ರಾಘವೇಂದ್ರ ಟಿ.
ಸೊರಬ: ತಾಲ್ಲೂಕಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ರೈತರ ಮೊಗದಲ್ಲಿ ಸಂತಸ ಉಂಟು ಮಾಡಿದೆ. ಜೂನ್ ತಿಂಗಳಲ್ಲಿ ಅಗತ್ಯ ಮಳೆ ಸುರಿಯದೇ ರೈತರಲ್ಲಿ ಆತಂಕ ಎದುರಾಗಿತ್ತು. ಆದರೆ ಇದೀಗ ತಾಲ್ಲೂಕಿನಾದ್ಯಂತ ಪುನರ್ವಸು ಮಳೆ ಉತ್ತಮವಾಗಿ ಬೀಳುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.
ಈ ಬಾರಿ ನದಿ, ಹಳ್ಳ, ಕೊಳ್ಳ, ಕೆರೆಕಟ್ಟೆಗಳಲ್ಲಿ ಬೇಗನೇ ನೀರು ಬತ್ತಿ ಹೋಗಿತ್ತು. ಅಂತರ್ಜಲದ ಮಟ್ಟವೂ ಕುಸಿದು ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ನಿರೀಕ್ಷಿತ ಮಟ್ಟದಲ್ಲಿ ರೈತರ ಬೆಳೆಗಳಿಗೆ ನೀರು ಸಿಕ್ಕಿರಲಿಲ್ಲ. ಇದರಿಂದ ಅಡಿಕೆ, ಬಾಳೆ, ಪಪ್ಪಾಯಿ ತೋಟಗಳು ಬಿಸಿಲ ಧಗೆಗೆ ಒಣಗಿ ಹೋಗಿದ್ದವು. ಮುಂಗಾರು ಸಹ ಒಂದು ತಿಂಗಳು ವಿಳಂಬವಾಯಿತು. ತುಂತುರು ಮಳೆಯು, ಬಿತ್ತನೆಗೆ ಭೂಮಿ ಹದಗೊಳಿಸಲು ಸಾಕಾಗಲಿಲ್ಲ.
ಸಾವಿರಾರು ರೂಪಾಯಿ ಖರ್ಚು ಮಾಡಿ ಬಿತ್ತನೆ ಬೀಜ, ರಸಗೊಬ್ಬರ ಖರೀದಿ ಮಾಡಿ ಹದ ಮಳೆಗಾಗಿ ಕಾಯುತ್ತಿದ್ದ ರೈತರಿಗೆ ಜುಲೈ ಎರಡನೆ ವಾರ ಕಳೆದರೂ ಮಳೆ ಹದವಾಗಿ ಬೀಳದ ಪರಿಣಾಮ ರೈತ ಸಮುದಾಯ ಆತಂಕಕ್ಕೆ ಒಳಗಾಗಿತ್ತು. ಕಳೆದ ಒಂದು ವಾರದಿಂದ ಮಳೆ ವಾತಾವರಣ ಇದ್ದು, ಮೂರು ದಿನಗಳಿಂದ ಮಳೆ ಪ್ರಮಾಣ ಹೆಚ್ಚಾಗಿ, ನದಿಗಳಲ್ಲಿ ನೀರು ಹರಿಯುತ್ತಿದೆ.
ಉತ್ತಮ ಮಳೆ ಆಗುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಕೆರೆ ಕಟ್ಟೆಗಳು ಪೂರ್ಣ ತುಂಬಿದರೆ ಮಳೆ ಕೈಕೊಟ್ಟಾಗ ಫಲಸಿಗೆ ಆ ನೀರನ್ನು ಬಳಸಿಕೊಳ್ಳಲು ಸಾಧ್ಯ. ಇನ್ನೂ ಶೇ 50ರಷ್ಟು ಮಳೆ ಆಗಬೇಕಿದೆ.ಕೆ.ಜಿ.ಕುಮಾರ್, ಸಹಾಯಕ ಕೃಷಿ ಅಧಿಕಾರಿ
ಕೆರೆಗಳು ತುಂಬುತ್ತಿದ್ದು, ಕೆಲವು ಭಾಗಗಳಲ್ಲಿ ಭತ್ತ ನಾಟಿ ಕೆಲಸ ನಡೆಯುತ್ತಿದೆ. ಬಹುತೇಕ ರೈತರು ಎರಡು ದಿನದಿಂದ ಸಸಿಬೀಜಗಳನ್ನು (ಮೊಳಕೆ ಕಟ್ಟಿದ) ಮಡಿಗಳಲ್ಲಿ ಹಾಕಿದ್ದಾರೆ. 20 ದಿನದಲ್ಲಿ ಸಸಿಗಳು ದೊಡ್ಡದಾದ ಮೇಲೆ ಹೊಲದಲ್ಲಿ ನಾಟಿ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.
ಜೂನ್ ತಿಂಗಳಲ್ಲಿ 276 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ 67 ಮಿ.ಮೀ ಮಳೆ ಮಾತ್ರ ಬಿದ್ದು, ಶೇ 76ರಷ್ಟು ಕೊರತೆ ಎದುರಾಗಿತ್ತು. ಜುಲೈ 1ರಿಂದ 20ರವರೆಗೆ ವಾಡಿಕೆ ಪ್ರಕಾರ 363 ಮಿ.ಮೀ. ಮಳೆಯಾಗಬೇಕು. ಈ ಅವಧಿಯಲ್ಲಿ 264 ಮಿ.ಮೀ ಮಳೆಯಾಗಿದ್ದು, ಶೇ 27ರಷ್ಟು ಕೊರತೆಯಾಗಿದೆ. ಜೂನ್ 1ರಿಂದ ಜುಲೈ 21ರವರೆಗೆ 638 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ 331 ಮಿ.ಮೀ. ಮಳೆಯಾಗಿದ್ದು, ಶೇ 48ರಷ್ಟು ಕೊರತೆಯಾಗಿದೆ.
ತುಂತುರು ಮಳೆಯಿಂದ ಬಿತ್ತನೆಗೆ ಅಡ್ಡಿಯಾಗಿದೆ. ಭತ್ತದ ನಾಟಿ ನಂತರದಲ್ಲಿ ಮಳೆ ಕಡಿಮೆಯಾದಾಗ ಕಾಲುವೆ ಮೂಲಕ ನೀರು ಹಾಯಿಸಲು ಕೆರೆಗಳು ಭರ್ತಿಯಾಗಬೇಕಿದೆ. ಇನ್ನಷ್ಟು ಮಳೆ ಅಗತ್ಯ ಇದೆ.ರಾಜಶೇಖರಗೌಡ ತ್ಯಾವಗೋಡು, ರೈತ
ತಾಲ್ಲೂಕಿನಲ್ಲಿ, 9,100 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿದೆ. 20,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗುತ್ತದೆ. ಆನವಟ್ಟಿ, ಜಡೆ ಭಾಗದಲ್ಲಿ 3,000 ಹೆಕ್ಟೇರ್ ಪ್ರದೇಶದಲ್ಲಿ ಕೂರಿಗೆ ಬಿತ್ತನೆ ಮಾಡಲಾಗಿದೆ. 3,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಸಸಿ ನಾಟಿ ಮಾಡಲಾಗಿದೆ. ಮಳೆ ಜೋರಾಗಿದ್ದು, ನಾಟಿ ಮಾಡಲು ಸಸಿ ಮಡಿ ಮಾಡಲಾಗುತ್ತಿದೆ. ಆಗಸ್ಟ್ ಮೊದಲ ವಾರದಲ್ಲಿ ನಾಟಿ ಕಾರ್ಯ ಪೂರ್ಣಗೊಳ್ಳಲಿದೆ.
ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 16ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಈಗಾಗಲೇ 2,136 ರೈತರು ಬೆಳೆ ವಿಮೆಗೆ ಹಣ ಪಾವತಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.