ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ಹಂತದ ಲಸಿಕೆ ಪಡೆಯಲು ಗ್ರಾಮೀಣರ ಪರದಾಟ

ಶೇ 75ರಷ್ಟು ಪದವಿ ವಿದ್ಯಾರ್ಥಿಗಳಿಗೆ ಲಸಿಕೆ l ಹತ್ತಾರು ಕಿ.ಮೀ. ನಡೆದರೂ ಸಿಗದ ಲಸಿಕೆ
Last Updated 2 ಜುಲೈ 2021, 4:29 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ಮೊದಲ ಲಸಿಕೆ ಪಡೆದು ಮೂರು ತಿಂಗಳು ಕಳೆದರೂ, ಸರ್ಕಾರಿ ಆಸ್ಪತ್ರೆಯಲ್ಲಿ 2ನೇ ಹಂತದ ಲಸಿಕೆ ಸಿಗದೆ ಗ್ರಾಮೀಣ ಜನರು ಪ್ರತಿನಿತ್ಯದ ಕೆಲಸ ಕಾರ್ಯಗಳನ್ನು ಬಿಟ್ಟು ಸರ್ಕಾರಿ ಆಸ್ಪತ್ರೆಗೆ ತೆರಳಿ ಬರಿಗೈಯಲ್ಲಿ ಹಿಂದಿರುಗುವಂತಾಗಿದೆ.

‘ರೈತರು ದಿನ ನಿತ್ಯದ ಕೃಷಿ ಕೆಲಸ ಕಾರ್ಯಗಳನ್ನು ಬಿಟ್ಟು ಲಸಿಕೆ ಪಡೆಯಲು ಆಸ್ಪತ್ರೆಗೆ ಬಂದರೆ ಅಲ್ಲಿನ ಸಿಬ್ಬಂದಿಯಿಂದಲೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ನಿತ್ಯ ಹತ್ತಾರು ಕಿ.ಮೀ. ನಡೆದು ಆಸ್ಪತ್ರೆಗೆ ಎಡತಾಕಿದರೆ ‘ವ್ಯಾಕ್ಸಿನ್‌ ಲಭ್ಯವಿಲ್ಲ’ ಎಂಬ ಫಲಕ ರಾರಾಜಿಸುತ್ತದೆ’ ಎಂದು ಹಿರಿಯ ನಾಗರಿಕ ವಾಸುದೇವರಾವ್‌ ಮಂಗ್ಳೂರುಕರ್‌ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘ರಾಜ್ಯ ಸರ್ಕಾರ ಈ ಮೊದಲು ಲಸಿಕೆ ಪಡೆದ 28 ದಿನಕ್ಕೆ ಎರಡನೇ ಲಸಿಕೆಗೆ ಅವಕಾಶ ನೀಡಲಾಗಿತ್ತು. ಬಳಿಕ 45 ದಿನಕ್ಕೆ 2ನೇ ಲಸಿಕೆ ಎಂಬ ಸುತ್ತೋಲೆ ಸರ್ಕಾರಿ ಆಸ್ಪತ್ರೆಗಳ ಕೈ ಸೇರಿತು. ಹಂತ ಹಂತವಾಗಿ ಲಸಿಕೆ ಪಡೆದವರಿಗೆ ಸಕಾಲಕ್ಕೆ 2ನೇ ಹಂತದ ಲಸಿಕೆ ನೀಡುವಲ್ಲಿ ವಿಫಲವಾದ ಸರ್ಕಾರ ಆ ಅಂತರವನ್ನು 84 ದಿನಗಳಿಗೆ ಹೆಚ್ಚಿಸಿತ್ತು. ಆಗಲೂ ಜನ ಸರ್ಕಾರದ ಆದೇಶ ಗೌರವಿಸಿದ್ದಾರೆ. ಜನರ ತಾಳ್ಮೆಗೂ ಒಂದು ಮಿತಿ ಇದೆ. ಸರ್ಕಾರದ ಈ ಎಡಬಿಡಂಗಿ ನಿರ್ಧಾರದಿಂದ ಹಿರಿಯ ನಾಗರಿಕರು ಆತಂಕದಲ್ಲಿ ದಿನ ದೂಡುವಂತಾಗಿದೆ’ ಎಂದು ವಾಸುದೇವರಾವ್‌ ಆಕ್ರೋಶ ಪಡಿಸಿದರು.

ಪ್ರಚಾರಕ್ಕೆ ಸೀಮಿತ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಒಂದು ದಿನಕ್ಕೆ
ಮಾತ್ರ ಸೀಮಿತವಾಗಿತ್ತು. ಪದವಿ ಕಾಲೇಜಿನಲ್ಲಿ 850ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರೂ, ಶೇ 75 ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಕೊರತೆಯಿಂದ ಶೇ 25 ಮಂದಿಗೆ ಸಿಕ್ಕಿಲ್ಲ. ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಆಂಟಿಬಯೋಟಿಕ್‌ ಮಾತ್ರೆಗಳನ್ನು ಸಮರ್ಪಕವಾಗಿ ವಿತರಿಸಿಲ್ಲ.

ಈ ಬಗ್ಗೆ ಪ್ರಶ್ನಿಸಿದರೆ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಹಾರಿಕೆಯ ಉತ್ತರ ಸಿಗುತ್ತದೆ. ತಾಲ್ಲೂಕು ವೈದ್ಯಾಧಿಕಾರಿ ಡಾ.ಸುರೇಶ್‌ ನಾಯ್ಕ್‌ ದೂರವಾಣಿ ಮೂಲಕ ಸಂಪರ್ಕಿಸಲು ಪತ್ರಿಕೆ ಪ್ರಯತ್ನಿಸಿದಾಗ ಸಂಪರ್ಕ ಕಡಿತ ಮಾಡಿದರು.

***

ಕರ್ತವ್ಯ ಲೋಪವಾದರೆ ಕ್ರಮ

‘ಜಿಲ್ಲೆಯಲ್ಲಿ ಜೂನ್‌ 21ರಿಂದ ಲಸಿಕೆ ಪೂರ್ಣ ಪ್ರಮಾಣದಲ್ಲಿ ಲಭ್ಯವಿದೆ. 84 ದಿನ ಕಳೆದವರಿಗೆ ಪ್ರಥಮ ಪ್ರಾಶಸ್ತ್ಯದೊಂದಿಗೆ ಲಸಿಕೆ ನೀಡಲು ಆರೋಗ್ಯಾಧಿಕಾರಿಗೆ ಸೂಚಿಸಲಾಗಿದೆ. ಆದರೂ, ತಾಲ್ಲೂಕು ಕೇಂದ್ರದಲ್ಲಿ ಸರ್ಕಾರದ ನಿಯಮ ಪಾಲಿಸುವಲ್ಲಿ ವಿಫಲವಾಗಿರುವ ಬಗ್ಗೆ ದೂರುಗಳು ಬಂದಿದ್ದು, ಈ ಕುರಿತು ಕರ್ತವ್ಯ ಲೋಪವಾದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಗುರುವಾರ ಎಲ್ಲ ಪಿಎಚ್‌ಸಿ ಕೇಂದ್ರದಲ್ಲಿ 2ನೇ ಹಂತದ ಲಸಿಕೆಗೆ ಆದ್ಯತೆ ನೀಡಲಾಗಿದೆ. ಅರ್ಹರು ಇದರ ಪ್ರಯೋಜನ ಪಡೆಯಬೇಕು’ ಜಿಲ್ಲಾ ವೈದ್ಯಾಧಿಕಾರಿ ರಾಜೇಶ್‌ ಸುರಗಿಹಳ್ಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT