ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆನ್‌ಡ್ರೈವ್ ಕೇಸ್‌: ಸಂತ್ರಸ್ತರಲ್ಲಿ ಆತ್ಮಸ್ಥೈರ್ಯ ತುಂಬಬೇಕಿದೆ– ಕೆ.ಎಸ್.ವಿಮಲಾ

ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ಎಸ್ ವಿಮಲಾ ಅಭಿಮತ
Published 22 ಮೇ 2024, 15:27 IST
Last Updated 22 ಮೇ 2024, 15:27 IST
ಅಕ್ಷರ ಗಾತ್ರ

ಸಾಗರ: ‘ಹಾಸನದಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಪಟ್ಟ ಪೆನ್‌ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಪ್ರಮುಖವಾಗಿ ನಡೆಯಬೇಕಿದೆ’ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲಾ ಹೇಳಿದರು.

ಇಲ್ಲಿನ ಪ್ರಗತಿಪರ ಸಂಘಟನೆಗಳು ಮೇ 30ರಂದು ಹಾಸನದಲ್ಲಿ ನಡೆಯಲಿರುವ ‘ಹಾಸನ ಚಲೋ’ ಚಳವಳಿಯ ಅಂಗವಾಗಿ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

‘ಅಧಿಕಾರದಲ್ಲಿರುವ ವ್ಯಕ್ತಿಗಳು ಏನು ಮಾಡಿದರೂ ನಡೆಯುತ್ತದೆ ಎಂಬ ಪಾಳೆಗಾರಿಕೆ ಮನೋಭಾವ ಪೆನ್‌ಡ್ರೈವ್ ಪ್ರಕರಣದ ಹಿಂದೆ ಇದೆ. ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವ ಜೊತೆಗೆ ಅದನ್ನು ವಿಡಿಯೊ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸವಾಗಿದೆ. ಅದೇ ರೀತಿ ವಿಡಿಯೊಗಳನ್ನು ಹಂಚಿರುವ ಹಾಗೂ ಸಕಾಲದಲ್ಲಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳದ ಸರ್ಕಾರದ ನಡೆ ಕೂಡ ಖಂಡನೀಯ’ ಎಂದರು.

‘ಹಾಸನದಲ್ಲಿ ಮೇ 30ರಂದು ರಾಜ್ಯದ ವಿವಿಧ ಪ್ರಗತಿಪರ ಸಂಘಟನೆಗಳು ಪಕ್ಷಾತೀತವಾಗಿ ಪೆನ್‌ಡ್ರೈವ್ ಪ್ರಕರಣವನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಂಡಿದೆ. ಆದರೆ, ಈ ಪ್ರತಿಭಟನೆಯನ್ನು ಕಾಂಗ್ರೆಸ್ ಪ್ರಾಯೋಜಿತ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆದಿರುವುದು ದುರದೃಷ್ಟಕರ ಸಂಗತಿಯಾಗಿದೆ. ತಪ್ಪಿತಸ್ಥರನ್ನು ಬಂಧಿಸುವಲ್ಲಿ ವಿಳಂಬ ಮಾಡಿದ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಸಹ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸಿದ ಎಸ್ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ನೇತೃತ್ವದಲ್ಲಿ ಪೆನ್‌ಡ್ರೈವ್ ಪ್ರಕರಣದ ತನಿಖೆ ನಡೆಯುತ್ತಿರುವುದು ಒಂದಿಷ್ಟು ಭರವಸೆ ಮೂಡಿಸಿದೆ. ಆದರೆ, ಆರೋಪಿತರು ಪ್ರಭಾವಿ ವ್ಯಕ್ತಿಗಳಾಗಿರುವುದರಿಂದ ತನಿಖೆ ಹಾದಿ ತಪ್ಪುವ ಸಾಧ್ಯತೆ ಇದೆ. ಈ ಕಾರಣ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ಮಾರ್ಗದರ್ಶನದಲ್ಲಿ ತನಿಖೆ ನಡೆಯುವಂತಾಗಬೇಕು’ ಎಂದು ಅವರು ಒತ್ತಾಯಿಸಿದರು.

‘ಯಾವುದೇ ಹೆಣ್ಣು ಮಕ್ಕಳ ಅಪಮಾನವನ್ನು ಸಹಿಸಲಾಗದು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಕೃತಿಯಲ್ಲಿ ಜಾರಿಗೆ ಬಂದಿಲ್ಲ. ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡುವಲ್ಲಿ ಕೇಂದ್ರ ಸರ್ಕಾರ ಮೀನಮೇಷ ಎಣಿಸುವ ಮೂಲಕ ಪರೋಕ್ಷವಾಗಿ ಆರೋಪಿಯ ಬೆಂಬಲಕ್ಕೆ ನಿಂತಿದೆ’ ಎಂದು ಅವರು ದೂರಿದರು.

‘ಮಹಿಳೆಯರ ಅಸಹಾಯಕತೆಯನ್ನು ರಾಜಕಾರಣದಲ್ಲಿರುವ ವ್ಯಕ್ತಿಗಳು ಯಾವ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಪೆನ್‌ಡ್ರೈವ್ ಪ್ರಕರಣ ಸಾಕ್ಷಿಯಾಗಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹದ್ದೊಂದು ಹೀನ ಕೃತ್ಯ ನಡೆದಿರುವುದು ನಾಚಿಕೆಗೇಡಿನ ಸಂಗತಿಯಾಗಿದ್ದು, ಪ್ರಕರಣದಲ್ಲಿ ಭಾಗಿಯಾದವರಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಹೇಳಿದರು.

ಪ್ರಮುಖರಾದ ವಸಂತ ಕುಗ್ವೆ, ವೃಂದಾ ಹೆಗಡೆ, ನಾರಾಯಣ ಗೋಳಗೋಡು, ಎನ್.ಡಿ.ವಸಂತಕುಮಾರ್, ಪುರುಷೋತ್ತಮ ತಲವಾಟ, ರಮೇಶ್ ಐಗಿನಬೈಲು, ಮೋಹನ್ ಮೂರ್ತಿ, ರಾಮಣ್ಣ ಹಸಲರು, ಎಚ್.ಬಿ.ರಾಘವೇಂದ್ರ, ರಂಗನಾಥ್, ಫೆಡ್ರಿಕ್ ಸಲ್ಡಾನಾ, ಪ್ರಸನ್ನಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT