ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಾಗರ | ಕೆರೆ ಹೂಳೆತ್ತಲು ಅನುಮತಿ ಕಡ್ಡಾಯ; ಆಕ್ಷೇಪ

ಸ್ವಯಂಪ್ರೇರಣೆಯಿಂದ ಕೆರೆ ಅಭಿವೃದ್ಧಿ ಕಾಮಗಾರಿ ನಡೆಸುವವರಿಗೆ ತೊಡಕಾಗುವ ಸಾಧ್ಯತೆ
Published 22 ಮೇ 2024, 7:12 IST
Last Updated 22 ಮೇ 2024, 7:12 IST
ಅಕ್ಷರ ಗಾತ್ರ

ಸಾಗರ: ‘ಸಂಬಂಧಪಟ್ಟ ಪ್ರಾಧಿಕಾರದ ಅನುಮತಿ ಪಡೆಯದೇ ಕೆರೆಯ ಹೂಳು ಹಾಗೂ ಮಣ್ಣನ್ನು ತೆಗೆಯಬಾರದು. ಈ ರೀತಿ ಮಾಡಿದರೆ ಕಾನೂನು ಕ್ರಮ ನಿಶ್ಚಿತ’ ಎಂದು ಈಚೆಗೆ ಜಿಲ್ಲಾಡಳಿತ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನ ಈ ಭಾಗದಲ್ಲಿ ಸ್ವಯಂ ಪ್ರೇರಣೆಯಿಂದ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವವರಿಗೆ ತೊಡಕಾಗುವ ಸಾಧ್ಯತೆ ಇದೆ.

ಸಾಗರ– ಹೊಸನಗರ ಭಾಗದಲ್ಲಿ ಸ್ವಾನ್ ಅಂಡ್ ಮ್ಯಾನ್ ಹಾಗೂ ಸಾರಾ ಸಂಸ್ಥೆಯು 6 ವರ್ಷಗಳಲ್ಲಿ ಸರ್ಕಾರದ ನೆರವಿಲ್ಲದೆಯೇ ಸ್ಥಳೀಯರ ಸಹಕಾರದಿಂದ 30ಕ್ಕೂ ಹೆಚ್ಚು ಕೆರೆಗಳ ಹೂಳೆತ್ತುವ ಕೆಲಸ ಮಾಡಿವೆ. ಈ ಮೂಲಕ ಕೆರೆಗಳ ಪುನಶ್ಚೇತನ ಕಾರ್ಯ ಮಾಡಿವೆ.

ಈವರೆಗೆ ಹೀಗೆ ಸ್ವಯಂ ಸೇವಾ ಸಂಸ್ಥೆಗಳು ಕೆರೆಗಳ ಹೂಳೆತ್ತಲು ಯಾವುದೇ ಇಲಾಖೆಯ ಅನುಮತಿ ಪಡೆಯುವ ಅಗತ್ಯವಿರಲಿಲ್ಲ. ಆದರೆ, ಈಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೆರೆ ಪುನಶ್ಚೇತನ ಕಾಮಗಾರಿ ನಡೆಸುವ ಮುನ್ನ ತೆಗೆಯುವ ಮಣ್ಣು ಹಾಗೂ ಹೂಳನ್ನು ಸರ್ಕಾರಿ ಅಥವಾ ಖಾಸಗಿ ಕಾಮಗಾರಿಗಳಿಗೆ ಉಪಯೋಗಿಸಲು ಅನುಮತಿಗಾಗಿ ಸಣ್ಣ ಮತ್ತು ಭಾರಿ ನೀರಾವರಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ, ಗ್ರಾಮ ಪಂಚಾಯಿತಿಗಳಿಗೆ ಅರ್ಜಿ ಸಲ್ಲಿಸಬೇಕು ಎಂಬ ನಿಯಮ ರೂಪಿಸಲಾಗಿದೆ.

ಹೀಗೆ ಅರ್ಜಿ ಸಲ್ಲಿಸಿದ ನಂತರ ಸಂಬಂಧಪಟ್ಟ ಪ್ರಾಧಿಕಾರಗಳು ಅರ್ಜಿಯನ್ನು ಪರಿಶೀಲಿಸಿ ಕೆರೆ ಪ್ರದೇಶದಲ್ಲಿ ಎತ್ತುವಳಿ ಮಾಡಬಹುದಾದ ಹೂಳು, ಮಣ್ಣಿನ ಅಂದಾಜುಪಟ್ಟಿ ತಯಾರಿಸಬೇಕು. ಕೆರೆಯ ಯಾವ ಭಾಗದಲ್ಲಿ ಹೂಳು, ಮಣ್ಣನ್ನು ಎತ್ತುವಳಿ ಮಾಡಬೇಕು ಎಂಬ ನಕಾಶೆ ಇರುವ ವಿಸ್ತೃತ ಯೋಜನಾ ವರದಿ (ಡಿಪಿಆರ್‌)ಯೊಂದಿಗೆ ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ರವಾನಿಸಬೇಕು ಎಂದು ಜಿಲ್ಲಾಡಳಿತ ಸೂಚಿಸಿದೆ.

ಯಾವುದೇ ಸಂಸ್ಥೆ ಕೆರೆಯ ಹೂಳೆತ್ತಲು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೆ ಪಂಚಾಯಿತಿಯ ಸಾಮಾನ್ಯ ಸಭೆ ಅನುಮೋದನೆಯೊಂದಿಗೆ ಸಕ್ಷಮ ಪ್ರಾಧಿಕಾರಗಳಿಂದ ಡಿಪಿಆರ್ ತಯಾರಿಸಿ ಗಣಿ, ಭೂ ವಿಜ್ಞಾನ ಇಲಾಖೆಗೆ ಪ್ರಸ್ತಾವ ಸಲ್ಲಿಸಿ, ಆ ಇಲಾಖೆಯಿಂದ ಪರಿಶೀಲನೆ ನಡೆದು ಸರ್ಕಾರಕ್ಕೆ ಪಾವತಿಸಬೇಕಾದ ರಾಜಧನ ಮತ್ತು ಇತರ ಶುಲ್ಕಗಳನ್ನು ನಿಗದಿಪಡಿಸಿ ನಂತರ ಕಾರ್ಯಾದೇಶ ನೀಡಿ ಮಣ್ಣು, ಹೂಳು ಸಾಗಿಸಲು ಅನುಮತಿ ನೀಡಬೇಕು ಎಂಬ ಪ್ರಕ್ರಿಯೆ ಜಾರಿಗೊಳಿಸಲಾಗಿದೆ.

ಇಷ್ಟೆಲ್ಲ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸ್ವಯಂ ಸೇವಾ ಸಂಸ್ಥೆಗಳಿಗೆ ಸಾಧ್ಯವೇ? ಎಂಬ ಪ್ರಶ್ನೆ ಈಗ ಎದುರಾಗಿದೆ.

‘ಸಾಮಾಜಿಕ ಕಳಕಳಿಯಿಂದ ಕೆರೆಯ ಅಭಿವೃದ್ಧಿ ಕೆಲಸಕ್ಕೆ ಮುಂದಾಗುವ ಸಂಸ್ಥೆಗಳಿಗೆ ಆಡಳಿತವೇ ನೆರವು ನೀಡಬೇಕು. ಅದನ್ನು ಬಿಟ್ಟು ಈ ರೀತಿಯ ನಿಬಂಧನೆಗಳನ್ನು ಹೇರಿದರೆ ಸಂಸ್ಥೆಗಳ ಉತ್ಸಾಹ ಕುಗ್ಗುತ್ತದೆ’ ಎನ್ನುತ್ತಾರೆ ಪರಿಸರ ಕಾರ್ಯಕರ್ತ, ಸ್ವಾನ್ ಅಂಡ್ ಮ್ಯಾನ್ ಸಂಸ್ಥೆಯ ಅಖಿಲೇಶ್ ಚಿಪ್ಪಳಿ.

‘ಗುಡ್ಡಗಳನ್ನು ಬಗೆದು ಖಾಸಗಿ ಲೇಔಟ್‌ಗಳಿಗೆ ಭಾರಿ ಪ್ರಮಾಣದಲ್ಲಿ ಮಣ್ಣು ಸಾಗಿಸುವ ಕೆಲಸ ಅವ್ಯಾಹತವಾಗಿ ನಡೆಯುತ್ತಿವೆ. ಇದನ್ನು ತಡೆಗಟ್ಟುವ ಬದಲು ಕೆರೆಗಳ ಹೂಳು ಹಾಗೂ ಮಣ್ಣಿನ ಮೇಲೆ ಜಿಲ್ಲಾಡಳಿತದ ಕಣ್ಣು ಬಿದ್ದಿರುವುದು ಆಶ್ಚರ್ಯವಾಗಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

‘ಸ್ವಯಂ ಸೇವಾ ಸಂಸ್ಥೆಗಳು ಸಾಗರ ಹಾಗೂ ಹೊಸನಗರ ಭಾಗದಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಕೆರೆಗಳ ಹೂಳೆತ್ತುವ ಕೆಲಸ ಮಾಡುತ್ತಿವೆ. ಸರ್ಕಾರ ಮಾಡಬೇಕಾದ ಜವಾಬ್ದಾರಿಯನ್ನು ಈ ಸಂಸ್ಥೆಗಳು ನಿರ್ವಹಿಸುತ್ತಿವೆ. ಹೂಳೆತ್ತಲು, ಮಣ್ಣು ಸಾಗಿಸಲು ಅನುಮತಿ ಪಡೆಯಲು ನೂರೆಂಟು ಪ್ರಕ್ರಿಯೆ ಎದುರಾದರೆ ಭವಿಷ್ಯದಲ್ಲಿ ಈ ಕೆಲಸಕ್ಕೆ ಮುಂದಾಗಲು ಸ್ವಯಂ ಸೇವಾ ಸಂಸ್ಥೆಗಳು ಹಿಂಜರಿಯುವ ಸಾಧ್ಯತೆ ಇದೆ’ ಎನ್ನುತ್ತಾರೆ ಸಾರಾ ಸಂಸ್ಥೆಯ ಧನುಷ್.

‘ಅಕ್ರಮ ತಡೆಗಟ್ಟುವ ವಿಚಾರದಲ್ಲಿ ತಕರಾರು ಇಲ್ಲ. ಸರ್ಕಾರ ರೂಪಿಸುವ ನಿಯಮ ಜನಸ್ನೇಹಿಯಾಗಿರಬೇಕು. ಆದರೆ,  ಕೆಲವೆಡೆ ಅಕ್ರಮ ನಡೆದಿದೆ ಎಂಬುದನ್ನೇ ಮುಂದಿಟ್ಟುಕೊಂಡು ಒಟ್ಟಾರೆ ಪ್ರಕ್ರಿಯೆಯನ್ನೇ ಜಟಿಲಗೊಳಿಸುವುದು ಸರಿಯಾದ ಕ್ರಮವಲ್ಲ’ ಎಂಬ ಅಭಿಪ್ರಾಯ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರದ್ದಾಗಿದೆ.

ಸಾಗರಕ್ಕೆ ಸಮೀಪದ ಓತಿಗೋಡು ಗ್ರಾಮದಲ್ಲಿ ಗ್ರಾಮಸ್ಥರಿಂದಲೇ ನಡೆಯುತ್ತಿರುವ ಚಿಲುಮೆಮಠದ ಬ್ರಹ್ಮನ ಕೆರೆ ಪುನಶ್ಚೇತನ ಕಾಮಗಾರಿ
ಸಾಗರಕ್ಕೆ ಸಮೀಪದ ಓತಿಗೋಡು ಗ್ರಾಮದಲ್ಲಿ ಗ್ರಾಮಸ್ಥರಿಂದಲೇ ನಡೆಯುತ್ತಿರುವ ಚಿಲುಮೆಮಠದ ಬ್ರಹ್ಮನ ಕೆರೆ ಪುನಶ್ಚೇತನ ಕಾಮಗಾರಿ
ಕೆಲವೆಡೆ ಅಕ್ರಮವಾಗಿ ಕೆರೆಗಳ ಮಣ್ಣನ್ನು ಸಾಗಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಈ ನಿಯಮ ರೂಪಿಸಲಾಗಿದೆ. ಅರ್ಜಿ ಸಲ್ಲಿಸಿದವರಿಗೆ ವಿಳಂಬವಿಲ್ಲದಂತೆ ಪರವಾನಗಿ ನೀಡಲಾಗುವುದು.
–ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ
ಬಯಲುಸೀಮೆಯಲ್ಲಿ ಕೆರೆಯ ಹೂಳು ತೆಗೆದಾಗ ದೊರೆಯುವ ಮಣ್ಣು ಫಲವತ್ತಾಗಿರುತ್ತದೆ. ಆದರೆ ಮಲೆನಾಡಿನ ಕೆರೆಗಳಲ್ಲಿ ದೊರಕುವ ಮಣ್ಣು ಕೆಸರಿನಿಂದ ಕೂಡಿರುತ್ತದೆ. ಈ ಮಣ್ಣನ್ನು ಲೇ ಔಟ್‌ಗಳಿಗೆ ಬಳಸಲು ಬರುವುದಿಲ್ಲ. ನಿಯಮ ರೂಪಿಸುವಾಗ ಜಿಲ್ಲಾಡಳಿತ ಇಂತಹ ಭೌಗೋಳಿಕ ವ್ಯತ್ಯಾಸಗಳನ್ನು ಪರಿಗಣಿಸಬೇಕಿತ್ತು.
–ಅಖಿಲೇಶ್ ಚಿಪ್ಪಳಿ ಪರಿಸರ ಕಾರ್ಯಕರ್ತ ಸ್ವಾನ್ ಅಂಡ್ ಮ್ಯಾನ್ ಸಂಸ್ಥೆ
ಕೆರೆಗಳ ಹೂಳೆತ್ತಲು ಮಣ್ಣು ಸಾಗಿಸಲು ಪರವಾನಗಿ ಅಗತ್ಯವಿಲ್ಲ ಎಂಬ ಕಾರಣಕ್ಕೆ ಸ್ವಯಂ ಸೇವಾ ಸಂಸ್ಥೆಗಳು ಕೆರೆ ಪುನಶ್ಚೇತನಕ್ಕೆ ಮುಂದಾಗಿವೆ. ಸ್ಥಳೀಯರ ಸಹಕಾರವೂ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಕಾರಣವಾಗುತ್ತಿದೆ. ಸರ್ಕಾರದ ನಿಯಮಗಳು ಜಟಿಲವಾದರೆ ಸಂಸ್ಥೆಗಳ ಉತ್ಸಾಹ ಕುಗ್ಗುತ್ತದೆ.
–ಧನುಷ್, ಸಂಚಾಲಕರು ಸಾರಾ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT