ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ರೋಗಿಗಳ ಆರೈಕೆ ಕೇಂದ್ರ ‘ಶರಣ್ಯ’

ಗಾಜನೂರು ಅಗ್ರಹಾರದ ಬಳಿ 10.5 ಎಕರೆ ಜಾಗದಲ್ಲಿ ವಾರ್ಡ್‌ಗಳು
Last Updated 1 ಡಿಸೆಂಬರ್ 2021, 4:59 IST
ಅಕ್ಷರ ಗಾತ್ರ

ಶಿವಮೊಗ್ಗ: ರೋಗಿಗಳ ಆರೈಕೆಯಲ್ಲಿ ಶರಣ್ಯ ಸಂಸ್ಥೆ ಎರಡೂವರೆ ದಶಕಗಳಿಂದ ನಿರಂತರವಾಗಿ ತೊಡಗಿಸಿಕೊಂಡಿದೆ.

ಕ್ಯಾನ್ಸರ್, ಪಾರ್ಶ್ವವಾಯು, ಮೆದುಳಿನ ರಕ್ತಸ್ರಾವದಂತಹ ಕಾಯಿಲೆಗಳಿಗೆ ತುತ್ತಾಗಿ ಗುಣಮುಖರಾಗದೆ ಬಳಲುತ್ತಿರುವವರಿಗೆ ಆಶ್ರಯ ಕಲ್ಪಿಸಲು ಗಾಜನೂರು ಅಗ್ರಹಾರದ ಬಳಿ 10.5 ಎಕರೆ ಜಾಗದಲ್ಲಿ ಎರಡು ವಾರ್ಡ್‌ಗಳನ್ನು ಸಜ್ಜುಗೊಳಿಸಲಾಗಿದೆ. ಎಲ್ಲ ರೋಗಿಗಳಿಗೂ ಉಚಿತವಾಗಿ ಸೇವೆ ನೀಡುತ್ತಿದೆ. ಯಾವ ಪ್ರತಿಫಲಾಪೇಕ್ಷೆ ಇಲ್ಲದೇ ಡಿಎಸ್‌ಎಲ್‌ ಟ್ರಸ್ಟ್‌ನ ಶರಣ್ಯ ಸಂಸ್ಥೆ ಸೇವೆ ಸಲ್ಲಿಸುತ್ತಿದೆ. ಸೇವೆ ನೀಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಿ.ಎಲ್.ಮಂಜುನಾಥ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಸಂಸ್ಥೆ 2002ರಲ್ಲಿ ಸ್ಥಾಪನೆಯಾಗಿದೆ. ಮೊದಲು ಕ್ಯಾನ್ಸರ್ ರೋಗಿಗಳಿಗೆ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಗಾಜನೂರಿನ ಅಗ್ರಹಾರದಲ್ಲಿ ಉಲ್ಬಣಿಸಿದ ರೋಗಿಗಳನ್ನು ನೋಡಿಕೊಳ್ಳುವ, ಆಶ್ರಯ ನೀಡುವ, ಆರೈಕೆ ಮಾಡುವ ಜವಾಬ್ದಾರಿ ಹೊತ್ತಿದೆ. ದಾನಿಗಳ ನೆರವಿನಿಂದ ಸಂಸ್ಥೆ ನಡೆಯುತ್ತಿದೆ. ಪ್ರತಿತಿಂಗಳು ₹ 3 ಲಕ್ಷ ಖರ್ಚು ಬರುತ್ತಿದೆ. ಇದುವರೆಗೂ ಹೊಂದಿಸಿಕೊಂಡು ಹೋಗುತ್ತಿದ್ದೇವೆ. ರೋಗಿಗಳ ಶುಶ್ರೂಷೆ ಜತೆಗೆ ಕೇಂದ್ರವನ್ನೂ ಅಭಿವೃದ್ಧಿಪಡಿಸಬೇಕಾಗಿದೆ. ಈಗ 20 ರೋಗಿಗಳು ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಹೊಸ ವಾರ್ಡ್ ನಿರ್ಮಿಸಲಾಗುತ್ತಿದೆ. ದಾನಿಗಳು ಸಂಸ್ಥೆಗೆ ಹೆಚ್ಚು ನೆರವು ನೀಡಿದರೆ ಅನುಕೂಲವಾಗುತ್ತದೆ’ ಎಂದರು.

ಔಷಧ ವನ: ‘ಶರಣ್ಯ ಸಂಸ್ಥೆ ಒಂದು ಎಕರೆ ಜಾಗದಲ್ಲಿ ಔಷಧವನ ನಿರ್ಮಿಸಿದೆ. ಆಲ, ಸರ್ಪವರ್ಣಿ, ಬಿಳಿ ಎಕ್ಕೆ, ಅಶ್ವತ್ಥ, ಅರಳಿ, ಬನ್ನಿ, ಗರಿಕೆ, ರಂಜಲು ಹೀಗೆ ಹಲವು ಬಗೆಯ ಸಸ್ಯ, ಗಿಡಗಳನ್ನು ಬೆಳೆಸಲಾಗಿದೆ. 12 ರಾಶಿ, 9 ಗ್ರಹ, 27 ನಕ್ಷತ್ರಗಳಿಗೆ ಅನುಗುಣವಾಗಿ ಯಾವ ರಾಶಿಯವರಿಗೆ ಯಾವ ಔಷಧ ಗಿಡ ಬೇಕು ಎಂದು ಸೂಚಿಸಲಾಗಿದೆ. ಈ ವನದಲ್ಲಿ ಕುಳಿತರೆ ವಿಶೇಷ ಶಕ್ತಿ ದೊರೆಯುತ್ತದೆ. ಪರಿಸರವೂ ಸ್ವಚ್ಛವಾಗಿದೆ. ಈ ಅಮೂಲ್ಯ ಸಸ್ಯಗಳನ್ನು ವಿವಿಧೆಡೆಯಿಂದ ತಂದು ಬೆಳೆಸಲಾಗಿದೆ’ ಎಂದು ವಿವರ ನೀಡಿದರು.

‘ಒಬ್ಬ ರೋಗಿ ಗುಣವಾಗುವುದಿಲ್ಲ ಎಂದು ವೈದ್ಯರು ನಿರ್ಧರಿಸಿದ ಮೇಲೆ ಅಂತಹ ರೋಗಿಗೆ ನಿರಂತರವಾದ ವೈದ್ಯಕೀಯ ಆರೈಕೆ ಬೇಕಾಗುತ್ತದೆ. ಅವರನ್ನು ಮನೆಗಳಲ್ಲಿ ನೋಡಿಕೊಳ್ಳುವುದು ಕಷ್ಟವಾಗುತ್ತದೆ. ಈ ಸೇವೆ ಬಡವ, ಬಲ್ಲಿದ, ಜಾತಿ, ಧರ್ಮಗಳನ್ನು ಮೀರಿ ನಿಂತಿದೆ. ಹಾಗಾಗಿ ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳೇ ಮುಖ್ಯ ಎನ್ನುವುದು ಸಂಸ್ಥೆಯ ಧ್ಯೇಯ’ ಎಂದರು.

ಸಂಸ್ಥೆಯ ಅಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ ಮಾತನಾಡಿ, ‘ಇಂತಹ ಮಾನವೀಯ ಅಂತಃಕರಣದ ಸಂಸ್ಥೆಯಲ್ಲಿ ಹಲವರು ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ಅಸಾಧಾರಣ. ಇಂತಹ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡ ಸತ್ಯನಾರಾಯಣ, ಉಷಾ, ಶಾರದಾ, ಇಂದಿರಾ, ಪ್ರೇಮಾ, ಲಕ್ಷ್ಮಿ, ರಮೇಶ್, ಮುಸ್ತಾಫ್, ಟಿ.ಕೆ. ರಾಮನಾಥ್, ಜಯಶ್ರೀ ಅವರನ್ನು ಅಭಿನಂದಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ವಿಶೇಷ ಆಹ್ವಾನಿತ ರಾಮಚಂದ್ರ ಗುಣಾರಿ, ಸಿಬ್ಬಂದಿ ರಾಮನಾಥ್, ಅರ್ಜುನ್, ಮಂಜುನಾಥ್‌ ಇದ್ದರು.

ದಾನಿಗಳಿಗೆ ಮಾಹಿತಿ

ದಾನಿಗಳು ದೇಣಿಗೆಯನ್ನು ಡಿಎಸ್ಎಲ್ ಟ್ರಸ್ಟ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಖಾತೆ ನಂಖ್ಯೆ 095431043000018, ಐಎಫ್ಎಸ್‌ಸಿ ಕೋಡ್: ಯುಬಿಐ809543ಕ್ಕೆ ಸಂದಾಯ ಮಾಡಬಹುದು. ಹೆಚ್ಚಿನ ವಿವರಗಳಿಗೆ 99457 76583 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT