ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೊರಬ: ರೈತ ವಿರೋಧಿ ನೀತಿ ಖಂಡಿಸಿ ಅನಿರ್ದಿಷ್ಟಾವಧಿ ಧರಣಿ

Published 26 ಫೆಬ್ರುವರಿ 2024, 16:19 IST
Last Updated 26 ಫೆಬ್ರುವರಿ 2024, 16:19 IST
ಅಕ್ಷರ ಗಾತ್ರ

ಸೊರಬ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು ರೈತರನ್ನು ಬೀದಿಗೆ ತಂದು ನಿಲ್ಲಿಸುವ ಪ್ರಯತ್ನ ಮಾಡುತ್ತಿವೆ. ರೈತರ ಹೋರಾಟಕ್ಕೆ ಸರ್ಕಾರಗಳು ಸ್ಪಂದಿಸದಿದ್ದರೆ ಮುಂಬರುವ ದಿನಗಳಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪ್ರಗತಿಪರ ಚಿಂತಕ ರಾಜಪ್ಪ ಮಾಸ್ತರ್ ಎಚ್ಚರಿಸಿದರು.

ಸೋಮವಾರ ಪಟ್ಟಣದ ತಾಲ್ಲೂಕು ಕಚೇರಿ ಎದುರು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಘಟಕ ಹಾಗೂ ಹಸಿರು ಸೇನೆಯಿಂದ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಹೋರಾಟದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಶ್ರೀಮಂತರ ಹಾಗೂ ಕಾರ್ಪೊರೇಟ್ ಕಂಪನಿಗಳ ಹಿತವನ್ನು ಕಾಯುತ್ತಿದೆ. ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ ನೀಡಲು ಮುಂದಾದರೆ ಅವರ ಮನವಿಯನ್ನು ಪುರಸ್ಕರಿಸುವ ಔದಾರ್ಯತೆಯನ್ನು ತೋರದೆ ರೈತರ ಮೇಲೆ ಅಶ್ರುವಾಯು, ಜಲ ಪಿರಂಗಿಗಳನ್ನು ಪ್ರಯೋಗಿಸಿ ರೈತರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ನೆಡೆಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಧಾರ್ಮಿಕವಾಗಿ, ಭಾವಾನಾತ್ಮಕತೆಯಿಂದ, ರಾಮನ ಜಪದಿಂದ ದೇಶದ ಸಮಸ್ಯೆಗಳಾದ ನಿರುದ್ಯೋಗ, ಶೈಕ್ಷಣಿಕ, ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ರಾಮನನ್ನು ತಾವು ಪೂಜಿಸುವ ಪ್ರಕೃತಿ, ನದಿ, ಪರಿಸರ, ವ್ಯವಸಾಯದಲ್ಲಿ ಕಂಡುಕೊಂಡಿರುವ ರೈತರ ಗಂಭೀರ ಸಮಸ್ಯೆಗಳನ್ನು ಪರಿಹರಿಸಿದಾಗ ಮಾತ್ರ ರೈತರಿಗೆ ನ್ಯಾಯ ಒದಗಿಸಿದಂತಾಗುತ್ತದೆ’ ಎಂದು ತಿಳಿಸಿದರು.

‘ರೈತರ ಸಮಸ್ಯೆಗಳನ್ನು ಪರಿಹರಿಸಲು ಒತ್ತಾಯಿಸಿ ಹೋರಾಟ ಮಾಡುತ್ತಿರುವ ರೈತ ಸಂಘಕ್ಕೆ ಸಂಪೂರ್ಣ ನೆರವು ನೀಡುವ ಮೂಲಕ ಮುಂದಿನ ಯಾವುದೇ ಹೋರಾಟಕ್ಕೂ ತಾವು ಸಿದ್ಧ’ ಎಂದು ವೈದ್ಯ ಜ್ಞಾನೇಶ್ ಹೇಳಿದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ರಾಜ್ಯ ಘಟಕದ ಕಾರ್ಯಾಧ್ಯಕ್ಷ ಎನ್.ಕೆ.ಮಂಜುನಾಥಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಪಾಟೀಲ್, ಮೇಘರಾಜ್, ಶಿವಪ್ಪ ಹುಣಸವಳ್ಳಿ, ಲೇಖಪ್ಪ, ಹನುಮಂತಪ್ಪ, ಹುಚ್ಚಪ್ಪ ತಳೇಬೈಲು, ಭಾಷಾಸಾಬ್‌, ಚಿತ್ರಶೇಖರಗೌಡ, ಮಂಜುನಾಥ್ ಅರೇಕೊಪ್ಪ, ಪರಮೇಶ್ವರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT