ಗುರುವಾರ , ಮಾರ್ಚ್ 30, 2023
22 °C

ಶಿವಮೊಗ್ಗ: ಕೃಷಿಯಲ್ಲೇ ಉನ್ನತ ಬದುಕು ರೂಪಿಸಿಕೊಂಡ ಪುಟ್ಟಪ್ಪ ಗೌಡ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಹುಟ್ಟಿದ ಊರು ತೊರೆದು ರೈತ ಮುಖಂಡ ಕಡಿದಾಳು ಶಾಮಣ್ಣ ಅವರ ಜತೆ ಬಂದಿದ್ದ ಎ.ಸಿ. ಪುಟ್ಟಪ್ಪ ಗೌಡರು ಇಂದು ಭದ್ರಾವತಿ ತಾಲ್ಲೂಕು ಶ್ರೀನಿವಾಸಪುರದಲ್ಲಿ ಸ್ವಂತ ಕೃಷಿ ಭೂಮಿ ಹೊಂದಿ ಅಡಿಕೆ, ತೆಂಗು, ಮೆಣಸು, ಕೋಕೊ ಮತ್ತಿತರ ಬೆಳೆ ಬೆಳೆಯುತ್ತಾ ವರ್ಷಕ್ಕೆ ಸರಾಸರಿ ₹ 50 ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಅದು 70ರ ದಶಕ. ಶಾಮಣ್ಣ ಭದ್ರಾವತಿ ತಾಲ್ಲೂಕು ಭಗವತಿಕೆರೆ ಬಳಿ ಒಂದಷ್ಟು ಕೃಷಿ ಭೂಮಿ ಖರೀದಿಸಿದ್ದರು. ತೀರ್ಥಹಳ್ಳಿ ತಾಲ್ಲೂಕಿನ ಶುಂಠಿಕಟ್ಟೆ ಪ್ರೌಢಶಾಲಾ ಶಿಕ್ಷಕರಾಗಿದ್ದ ಶಾಮಣ್ಣ ತಾವು ಖರೀದಿಸಿದ ಜಮೀನು ನೋಡಿಕೊಳ್ಳಲು ತಮ್ಮ ಶಿಷ್ಯ 24ರ ಯುವಕ ಪುಟ್ಟಪ್ಪ ಗೌಡರನ್ನು ಕರೆತಂದಿದ್ದರು. ಬದುಕು ಅರಸುತ್ತಾ ಶಾಮಣ್ಣನ ಜತೆ ಬರಿಕೈಯಲ್ಲಿ ಬಂದವರು ಇಂದು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿ ಯುವಪೀಳಿಗೆಗೆ ಮಾದರಿಯಾಗಿದ್ದಾರೆ. ಹುಟ್ಟಿದ್ದು ತೀರ್ಥಹಳ್ಳಿ ತಾಲ್ಲೂಕಿನ ಅತ್ತಿಕೂಡಿಗೆ. ಆರು ಜನ ಪುತ್ರರಲ್ಲಿ ಪುಟ್ಟಪ್ಪ ಐದನೆಯವರು. ಓದಿದ್ದು 10ನೇ ತರಗತಿ.

ಭಗವತಿ ಕೆರೆಯಲ್ಲಿ ಜಮೀನು ಖರೀದಿಸಿದ ಮೂರು ವರ್ಷಗಳ ನಂತರ ಶಿಕ್ಷಕ ಹುದ್ದೆಗೆ ರಾಜೀನಾಮೆ ನೀಡಿದ್ದ ಶಾಮಣ್ಣ ಪತ್ನಿ ಜತೆ ಇಲ್ಲೇ ನೆಲೆ ನಿಂತರು. ಆಗ ಪುಟ್ಟಪ್ಪ ಅವರ ತಂದೆ ಚೂಡಪ್ಪಗೌಡ ಶ್ರೀನಿವಾಸಪುರದ ಬಳಿಯ ಹನುಮಂತಾಪುರ ಸರ್ವೆ ನಂಬರ್‌ನಲ್ಲಿ 2.31 ಎಕರೆ ಜಮೀನು ಖರೀದಿಸಿ ಕೊಟ್ಟಿದ್ದರು. ಅಂದಿನಿಂದ ಸ್ವಂತ ಕೃಷಿಯ ಕಾಯಕದಲ್ಲಿ ತೊಡಗಿಸಿಕೊಂಡ ಅವರು ಕಬ್ಬು, ಭತ್ತ ಬೆಳೆಯಲು ಆರಂಭಿಸಿದ್ದರು. ಇಂದು ತಮ್ಮ ಪುತ್ರ ಬಿ.ಪಿ. ಪ್ರಸನ್ನ ಅವರ ಸಹಕಾರದಲ್ಲಿ ಅಡಿಕೆ ಮತ್ತಿತರ ಬೆಳೆ ಬೆಳೆದು ಸಾಕಷ್ಟು ಲಾಭ ಗಳಿಸಿದ್ದಾರೆ. ಮತ್ತಷ್ಟು ಕೃಷಿ ಭೂಮಿ ಖರೀದಿಸಿ ವಿಸ್ತರಿಸಿಕೊಂಡಿದ್ದಾರೆ.

‘ಭತ್ತ, ಕಬ್ಬು ಬೆಳೆಯುತ್ತಾ ಅಡಿಕೆ, ಕಾಳುಮೆಣಸಿಗೆ ಆದ್ಯತೆ ನೀಡಿದೆ. ತೇಗ, ಸಿಲ್ವರ್ ಸಹ ಆದಾಯ ತಂದುಕೊಟ್ಟವು. ಪುತ್ರ ಪ್ರಸನ್ನ ದೊಡ್ಡ ಪ್ರಮಾಣದಲ್ಲಿ ಗುಲಾಬಿ ಬೆಳೆದು ಸಾಕಷ್ಟು ಲಾಭ ಗಳಿಸಿದ. ಅವನ ಶ್ರಮದ ಫಲವಾಗಿ ಇಂದು ಅಡಿಕೆ ಕ್ಷೇತ್ರ ವಿಸ್ತಾರವಾಗಿದೆ. ಅಧಿಕ ಲಾಭ ತರುತ್ತಿದೆ. ಕೃಷಿ ಕೆಲಸಗಳಿಗೆ ಪತ್ನಿ ಮೀನಾಕ್ಷಿ, ಸೊಸೆ ಎಚ್‌.ಎಸ್‌. ಶ್ರುತಿ, ಮೊಮ್ಮಕ್ಕಳಾದ ಎ.ಪಿ. ಫಲ್ಗುಣಿ, ಶ್ರೀರಾಮ್ ತಮ್ಮಣ್ಣಿ ಸಾಥ್‌ ನೀಡುತ್ತಾರೆ. ಬರಿಗೈಲಿ ಬಂದವರು ಇಂದು ಈ ಸ್ಥಿತಿ ತಲುಪಲು ಸಹೋದರ ನೀಲಪ್ಪ, ಅಳಿಯ ಡಿ.ಎಂ. ಜಯಪ್ರಕಾಶ್ ಸೇರಿ ಹಲವರು ನೆರವಾಗಿದ್ದಾರೆ’ ಎಂದು ಸ್ಮರಿಸುತ್ತಾರೆ ಪುಟ್ಟಪ್ಪ ಗೌಡ.

ವಿಭಿನ್ನ ತಳಿಯ ಹಲಸು, ಸಪೋಟ, ಮಾವು, ಪೇರಲ, ಸೀತಾಫಲ, ರಾಮಫಲ, ಕಿತ್ತಲೆ ಮರಗಳಿವೆ. ಮನೆಗೆ ಬೇಕಾಗುವ ತರಕಾರಿ, ಹೂವುಗಳನ್ನು ತೋಟದಲ್ಲೇ ಬೆಳೆಯುತ್ತಾರೆ. ಹಸು, ನಾಟಿ ಕೋಳಿ ಸಾಕಣೆಗೂ ಒತ್ತು ನೀಡಿದ್ದಾರೆ. ಗ್ರಾಮದ ಹಲವು ಮನೆಗಳಿಗೆ ನಿತ್ಯವೂ ಹಾಲು ಪೂರೈಸುತ್ತಾರೆ. ಹೈನುಗಾರಿಕೆಯ ಹಣದಲ್ಲೇ ಮನೆಯ ಖರ್ಚು ನಿಭಾಯಿಸುತ್ತಾರೆ.

ಶೂನ್ಯ ಬೇಸಾಯಕ್ಕೆ ಆದ್ಯತೆ: ಪುಟ್ಟಪ್ಪ ಗೌಡರ ತೋಟದಲ್ಲಿ ಶೂನ್ಯ ಬೇಸಾಯಕ್ಕೆ ಆದ್ಯತೆ ನೀಡಲಾಗಿದೆ. ತೋಟದಲ್ಲಿ ಉಳುಮೆ ಮಾಡದೇ ನೈಸರ್ಗಿಕವಾಗಿ ಮರಗಳನ್ನು ಬೆಳೆಸಿದ್ದಾರೆ. ಮರದ ಬುಡಗಳಿಗೆ ವರ್ಷಕ್ಕೆ ಒಮ್ಮೆ ದನ, ಕುರಿ ಗೊಬ್ಬರ ಹಾಕುತ್ತಾರೆ. ಎತ್ತರವಾಗಿ ಬೆಳೆದ ಹುಲ್ಲು ಕತ್ತರಿಸಿ ಗೊಬ್ಬರವಾಗಿ ಬಳಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು