ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಪರ್ಮಿಟ್: ಜಿಲ್ಲಾಡಳಿತದ ಅಂಗಳದಲ್ಲಿ ಚೆಂಡು

ಶಿವಮೊಗ್ಗದಲ್ಲಿ 2019ರಿಂದ ಪರ್ಮಿಟ್‌ಗೆ ನಿರ್ಬಂಧ: ಹೊಸದಾಗಿ 257 ಆಟೊಗಳ ನೋಂದಣಿ
Published 6 ಸೆಪ್ಟೆಂಬರ್ 2023, 7:03 IST
Last Updated 6 ಸೆಪ್ಟೆಂಬರ್ 2023, 7:03 IST
ಅಕ್ಷರ ಗಾತ್ರ

ಶಿವಮೊಗ್ಗ: ಹೊಸ ಆಟೊಗಳಿಗೆ ಪರವಾನಗಿ ಪಡೆಯುವ ವಿಚಾರ ಶಿವಮೊಗ್ಗ ನಗರದಲ್ಲಿ ಹಾಲಿ ಇರುವ ಆಟೊ ಚಾಲಕರು ಹಾಗೂ ಹೊಸ ಆಟೊ ಚಾಲಕರ ನಡುವೆ ’ನೀ ಕೊಡೆ, ನಾ ಬಿಡೆ‘ ಪೈಪೋಟಿಗೆ ಕಾರಣವಾಗಿದೆ. ’ಪರವಾನಗಿ‘ ವಿವಾದ ಈಗ ಜಿಲ್ಲಾಡಳಿತದ ಅಂಗಳ ತಲುಪಿದೆ.

ಹೊಸ ಆಟೊ ಕೊಂಡರೆ ಅದನ್ನು ನೋಂದಣಿ ಮಾಡಿಕೊಡುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಅದೇ ಆಟೊವನ್ನು  ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಓಡಿಸಲು ಪರವಾನಗಿ (ಪರ್ಮಿಟ್) ಕೊಡುತ್ತಿಲ್ಲ. ಇದು ಹೊಸ ಆಟೊಗಳ ಚಾಲಕರು, ಮಾಲೀಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಸಾರಿಗೆ ಪ್ರಾಧಿಕಾರದ ತೀರ್ಮಾನ:

ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಆಟೊ ರಿಕ್ಷಾಗಳ ಸಂಖ್ಯೆಯನ್ನು ಇತಿಮಿತಿಯಲ್ಲಿಡಲು 2019ರ ಮೇ 20ರಂದು ಅಂದಿನ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಸಾರಿಗೆ ಪ್ರಾಧಿಕಾರದ (ಆರ್‌ಟಿಎ) ಸಭೆಯಲ್ಲಿ ಆಟೊಗಳಿಗೆ ಹೊಸದಾಗಿ ಪರವಾನಗಿ ಕೊಡುವುದನ್ನು ನಿರ್ಬಂಧಿಸಲಾಗಿತ್ತು.

ನಗರದಲ್ಲಿ ಆಗ ಇದ್ದ ಆಟೊಗಳು, ಇಲ್ಲಿನ ಜನಸಂಖ್ಯೆ, ನಗರ ಸಾರಿಗೆ ಬಸ್‌ಗಳ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಆಟೊಗಳಿಗೆ ಪರವಾನಗಿ ನೀಡುವುದನ್ನು ನಿಲ್ಲಿಸಲಾಗಿತ್ತು. ಆಗ ಆರ್‌ಟಿಎ ಸಭೆಯ ತೀರ್ಮಾನಕ್ಕೆ ಮುನ್ನ ಓಡಾಡುತ್ತಿದ್ದ 4627 ಆಟೊಗಳಿಗೆ ಮಾತ್ರ ಪರವಾನಗಿ ಮಿತಿಗೊಂಡಿತ್ತು. ಜಿಲ್ಲಾಡಳಿತದ ಈ ತೀರ್ಮಾನದ ಹಿಂದೆ ಆಗಿನ ಆಟೊ ಚಾಲಕರ ಸಂಘಗಳ ಒತ್ತಡವೂ ಕೆಲಸ ಮಾಡಿತ್ತು ಎಂದು ಹೇಳಲಾಗುತ್ತಿದೆ.

ಹೊಸ ನೋಂದಣಿಗೆ ಅವಕಾಶ:

2019ರ ನಂತರ ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಹೊಸದಾಗಿ 257 ಆಟೊಗಳು ನೋಂದಣಿಯಾಗಿವೆ. ಆದರೆ ಪ್ರಯಾಣಿಕರ ಕರೆದೊಯ್ಯಲು ಪರವಾನಗಿ ದೊರೆತಿಲ್ಲ. ಶಿವಮೊಗ್ಗ ಹೊರತಾಗಿ ಆರ್‌ಟಿಒ ಕಚೇರಿ ವ್ಯಾಪ್ತಿಯ ಭದ್ರಾವತಿ ನಗರ ಹಾಗೂ ತೀರ್ಥಹಳ್ಳಿ ಪಟ್ಟಣಗಳಲ್ಲಿ ಆಟೊಗಳ ಓಡಿಸಲು ಪರವಾನಗಿ ಕೊಡಲಾಗುತ್ತಿದೆ.

’ಪರವಾನಗಿ ಕೊಡಲು ನಿರ್ಬಂಧ ಶಿವಮೊಗ್ಗಕ್ಕೆ ಮಾತ್ರ ಏಕೆ. ಹೊಸ ಆಟೊ ಕೊಂಡು ನೋಂದಣಿ ಮಾಡಿಸಿಕೊಳ್ಳಲು ಅವಕಾಶ ಕೊಡುತ್ತಾರೆ. ಆದರೆ ಶಿವಮೊಗ್ಗದಲ್ಲಿ ಓಡಿಸಲು ಪರವಾನಗಿ ಕೊಡದೇ ನಮಗೆ ಬದುಕು ಕಟ್ಟಿಕೊಳ್ಳಲು ಅವಕಾಶ ನಿರಾಕರಿಸಲಾಗುತ್ತಿದೆ‘ ಎಂಬುದು ಹೊಸ ಆಟೊಗಳ ಚಾಲಕರ ಅಳಲು.

’ಈಗಿರುವ ಆಟೊಗಳಿಗೆ ಪ್ರಯಾಣಿಕರು ಸಿಗುತ್ತಿಲ್ಲ. ನಾವೇ ಖಾಲಿ ಓಡಾಡುತ್ತಿದ್ದೇವೆ. ಮತ್ತೆ ಹೊಸ ಆಟೊಗಳಿಗೆ ಪರವಾನಗಿ ಕೊಟ್ಟರೆ ಹೇಗೆ?‘ ಎಂಬುದು ಹಾಲಿ ಆಟೊ ಚಾಲಕರ ಅಭಿಮತ.

ಆಟೊಗೆ ಪರವಾನಗಿ ನಿರಾಕರಿಸಿದರೂ ನಿಯಮಾವಳಿಯಂತೆ ನಾವು ನೋಂದಣಿ ನಿರಾಕರಿಸುವಂತಿಲ್ಲ ಎಂದು ಹೇಳುವ ಆರ್‌ಟಿಒ ಕಚೇರಿ ಅಧಿಕಾರಿಗಳು, ಇ–ಆಟೊಗಳಿಗೆ ಯಾವುದೇ ಪರ್ಮಿಟ್ ಬೇಕಿಲ್ಲ ಎಂಬ ಸೂಕ್ಷ್ಮ ಒತ್ತಿ ಹೇಳುತ್ತಾರೆ.

ಹೊಸದಾಗಿ ಪರವಾನಗಿ ಕೊಡುವ ತೀರ್ಮಾನ ಅರ್‌ಟಿಎ ಸಭೆಯಲ್ಲಿಯೇ ಕೈಗೊಳ್ಳಬೇಕಿದೆ. ಎರಡೂ ಕಡೆಯವರ ಅಳಲನ್ನು ಶೀಘ್ರ ಜಿಲ್ಲಾಧಿಕಾರಿ ಗಮನಕ್ಕೆ ತಂದು ಅವರ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು
ಎಸ್‌.ಶಂಕ್ರಪ್ಪ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT