ಬುಧವಾರ, ನವೆಂಬರ್ 30, 2022
17 °C

ಗೋವಿನ ಸೇವೆಯಿಂದ ಸಾಕ್ಷಾತ್ಕಾರ: ರಾಘವೇಶ್ವರ ಭಾರತೀ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸನಗರ: ‘ನಮ್ಮೆಲ್ಲದ ಬದುಕು ಕೃಷ್ಣಾರ್ಪಣಮ್‌ ಆದಲ್ಲಿ ನಮ್ಮ ಜನ್ಮ ಸಾರ್ಥಕ್ಯ ಪಡೆಯುತ್ತದೆ’ ಎಂದು ರಾಮಚಂದ್ರಾಪುರ ಮಠದ ಪೀಠಾಧೀಶ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಇಲ್ಲಿನ ಮಹಾನಂದಿ ಗೋಲೋಕದ ಗೋವರ್ಧನಗಿರಿಧಾರಿ ಗೋಪಾಲಕೃಷ್ಣ ದೇವಾಲಯ ಆವರಣದಲ್ಲಿ ನಡೆದ ಕೃಷ್ಣಾರ್ಪಣಮ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಣದ ಕೃಷ್ಣನ ಕಾಣುವ ರೂಪ ಗೋವು ಆಗಿದೆ. ಗೋವುಗಳ ಸೇವೆಯಿಂದ ಪರಮಾತ್ಮನ ಸಾಕ್ಷಾತ್ಕಾರ ಸಾಧ್ಯ. ಗೋವು ಎಲ್ಲ ದೇವರ ಆವಾಸ ಸ್ಥಾನ. ಆದರೆ ಕೃಷ್ಣ ಪರಮಾತ್ಮ ಗೋವಿಗೆ ಬಲು ಹತ್ತಿರ. ಅಂದು ಗೋವುಗಳ ಸಂರಕ್ಷಣೆಗಾಗಿ ಗೋವರ್ಧನಗಿರಿ ಎತ್ತಿ ಪರಾಕ್ರಮ ಮೆರೆದ ಕೃಷ್ಣ ಗೋವುಗಳ ರಕ್ಷಣೆಯಲ್ಲಿ ಜಗತ್ತಿಗೆ ದಾರಿ ತೋರಿದ. ಗೋವುಗಳನ್ನು ಕಾದು ಗೋಪಾಲನಾದ. ಅವನ ಸಾಕ್ಷಾತ್ಕಾರ ಪಡೆಯಲು ನಾವು ಇಂದು ಗೋವುಗಳ ಸೇವೆಯಲ್ಲಿ ನಿರತರಾಗಬೇಕು. ಗೋವುಗಳ ಮಧ್ಯೆ ವಾಸ ಮಾಡುವ ಶ್ರೀಕೃಷ್ಣನ ಕೃಪೆಗೆ ಪಾತ್ರವಾಗಬೇಕಾದರೆ ಗೋವುಗಳ ಜತೆ ನಾವಿರಬೇಕು. ಆಗ ಮಾತ್ರ ನಮ್ಮ ಮನಸ್ಸು ಸಂಪನ್ನವಾಗುತ್ತದೆ’ ಎಂದು ಹೇಳಿದರು.

ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್. ಅಂಗಾರ ಮಾತನಾಡಿ, ‘ಗೋವಿನಲ್ಲಿ ಭಕ್ತಿ ಇಲ್ಲವಾದಲ್ಲಿ ನಮ್ಮನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಅಧಿಕಾರ ಇದ್ದ ಮಾತ್ರಕ್ಕೆ ಸರ್ವಸ್ವವೂ ಅಲ್ಲ. ಬದುಕಿನಲ್ಲಿ ನೆಮ್ಮದಿ ಕಾಣಲು ಭಕ್ತಿಭಾವ ಇರಬೇಕಾಗಿದೆ. ಆ ಭಾವ ಸಾಧಿಸುವಲ್ಲಿ ಗುರುವಿನ ಅವಶ್ಯಕತೆ ಇದೆ’ ಎಂದರು.

600 ಪ್ರಕರಣ ದಾಖಲು: ಪಶು ಸಂಗೋಪನೆ ಸಚಿವ ಪ್ರಭು ಚವ್ವಾಣ್‌ ಮಾತನಾಡಿ, ‘ಶ್ರೀಮಠದ ಗೋಶಾಲೆ ಕೇವಲ ಶಾಲೆಯಲ್ಲ. ಅದೊಂದು ವಸತಿ ಗೋವಿನ ಶಾಲೆಯಂತಿದೆ. ಗುರುಗಳೇ ಸ್ವತಃ ವೈದ್ಯರಾಗಿ ಸೇವಾ ಕೈಂಕರ್ಯದಲ್ಲಿದ್ದಾರೆ. ನಮ್ಮ ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಲ್ಲಿದ್ದು, 12 ಸಾವಿರ ಗೋವುಗಳ ರಕ್ಷಣೆ ಮಾಡಲಾಗಿದೆ. 600 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ 400 ಪಶು ವೈದ್ಯರ ನೇಮಕವಾಗಿದೆ. ಜಿಲ್ಲೆಗೊಂದು ಗೋಶಾಲೆ ನಮ್ಮ ಹೆಮ್ಮೆಯ ಕೆಲಸವಾಗಿದೆ’ ಎಂದು ಹೇಳಿದರು.

ಡಾ.ಅರಳು ಮಲ್ಲಿಗೆ ಪಾರ್ಥಸಾರಥಿ, ಶಾಸಕ ರುದೇಗೌಡ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಮಂಜುನಾಥಗೌಡ, ಶ್ರೀಪಾದ ಭಟ್ಟ, ರವೀಂದ್ರ ಶೆಟ್ಟಿ ಬಜಗೋಳಿ, ಅಲಖಾಜಿ, ಶೇಷಗಿರಿ ಭಟ್ಟ, ಹನುಮಂತ ಮಳಲಿ ಇದ್ದರು. ಡಾ. ಶ್ರೀನಿವಾಸ್ ಸ್ವಾಗತಿಸಿದರು. ಕೃಷ್ಣ ಪ್ರಸಾದ್ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು