ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ |ಗಣೇಶ ಚತುರ್ಥಿಗೆ ಅಬ್ಬರದ ಸಿದ್ಧತೆ; ಪರಿಸರ ಸ್ನೇಹಿ ಗಣಪನಿಗೆ ಜನರ ಒಲವು

ಮಾರುಕಟ್ಟೆಗೆ ಲಗ್ಗೆಯಿಡಲು ಗಣೇಶ ಮೂರ್ತಿಗಳು ರೆಡಿ
ಮಲ್ಲಪ್ಪ ಸಂಕೀನ್‌
Published : 27 ಆಗಸ್ಟ್ 2024, 5:31 IST
Last Updated : 27 ಆಗಸ್ಟ್ 2024, 5:31 IST
ಫಾಲೋ ಮಾಡಿ
Comments

ಶಿವಮೊಗ್ಗ: ‘ವಿಘ್ನ ನಿವಾರಕ’ ಗಣೇಶನ ಹಬ್ಬದ ಆಚರಣೆಗೆ ದಿನಗಣನೆ ಶುರುವಾಗಿದ್ದು, ಗಣೇಶ ಮೂರ್ತಿಗಳ ತಯಾರಿಸುವ ಕಾರ್ಯ ಜೋರಾಗಿ ಸಾಗಿದೆ. ವಿಘ್ನೇಶ್ವರನ ಮೂರ್ತಿಗಳಿಗೆ ತಯಾರಕರು ಅಂತಿಮ ರೂಪ ನೀಡುವಲ್ಲಿ ನಿರತರಾಗಿದ್ದಾರೆ. ಜನರು ಈ ಬಾರಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳತ್ತ ಒಲವು ತೋರಿಸುತ್ತಿದ್ದಾರೆ.  

ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿಗಳನ್ನು ಕೂರಿಸುವುದರಿಂದಾಗಿ ಪರಿಸರಕ್ಕೆ ಹಾನಿಯಾಗುತ್ತಿದೆ. ಹೀಗಾಗಿಯೇ ಜಿಲ್ಲೆಯ ಜನ ವರ್ಷದಿಂದ ವರ್ಷಕ್ಕೆ ಜೇಡಿ ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಮುಂದಾಗುತ್ತಿದ್ದಾರೆ. 

ನಗರ, ತಾಲ್ಲೂಕು ಕೇಂದ್ರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕ ಗಣೇಶ ಮಂಡಳಿಯವರು, ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಕೆಲವರು ಮನೆಯಲ್ಲಿಯೇ ಗಣೇಶ ಮೂರ್ತಿಯನ್ನು ಕೂರಿಸುತ್ತಾರೆ. ಜೇಡಿ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು ಕಾಯ್ದಿರಿಸುವಲ್ಲಿ ನಿರತರಾಗಿದ್ದಾರೆ. 

ಜೇಡಿ ಮಣ್ಣಿನಲ್ಲಿ ಗಣೇಶನನ್ನು ತಯಾರಿಸಿ, ರಾಸಾಯನಿಕ ರಹಿತವಾದ ಬಣ್ಣ ಬಳಿದು ಪರಿಸರ ಕಾಳಜಿಯನ್ನು ಕೆಲವು ಮೂರ್ತಿ ತಯಾರಕರು ಮೆರೆಯುತ್ತಿದ್ದಾರೆ. ಜಿಲ್ಲೆಯಲ್ಲಿ 20 ರಿಂದ 25 ಮೂರ್ತಿಕಾರರು ಜೇಡಿ ಮಣ್ಣಿನಿಂದಲೇ ಮೂರ್ತಿಗಳನ್ನು ತಯಾರು ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾನಗರದ ಜಗದಾಂಬ ಓಣಿಯ ನಿವಾಸಿ ಪರಶುರಾಮ ಮಾಳಿಗೇರ ಅವರು ತಮ್ಮ ಮನೆಯ ಪಕ್ಕದಲ್ಲಿಯೇ ಶೆಡ್‌ ಮಾಡಿಕೊಂಡು ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ತಯಾರು ಮಾಡುತ್ತಿದ್ದಾರೆ.  

ಈ ವರ್ಷದ ಗಣೇಶ ಚೌತಿಗಾಗಿಯೇ 1ರಿಂದ 6 ಅಡಿ ವರೆಗೆ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದಾರೆ. ₹ 1,000 ದಿಂದ ₹ 50,000 ಮೊತ್ತದ ವರೆಗಿನ ಗಣೇಶ ಮೂರ್ತಿಗಳು ಇವರ ಬಳಿ ದೊರೆಯುತ್ತವೆ. 

‘ಜೇಡಿ ಮಣ್ಣಿನಿಂದ ತಯಾರಿಸಿದ ಮತ್ತು ಪಿಒಪಿ ಮೂರ್ತಿಗಳನ್ನು ಖರೀದಿಸುವ ಎರಡೂ ಮಾದರಿಯ ಗ್ರಾಹಕರಿದ್ದಾರೆ. ನಾವು ಕಳೆದ 25 ವರ್ಷಗಳಿಂದ ಪರಿಸರ ಸ್ನೇಹಿ ಗಣಪನನ್ನೇ ತಯಾರಿಸುತ್ತಿದ್ದೇವೆ. ಈ ಬಾರಿ ಹಬ್ಬಕ್ಕಾಗಿ ಕಳೆದ 2 ತಿಂಗಳ ಹಿಂದೆಯೇ ಕೆಲಸ ಆರಂಭಿಸಲಾಗಿದೆ. ಹಂತ ಹಂತವಾಗಿ ತಯಾರಾಗುವ ಮೂರ್ತಿಗಳಿಗೆ ವಾಟರ್‌ ಕಲರ್‌ ಹಾಕುತ್ತೇವೆ. ಯಾವುದೇ ಕಾರಣಕ್ಕೂ ಆಯಿಲ್‌ ಪೇಂಟ್‌ ಬಳಸುವುದಿಲ್ಲ’ ಎಂದು ಮೂರ್ತಿ ತಯಾರಕ ಪರಶುರಾಮ ಮಾಳಿಗೇರ ’ಪ್ರಜಾವಾಣಿಗೆ’ ತಿಳಿಸಿದರು.

ವಿಭಿನ್ನವಾದ ಮೂರ್ತಿಗಳ ನಿರ್ಮಾಣ

ಪಂಚಮುಖಿ ಗಣಪತಿ ಶಿವ ತಾಂಡವ ಗಣಪತಿ ಶಿವನ ಪೂಜಿಸುವ ಗಣಪತಿ ರಾಘವೇಂದ್ರಸ್ವಾಮಿ ರೂಪದಲ್ಲಿನ ಗಣೇಶ ಮೂರ್ತಿ ವಿಷ್ಣು ರೂಪದಲ್ಲಿರುವ ವಿಘ್ನೇಶ್ವರ ಬುದ್ಧನ ರೂಪದಲ್ಲಿರುವ ಗಣೇಶ ಮೂರ್ತಿ ಹೀಗೆ ಭಿನ್ನ ವಿಭಿನ್ನ ಗಣೇಶ ಮೂರ್ತಿಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.

ಜೇಡಿ ಮಣ್ಣಿನಿಂದ ಗಣೇಶನ ಮೂರ್ತಿ ಸಿದ್ಧಪಡಿಸುತ್ತಿದ್ದೇನೆ. ಪಿಒಪಿ ಮೂರ್ತಿ ತಯಾರಿಸಿ ಪರಿಸರಕ್ಕೆ ಹಾನಿ ಮಾಡುವುದಿಲ್ಲ. ಲಾಭ ಕಡಿಮೆ ಬಂದರೂ ಪರವಾಗಿಲ್ಲ. ಪರಿಸರ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ
–ಪರಶುರಾಮ್ ಮಾಳಿಗೇರ, ಮೂರ್ತಿ ತಯಾರಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT