ಬುಧವಾರ, ಮಾರ್ಚ್ 29, 2023
27 °C

ರೋಮಾಂಚನಕಾರಿ ಹೋರಿ ಹಬ್ಬಕ್ಕೆ ಸಿದ್ಧತೆ- ಜಿಲ್ಲಾಡಳಿತದ ಅನುಮತಿ ನಿರೀಕ್ಷೆಯಲ್ಲಿ

ಎಚ್.ಎಸ್. ರಘು Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ದೀಪಾವಳಿ ಹಬ್ಬದ ಪ್ರಯುಕ್ತ ನಡೆಯುವ ಹೋರಿ ಹಬ್ಬಕ್ಕೆ (ಹೋರಿ ಬೆದರಿಸುವ ಸ್ಪರ್ಧೆ) ತಾಲ್ಲೂಕಿನ ಹೋರಿ ಮಾಲೀಕರು ಹಾಗೂ ಹೋರಿ ಅಭಿಮಾನಿಗಳು ಸಿದ್ಧತೆ ನಡೆಸಿದ್ದು, ಜಿಲ್ಲಾಡಳಿತ ಹೋರಿ ಹಬ್ಬ ನಡೆಸಲು ಅನುಮತಿ ನೀಡುವುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.

ತಾಲ್ಲೂಕಿನಲ್ಲಿ ದೀಪಾವಳಿ ಹಬ್ಬ ಬಂತೆಂದರೆ ರೋಮಾಂಚನಕಾರಿ ಹೋರಿ ಹಬ್ಬ ವೀಕ್ಷಿಸಲು ಸಾವಿರಾರು ಜನರು ಕಾತರದಿಂದ ಕಾಯುತ್ತಿರುತ್ತಾರೆ. ದೀಪಾವಳಿ ಆರಂಭದ ದಿನದಿಂದ ಸುಮಾರು ಎರಡು ತಿಂಗಳುಗಳವರೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹೋರಿ (ಎತ್ತು)ಗಳನ್ನು ಬೆದರಿಸುವ ಸ್ಪರ್ಧೆಗಳನ್ನು ಹೋರಿ ಹಬ್ಬ ಹಾಗೂ ವಿಶೇಷ ದೀಪಾವಳಿ ಹೆಸರಿನಲ್ಲಿ ಆಯೋಜಿಸಲಾಗುತ್ತದೆ.

ಪ್ರತಿ ವರ್ಷ ದೀಪಾವಳಿ ಹಬ್ಬ ಬರುವ ಒಂದು ತಿಂಗಳಿಗೆ ಮುಂಚಿತವಾಗಿ ಹೋರಿ ಪ್ರೇಮಿಗಳು ರಾಜ್ಯದ ಹಲವು ಜಿಲ್ಲೆಗಳು ಹಾಗೂ ನೆರೆಯ ತಮಿಳುನಾಡಿಗೆ ಭೇಟಿ ನೀಡಿ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರುವ ಹೋರಿಗಳನ್ನು ಲಕ್ಷಾಂತರ ರೂಪಾಯಿವರೆಗೂ ನೀಡಿ ಖರೀದಿಸಿ ತರುತ್ತಾರೆ. ಪ್ರಸ್ತುತ ವರ್ಷವೂ ಹೋರಿ ಪ್ರಿಯರು ಲಕ್ಷಾಂತರ ಹಣ ನೀಡಿ ಹೋರಿಗಳನ್ನು ಖರೀದಿಸಿ ತಂದಿದ್ದು, ಹೋರಿಗಳ ಪೋಷಣೆಯಲ್ಲಿ ನಿರತರಾಗಿದ್ದಾರೆ. ಮಾಲೀಕರು ತಮ್ಮ ಹೋರಿಗಳಿಗೆ ತಮ್ಮ ಇಷ್ಟವಾದ ದೇವರು ಹಾಗೂ ಸಿನಿಮಾದ ಹೆಸರುಗಳನ್ನು ಇಟ್ಟಿದ್ದಾರೆ. ಹೋರಿಗಳ ಫೋಟೊಗಳನ್ನು ಹಾಗೂ ವಿಡಿಯೊ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ತಮ್ಮ ಹೋರಿಗಳ ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ.

ಸ್ಪರ್ಧೆಯಲ್ಲಿ ಭಾಗವಹಿಸುವ ಹೋರಿಗಳ ಮಾಲೀಕರು ತಮ್ಮ ಹೋರಿಗಳನ್ನು ಕೊಬ್ಬರಿ ಮಾಲೆ, ಬಲೂನ್, ಕಾಲಿನ ಗೆಜ್ಜೆ ಸೇರಿ ವಿವಿಧ ಆಲಂಕಾರಿಕ ವಸ್ತುಗಳಿಂದ ಸಿಂಗರಿಸಿರುತ್ತಾರೆ. ಹೋರಿ ಬೆದರಿಸುವ ಸ್ಪರ್ಧೆ ಸಂದರ್ಭದಲ್ಲಿ ‘ಹಾಕೋ ಕೈಯ್ಯಾ ಮುಟ್ಟೋ ಮೈಯಾ’ ಎಂದು ಭಾವೋದ್ವೇಗದಿಂದ ಕೂಗು ಹಾಕುತ್ತಾ ಸಂಭ್ರಮದಿಂದ ಸಾಗುತ್ತಾರೆ.

ಸ್ಪರ್ಧೆ ಆಯೋಜಕರು ಉತ್ತಮ ಪ್ರದರ್ಶನ ನೀಡುವ ಹೋರಿಗಳಿಗೆ ಬಹುಮಾನವಾಗಿ ಬಂಗಾರದ ಆಭರಣ, ಬೈಕ್, ಟಿವಿ ಸೇರಿ ಹಲವು ಗೃಹ ಬಳಕೆ ವಸ್ತುಗಳನ್ನು ನೀಡುತ್ತಾರೆ. ಸ್ಪರ್ಧೆಯಲ್ಲಿ ವೇಗವಾಗಿ ಓಡುವ ಹೋರಿಗಳನ್ನು ಯುವಕರು ಹಿಡಿದು ಕೊಬ್ಬರಿ ಕೀಳುವ ರೋಮಾಂಚನಕಾರಿ ಸಾಹಸ ದೃಶ್ಯವನ್ನು ಸಾವಿರಾರು ಪ್ರೇಕ್ಷಕರು ಕುತೂಹಲದಿಂದ ವೀಕ್ಷಿಸುತ್ತಾರೆ. ಪ್ರಸ್ತುತ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದು, ಪಟ್ಟಣ, ಗ್ರಾಮೀಣ ಭಾಗದ ಜನರು ಹೋರಿ ಹಬ್ಬ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.

ಹೋರಿಗಳ ಜತೆ ಬಾಂಧವ್ಯ: ತಾಲ್ಲೂಕಿನಲ್ಲಿ ದೀಪಾವಳಿ ಹಬ್ಬದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಹೋರಿಗಳ ಜತೆ ಹೋರಿ ಮಾಲೀಕರು ಹಾಗೂ ಹೋರಿ ಅಭಿಮಾನಿಗಳು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕೆಲವು ಹೋರಿಗಳ ಮಾಲೀಕರು ತಮ್ಮ ಹೋರಿಗಳ ಜನ್ಮದಿನವನ್ನು ತಮ್ಮ ಕುಟುಂಬ ಸದಸ್ಯನ ಜನ್ಮದಿನದ ರೀತಿ ಅದ್ದೂರಿಯಾಗಿ ಆಚರಿಸುತ್ತಾರೆ. ಅದೇ ರೀತಿ ಹೋರಿ ಮೃತ ಪಟ್ಟಾಗ ಆ ಹೋರಿ ಅಂತ್ಯಸಂಸ್ಕಾರಕ್ಕೂ ಮೊದಲು ಹೋರಿ ಮೃತ ದೇಹದ ಮೆರವಣಿಗೆ ನಡೆಸಿದ ಘಟನೆಗಳು ನಡೆದಿವೆ.

ಹೋರಿ ಸ್ಪರ್ಧೆಗೆ ಜಿಲ್ಲಾಡಳಿತದಿಂದ ನಿಷೇಧ ಹೇರಿಕೆ ಭಯ: ಕೆಲವು ವರ್ಷಗಳ ಹಿಂದೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನಡೆಸುವ ಸಂದರ್ಭದಲ್ಲಿ ಸಾವು ನೋವು ಸಂಭವಿಸಿದ ಪರಿಣಾಮ ಸ್ಪರ್ಧೆ ಆಯೋಜಕರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿದ್ದರು. ನಂತರ ಆಯೋಜಕರು ಹೋರಿ ಬೆದರಿಸುವ ಸ್ಪರ್ಧೆ ನಡೆಸಲು ಹಿಂದೇಟು ಹಾಕಿದ್ದರು. 2018 ಹಾಗೂ 2019ರಲ್ಲಿ ಜಿಲ್ಲಾಡಳಿತ ಹೋರಿ ಬೆದರಿಸುವ ಸ್ಪರ್ಧೆಗೆ ನಿಷೇಧ ಹೇರಿತ್ತು. ನಂತರ ಹೋರಿ ಅಭಿಮಾನಿಗಳ ಮನವಿಗೆ ಸ್ಪಂದಿಸಿ ಹೋರಿ ಬೆದರಿಸುವ ಸ್ಪರ್ಧೆ ಬದಲು ಸಾಂಪ್ರದಾಯಿಕವಾಗಿ ಹೋರಿ ಓಡಿಸಲು ಮಾತ್ರ ಕಳೆದ ವರ್ಷ ಅವಕಾಶ ನೀಡಿತ್ತು. ಈ ಬಾರಿ ಹೋರಿ ಬೆದರಿಸುವ ಸ್ಪರ್ಧೆಗೆ ಅನುಮತಿ ನೀಡುವುದೇ ಎಂಬುದನ್ನು ಕಾದು ನೋಡಬೇಕಿದೆ.

ಹೋರಿ ಹಬ್ಬದಲ್ಲಿ ಸಾವು ನೋವು ಸಂಭವಿಸದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಆಯೋಜಕರಿಗೆ ಸೂಚಿಸುವ ಮೂಲಕ ಹೋರಿ ಹಬ್ಬ ನಡೆಸಲು ಜಿಲ್ಲಾಡಳಿತ ಅವಕಾಶ ನೀಡಬೇಕು ಎಂದು ಹೋರಿ ಸ್ಪರ್ಧೆ ವೀಕ್ಷಕರು ಹಾಗೂ ಹೋರಿ ಅಭಿಮಾನಿಗಳು ಮನವಿ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು