶುಂಠಿಯಿಂದ ಹಿಂದೆ ಸರಿದಿದ್ದು 15000 ಹೆಕ್ಟೇರ್ನಲ್ಲಿ ಭತ್ತದ ಗುರಿ ಹೊಂದಲಾಗಿದೆ. ಭತ್ತ ಬೆಳೆಯುವ ಪ್ರದೇಶ ತಾಲ್ಲೂಕಿನಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ.

ಕೃಷಿ ಕಾರ್ಮಿಕರ ಸಮಸ್ಯೆ:

ಮಹಿಳೆಯರು ತಂಡ ಮಾಡಿಕೊಂಡು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ ನಾಟಿ ಮಾಡುವುದು ವಾಡಿಕೆ. ಈ ತಂಡಗಳಲ್ಲಿ ಅನುಭವಿ ಮಹಿಳೆಯರನ್ನು ಹೊರತುಪಡಿಸಿದರೆ ಹೊಸ ತಲೆಮಾರಿನವರು ಹುಡುಕಿದರೂ ಸಿಗುವುದಿಲ್ಲ. ಕೃಷಿ ಕಾರ್ಮಿಕರ ಅಲಭ್ಯತೆಯ ಈ ಹೊತ್ತಿನಲ್ಲಿ ಎಲ್ಲರೂ ಒಂದೇ ಬಾರಿಗೆ ಭತ್ತ ನಾಟಿ ಮಾಡುತ್ತಿರುವುದರಿಂದಾಗಿ ಕಾರ್ಮಿಕರ ಸಮಸ್ಯೆ ಎದುರಾಗಿದೆ ಎಂದು ರೈತ ಎಂ.ನಾಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.