ಶುಕ್ರವಾರ, ಸೆಪ್ಟೆಂಬರ್ 17, 2021
23 °C
6022 ಹೆಕ್ಟೇರ್ ಕೃಷಿ ಬೆಳೆ, 1009 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿ

ಅತಿವೃಷ್ಟಿಗೆ ನಲುಗಿದ ರೈತರು

ಗಣೇಶ್‌ ತಮ್ಮಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜುಲೈನಲ್ಲಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ 6,022 ಹೆಕ್ಟೇರ್ ಕೃಷಿ ಬೆಳೆ ಹಾಗೂ 1,009 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.

ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸರ್ವೆ ಕಾರ್ಯ ಕೈಗೊಂಡಿದ್ದು, 6,022 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾಗೂ 1009 ಪ್ರದೇಶದಲ್ಲಿ ತೋಟಗಾರಿಕೆ ಕೃಷಿ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಸೇರಿ 7031 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಕಳೆದ ಒಂದು ವಾರ ಸುರಿದ ಭಾರಿ ಮಳೆಗೆ 3,238 ಹೆಕ್ಟೇರ್ ಭತ್ತ ಬೆಳೆ ಹಾನಿಯಾಗಿದೆ. ಗಾಳಿಯ ಅಬ್ಬರಕ್ಕೆ 2,779 ಹೆಕ್ಟೇರ್ ಮೆಕ್ಕೆಜೋಳಕ್ಕೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ನಡೆಸಿದ ಸರ್ವೆಯಲ್ಲಿ ದೃಢಪಟ್ಟಿದೆ. 

ಶಿವಮೊಗ್ಗ ತಾಲ್ಲೂಕಿನಲ್ಲಿ 5 ಹೆಕ್ಟೇರ್ ಭತ್ತ, 160 ಹೆಕ್ಟೇರ್ ಮೆಕ್ಕೆಜೋಳ ಸೇರಿ 165 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದೆ. ಭದ್ರಾವತಿ ತಾಲ್ಲೂಕಿನಲ್ಲಿ  20 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳದ ಬೆಳೆ, ಸಾಗರ ತಾಲ್ಲೂಕಿನಲ್ಲಿ 774 ಹೆಕ್ಟೇರ್‌ ಭತ್ತ, 15 ಹೆಕ್ಟೇರ್ ಮೆಕ್ಕೆಜೋಳ ಸೇರಿ 789 ಹೆಕ್ಟೇರ್‌ನಲ್ಲಿ ಬೆಳೆಗಳು ನೀರು ಪಾಲಾವಾಗಿವೆ.

ಹೊಸನಗರ ತಾಲ್ಲೂಕಿನಲ್ಲಿ 120 ಹೆಕ್ಟೇರ್‌ ಭತ್ತ, 18 ಹೆಕ್ಟೇರ್ ಮೆಕ್ಕೆಜೋಳ, 5 ಹೆಕ್ಟೇರ್ ಕಬ್ಬು ಸೇರಿ 143 ಹೆಕ್ಟೇರ್ ಬೆಳೆ ನಷ್ಟವಾಗಿದೆ. ಶಿಕಾರಿಪುರ ತಾಲ್ಲೂಕಿನಲ್ಲಿ 134 ಹೆಕ್ಟೇರ್‌ ಭತ್ತ, 2,250 ಹೆಕ್ಟೇರ್‌ ಮೆಕ್ಕೆಜೋಳ ಸೇರಿ 2,384 ಹೆಕ್ಟೇರ್ ನಷ್ಟವಾಗಿದೆ. ಸೊರಬ ತಾಲ್ಲೂಕಿನಲ್ಲಿ 2,205 ಹೆಕ್ಟೇರ್ ಭತ್ತ, 316 ಹೆಕ್ಟೇರ್‌  ಮೆಕ್ಕೆಜೋಳ ಸೇರಿ 2,521 ಹೆಕ್ಟೇರ್‌ ಬೆಳೆ ನಷ್ಟವಾಗಿದೆ.

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ ನಷ್ಟ: ತೀರ್ಥಹಳ್ಳಿಯಲ್ಲಿ ಭಾಗದಲ್ಲಿ ಹೆಚ್ಚು ಮಳೆಯಾಗಿದ್ದರೂ ಕೃಷಿ ಬೆಳೆಗೆ ಹಾನಿಯಾಗಿಲ್ಲ. ಆದರೆ, 5 ಹೆಕ್ಟೇರ್‌ ಭತ್ತದ ಸಸಿಮಡಿಗೆ ಹಾನಿಯಾಗಿದೆ. ಶಿವಮೊಗ್ಗ ತಾಲ್ಲೂಕಿನಲ್ಲಿ 870 ಹೆಕ್ಟೇರ್‌ ಸಸಿಗಳು ಮಳೆಗೆ ಕೊಚ್ಚಿಹೋಗಿವೆ. 

ತೋಟಗಾರಿಕಾ ಬೆಳೆಗಾರರಿಗೆ ನಷ್ಟ: ಜಿಲ್ಲೆಯಲ್ಲಿ ಹೆಕ್ಟೇರ್‌ ಅಡಿಕೆ, 102 ಹೆಕ್ಟೇರ್‌ ಬಾಳೆ, 782 ಹೆಕ್ಟೇರ್‌  ಶುಂಠಿ, 80 ಹೆಕ್ಟೇರ್ ಅನಾನಸ್‌, 20 ಹೆಕ್ಟೇರ್ ಕರಿಮೆಣಸಿಗೆ ಹಾನಿಯಾಗಿವೆ.

ಶಿವಮೊಗ್ಗ ತಾಲ್ಲೂಕಿನಲ್ಲಿ 5 ಹೆಕ್ಟೇರ್ ಬಾಳೆ, 20 ಹೆಕ್ಟೇರ್ ಶುಂಠಿ ಸೇರಿ 35 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಶಿಕಾರಿಪುರದಲ್ಲಿ 55 ಹೆಕ್ಟೇರ್ ಬಾಳೆ, 359 ಹೆಕ್ಟೇರ್ ಶುಂಠಿ ಸೇರಿ 410 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. ಸೊರಬದಲ್ಲಿ 40 ಹೆಕ್ಟೇರ್ ಬಾಳೆ, 327 ಹೆಕ್ಟೇರ್ ಶುಂಠಿ, 80 ಹೆಕ್ಟೇರ್ ಅನಾನಸ್‌, 10 ಹೆಕ್ಟೇರ್ ಕರಿಮೆಣಸು ಸೇರಿ 457 ಹೆಕ್ಟೇರ್‌ ಬೆಳೆ ಹಾನಿಯಾಗಿದೆ.

ಸಾಗರದಲ್ಲಿ 80 ಹೆಕ್ಟೇರ್‌ ಶುಂಠಿ, ಹೊಸನಗರದಲ್ಲಿ 2 ಹೆಕ್ಟೇರ್ ಶುಂಠಿ ಬೆಳೆಗೆ ನಷ್ಟವಾಗಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ 10 ಹೆಕ್ಟೇರ್ ಅಡಿಕೆ, 2 ಹೆಕ್ಟೇರ್ ಬಾಳೆ, 3 ಹೆಕ್ಟೇರ್ ಶುಂಠಿ, 10 ಹೆಕ್ಟೇರ್ ಕರಿಮೆಣಸು ಸೇರಿ 25 ಹೆಕ್ಟೇರ್‌ ಬೆಳೆ ಹಾನಿಯಾಗಿದೆ.

***

ಅತಿವೃಷ್ಟಿಯಿಂದ ತೋಟಗಾರಿಕೆ ಬೆಳೆ ಹಾನಿ ಕುರಿತು ಸರ್ವೆ ಕಾರ್ಯ ಕೈಗೊಳ್ಳಲಾಗಿದೆ. ಇನ್ನೂ ಮಳೆಯಾಗುವ ಸಾಧ್ಯತೆ ಇರುವುದರಿಂದ ಹಾನಿ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಕೆ.ರಾಮಚಂದ್ರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ, ಶಿವಮೊಗ್ಗ

***

ಸಮೀಕ್ಷೆ ಪ್ರಕಾರ 6022 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಮಳೆ ಕಡಿಮೆಯಾಗಿದೆ. ಮಳೆ ಪೂರ್ಣ ನಿಂತ ನಂತರವೇ ಹಾನಿಯ ಸ್ಪಷ್ಟ ಚಿತ್ರಣ ಸಿಗಲಿದೆ.

ಕಿರಣ್‌ ಕುಮಾರ್, ಕೃಷಿ ಇಲಾಖೆ, ಉಪನಿರ್ದೇಶಕ, ಶಿವಮೊಗ್ಗ

***

ತಾಲ್ಲೂಕಿನಲ್ಲಿ ಅಪಾರ ಪ್ರಮಾಣದ ಬೆಳೆ, ಆಸ್ತಿ ನಷ್ಟವಾಗಿದೆ. ರೈತರ ಬೆಳೆ ನಾಶದ ವರದಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. <br/>ಮರಣ ಹೊಂದಿದ ಇಬ್ಬರಿಗೆ ತಲಾ ₹ 5 ಲಕ್ಷ ಪರಿಹಾರ ನೀಡಲಾಗಿದೆ.

ವಿ.ಎಸ್.ರಾಜೀವ್, ತಹಶೀಲ್ದಾರ್, ಹೊಸನಗರ

***

ನಾಲ್ಕು ಎಕೆರೆ ಅಡಿಕೆ ತೋಟವಿದೆ. ಈಚೆಗಷ್ಟೇ ಅಡಿಕೆ ತೋಟಕ್ಕೆ ಗೊಬ್ಬರ ಹಾಕಲಾಗಿತ್ತು. ಭಾರಿ ಮಳೆಗೆ ಕೆರೆಯ ಕೋಡಿ ಒಡೆದು ತೋಟಕ್ಕೆ ನೀರು ನುಗ್ಗಿ ಅರ್ಧ ಅಡಿಯಷ್ಟು ಮಣ್ಣು ಕೊಚ್ಚಿಕೊಂಡು ಹೋಗಿದೆ.

ಸಿ.ಚಂದ್ರಪ್ಪ, ರೈತ, ಯಲವಟ್ಟಿ ಗ್ರಾಮ, ಶಿವಮೊಗ್ಗ ತಾಲ್ಲೂಕು

***

ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಯಿಂದ ಅಡಿಕೆ ತೋಟಗಳಲ್ಲಿ ಕಾಜಿಗೆ ಮುಚ್ಚಿ ಹೋಗಿದೆ. ನೀರು ಹರಿದು ಹೋಗದ ಕಾರಣ ಕೊಳೆ ರೋಗ ಕಾಣಿಸಿಕೊಳ್ಳುತ್ತಿದೆ. ಭತ್ತದ ಗದ್ದೆಗಳಲ್ಲಿ ಫಸಲಿನ ಮೇಲೆ ಮಣ್ಣು, ಮರಳು ಕುಳಿತಿದೆ.

ಮಹಾಬಲೇಶ್ವರ ಗೌಡ, ರೈತ, ಕಲಸಿಪೇಟೆ ಗ್ರಾಮ, ಸಾಗರ

***

ಮಳೆಗೆ ನಲುಗಿದ ಮಲೆನಾಡ ನಡುಮನೆ

ರವಿ ನಾಗರಕೊಡಿಗೆ

ಹೊಸನಗರ: ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಸುರಿದು ದಾಖಲೆ ಮಾಡಿದ ಮಲೆನಾಡ ನಡುಮನೆ ಎಂದೇ ಕರೆಯುವ ಹೊಸನಗರ ತಾಲ್ಲೂಕಿನಲ್ಲಿ ಅನಾಹುತಗಳೂ ಹೆಚ್ಚಾಗಿ ವರದಿಯಾಗಿವೆ.

ಒಂದು ವಾರ ಎಡಬಿಡದೆ ಸುರಿದ ಮಹಾಮಳೆ ಜನರಲ್ಲಿ ಆತಂಕ ಸಷ್ಟಿಸಿತ್ತು. ಜನಜೀವನ ಕಷ್ಟಕರವಾಗಿತ್ತು. ತಾಲ್ಲೂಕಿನ ನಗರ ಹೋಬಳಿಯಲ್ಲಿ ದಾಖಲೆಯ 40.1 ಸೆಂ.ಮೀ. ಮಳೆ ಸುರಿದಿತ್ತು. ತಾಲ್ಲೂಕಿನ ಎಲ್ಲಾ ಹೊಳೆ, ಹಳ್ಳಕೊಳ್ಳಗಳು ಉಕ್ಕಿ ಹರಿದು ಪಕ್ಕದಲ್ಲಿನ ರೈತರ ನೂರಾರು ಎಕರೆ ಜಮೀನು ಕೊಚ್ಚಿಹೋಗಿವೆ. ಕೋಟ್ಯಂತರ ರೂಪಾಯಿ ನಷ್ಟವಾಗಿದೆ.

ತಾಲ್ಲೂಕಿನಲ್ಲಿ ಮಳೆಯಿಂದ ಮೂವರು ಮೃತಪಟ್ಟಿದ್ದಾರೆ. 6 ಮನೆಗಳಿಗೆ ಹಾನಿ ಆಗಿದೆ. 32 ಮನೆ ಅಲ್ಪ ಪ್ರಮಾಣದಲ್ಲಿ ಕುಸಿದಿವೆ. ತಾಲ್ಲೂಕಿನ ಕೊಳವಾಡಿ ಮತ್ತು ನಾಗೋಡಿ ಗ್ರಾಮದಲ್ಲಿ ಭಾರಿ ಪ್ರಮಾಣದಲ್ಲಿ ಧರೆ ಕುಸಿದಿದೆ. ಅಂಡಗದೋದೂರು ಬಾಳ್ಮನೆ ರಸ್ತೆಗೆ ಹಾನಿ ಆಗಿ ಜನರ ಸಂಚಾರ ದುಸ್ತರವಾಗಿತ್ತು.

ಉಕ್ಕಿದ ಕೌರಿ ಹಳ್ಳ: ಯಡೂರು ಬಳಿಯ ಕೌರಿ ಹಳ್ಳ ಉಕ್ಕಿಹರಿದು ಸುತ್ತಲಿನ 30 ಎಕರೆಗೂ ಹೆಚ್ಚು ಹೊಲಗದ್ದೆಗೆ ಮಣ್ಣು ಆವರಿಸಿ ಲಕ್ಷಾಂತರ ಬೆಳೆ ನಾಶವಾಗಿದೆ. ಮೇಲಿನ ಬೈಸೆ, ಬಿಚ್ಚಾಡಿ ಸಂಪರ್ಕದ ಮೋರಿ ಕೊಚ್ಚಿಹೋಗಿತ್ತು. ಶೆಟ್ಟಿಕೊಪ್ಪ- ಬಿಚ್ಚಾಡಿ ಗ್ರಾಮಗಳು ದ್ವೀಪ ಪ್ರದೇಶದಂತಾಗಿವೆ. ಕಲ್ಲುವಿಡಿ ಅಬಿಗಲ್ಲು. ಇಟ್ಟಕ್ಕಿ ಹೊಳೆಮತ್ತಿ ಧರೆ ಕುಸಿತವಾಗಿದೆ. ತೊಗರೆಯಲ್ಲಿ ಹಳ್ಳದ ದಂಡೆ ಒಡೆದು 23 ಎಕರೆಗೂ ಹೆಚ್ಚು ಜಮೀನು ನಾಶವಾಗಿದೆ. ಕೆರೆಹಳ್ಳಿ ಹೋಬಳಿಯಲ್ಲಿ ಹೆಚ್ಚು ಮಳೆ ಆಗದಿದ್ದರೂ ಹಾನಿ ಪ್ರಮಾಣ ಹೆಚ್ಚಿದೆ. ಕೆ.ಹುಣಸವಳ್ಳಿ ಶಾಲೆ ಮೇಲ್ಚಾವಣಿ ಹಾರಿ ಹೋಗಿದೆ. ಅಂಡಗದೊದೂರು ಗ್ರಾಮದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.

***

ಒಂದು ದಿನದ ಮಳೆಗೆ ಕುದ್ದುಹೋದ ಸಾಗರ

ಎಂ.ರಾಘವೇಂದ್ರ

ಸಾಗರ: ಜುಲೈ 22ರ ಬೆಳಿಗ್ಗೆ 8.30ರಿಂದ 23ರ ಬೆಳಿಗ್ಗೆ 8.30ರವರೆಗೆ ತಾಲ್ಲೂಕಿನಲ್ಲಿ ಹಿಂದೆಂದೂ ಕಾಣದಷ್ಟು ಧಾರಾಕಾರ ಮಳೆಯಾಗಿದೆ. ಈ ಅವಧಿಯಲ್ಲಿ 17.3 ಸೆಂ.ಮೀ. ಮಳೆಯಾಗಿತ್ತು. ಇದು ವಾಡಿಕೆಗಿಂತ ಶೇ 64ರಷ್ಟು ಅಧಿಕ. 

ಮಳೆಯಿಂದ ಉಂಟಾಗಿರುವ ಹಾನಿ ಕುರಿತು ಕಂದಾಯ ಹಾಗೂ ಕೃಷಿ ಇಲಾಖೆ ಜಂಟಿ ಸರ್ವೆ ನಡೆಸಿವೆ. 848 ಹೆಕ್ಟೇರ್ ಭತ್ತದ ಗದ್ದೆ ಸಂಪೂರ್ಣವಾಗಿ ಜಲಾವೃತಗೊಂಡು ಹೂಳು ತುಂಬಿದೆ. ಬೆಳೆ ನಷ್ಟ ಉಂಟಾಗಿದೆ. 45 ಹೆಕ್ಟೇರ್ ಮೆಕ್ಕೆಜೋಳ, 40 ಹೆಕ್ಟೇರ್ ಅಡಿಕೆ ತೋಟ, 80 ಎಕರೆ ಶುಂಠಿ ಬೆಳೆಗೆ ಹಾನಿ ಸಂಭವಿಸಿದೆ.

ತಾಲ್ಲೂಕಿನಲ್ಲಿ 19 ಮನೆಗಳು ಸಂಪೂರ್ಣವಾಗಿ ಕುಸಿದಿದೆ. 86 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. 4 ಜಾನುವಾರು ಮೃತಪಟ್ಟಿವೆ. ಸೈದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಸನಗದ್ದೆ ಹಾಗೂ ಕಾನ್ಲೆ ಪಂಚಾಯಿತಿ ವ್ಯಾಪ್ತಿಯ ಮಂಡಗಳಲೆ ಗ್ರಾಮಕ್ಕೆ ದೋಣಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಅತ್ತಿಸಾಲು ಗ್ರಾಮ ಹಾಗೂ ಜಂಬಗಾರುವಿನಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.

ತಾಲ್ಲೂಕಿನಲ್ಲಿ 280 ಕಿ.ಮೀ. ಉದ್ದದ ರಸ್ತೆ, 398 ಶಾಲಾ ಕಟ್ಟಡ, 84 ಅಂಗನವಾಡಿ, 17 ಹಾಸ್ಟೆಲ್ ಕಟ್ಟಡಕ್ಕೆ ಹಾನಿ ಉಂಟಾಗಿದೆ. 36 ಕೆರೆ ದಂಡೆಗಳು ಒಡೆದಿವೆ. ₹ 1,460 ಕೋಟಿ ವೆಚ್ಚದಲ್ಲಿ ಹೊಸದಾಗಿ ಕಾಮಗಾರಿ ಕೈಗೊಳ್ಳಬೇಕಾಗಿದೆ.

ನೆರೆಯಿಂದ ನಷ್ಟ ಅನುಭವಿಸಿದವರಿಂದ ಪರಿಹಾರಕ್ಕಾಗಿ ಅರ್ಜಿ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಬೆಳೆ ನಷ್ಟ ಅನುಭವಿಸುವವರು ಪರಿಹಾರಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯ ವಿವರ ನೀಡುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸುವವರು ಆಯಾ ಪಂಚಾಯಿತಿ, ನಾಡ ಕಚೇರಿ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರನ್ನು ಸಂಪರ್ಕಿಸಬಹುದು.

ಮುಳುಗಡೆ ಸಂತ್ರಸ್ತರಿಗಿಲ್ಲ ನೆಮ್ಮದಿಯ ಬದುಕು

ಪಾವನಾ ನೀಚಡಿ

ತ್ಯಾಗರ್ತಿ: ರಾಜ್ಯಕ್ಕೆ ಬೆಳಕು ನೀಡಲು ಮಡೆನೂರು ಆಣೆಕಟ್ಟು ನಿರ್ಮಾಣದಲ್ಲಿ ಮುಳುಗಡೆಯಾದ ಹೆಬ್ಬೂರು ಗ್ರಾಮದ ಜನರು ಜಂಬಾನಿ ಗ್ರಾಮದ ಗಾಮದಕೊಡ್ಲುವಿನಲ್ಲಿ ವಾಸಿಸುತ್ತಿದ್ದಾರೆ. ಈ ಬಾರಿಯ ಮಳೆಯಿಂದ ತೋಟ, ಗದ್ದೆಗಳಲ್ಲೆಲ್ಲಾ ಮಣ್ಣು ತುಂಬಿದೆ.

ಸಾಗರ ತಾಲ್ಲೂಕಿನ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಮದಕೊಡ್ಲು ಗ್ರಾಮದಲ್ಲಿ ಮುಳುಗಡೆಯಾದ ಹೆಬ್ಬೂರು ಗ್ರಾಮದ ಸುಮಾರು ನಾಲ್ಕೈದು ಕುಟುಂಬಗಳು ವಾಸವಾಗಿವೆ. ಇಡೀ ಊರಿಗೆ ಒಂದು ಕೆರೆಯನ್ನು ಸ್ಥಳೀಯರೇ ನಿರ್ಮಿಸಿಕೊಂಡಿದ್ದು, ಈ ಕೆರೆಯನ್ನು 1988-89ರಲ್ಲಿ ಸರ್ಕಾರಿ ಕೆರೆ ಎಂದು ಘೋಷಿಸಲಾಯಿತು. ಈ ಕೆರೆಯೂ ಭಾರಿ ಮಳೆಯಿಂದ ಆಪತ್ತನ್ನು ತಂದೊಡ್ಡುತ್ತಿದೆ.

ಭಾರಿ ಮಳೆಗೆ ಕೆರೆಯ ಕೋಡಿ ಒಡೆದು 13ನೇ ಸರ್ವೆ ನಂಬರ್‌ನಲ್ಲಿರುವ ಗದ್ದೆ, ತೋಟಗಳು ಸಂಪೂರ್ಣ ಜಲಾವೃತಗೊಂಡು ಗ್ರಾಮಸ್ಥರ ಬದುಕನ್ನೇ ಕಸಿದುಕೊಂಡಿದೆ.

ಶಾಶ್ವತ ಪರಿಹಾರ ಕಲ್ಪಿಸಲು ಸರ್ವೆ ನಂ 13ರಲ್ಲಿ ಭದ್ರ ಕಾಲುವೆಯನ್ನು ನಿರ್ಮಿಸಿ ಸರಾಗವಾಗಿ ನೀರು ಹರಿಯುವಂತಾದರೆ ಮಾತ್ರ ಮಳೆಯಿಂದಾಗಿ ಆಗುವ ಇಂತಹ ಅನಾಹುತವನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.

‘‌ಮಡೆನೂರು ಡ್ಯಾಂ ನಿರ್ಮಾಣದ ಹಂತದಲ್ಲಿ ಮುಳುಗಡೆ ಸಂಭವಿಸುತ್ತದೆಯೆಂದು ಹೆಬ್ಬೂರು ಗ್ರಾಮದ ಸುಮಾರು 80 ಕುಟುಂಬಗಳನ್ನು ಉಳವಿ ಗ್ರಾಮದ ಗಡ್ಡೆಗದ್ದೆ ಎಂಬಲ್ಲಿಗೆ ಸ್ಥಳಾಂತರಿಸಿದರು. ಗಡೆಗದ್ದೆಯಲ್ಲಿ ಎಲ್ಲಾ ಕುಟುಂಬಗಳಿಗೆ ಜಾಗವಿಲ್ಲದೇ ನಾವು ಗಾಮದಕೊಡ್ಲು ಗ್ರಾಮಕ್ಕೆ ಬಂದು ಬದುಕು ಕಟ್ಟಿಕೊಂಡಿದ್ದೇವೆ. ಆದರೆ ಭಾರಿ ಮಳೆಯಿಂದಾಗಿ ಕೆರೆ ಕಾಲುವೆ ಒಡೆದು ನೀರು ನುಗ್ಗಿ  ಮರಳು ಮಿಶ್ರಿತ ಮಣ್ಣು ತುಂಬಿಕೊಂಡು ಗದ್ದೆ–ತೋಟಗಳು ಕೃಷಿ ಚಟುವಟಿಕೆಗೂ ಯೋಗ್ಯವಲ್ಲದಂತಾಗಿದೆ’ ಎಂದು ಗಾಮದಕೊಡ್ಲು ಗ್ರಾಮದ ರಮೇಶ ಅಳಲು ತೋಡಿಕೊಂಡರು.

‘ಗಾಮದಕೊಡ್ಲು ಕೆರೆಯ ಕಾಲುವೆ ದುರಸ್ಥಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಿಯಾಯೋಜನೆ ತಯಾರಿಸಿ ಅನುಮೋದನೆಗಾಗಿ ಮೇಲಧಿಕಾರಿಗೆ ಕಳುಹಿಸಿದ್ದೇವೆ. ನೆರೆ ಪರಿಹಾರ ಯೋಜನೆಯಡಿ ಸಂತ್ರಸ್ತರಿಗೆ ಪರಿಹಾರ ದೊರಕಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ’ ಎಂದು ಬರೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನೀಫ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.