ಗುರುವಾರ , ಅಕ್ಟೋಬರ್ 29, 2020
21 °C
ಪಶ್ವಿಮ ಘಟ್ಟದ ನಂದೋಡಿ, ಮಂಡವಳ್ಳಿ, ಅರೋಡಿಯಲ್ಲಿ ಭೂ ಕುಸಿತ

ಶಿವಮೊಗ್ಗ | ಬೆಟ್ಟ ಬಾಯ್ದೆರೆದರೂ ಮನೆ ತೊರೆಯದ ಜನ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸಾಗರ ತಾಲ್ಲೂಕಿನ ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವೆಡೆ ಬೆಟ್ಟಗಳು ಕುಸಿಯಲಾರಂಭಿಸಿವೆ. ಅಪಾಯ ಕಣ್ಣೆದುರಿಗೇ ಇದ್ದರೂ ನಂದೋಡಿ, ಮಂಡವಳ್ಳಿ, ಅರೋಡಿ ಜನರು ಸ್ಥಳಾಂತರಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಶರಾವತಿ ಜಲಾಶಯದ ಹಿನ್ನೀರಿಗೆ ತಾಗಿಗೊಂಡಿರುವ ಪಶ್ಚಿಮಘಟ್ಟದ ತಪ್ಪಲಿನ ಬೆಟ್ಟಗಳಲ್ಲಿ ನೂರಾರು ಮೀಟರ್ ಬಿರುಕು ಕಾಣಿಸಿಕೊಂಡಿದೆ. ಮಳೆ ಜೋರಾದಂತೆ ಅಲ್ಲಲ್ಲಿ ಮಣ್ಣು ಕುಸಿಯುತ್ತಿದೆ. ಒಂದು ಭಾಗದಲ್ಲಿ ಮಣ್ಣು ಜರುಗಿದ್ದರಿಂದ ರೈತರೊಬ್ಬರ ಇಡೀ ಅಡಿಕೆ ತೋಟ ನೆಲಸಮವಾಗಿದೆ. 15 ಮನೆಗಳು ಬಿರುಕು ಬಿಟ್ಟಿವೆ. 11 ಕುಟುಂಬಗಳನ್ನು ಸ್ಥಳಾಂತರಿಸಲು ಕಂದಾಯ ಇಲಾಖೆ ಹರಸಾಹಸ ಮಾಡಿದರೂ, ಸ್ಥಳಾಂತರಗೊಂಡಿದ್ದು ಎರಡು ಕುಟುಂಬಗಳಷ್ಟೆ. ತಮ್ಮ ನೆನಪುಗಳನ್ನು ಬಿಟ್ಟು ಬರಲು ಉಳಿದ ಕುಟುಂಬಗಳು ಒಪ್ಪುತ್ತಿಲ್ಲ.

ನೆಂಟರ ಮನೆಗಳಲ್ಲೇ ಆಶ್ರಯ: ಮಳೆಗಾಲ ಮುಗಿಯುವವರೆಗೂ ಸಮೀಪದ ನೆಂಟರ ಮನೆಗಳಲ್ಲಿ ಆಶ್ರಯ ಕಲ್ಪಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಆಶ್ರಯ ಕೊಟ್ಟವರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಪ್ರತಿ ತಿಂಗಳು ₹ 5 ಸಾವಿರ ಮನೆ ಬಾಡಿಗೆ ನೀಡುವ ಪ್ರಸ್ತಾವ ಮುಂದಿಟ್ಟಿದೆ. ಮಳೆಗಾಲ ಮುಗಿದ ನಂತರ ಸರ್ವೆ ಮಾಡಿ, ಖಾತೆ ಇರುವ ಜಮೀನು, ತೋಟಗಳಿಗೆ ಪರ್ಯಾಯ ಭೂಮಿ, ನಿವೇಶನ ಒದಗಿಸುವ ಭರವಸೆ ನೀಡಿದೆ.

ಅರಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 13 ಗ್ರಾಮಗಳು ಬರುತ್ತವೆ. ಎರಡು ವರ್ಷಗಳ ಹಿಂದೆ ಇಲ್ಲಿ ಮಂಗನಕಾಯಿಲೆಯಿಂದ 20ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದರು. ಈ ವರ್ಷ ಮತ್ತೊಂದು ಸವಾಲು. ಲಿಂಗನಮಕ್ಕಿ ಅಣೆಕಟ್ಟೆಯಿಂದ 5 ಕಿ.ಮೀ. ಅಂತರದಲ್ಲಿರುವ ಪ್ರದೇಶದಲ್ಲಿ ಬೆಟ್ಟಗಳು ದೊಡ್ಡ ಪ್ರಮಾಣದಲ್ಲಿ ಕುಸಿದರೆ ಜಲಾಶಯಕ್ಕೂ ಅಪಾಯ ಎದುರಾಗುವ ಆತಂಕವಿದೆ.

‘ಜಿಲ್ಲಾ ಉಸ್ತುವಾರಿ ಸಚಿವರು ಮನೆ ಕಟ್ಟಿಕೊಳ್ಳಲು ಸುರಕ್ಷಿತ ಸ್ಥಳದಲ್ಲಿ ನಿವೇಶನ ನೀಡುವಂತೆ ಸೂಚಿಸಿದ್ದಾರೆ. ಆದರೆ, ದನ–ಕರು, ಜಮೀನು ಬಿಟ್ಟು ಬರಲು ಜನರಿಗೆ ಕಷ್ಟವಾಗುತ್ತದೆ. ನಮ್ಮ ಮನೆಯ ಬಳಿಯೇ ಅರ್ಧ ಕಿ.ಮೀ. ಗುಡ್ಡ ಕುಸಿದಿದೆ. ಎಲ್ಲರೂ ಆತಂಕದಲ್ಲೇ ಕಾಲ ಕಳೆಯುತ್ತಿದ್ದೇವೆ’ ಎನ್ನುತ್ತಾರೆ ಅರಳಗೋಡಿನ ಕೃಷಿಕ ಮಹಾಬಲಗಿರಿ.

**

ಈ ಗ್ರಾಮಗಳು ಪಶ್ಚಿಮಘಟ್ಟದ ವನ್ಯಜೀವಿ ಅರಣ್ಯದ ಒಳಗಿವೆ. ಬೆಟ್ಟ ಕುಸಿಯುವ ಸಾಧ್ಯತೆ ಇರುವ ಪ್ರದೇಶದ ಜನರಿಗೆ ಬೇರೆ ಮನೆಗಳಲ್ಲಿ ಆಶ್ರಯ ಪಡೆಯಲು ವಿನಂತಿಸಲಾಗಿದೆ.
-ಡಾ.ಎಲ್‌.ನಾಗರಾಜ್, ಉಪ ವಿಭಾಗಾಧಿಕಾರಿ, ಸಾಗರ ತಾಲ್ಲೂಕು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು