ಮಂಗಳವಾರ, ಸೆಪ್ಟೆಂಬರ್ 21, 2021
28 °C

ಸೊರಬ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ಸೊರಬ: ತಾಲ್ಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಜನ ಅಕ್ಷರಶಃ ನಲುಗಿ ಹೋಗಿದ್ದು, ನದಿ ತೀರದ ಪ್ರದೇಶದ ನಿವಾಸಿಗಳು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

ತಾಲ್ಲೂಕಿನ ಪ್ರಮುಖ ನದಿಗಳಾದ ದಂಡಾವತಿ ಮತ್ತು ವರದಾ ನದಿಗಳು ನಿರಂತರ ಮಳೆಯಿಂದಾಗಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಳ್ಳ–ಕೊಳ್ಳಗಳು ತುಂಬಿ ಹರಿಯುತ್ತಿರುವ ಪರಿಣಾಮ ಹಲವಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ವರದಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರದ ಪ್ರದೇಶಗಳಲ್ಲಿ ನೆರೆ ಆವರಿಸಿದೆ. ಹೊಲ, ಗದ್ದೆಗಳು, ತೋಟಗಳು ನೀರಿನಿಂದ ಜಲಾವೃತವಾಗಿವೆ. ಜುಲೈ 23ರಂದು 19 ಸೆಂ.ಮೀ ಮಳೆ ದಾಖಲಾಗಿದೆ. ಮಳೆಯಿಂದಾಗಿ 2,355 ಹೆಕ್ಟೇರ್ ಪ್ರದೇಶದ ಭತ್ತ, 277 ಹೆಕ್ಟೇರ್ ಪ್ರದೇಶದ ಮೆಕ್ಕೆಜೋಳ ಜಲಾವೃತವಾಗಿದೆ. ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಳು ಮುಳುಗಡೆಯಾಗುವ ಸಾಧ್ಯತೆ ಇದೆ.

ರಸ್ತೆ ಸಂಚಾರ ಬಂದ್: ಪಟ್ಟಣದ ಸಮೀಪ ಜಂಗಿನಕೊಪ್ಪ ಮಾರ್ಗದಲ್ಲಿ ದಂಡಾವತಿ ನದಿ ಹರಿವು ಹೆಚ್ಚಳವಾಗಿದ್ದು, ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಜಂಗಿನಕೊಪ್ಪ ಮತ್ತು ಸೊರಬ ಮಾರ್ಗ ರಸ್ತೆ ಸಂಚಾರ ಕಡಿತವಾಗಿದ್ದು, ಜಂಗಿನಕೊಪ್ಪ ಗ್ರಾಮಸ್ಥರು ಪಟ್ಟಣಕ್ಕೆ ತಲುಪಲು ಸುಮಾರು 4 ಕಿ.ಮೀ ಸುತ್ತುವರಿದು ಹಳೇಸೊರಬ ಮಾರ್ಗವಾಗಿ ಓಡಾಡುವಂತಾಗಿದೆ.

ಚಂದ್ರಗುತ್ತಿಯಿಂದ ಹರೀಶಿ ಮಾರ್ಗದಲ್ಲಿ ನ್ಯಾರ್ಸಿ ಸಮೀಪದಲ್ಲಿ ರಸ್ತೆಯ ಮೇಲೆ ಹಳ್ಳದ ನೀರು ರಸ್ತೆಗೆ ಬಂದಿದೆ. ಸಿದ್ದಾಪುರ ಮತ್ತು ಚಂದ್ರಗುತ್ತಿ ಮಾರ್ಗದ ಶಿವಪುರ ಸಮೀಪದ ಬಂಗಿ ಬೂತಪ್ಪ ದೇವಸ್ಥಾನ ಸಮೀಪದ ಹಳ್ಳ ತುಂಬಿ ಹರಿದು ರಸ್ತೆ ಸಂಪರ್ಕ ಹಾಗೂ ಅಂಕರವಳ್ಳಿ ಸಮೀಪದ ವರದಾ ನದಿ ಉಕ್ಕಿ ಹರಿಯುತ್ತಿದ್ದು ಸೊರಬ–ಚಂದ್ರಗುತ್ತಿ ರಸ್ತೆ ಸಂಪರ್ಕವೂ ಸಹ ಕಡಿತವಾಗಿದೆ.

ಸೊರಬ–ಸಾಗರ ರಸ್ತೆ ಮಳಗದ್ದೆ ಸಮೀಪದಲ್ಲಿ ಹಾಗೂ ಗೆಂಡ್ಲಾ ಹೊಸೂರು–ಬನವಾಸಿ ರಸ್ತೆಯ ನಿಟ್ಟಿಕ್ಕಿ ಸಮೀಪದ ರಸ್ತೆ ಸಂಪರ್ಕ ಕಡಿತವಾಗಿದೆ. ಯಲವಾಟ, ದೇವತಿಕೊಪ್ಪ ಸೇರಿ ಹಲವು ಕಡೆಗಳಲ್ಲಿ ನೀರು ತುಂಬಿ ಹರಿದು ಗ್ರಾಮೀಣ ಭಾಗದ ರಸ್ತೆ ಸಂಚಾರಕ್ಕೆ ತೊಡಕುಂಟಾಗಿದೆ.

ಪಟ್ಟಣದ ಹೊಸಪೇಟೆ ಬಡಾವಣೆ ಸಮೀಪದಲ್ಲೂ ನದಿಯ ನೀರು ರಸ್ತೆ ಮೇಲೆ ಹರಿಯುತ್ತಿದೆ. ಸಮನವಳ್ಳಿ ಜಡೆ ಮಾರ್ಗದಲ್ಲಿ ಕೆರೆ ಏರಿ ಕುಸಿದಿದೆ. ತವನಂದಿ ಸಮೀಪದಲ್ಲಿ ಕೆರೆ ಏರಿ ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟದಲ್ಲಿದೆ.

ದೇವರ ಮೂರ್ತಿ ಸ್ಥಳಾಂತರ: ವರದಾ, ದಂಡಾವತಿ ಸಂಗಮ ಕ್ಷೇತ್ರ ಬಂಕಸಾಣದಲ್ಲಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಹೊಳೆಲಿಂಗೇಶ್ವರ ದೇವರ ಮೂರ್ತಿಯನ್ನು ಬಂಕಸಾಣದ ಊರ ಒಳಗಿನ ದೇವಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ. ಹಾಗೆಯೇ ನದಿ ಸಮೀಪವಿರುವ ಲಕ್ಕವಳ್ಳಿಯ ಜೈನ ಮೋಕ್ಷ ಮಂದಿರ ಮುಳುಗಡೆ ಭೀತಿಯನ್ನು ಎದುರಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು