ಗುರುವಾರ , ಮಾರ್ಚ್ 30, 2023
31 °C

₹ 21.2 ಕೋಟಿ ವೆಚ್ಚದಲ್ಲಿ ರೈಲ್ವೆ ಕ್ರಾಸಿಂಗ್ ಕಾಮಗಾರಿ: ಬಿ.ವೈ. ರಾಘವೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಕೋಟೆಗಂಗೂರಿನ ರೈಲ್ವೆ ಕೋಚಿಂಗ್ ಡಿಪೊ ಕಾಮಗಾರಿಯ ಭಾಗವಾಗಿ ₹ 21.2 ಕೋಟಿ ವೆಚ್ಚದ ನೂತನ ರೈಲ್ವೆ ಕ್ರಾಸಿಂಗ್ ಕಾಮಗಾರಿಗೆ ಮಂಜೂರಾತಿ ದೊರಕಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ಕಳೆದ ವರ್ಷ ₹ 76 ಕೋಟಿ ಅಂದಾಜು ವೆಚ್ಚದ ಡಿಪೊ ಕಾಮಗಾರಿಗೆ ರೈಲ್ವೆ ಇಲಾಖೆಯಿಂದ ಅನುಮೋದನೆ ನೀಡಲಾಗಿತ್ತು. ರೈಲ್ವೆ ನಿಲ್ದಾಣ ನಿರ್ಮಾಣ ಕಾಮಗಾರಿಗಾಗಿ ಈಗ ರೈಲ್ವೆ ಇಲಾಖೆಯು ₹ 21.2 ಕೋಟಿ ವೆಚ್ಚದಲ್ಲಿ ನೂತನ ರೈಲ್ವೆ ಕ್ರಾಸಿಂಗ್ ನಿಲ್ದಾಣಕ್ಕೆ ಅನುಮೋದನೆ ದೊರಕಿದೆ. 

ರೈಲ್ವೆ ಟರ್ಮಿನಲ್ ಸ್ಥಾಪನೆಗೆ ರಾಜ್ಯ ಸರ್ಕಾರವು ₹10 ಕೋಟಿ ವೆಚ್ಚದಲ್ಲಿ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸುತ್ತಿದೆ. ಕೆಐಎಡಿಬಿ ಸಂಸ್ಥೆ ಮೂಲಕ ಭೂಸ್ವಾಧೀನ ಪ್ರಕ್ರಿಯೆ ಜಾರಿಯಲ್ಲಿದೆ. ಕೇಂದ್ರ ಸರ್ಕಾರ ಕೋಟೆಗಂಗೂರಿನಲ್ಲಿ ಕ್ರಾಸಿಂಗ್ ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ಮಂಜೂರಾತಿ ನೀಡಿರುವುದರಿಂದ ಕೋಚಿಂಗ್ ಡಿಪೊ ಮತ್ತು ರೈಲ್ವೆ ಕ್ರಾಸಿಂಗ್ ನಿಲ್ದಾಣ ಕಾಮಗಾರಿಗಳು ಶೀಘ್ರದಲ್ಲಿ ಪ್ರಾರಂಭಗೊಳ್ಳಲಿವೆ ಎಂದು ಮಾಹಿತಿ ನೀಡಿದ್ದಾರೆ.

ಶಿವಮೊಗ್ಗ ಭಾಗಕ್ಕೆ ಬರುತ್ತಿರುವ ಎಲ್ಲಾ ರೈಲುಗಳು ಮೈಸೂರು, ಯಶವಂತಪುರ, ಬೆಂಗಳೂರು ಕೋಚಿಂಗ್ ಡಿಪೊಗಳಲ್ಲಿ ನಿರ್ವಹಣೆಗೆ ಒಳಪಡುತ್ತಿವೆ. ಈ ಪಿಟ್ ಲೈನ್‌ಗಳು ಕ್ಷಮತೆ ಮೀರಿ ಕಾರ್ಯನಿರ್ವಹಿಸುತ್ತಿರುವುದರಿಂದ, ಶಿವಮೊಗ್ಗ ಭಾಗಕ್ಕೆ ಹೆಚ್ಚಿನ ರೈಲುಗಳ ಸೇವೆಯನ್ನು ಆರಂಭಿಸಲು ಅಡ್ಡಿಯಾಗಿತ್ತು. ಈ ಕಾರಣ ಶಿವಮೊಗ್ಗ ಭಾಗದಲ್ಲಿ ಹೆಚ್ಚಿನ ರೈಲುಗಳ ಬೇಡಿಕೆಯನ್ನು ಪೂರೈಸಲು ಶಿವಮೊಗ್ಗ ಭಾಗದಲ್ಲಿ ಕೋಚಿಂಗ್ ಡಿಪೊ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದ್ದಾರೆ.

ಈ ಕೊಚಿಂಗ್ ಡಿಪೊ ನಿರ್ಮಾಣದಿಂದ ಈಗಿರುವ ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆಗಳನ್ನು ಆರಂಭಿಸುವುದರ ಜತೆಗೆ ಭವಿಷ್ಯದಲ್ಲಿ ನಿರ್ಮಾಣಗೊಳ್ಳಲಿರುವ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು, ಶಿವಮೊಗ್ಗ-ಹರಿಹರ, ತಾಳಗುಪ್ಪ-ಸಿದ್ದಾಪುರ, ತಾಳಗುಪ್ಪ-ಹುಬ್ಬಳ್ಳಿ ಮತ್ತು ಶಿವಮೊಗ್ಗ-ಶೃಂಗೇರಿ-ಮಂಗಳೂರು ನೂತನ ರೈಲು ಮಾರ್ಗ ಯೋಜನೆಗಳು ಹಾಗೂ ಬೀರೂರು-ಶಿವಮೊಗ್ಗ ಡಬ್ಲಿಂಗ್ ಯೋಜನೆ ಪೂರ್ಣಗೊಂಡರೆ ಶಿವಮೊಗ್ಗ ಭಾಗದಿಂದ ವಿವಿಧ ಭಾಗಗಳಿಗೆ ರೈಲು ಸಂಚಾರವನ್ನು ಆರಂಭಿಸಲು ಈ ಕೋಚಿಂಗ್ ಡಿಪೊ ನೆರವಾಗಲಿದೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು