ತೀರ್ಥಹಳ್ಳಿ: ಗುಣಮಟ್ಟದ ವಿದ್ಯುತ್ ಪೂರೈಕೆ; ಈಡೇರದ ಭರವಸೆ

ತೀರ್ಥಹಳ್ಳಿ: ಬೇಸಿಗೆಯಲ್ಲಿ ಅನಿರೀಕ್ಷಿತವಾಗಿ ಅಷ್ಟಿಷ್ಟು ಸುರಿಯುವ ಮಳೆಯಿಂದಾಗಿ ಬಿಸಿಲಿನ ತಾಪಮಾನ ಕಾವೇರಿದೆ. ವಿದ್ಯುತ್ ಪೂರೈಕೆಯಲ್ಲಿನ ಸತತ ದೋಷದಿಂದಾಗಿ ನೀರು ಹಾಯಿಸಲಾಗದೆ ಸಾಗುವಳಿ ಭೂಮಿ ಒಣಗುವಂತಾಗಿದೆ. ಗುಣಮಟ್ಟದ ವಿದ್ಯುತ್ ಪೂರೈಕೆ ಭರವಸೆಯಲ್ಲೇ ಉಳಿದಿದೆ.
ವೋಲ್ಟೇಜ್ ಇಲ್ಲದ ವಿದ್ಯುತ್ ಪೂರೈಕೆ ಕುರಿತು ಮೆಸ್ಕಾಂಗೆ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ. ಮೆಸ್ಕಾಂ ಅಧಿಕಾರಿಗಳು ತಾಂತ್ರಿಕ ನೆಪ ಮುಂದಿಡುತ್ತಿರುವುದು ಸಾಮಾನ್ಯ ಸಂಗತಿ ಎನ್ನುವಂತಾಗಿದೆ.
ಪ್ರತಿದಿನ ಸರ್ಕಾರ 7 ತಾಸು ತ್ರಿಫೇಸ್ ವಿದ್ಯುತ್ ಪೂರೈಕೆ ಮಾಡಲು ಉದ್ದೇಶಿಸಿದ್ದು, ಕೆಲವು ಭಾಗದ ರೈತರಿಗೆ ಇನ್ನೂ ಸರಿಯಾಗಿ 2 ಗಂಟೆ ವಿದ್ಯುತ್ ಸರಬರಾಜು ಆಗುತ್ತಿಲ್ಲ. ತ್ರಿಫೇಸ್ ಪಂಪ್‌ಸೆಟ್ ಹೊಂದಿರುವವರು ವೋಲ್ಟೇಜ್‌ಗಾಗಿ ರಾತ್ರಿ ಪೂರಾ ಕಾಯುವ ಸನ್ನಿವೇಶ ಎದುರಾಗಿದೆ. ಕತ್ತಲಲ್ಲಿ ಮೋಟರ್ ಶೆಡ್‌ಗೆ ಹೋಗುವಾಗ ವಿಷ ಜಂತು ಕಡಿದು ಕೆಲವು ರೈತರು ಮೃತರು ಮೃತಪಟ್ಟಿದ್ದಾರೆ.
ರಾಜ್ಯ ಸರ್ಕಾರದ ಹಲವು ಮಹತ್ವಕಾಂಕ್ಷಿ ಯೋಜನೆಗಳ ಮೂಲಕ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಕ್ರಮ ವಹಿಸಿದ್ದರೂ ರೈತರಿಗೆ ಇದರ ಪ್ರಯೋಜನ ಪರಿಣಾಮಕಾರಿಯಾಗಿ ದೊರೆತಿಲ್ಲ. ಫೀಡರ್‌ನಿಂದ ವಿದ್ಯುತ್ ಪಂಪ್‌ಸೆಟ್‌ಗಳಿಗೆ ತಲುಪುವ ಮುನ್ನವೇ ಸೋರಿಕೆಯಾಗುತ್ತಿದೆ ಎಂಬುದು ರೈತರ ಆರೋಪ.
ಮಲೆನಾಡು ಪ್ರದೇಶವಾಗಿರುವುದರಿಂದ 5ರಿಂದ 6 ತಿಂಗಳು ನೀರಿನ ಅಗತ್ಯ ಕಡಿಮೆ ಇರುತ್ತದೆ. ಬೇಸಿಲಿಗೆ ಭೂಮಿಯ ತೇವ ಇಂಗುವುದರಿಂದ ಅತಿ ಹೆಚ್ಚು ಪಂಪ್‌ಸೆಟ್ ಬಳಕೆಯಾಗುತ್ತದೆ. ದೂರದಿಂದ ನೀರು ಎತ್ತುವುದರಿಂದ ತ್ರಿಫೇಸ್ ವೋಲ್ಟೇಜ್ ವಿದ್ಯುತ್ ಅತ್ಯಗತ್ಯ. ಗೃಹೋಪಯೋಗಿ ಮೋಟರ್‌ಗಳಿಗೆ ಸಿಂಗಲ್ ಫೇಸ್ ಸಾಕಾಗುತ್ತದೆ.
‘ಪ್ರತಿನಿತ್ಯ ತೀರ್ಥಹಳ್ಳಿ ಘಟಕ್ಕೆ ಗರಿಷ್ಠ 100 ಕಿಲೋ ವಾಟ್ ವಿದ್ಯುತ್ ಅವಶ್ಯಕತೆ ಇದೆ. ಆ ಪ್ರಮಾಣದ ವಿದ್ಯುತ್ ಸರಬರಾಜು ಕೂಡ ಆಗುತ್ತಿದೆ. ಸರ್ಕಾರ 7 ತಾಸು ತ್ರಿಫೇಸ್ ನೀಡಲು ಉದ್ದೇಶಿಸಿದ್ದು, ಘಟಕದಿಂದ 12ರಿಂದ 13 ತಾಸು ನೀಡುತ್ತಿದ್ದೇವೆ’ ಎನ್ನುತ್ತಾರೆ ಮೆಸ್ಕಾಂ ಎಇಇ ಪ್ರಶಾಂತ್.
ಮೋಟರ್ ಸಾಮರ್ಥ್ಯ ಹೆಚ್ಚಳ:
ಗುಣಮಟ್ಟದ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಈ ಹಿಂದೆ ಸಿಂಗಲ್ ಫೇಸ್ ವಿದ್ಯುತ್ ಪಡೆಯುತ್ತಿದ್ದ ರೈತರು ತ್ರಿಫೇಸ್ ಮೊರೆಹೋಗಿದ್ದಾರೆ. ಇಲಾಖೆಯಿಂದ ನೀಡುವ ಕನಿಷ್ಠ ಅವಧಿಯಲ್ಲಿ ಹೆಚ್ಚು ನೀರು ಎತ್ತುವಳಿ ಮಾಡಲಾಗುತ್ತಿದೆ. ನೀರಿನ ಮೂಲದಿಂದ ಜಮೀನಿನ ಮೇಲ್ಭಾಗದ ಟ್ಯಾಂಕ್‌ಗಳಿಗೆ ನೀರು ಹರಿಸಲಾಗುತ್ತದೆ. ವೋಲ್ಟೇಜ್ ಕಡಿಮೆ ಇದ್ದಾಗ ಬಳಕೆಯಾಗುವ ಮೋಟರ್‌ಗಳಿಂದ ಟ್ಯಾಂಕ್‌ನಿಂದ ತೋಟಕ್ಕೆ ಬಿಡುವ ಪದ್ಧತಿ ರೈತರಿಗೆ ಸಲೀಸಾಗಿದೆ.
ಪರಿವರ್ತಕ ನಿರ್ವಹಣೆ ವಿಫಲ:
ವಿದ್ಯುತ್ ಪರಿವರ್ತಕಗಳು (ಟಿಸಿ) ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಿಬ್ಬಂದಿ ಟಿಸಿ ನಿರ್ವಹಣೆ ಕುರಿತು ನಿಗಾವಹಿಸುತ್ತಿಲ್ಲ. ಕಾಲಕಾಲಕ್ಕೆ ಟಿಸಿಯ ಸಾಮರ್ಥ್ಯ ಗುರುತಿಸುವ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಹಳ್ಳಿ ಭಾಗದಲ್ಲಿ ಎಲ್ಲೆಂದರಲ್ಲಿ ವಿದ್ಯುತ್ ಲೈನ್‌ಗಳನ್ನು ಹರಿಸಲಾಗಿದೆ. ಕಾನು, ತೋಟ, ಅರಣ್ಯ ಪ್ರದೇಶಗಳಿಂದ ಬರುವ ಕೇಬಲ್ ಮೇಲೆ ಮರ, ಮಟ್ಟು, ಸ್ವಾಗೆ, ಬಳ್ಳಿಗಳು ಬರುತ್ತವೆ. ಇದರಿಂದ ವಿದ್ಯುತ್ ಸೋರಿಕೆಯಾಗಿ ರೈತರಿಗೆ ಸಂಪೂರ್ಣ ಪ್ರಮಾಣದ ಗುಣಮಟ್ಟದ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಟಿಸಿಗಳಿಗೆ ಕಾಲಕಾಲಕ್ಕೆ ಬೇಕಾದ ಗ್ರೀಸ್, ಆಯಿಲ್ ಯಾವುದನ್ನೂ ಹಾಕುತ್ತಿಲ್ಲ. ಒಮ್ಮೆ ಅಳವಡಿಸಿದ ಟಿಸಿ ಹಾಳಾದ ಮೇಲೆ ಮಾತ್ರ ಬದಲಾವಣೆಯಾಗುತ್ತಿದೆ ಎಂಬುದು ಶೇಡ್ಗಾರ್ ಪ್ರಫುಲ್ಲ ಅವರ ಆರೋಪ.
ಜಾಗೃತೆ ಕಾರ್ಯಕ್ರಮ ಕೊರತೆ:
ವಿದ್ಯುತ್ ಕಳವು ಪ್ರಮಾಣ ಈಚೆಗೆ ಕಡಿಮೆಯಾಗಿದೆ. ಸರ್ಕಾರದ ಉಚಿತ ವಿದ್ಯುತ್ ಸರಬರಾಜು ಪಡೆದಿರುವ ರೈತರು ಸಾಕಷ್ಟು ವಿದ್ಯುತ್ ಬಳಕೆ ಮಾಡುತ್ತಿದ್ದಾರೆ. ಮಿತವ್ಯಯದ ಕಲ್ಪನೆ ಕಾಣೆಯಾಗುತ್ತಿದೆ. ಬಳಸಿದವರು ಹೆಚ್ಚು ಬಳಕೆ ಮಾಡುವುದರಿಂದ ಗ್ರಾಮೀಣ ಪ್ರದೇಶದ ರೈತರಿಗೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಇಲಾಖೆಯಿಂದ ಈ ಬಗ್ಗೆ ಯಾವುದೇ ಜಾಗೃತಿ ಕಾರ್ಯಕ್ರಮ ನಡೆಯುತ್ತಿಲ್ಲ. ರೈತರಿಗೆ ಜಾಗೃತಿ ಮೂಡಿಸಿದರೆ ಗುಣಮಟ್ಟದ ವಿದ್ಯುತ್ ಪೂರೈಕೆ ಇನ್ನಷ್ಟು ಸುಲಭವಾಗಬಹುದು ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿ.
***
ಅಕ್ರಮ, ಸಕ್ರಮ ವಿಳಂಬ
ಕುಮಾರ್ ಅಗಸನಹಳ್ಳಿ
ಹೊಳೆಹೊನ್ನೂರು: ರೈತರ ನಿರಂತರ ಪ್ರತಿಭಟನೆಯ ನಂತರ 7 ತಾಸು ವಿದ್ಯುತ್ ವಿತರಿಸಲಾಗುತ್ತಿದ್ದರೂ, ಮಧ್ಯೆ ವಿದ್ಯುತ್ ವ್ಯತ್ಯಯವಾದರೆ ಆ ಅವಧಿಯ ವಿದ್ಯುತ್ ವಿಸ್ತರಿಸುತ್ತಿಲ್ಲ.
ಬಾಕಿ ಇರುವ ಕಂಬ ಹಾಗೂ ತಂತಿಗಳು ವಿತರಣೆಯಾಗುತ್ತಿಲ್ಲ. ಶಿವಮೊಗ್ಗ ಗ್ರಾಮಾಂತರ ಭಾಗಕ್ಕೆ ಬರಬೇಕಾದ ಕಂಬಗಳು ಹಾಗೂ ತಂತಿಗಳನ್ನು ಬೇರೆ ಬೇರೆ ತಾಲ್ಲೂಕಿಗೆ ವಿತರಿಸಲಾಗುತ್ತಿದೆ. ಅಕ್ರಮ ಸಕ್ರಮದಲ್ಲಿ ಮಂಜೂರಾದ ಕಂಬಗಳನ್ನು ತಕ್ಷಣವೇ ವಿತರಿಬೇಕಾಗಿದೆ.
ಮಂಜೂರಾಗಿರುವ ವಿದ್ಯುತ್ ಕಚೇರಿಗಳನ್ನು ನಿರ್ಮಾಣವಾಗುತ್ತಿಲ್ಲ. ಆಯನೂರು ವಿದ್ಯುತ್ ಕಚೇರಿಗೆ ಭೂಮಿಪೂಜೆ ನೆರವೇರಬೇಕಾಗಿದೆ. ಶಾಸಕರು ಬೇಗ ದಿನಾಂಕ ನಿಗದಿ ಮಾಡಿ ಭೂಮಿಪೂಜೆ ನೆರವೇರಿಸಬೇಕು ಎಂಬುದು ರೈತರ ಒತ್ತಾಯ.
ಖಾಸಗಿ ವಿದ್ಯುತ್ ಉತ್ಪಾದಕರು
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಿಧಾನಗತಿಯಲ್ಲಿ ಖಾಸಗಿ ವಿದ್ಯುತ್ ಉತ್ಪಾದನೆಯ ಬಗ್ಗೆ ಕಾಳಜಿ ಹೆಚ್ಚುತ್ತಿದೆ. ಸೋಲಾರ್ ವಿದ್ಯುತ್ ಶಕ್ತಿ ಮತ್ತು ಮಳೆಯಾಧಾರಿತ ಟರ್ಬೈನ್ ವಿದ್ಯುತ್ ಉತ್ಪಾದಕರು ಹೆಚ್ಚುವರಿ ವಿದ್ಯುತ್ ಅನ್ನು ಮೆಸ್ಕಾಂಗೆ ನೀಡುತ್ತಿದ್ದಾರೆ. ಪಟ್ಟಣ ಪಂಚಾಯಿತಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರ, ಮಲೆನಾಡು ಕ್ಲಬ್, ಮೆಸ್ಕಾಂ ಕಚೇರಿ, ಜೆಸಿ ಆಸ್ಪತ್ರೆ ಚಾವಣಿ ಮೇಲೆ ಸೋಲಾರ್ ವಿದ್ಯುತ್ ಘಟಕ ಇದೆ. ಇದಲ್ಲದೆ ಪಟ್ಟಣ ವ್ಯಾಪ್ತಿಯಲ್ಲಿ ಖಾಸಗಿಯಾಗಿ ಮನೆಯ ಚಾವಣಿ ಮೇಲೆ ಉತ್ಪಾದನೆ ಮಾಡಲಾಗುತ್ತಿದೆ. ಖಾಸಗಿ ಮೂಲಗಳಿಂದ ಹೆಚ್ಚುವರಿ 100 ಕಿಲೋ ವ್ಯಾಟ್ ವಿದ್ಯುತ್ ಪೂರೈಕೆಯಾಗುತ್ತಿದೆ. ಮಳೆಗಾಲದ ಸಮಯದಲ್ಲಿ ತಾಲ್ಲೂಕಿನ ವಿವಿಧ ಭಾಗದ ರೈತರು ಟರ್ಬೈನ್ ಬಳಸಿ ವಿದ್ಯುತ್ ಉತ್ಪಾದಿಸುತ್ತಿದ್ದಾರೆ.
***
ನೆಟ್‌ವರ್ಕ್ ಸಮಸ್ಯೆ
ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ವಿದ್ಯುತ್ ವ್ಯತ್ಯಯದ ಕಾರಣ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ವಿದ್ಯುತ್ ಇಲ್ಲದ ವೇಳೆ ದೂರ ಸಂಪರ್ಕ ಕೇಂದ್ರಗಳು ಕಾರ್ಯ ನಿರ್ವಹಿಸುವುದಿಲ್ಲ. ಇದರಿಂದ ಹೆಚ್ಚು ನೆಟ್‌ವರ್ಕ್ ಸಮಸ್ಯೆ ಉದ್ಭವಿಸುತ್ತಿದೆ.
ಹಾಳಾದ ಟಿಸಿ ಬದಲಾವಣೆಗೆ ರೈತರು ಅಂಗಲಾಚಬೇಕು. ಸರ್ಕಾರದಿಂದ ಹೆಚ್ಚುವರಿ ಟಿಸಿಗಳು ಇಲಾಖೆಗೆ ಬಂದಿರುತ್ತದೆ. ರೈತರು ಕೇಳಿದಾಗ ಮಾತ್ರ 6 ತಿಂಗಳು ಆಗಬಹುದು ಎಂಬ ಹಾರಿಕೆ ಉತ್ತರ ಲಭ್ಯವಾಗುತ್ತಿದೆ. ರೈತರು ಉಚಿತ ಟಿಸಿಗೆ ಹಣ ನೀಡಿದರೆ 2 ದಿನದಲ್ಲಿ ಟಿಸಿ ಅಳವಡಿಕೆ ಮಾಡಲಾಗುತ್ತದೆ.
ಪೂರ್ಣೇಶ್ ಕೆಳಕೆರೆ, ರೈತ ಮುಖಂಡ
***
100 ಕೆವಿ ಸಾಮರ್ಥ್ಯದ ಟಿಸಿ ಬಳಕೆಯಾಗುವ ಜಾಗದಲ್ಲಿ 65 ಕೆವಿ ಸಾಮರ್ಥ್ಯದ ಟಿಸಿ ಅಳವಡಿಸಲಾಗಿದೆ. ಗ್ರಾಮೀಣ ಭಾಗಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಪೂರೈಕೆಯಾಗುವ ಗುಣಮಟ್ಟದ ವಿದ್ಯುತ್ ಕಂಬ, ಲೈನ್ ಮೇಲೆ ಆಗುವ ಲೋಪದಿಂದ ರೈತರು ಪರದಾಡಬೇಕು. ಕೊರ್ಕೋಟೆ ಶ್ರೀನಿವಾಸ್, ಗ್ರಾಮಸ್ಥ
ಮೆಸ್ಕಾಂ ಸಿಬ್ಬಂದಿಗೆ ಗ್ರಾಮ ಪಂಚಾಯಿತಿ ಕೆಡಿಪಿ, ಗ್ರಾಮಸಭೆಯಲ್ಲಿ 6 ತಾಸು ಗುಣಮಟ್ಟದ ವಿದ್ಯುತ್ ನೀಡುವಂತೆ ಸೂಚಿಸುತ್ತಿದ್ದೇವೆ. ನಿರ್ಣಯಗಳನ್ನು ಪಡೆದರೂ ಉನ್ನತ ಮಟ್ಟದಲ್ಲಿ ಪಂಚಾಯಿತಿ ನಿರ್ಣಯಕ್ಕೆ ಬೆಲೆ ಸಿಗದಂತಾಗಿದೆ. ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಕುಡಿಯುವ ನೀರು ಪೂರೈಕೆಗೂ ಕಷ್ಟವಾಗಿದೆ. ಪಂಪ್‌ಸೆಟ್ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ವೋಲ್ಟೇಜ್ ವ್ಯತ್ಯಾಸದಿಂದ ಮೋಟರ್‌ಗಳು ಹಾಳಾಗುತ್ತಿವೆ.
ಮಧುರಾಜ್ ಹೆಗಡೆ, ಅಧ್ಯಕ್ಷ, ತೂದೂರು ಗ್ರಾಮ ಪಂಚಾಯಿತಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.