ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರ್ಗಲ್‌ | ಪಡಿತರ ಕಾರ್ಡ್ ತಿದ್ದುಪಡಿ; ಸ್ವೀಕೃತವಾಗದ ಗೃಹಲಕ್ಷ್ಮಿ ಅರ್ಜಿ

Published 12 ಆಗಸ್ಟ್ 2023, 14:30 IST
Last Updated 12 ಆಗಸ್ಟ್ 2023, 14:30 IST
ಅಕ್ಷರ ಗಾತ್ರ

ಕಾರ್ಗಲ್: ತಿಂಗಳ ಹಿಂದೆ ಪಡಿತರ ಕಾರ್ಡ್‌ ತಿದ್ದುಪಡಿ ಮಾಡಿಸಿಕೊಂಡವರು ಗೃಹಲಕ್ಷ್ಮಿ ಯೊಜನೆಯ ಫಲಾನುಭವಿಗಳಾಗಲು ತಾಂತ್ರಿಕ ಸಮಸ್ಯೆ ಎದುರಾಗಿದೆ.  

ಪಡಿತರ ಕಾರ್ಡ್‌ನಲ್ಲಿ ಕುಟುಂಬದ ಯಜಮಾನಿಯ ಹೆಸರನ್ನು ಬದಲಾವಣೆ ಮಾಡಿಸಿಕೊಂಡಿರುವವರು ಮತ್ತು ಮೃತರ ಹೆಸರನ್ನು ಪಡಿತರ ಕಾರ್ಡ್‌ನಿಂದ ತೆಗೆಸಿದವರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಲು ಅರ್ಜಿ ಸ್ವೀಕಾರ ಆಗುತ್ತಿಲ್ಲ. ಇದರಿಂದ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಪಡಿತರ ಚೀಟಿ ಪ್ರಮುಖವಾದ ದಾಖಲೆ. ಕುಟುಂಬದ ಯಜಮಾನಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಲು ಸಾಧ್ಯ. ಈ ಕಾರಣಕ್ಕೆ ಸಾಕಷ್ಟು ಪಡಿತರ ಚೀಟಿಗಳು ಕಳೆದ ಒಂದು ತಿಂಗಳಿಂದ ತಿದ್ದುಪಡಿ ಆಗಿವೆ. ಈ ರೀತಿ ತಿದ್ದುಪಡಿ ಆದ ಪಡಿತರ ಚೀಟಿಗಳು ಜಿಲ್ಲಾವಾರು ನೀಡಿರುವ ಅಂಕಿ ಸಂಖ್ಯೆಗಳಲ್ಲಿ ತಿದ್ದುಪಡಿಯಾಗದ ಕಾರಣ ಗೃಹಲಕ್ಷ್ಮಿ ಅರ್ಜಿಗಳು ಸ್ವೀಕೃತವಾಗುತ್ತಿಲ್ಲ ಎಂದು ನೋಂದಣಿ ಕೇಂದ್ರಗಳ ಸಿಬ್ಬಂದಿ ಹೇಳುತ್ತಿದ್ದಾರೆ. 

ಈ ಬಗ್ಗೆ ವಿವರಣೆ ನೀಡಿದ ಶಿವಮೊಗ್ಗ ಜಿಲ್ಲಾ ಗೃಹಲಕ್ಷ್ಮೀ ಯೋಜನೆ ಅನುಷ್ಠಾನದ ನೋಡೆಲ್ ಅಧಿಕಾರಿ ಸುದೀಪ್ ಅವರು, ‘ಈ ಹಿಂದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರು ನೀಡಿರುವ ಅಂಕಿ ಸಂಖ್ಯೆಗಳ ಆಧಾರದ ಮೇಲೆ ಗೃಹಲಕ್ಷ್ಮಿ ಫಲಾನುಭವಿಗಳ ನೋಂದಣಿಯನ್ನು ಮಾಡಿಕೊಳ್ಳಲಾಗುತ್ತಿದೆ. ಪಡಿತರ ಕಾರ್ಡ್ ತಿದ್ದುಪಡಿ ಆಗಿರುವ ಅಂಕಿ ಸಂಖ್ಯೆಗಳನ್ನು 2ನೇ ಹಂತದಲ್ಲಿ ಪಡೆದು ಗೃಹಲಕ್ಷ್ಮಿ ಯೋಜನೆಯ ನೋಂದಣಿ ಕಾರ್ಯವನ್ನು ಶೀಘ್ರ ಮಾಡಿಕೊಡಲಾಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಆದಷ್ಟು ಶೀಘ್ರ ಈ ಲೋಪವನ್ನು ಸರಿಪಡಿಸಿ ನಿಜವಾದ ಫಲಾನುಭವಿಗಳಿಗೆ ಯೋಜನೆ ಲಭಿಸುವಂತೆ ಮಾಡಬೇಕು. ಜಿಲ್ಲಾಧಿಕಾರಿ ಮತ್ತು ನೋಡೆಲ್ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ಗ್ರಾಮೀಣ ಮಹಿಳೆಯರ ಆತಂಕ ದೂರ ಮಾಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ ಭಟ್ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT