ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗುವಳಿ ಇದ್ದರೂ ಸಕ್ರಮೀಕರಣ ಅರ್ಜಿ ವಜಾ: ಶಿವಾನಂದ ಕುಗ್ವೆ

Last Updated 25 ಜನವರಿ 2022, 4:36 IST
ಅಕ್ಷರ ಗಾತ್ರ

ಸಾಗರ: ಮೂರು ತಲೆಮಾರುಗಳಿಂದ ಅರಣ್ಯಭೂಮಿಯಲ್ಲಿಸಾಗುವಳಿ ಮಾಡುತ್ತಿದ್ದರೂ ಅರಣ್ಯಭೂಮಿ ಹಕ್ಕುಕಾಯ್ದೆಯಡಿ ಸಕ್ರಮೀಕರಣಕ್ಕಾಗಿ ಅರ್ಜಿ ಸಲ್ಲಿಸಿದವರ ಅರ್ಜಿಗಳನ್ನು ಉಪವಿಭಾಗ ಮಟ್ಟದ ಅಧಿಕಾರಿ ಸಾರಾಸಗಟಾಗಿ ತಿರಸ್ಕರಿಸುತ್ತಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ದೂರಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯಭೂಮಿ ಹಕ್ಕುಕಾಯ್ದೆಯಡಿ ಸಲ್ಲಿಸಿದ್ದ 480 ಅರ್ಜಿಗಳನ್ನು ಈಚೆಗೆ ಉಪವಿಭಾಗಾಧಿಕಾರಿ ವಜಾ ಮಾಡಿದ್ದಾರೆ. ಇಲ್ಲಿನ ಬಹುತೇಕ ಅರ್ಜಿದಾರರು ಮಡೇನೂರು ಡ್ಯಾಂ ನಿರ್ಮಾಣದ ಸಂದರ್ಭದಲ್ಲಿ ಮುಳುಗಡೆಯಾಗಿ ಪುನರ್ ವಸತಿಗಾಗಿ ಈ ಭಾಗಕ್ಕೆ ಬಂದವರು. ಇಂತಹ ಸಂತ್ರಸ್ತರ ಅರ್ಜಿ ವಜಾ ಮಾಡಿರುವುದು ಅವರ ಸಾಗುವಳಿಯನ್ನೇ ತಿರಸ್ಕರಿಸಿದಂತಾಗಿದೆ’ಎಂದರು.

ಚೆನ್ನಶೆಟ್ಟಿಕೊಪ್ಪ, ಜಂಬೂರುಮನೆ, ಐಗಿನಬೈಲು, ಹೊಸೂರು, ಹಾರ್ನಳ್ಳಿ, ಹೊಸಗುಂದ, ಹಂದಿಗನೂರು, ಬೇಡರಕೊಪ್ಪ, ಚಿಪ್ಪಳಿ, ಬಳ್ಳಿಬೈಲು ಮೊದಲಾದ ಗ್ರಾಮಗಳ ಅರ್ಜಿದಾರರು 90 ವರ್ಷ ಹಿರಿಯರ ಹೇಳಿಕೆ ಪ್ರಮಾಣಪತ್ರವನ್ನು ಸಾಕ್ಷಿ ರೂಪದಲ್ಲಿ ಸಲ್ಲಿಸಿದ್ದರೂ ಅಧಿಕಾರಿಗಳು ಅದನ್ನು ಪರಿಗಣಿಸಿಲ್ಲ ಎಂದು ದೂರಿದರು.

ಅರ್ಜಿಗಳನ್ನು ಅವೈಜ್ಞಾನಿಕವಾಗಿ ತಿರಸ್ಕರಿಸುತ್ತಿರುವುದನ್ನು ವಿರೋಧಿಸಿ ಜ.27ರಂದು ಬೆಳಿಗ್ಗೆ 11ಕ್ಕೆ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಾಗುವಳಿದಾರರ ಅರ್ಜಿ ತಿರಸ್ಕಾರ ಮಾಡುತ್ತಿರುವ ವಿಷಯವನ್ನು ಕ್ಷೇತ್ರದ ಶಾಸಕರು ಹಾಗೂ ಸಂಸದರು ಗಂಭೀರವಾಗಿ ಪರಿಗಣಿಸಿ ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.

ಮಲೆನಾಡು ರೈತ ಸಂಘದ ಪ್ರಮುಖರಾದ ತೀ.ನ. ಶ್ರೀನಿವಾಸ್ ಮಾತನಾಡಿ, ‘ಅರಣ್ಯಭೂಮಿ ಹಕ್ಕು ಕಾಯ್ದೆಯಡಿ ಅರ್ಜಿಗಳನ್ನು ಇತ್ಯರ್ಥ ಮಾಡುವಾಗ ಉಪವಿಭಾಗ ಮಟ್ಟದ ಸಮಿತಿಯಲ್ಲಿ ನಾಲ್ಕು ತಾಲ್ಲೂಕು ಪಂಚಾಯಿತಿ ಸದಸ್ಯರು, ಜಿಲ್ಲಾ ಮಟ್ಟದಲ್ಲಿ ನಾಲ್ಕು ಜಿಲ್ಲಾ ಪಂಚಾಯಿತಿ ಸದಸ್ಯರು ಇರಬೇಕು ಎಂಬ ನಿಬಂಧನೆ ಇದೆ. ಈ ಕಾರಣಕ್ಕೆ ಕಾರವಾರ ಜಿಲ್ಲೆಯಲ್ಲಿ ಯಾವುದೇ ಅರ್ಜಿಗಳನ್ನು ಇತ್ಯರ್ಥ ಮಾಡಿಲ್ಲ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಸಮಿತಿ ಮಾಡಿರುವ ಆದೇಶ ಕಾನೂನುಬಾಹಿರ’ ಎಂದರು.

ಅಧಿಕಾರಿಗಳು ರೈತರ ಅರ್ಜಿಗಳನ್ನು ವಜಾ ಮಾಡುವುದೇ ಪ್ರಗತಿ ಎಂದು ಭಾವಿಸಿದ್ದಾರೆ ಎಂದು ದೂರಿದರು.

ಸಮಿತಿಯ ನಾರಾಯಣಪ್ಪ ಹುರುಳಿ, ‘90 ವರ್ಷ ಬದುಕಿರುವ ವ್ಯಕ್ತಿಯನ್ನು ಹುಡುಕುವುದು ಕಷ್ಟ. ಹೀಗಾಗಿ ಮೂರು ತಲೆಮಾರಿನ ಸಾಕ್ಷ್ಯವನ್ನು ಪರಿಗಣಿಸುವಾಗ ಊರಿನ ಆಲದಮರ, ಹುಣಸೆಮರ, ಕೆರೆ ಕಟ್ಟೆಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಮುಖರಾದ ಎನ್.ಡಿ.ವಸಂತಕುಮಾರ್, ರಮೇಶ್ ಐಗಿನಬೈಲು, ರವಿ ಜಂಬೂರುಮನೆ, ಮಂಜಪ್ಪ ಹಿರೇನೆಲ್ಲೂರು, ರವಿ ಬಿಳಿಸಿರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT