ಶನಿವಾರ, ಸೆಪ್ಟೆಂಬರ್ 18, 2021
24 °C
ಮುಖ್ಯ ರಸ್ತೆಗಳಲ್ಲಿ ಗುಂಡಿಗಳಿಂದ ಪೀಕಲಾಟ ಕೆಸರು ಗದ್ದೆಯಾದ ರಸ್ತೆಗಳಲ್ಲಿ ಚಾಲಕರ ಪರದಾಟ

ಶಿವಮೊಗ್ಗ: ಎಲೆಲೆ ರಸ್ತೆ...ಏನವ್ಯವಸ್ಥೆ!

ಗಣೇಶ್‌ ತಮ್ಮಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಅತಿವೃಷ್ಟಿಯಿಂದ ಜಿಲ್ಲೆಯ ಪ್ರಮುಖ ರಸ್ತೆಗಳು ಕೆಸರುಗದ್ದೆಗಳಾಂತಾಗಿವೆ. ಗುಂಡಿಗಳ ಹಾದಿಯಲ್ಲಿ ತಬ್ಬಿಬ್ಬಾಗುವ ವಾಹನ ಚಾಲಕರು, ಸಂಚಾರಕ್ಕೆ ನಿತ್ಯ ಪರದಾಡುತ್ತಿದ್ದಾರೆ.

ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ನಿಲ್ಲುವುದರಿಂದ ಎಷ್ಟು ಆಳ ಇದೆ ಎಂಬುದರ ಅರಿವು ವಾಹನ ಚಾಲಕರಿಗೆ ಇರುವುದಿಲ್ಲ. ಗುಂಡಿಗಳನ್ನು ತಪ್ಪಿಸುವ ಭರದಲ್ಲಿ ಜಾರಿ ಬೀಳುವ ಬೈಕ್‌ ಸವಾರರು ಅಪಘಾತಕ್ಕೆ ಒಳಗುತ್ತಿದ್ದಾರೆ. ಗ್ರಾಮೀಣ, ನಗರ ಭಾಗದ ರಸ್ತೆಗಳು, ಮುಖ್ಯ ಜಿಲ್ಲಾ ರಸ್ತೆ, ಹೆದ್ದಾರಿಗಳೂ ಹಾಳಾಗಿವೆ. ಸಂಚಾರಕ್ಕೆ ಸಂಚಕಾರ ಒಡ್ಡುತ್ತಿವೆ.

ಕೃಷಿ ಉತ್ಪನ್ನ ಸಾಗಣೆಗೆ ತೊಡಕು: ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಹದಗೆಟ್ಟು ಹಳ್ಳಿಗಳ ಜನರ ಬದುಕನ್ನು ದುಸ್ತರಗೊಳಿಸಿವೆ. ಒಂದು ಮಳೆ ಬಂದರೆ ಸಾಕು, ಗ್ರಾಮೀಣ ರಸ್ತೆಗಳ ನೈಜ ದರ್ಶನವಾಗುತ್ತದೆ. ಕೆಲವು ವಾರಗಳಿಂದ ಸುರಿಯುತ್ತಿರುವ ಮಳೆಗೆ ತಾಲ್ಲೂಕಿನ ಹಳ್ಳಿಗಳ ರಸ್ತೆಗಳು ಹದಗೆಟ್ಟಿವೆ. ಗುಂಡಿ ಬಿದ್ದು, ನೀರು ತುಂಬಿ ಸುಗಮ ಸಂಚಾರಕ್ಕೆ ಸಂಚಕಾರ ತಂದಿವೆ. ಹೊಲಗಳಿಗೆ ಹೋಗುವ ರಸ್ತೆಗಳು ಕೆಸರು ಗದ್ದೆಗಳಂತಾಗಿವೆ. ರೈತರು ತಾವು ಬೆಳೆದ ಕೃಷಿ ಉತ್ಪನ್ನಗಳನ್ನು ಸಾಗಿಸಲು ಪರದಾಡುತ್ತಿದ್ದಾರೆ.

ಜನ, ಜಾನುವಾರು ಓಡಾಡುವ ಸ್ಥಳಗಳಲ್ಲಿ ಅಭಿವೃದ್ಧಿ ಕಾಮಗಾರಿ ಮಾಡುವುದಿಲ್ಲ. ಉತ್ತಮ ದಾರಿ ಇರುವೆಡೆ ಮಾತ್ರ ಮಣ್ಣು ಸುರಿದು ಕೈತೊಳೆದುಕೊಳ್ಳುತ್ತಾರೆ. ಸರಿಯಾಗಿ ಕಲ್ಲು, ಮರಳು ಮಿಶ್ರಣ ಮಾಡದೆ ಬಿಡಲಾಗುತ್ತದೆ. ಹೀಗಾಗಿ ರಸ್ತೆಯಲ್ಲಿ ಕೆಲವೇ ತಿಂಗಳಲ್ಲಿ ಕಲ್ಲು ಮೇಲೆ ಬರುತ್ತದೆ. ಭಾರಿ ಮಳೆ ಸುರಿದರೆ ರಸ್ತೆ ಕೆಲಸದ ನೈಜ ಬಣ್ಣ ಬಯಲಾಗುತ್ತದೆ.

ಶಿವಮೊಗ್ಗ ತಾಲ್ಲೂಕಿನ ಹಾರನಹಳ್ಳಿ ಹೋಬಳಿಯ ವಿಠಗೊಂಡನಕೊಪ್ಪ ಊರಮುಂದಿನ ಕೆರೆಯ ಹಳ್ಳಕ್ಕೆ ಸಂಪರ್ಕಿಸುವ ರಸ್ತೆ ಮಳೆಯ ರಭಸಕ್ಕೆ ಕಡಿತಗೊಂಡಿದೆ. ಸ್ವಲ್ಪ ಮಳೆ ಬಂದರೂ ಈ ರಸ್ತೆಯಲ್ಲಿ ಜನರು ಓಡಾಡುವುದು ಕಷ್ಟ. ಗ್ರಾಮ ಪಂಚಾಯಿತಿ, ಶಾಸಕರ ಬಳಿ ಮನವಿ ಮಾಡಿದರೂ ಪ್ರಯೋಜವಾಗಿಲ್ಲ. ಈಗಾಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ತನಿಖೆ ಮಾಡಿ, ಹಳ್ಳ ದುರಸ್ತಿ ಮಾಡಿ ನೀರು ಹೋಗಲು ಕಾಲುವೆ ಮಾಡಿಕೊಡಬೇಕು. ರಸ್ತೆಯನ್ನು ಸರಿಪಡಿಸಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ನಗರದಲ್ಲೂ ರಸ್ತೆಗಳು ಗುಂಡಿಮಯ: ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಒಳ ರಸ್ತೆಗಳಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಮಧ್ಯೆ ಗುಂಡಿ ತೆಗೆದು ಪೈಪ್‌ ಅಳವಡಿಸಿರುವುದು ರಸ್ತೆ ಅವ್ಯವಸ್ಥೆಗೆ ಕಾರಣವಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಸರಿಯಾಗಿ ಮುಚ್ಚದ ಪರಿಣಾಮ ಮಳೆ ನೀರು ನಿಂತು ಕೆಸರಿನ ಹೊಂಡಗಳಾಗಿ ಮಾರ್ಪಟ್ಟಿವೆ. ಕೆಲವೆಡೆ ಅಪೂರ್ಣ ಕಾಮಗಾರಿ ಸಂಚಾರಕ್ಕೆ ತೊಂದರೆ ಮಾಡಿದೆ. ಮಳೆ ಬರುವ ಮುನ್ನ ಧೂಳಿನ ಆಗರವಾಗಿದ್ದ ರಸ್ತೆಗಳು ಈಗ ಕೆಸರಿನ ಮಜ್ಜನ ಮಾಡಿಸುತ್ತಿವೆ.

ನಗರದ ಕೆಲವು ಪ್ರಮುಖ ರಸ್ತೆಗಳು ಸೇರಿ ಒಳ ಪ್ರದೇಶಗಳಲ್ಲಿ ರಸ್ತೆಗಳನ್ನು ಹುಡುಕಿ ವಾಹನ ಸಂಚಾರ ಮಾಡಬೇಕಾದ ಪರಿಸ್ಥಿತಿ ಇದೆ. ರಸ್ತೆ ಹಾಳಾಗಿ ವರ್ಷಗಳೇ ಕಳೆದರೂ ದುರಸ್ತಿಗೆ ಪಾಲಿಕೆ ಅಧಿಕಾರಿಗಳು ಮನಸ್ಸು ಮಾಡಿಲ್ಲ. ಹೀಗಾಗಿ ರಸ್ತೆ ಮಧ್ಯೆ ದೊಡ್ಡ ಗುಂಡಿಗಳು ನಿರ್ಮಾಣವಾಗಿ ಸಂಚಾರಕ್ಕೆ ಅಸಾಧ್ಯದ ಪರಿಸ್ಥಿತಿ ತಂದೊಡ್ಡಿವೆ. ನೀರು ಹರಿದುಹೋಗಲು ಜಾಗವಿಲ್ಲದೆ ರಸ್ತೆಯಲ್ಲೇ ನೀರು ನಿಲ್ಲುತ್ತಿದೆ.

ಶಿವಮೊಗ್ಗ ತಿಲಕ ನಗರ, ಎಲ್‌ಎಲ್‌ಆರ್‌ ರಸ್ತೆ, ದುರ್ಗಿಗುಡಿ, ಪಾರ್ಕ್‌ ಬಡಾವಣೆ, ಓ.ಟಿ.ರಸ್ತೆ, ಸವಳಂಗ, ಬೊಮ್ಮನಕಟ್ಟೆ, ಗೋಪಾಳ ಬಡಾವಣೆ, ಆಲ್ಕೋಳ ವೃತ್ತ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. 

***

ಸುಸ್ಥಿತಿಗೆ ಕಾಂಕ್ರೀಟ್‌ ರಸ್ತೆಗಳೇ ಸೂಕ್ತ

ಕೆ.ಎನ್.ಶ್ರೀಹರ್ಷ

ಭದ್ರಾವತಿ: ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಹಾಳಾಗಿದ್ದರೂ ಈಚೆಗೆ ನಿರ್ಮಿಸಿದ ಕಾಂಕ್ರೀಟ್ ರಸ್ತೆಗಳು ಸುಗಮ ಓಡಾಟಕ್ಕೆ ಒಂದಷ್ಟು ನೆರವಾಗಿವೆ.

‘ಐದಾರು ವರ್ಷಗಳ ಹಿಂದೆ ಡಾಂಬರು ಹಾಕಿದ್ದ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಸಿಸಿ ರಸ್ತೆಗಳು ಸುಸ್ಥಿತಿಯಲ್ಲಿವೆ’ ಎನ್ನುತ್ತಾರೆ ದೊಡ್ಡಗೊಪ್ಪೇನಹಳ್ಳಿ ವಿಶ್ವನಾಥ್.

ಗ್ರಾಮೀಣ ರಸ್ತೆಗಳ ನಿರ್ಮಾಣ ಈಗ ಅಚ್ಚುಕಟ್ಟಾಗಿ ನಡೆದಿದೆ. ಆದರೆ ಈ ಹಿಂದೆ ಮಾಡಿರುವ ರಸ್ತೆಗಳು ಹಾಳಾಗಿವೆ. ಓಡಾಟ ಬಹಳ ಕಷ್ಟಕರ ಎನ್ನುವ ಸ್ಥಿತಿ ಇದೆ ಎನ್ನುತ್ತಾರೆ ಅಂತರಗಂಗೆ ಪಿ.ಬಿ.ಅಶೋಕ್.

‘ವಿವಿಧ ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆಯುತ್ತದೆ. ಅದರಲ್ಲಿ ಗುಣಮಟ್ಟಕ್ಕಿಂತ ಕೆಲಸ ಮುಗಿಸುವ ಒತ್ತಡವೇ ಹೆಚ್ಚಿರುತ್ತದೆ ಈ ಕಾರಣಕ್ಕೆ ರಸ್ತೆಗಳು ಕೆಲವೇ ತಿಂಗಳಲ್ಲಿ ತಮ್ಮ ಆಸಿತ್ವ ಕಳೆದುಕೊಂಡು ಗುಂಡಿ ಬೀಳುತ್ತವೆ’ ಎನ್ನುತ್ತಾರೆ ಶ್ರೀರಾಮನಗರ ಜಗದೀಶ್.

‘ಗ್ರಾಮೀಣ ಭಾಗದ ಮುಖ್ಯರಸ್ತೆಗೆ ಸಂಪರ್ಕ ಸಾಧಿಸುವ ಎಲ್ಲಾ ರಸ್ತೆಗಳು ಉತ್ತಮ ಗುಣಮಟ್ಟದಿಂದ ಕೂಡಿವೆ. ಹಳ್ಳಿಗಳ ನಡುವಿನ ಸಂಪರ್ಕ ರಸ್ತೆಗಳ ಕಾಮಗಾರಿ ಮಾತ್ರ ಕಳಪೆ ಗುಣಮಟ್ಟ ಹೊಂದಿದೆ’ ಎನ್ನುತ್ತಾರೆ ವೀರಾಪುರ ರವಿಕುಮಾರ.

ಸದ್ಯ ಎಸ್‌ಸಿಪಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಎಲ್ಲಾ ರಸ್ತೆಗಳು ಕಾಂಕ್ರೀಟ್ ಹೊಂದಿವೆ. ಹಳ್ಳಿಗಳಲ್ಲಿನ ಕಿಷ್ಕಿಂಧೆ ಜಾಗದ ಕಾರಣ ಸೂಕ್ತ ಸಂಪರ್ಕ ಕೊರತೆ ಎದುರಾಗುತ್ತಿದೆ ಎನ್ನುತ್ತಾರೆ ನಿಂಬೆಗೊಂದಿ ರಾಮಣ್ಣ.

***

ಆನವೇರಿ ರಸ್ತೆ ಮಧ್ಯೆ ಚಂದ್ರನ ಕುಳಿಗಳು!

ಕುಮಾರ್ ಅಗಸನಹಳ್ಳಿ 

ಹೊಳೆಹೊನ್ನೂರು: ಅರಹತೊಳಲು ಕೈಮರದಿಂದ ಆನವೇರಿಗೆ ಹೋಗುವ ಮಾರ್ಗದ ಸುಮಾರು 5ರಿಂದ 6 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ. ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಇಲ್ಲಿ ವಾಹನ ಚಾಲಕರು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. 

ರಸ್ತೆಯಲ್ಲಿ ಮೂಣಕಾಲು ಉದ್ದದ ಗುಂಡಿಗಳು ನಿರ್ಮಾಣವಾಗಿವೆ. 5 ಕಿ.ಮೀ. ಕ್ರಮಿಸಲು ಸುಮಾರು 20ರಿಂದ 30 ನಿಮಿಷ ಬೇಕಾಗುತ್ತದೆ. ಈ ಭಾಗದಲ್ಲಿ ಹೆಚ್ಚು ವಾಹನಗಳು ಸಂಚಾರ ಮಾಡುವುದರಿಂದ ರಾತ್ರಿ ವೇಳೆಯಲ್ಲಿ ವಾಹನ ಸಂಚಾರ ಬಹಳ ಪ್ರಯಾಸದ ಕೆಲಸ. ಆದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಂಡಿದ್ದಾರೆ ಎನ್ನುವುದು ಜನರ ಆರೋಪ.

ಎರಡು ವರ್ಷಗಳಿಂದಲೂ ಗುಂಡಿ ನಿರ್ಮಾಣವಾಗಿದೆ. ಕಳೆದ ಬಾರಿ ಅಧಿಕಾರಿಗಳು ಅಲ್ಲಿಲ್ಲಿ ಸ್ವಲ್ಪ ಮಣ್ಣು ಹಾಕಿಸಿದ್ದರು. ಅದು ಕೆಲವೇ ದಿನಗಳಲ್ಲಿ ಮಾಯವಾಗಿತ್ತು. ನಂತರದ ದಿನಗಳಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರಯಾಣಿಕರು ಹಾಗೂ ವಾಹನ ಚಾಲಕರು ನಿತ್ಯವೂ ಹಿಡಿ ಶಾಪ ಹಾಕುತ್ತಿದ್ದಾರೆ.

ರಾತ್ರಿ ವೇಳೆ ವಾಹನ ಸವಾರರು ಗುಂಡಿ ತಪ್ಪಿಸುವ ಸಮಯದಲ್ಲಿ ಸಣ್ಣಪುಟ್ಟ ಅಪಘಾತಗಳು ನಡೆದಿವೆ. ಮಳೆ ಬಂದಾಗ ಬೈಕ್ ಸವಾರರು ಆಯ ತಪ್ಪಿ ನೆಲಕ್ಕೆ ಬಿದಿದ್ದಾರೆ. ಅಧಿಕಾರಿಗಳು ಈ ಕಡೆ ತಲೆ ಹಾಕಿಲ್ಲ ಎಂದು ವಾಹನ ಚಾಲಕ ರಾಜೇಶ ದೂರುತ್ತಾರೆ.

ಈ ಭಾಗದಲ್ಲಿ ಹೆಚ್ಚಾಗಿ ರೈತರ ಟ್ರ್ಯಾಕ್ಟರ್ ಹಾಗೂ ಟಿಲ್ಲರ್‌ಗಳು ಸಂಚರಿಸುತ್ತವೆ. ಆದಷ್ಟು ಬೇಗ ದುರಸ್ತಿ ಮಾಡದಿದ್ದರೆ ಸಮಯ ವ್ಯರ್ಥವಾಗುತ್ತದೆ ಎನ್ನುತ್ತಾರೆ ರೈತರು.

ಎರಡು ದಿನಗಳ ಹಿಂದಷ್ಟೆ ಹನುಮಂತಾಪುರದ ಬಳಿ ಬೈಕ್‌ ಸವಾರನೊಬ್ಬ ಗುಂಡಿತಪ್ಪಿಸಲು ಹೋಗಿ ಎದುರಿನಿಂದ ಬರುತ್ತಿದ್ದ ಶಿಕ್ಷಕರೊಬ್ಬರ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

‘ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನ ವಾಗಿಲ್ಲ. ಸದ್ಯಕ್ಕೆ ಗುಂಡಿ ಮುಚ್ಚಲು ವ್ಯವಸ್ಥೆ ಮಾಡಲು ಹೇಳಿದರೂ ಸರಿಯಾಗಿಲ್ಲ’ ಎನ್ನುತ್ತಾರೆ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಎಚ್.ಆರ್. ಬಸವರಾಜಪ್ಪ.

***

ನದಿಪಾತ್ರಗಳಲ್ಲಿ ರಸ್ತೆ ಅಗೆತ

ಅಡಿಕೆಗೆ ಉತ್ತಮ ಬೆಲೆ ಸಿಕ್ಕ ನಂತರ ಅಡಿಕೆ ಬೆಳೆ ಕ್ಷೇತ್ರ ಗಣನೀಯವಾಗಿ ಹೆಚ್ಚಳವಾಗಿದೆ. ಹೊಳೆ, ನದಿ, ನಾಲೆಗಳ ಪಾತ್ರಗಳಲ್ಲಿ ಹಲವು ಕಿ.ಮೀ. ದೂರ ಪೈಪ್‌ಲೈನ್‌ ಅಳವಡಿಸಿ, ನೀರಿನ ಸೌಕರ್ಯ ಕಲ್ಪಿಸಿಕೊಂಡಿದ್ದಾರೆ. ಪೈಪ್‌ಲೈನ್‌ ಮಾರ್ಗ ಸಾಗುವಾಗ ಎದುರಾಗುವ ಹೆದ್ದಾರಿ, ಜಿಲ್ಲಾ, ಗ್ರಾಮೀಣ ರಸ್ತೆಗಳನ್ನು ಅಗೆದಿದ್ದಾರೆ. ಉತ್ತಮ ಸಿಮೆಂಟ್‌, ಡಾಂಬರು ರಸ್ತೆಗಳನ್ನು ಅಗೆದ ಪರಿಣಾಮ ವೇಗವಾಗಿ ಬರುವ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿವೆ.

ಶಿವಮೊಗ್ಗದಿಂದ ಹೊನ್ನಾಳಿಗೆ ಸಾಗುವ ಮಾರ್ಗಮಧ್ಯೆ ಹೊಳಲೂರುವರೆಗೂ ಇಂತಹ ಹತ್ತಾರು ತಗ್ಗುಗಳು ಎದುರಾಗುತ್ತವೆ. ತುಂಗಭದ್ರಾ ನದಿಯಿಂದ ಸಾಗುವ ಪೈಪ್‌ಗಳನ್ನು ಹಾಕಿ, ಮಣ್ಣು ಮುಚ್ಚದೇ ಬಿಟ್ಟಿದ್ದಾರೆ.

***

ಗೃಹ ಸಚಿವರ ತವರಲ್ಲಿ ಹಳ್ಳಹಿಡಿದ ಹಳ್ಳಿ ರಸ್ತೆಗಳು

ರಿ.ರಾ. ರವಿಶಂಕರ

ರಿಪ್ಪನ್‌ಪೇಟೆ: ಕ್ಷೇತ್ರ ಮರುವಿಂಗಡನೆಯಲ್ಲಿ ಹೊಸನಗರ ಕ್ಷೇತ್ರ ವಿಭಜನೆಗೊಂಡು ತೀರ್ಥಹಳ್ಳಿ–ಸಾಗರ ಕ್ಷೇತ್ರಗಳಿಗೆ ವಿಲೀನಗೊಂಡ ನಂತರ ಗಡಿ ಭಾಗದ ಗ್ರಾಮದ ರಸ್ತೆಗಳ ಸಮಸ್ಯೆಗೆ ಪರಿಹಾರ ಇಲ್ಲವಾಗಿದೆ.

ತೀರ್ಥಹಳ್ಳಿ ಕ್ಷೇತ್ರಕ್ಕೆ ಸೇರಿದ ವರನಹೊಂಡ ಭೂತರಾಯ ದೇವಸ್ಥಾನದಿಂದ ಕಣಬಂದೂರು, ಕಾರಗೋಡು ಎಡಗುಡ್ಡೆ ಮಾರ್ಗವಾಗಿ ಜಂಬಳ್ಳಿ ಹಾಗೂ ಕೋಟೆ ತಾರಿಗಾ ಸಂಪರ್ಕದ 7 ಕಿ.ಮೀ. ರಸ್ತೆ 6 ದಶಕದಿಂದ ಅಲ್ಲಲ್ಲಿ ಡಾಂಬರು ಕಂಡಿದೆ. 3 ಕಿ.ಮೀ. ರಸ್ತೆ ಇಂದಿಗೂ ಸಂಪೂರ್ಣ ಹೊಂಡಗುಂಡಿಗಳಿಂದ ತುಂಬಿದ ಕಚ್ಚಾರಸ್ತೆಯಾಗಿಯೇ ಉಳಿದಿದೆ. ಈ ವ್ಯಾಪ್ತಿಯಲ್ಲಿ ಬರುವ 4–6 ಗ್ರಾಮಗಳಲ್ಲಿರುವ ಸುಮಾರು 200–300 ಮನೆಗಳಿವೆ.

ಪ್ರತಿ ಚುನಾವಣೆ ಸಮಯದಲ್ಲಿ ಈ ಗ್ರಾಮದ ಜನರ ಬೇಡಿಕೆ, ‘ನಮ್ಮೂರಿಗೆ ಟಾರು ರಸ್ತೆ ಬೇಕು’ ಎನ್ನುವುದು. ಅಂಥ ಎಷ್ಟೋ ಚುನಾವಣೆಗಳು ಬಂದು ಹೋದರೂ ಸಮಸ್ಯೆ ಜೀವಂತವಾಗಿಯೇ ಇದೆ.

ಕಾರಗೋಡು–ಬೆಳಕೋಡು ಮಧ್ಯೆ ಕರಡಿಗಾ ಗ್ರಾಮದಲ್ಲಿ ಹರಿಯುವ ಹಳ್ಳಕ್ಕೆ ಇಂದಿಗೂ ಸ್ಥಳೀಯರು ಲೋಟ ಮರದ ದಿಮ್ಮಿಗಳಿಂದ ತಾವೇ ನಿರ್ಮಿಸಿಕೊಂಡಿರುವ ಸಾರವೆಯಲ್ಲಿ ಸಂಚರಿಸುತ್ತಿದ್ದಾರೆ. ಈ ಹಳ್ಳಕ್ಕೆ ಕಾಲು ಸಂಕ ನಿರ್ಮಿಸಿಕೊಡಲು 8 ದಶಕಗಳಿಂದ ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಿಕ್ಕಿದ್ದು ಭರವಸೆಯಷ್ಟೆ. ಈ ಹಳ್ಳಕ್ಕೆ ಸೇತುವೆ ನಿರ್ಮಾಣವಾದರೆ ಕಾರಗೋಡು, ಬೆಳಕೋಡು, ರಿಪ್ಪನ್ ಪೇಟೆ, ಬರುವೆ, ಗವಟೂರು, ಕೋಟೆ ತಾರಿಗಾ ಗ್ರಾಮಗಳ ಸಮೀಪ ಮಾರ್ಗ ಆಗಲಿದೆ.

ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ತೀರ್ಥಹಳ್ಳಿ ರಸ್ತೆಯ ಬರುವೆ–ಬೆಟ್ಟಿನಕೆರೆ, ಬೇಳಕೋಡು ರಸ್ತೆಯ ದುಃಸ್ಥಿತಿಯು ಭಿನ್ನವಾಗಿ ಇಲ್ಲ. ಶಾಲಾ ಮಕ್ಕಳಿಗೆ 10ರಿಂದ 12 ಕಿ.ಮೀ ಬಳಸು ಹಾದಿಯೇ ಗತಿ.

ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವೆ ಬಸ್ ನಿಲ್ದಾಣದಿಂದ ಬರುವೆ, ಬೆಟ್ಟಿನಕೆರೆ, ಬೆಳಕೋಡು, ಕರಡಿಗ, ಹಾರನಜೆಡ್ಡು ಸಂಪಳ್ಳಿ ಸಾಗುವ ಮುಖ್ಯ ರಸ್ತೆಯು ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದು, ಜನ ಸಂಚಾರಕ್ಕೂ ಯೋಗ್ಯವಾಗಿಲ್ಲ. ರಿಪ್ಪನ್ ಪೇಟೆ ಹಾಗೂ ಹೆದ್ದಾರಿಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ಈ ಮಾರ್ಗದಲ್ಲಿ ಬರುವ ಹತ್ತಾರು ಮಜರೆ ಹಳ್ಳಿಗಳಲ್ಲಿ ಸುಮಾರು 300ರಿಂದ 400 ಕುಟುಂಬಗಳು ವಾಸ ಇವೆ. ಇಲ್ಲಿ ನಿತ್ಯವೂ ಶಾಲಾ, ಕಾಲೇಜು, ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ 600ರಿಂದ 700 ಜನರು ಸಂಚರಿಸುತ್ತಾರೆ.

ಈ ರಸ್ತೆಯು ಸಾಗರ ಹಾಗೂ ತೀರ್ಥಹಳ್ಳಿ ಕ್ಷೇತ್ರದ ಗಡಿ ರಸ್ತೆ. ಎರಡು ಕ್ಷೇತ್ರಗಳ ಶಾಸಕರ ಬಳಿ ರಸ್ತೆ ಡಾಂಬರೀಕರಣಕ್ಕೆ 5–6 ದಶಕಗಳಿಂದ ಬೇಡಿಕೆ ಸಲ್ಲಿಸಿದ್ದು ಅರಣ್ಯರೋದನವಾಗಿದೆ. ಸಾಗರ ಕ್ಷೇತ್ರದ ವ್ಯಾಪ್ತಿಗೆ 1.5 ಕಿಲೋಮೀಟರ್ ಹಾಗೂ ತೀರ್ಥಹಳ್ಳಿ ಕ್ಷೇತ್ರಕ್ಕೆ 1.5 ಕಿಲೋಮೀಟರ್ ರಸ್ತೆ ಡಾಂಬರು ಕಾಣಬೇಕಿದೆ ಎಂಬುದು ಸ್ಥಳೀಯರ ಒತ್ತಾಯ.

***

ಮುಳುಗಡೆ ಸಂತ್ರಸ್ತರಿಗಿಲ್ಲ ರಸ್ತೆ

ತ್ಯಾಗರ್ತಿ: ಸಾಗರ ತಾಲ್ಲೂಕಿನ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುತ್ತಾಳಗದ್ದೆ, ಮತ್ತಿಕೆರೆ, ಗಾಮದಕೊಡ್ಲು ಹಾಗೂ ಹಳವಗೋಡು ಗ್ರಾಮದಲ್ಲಿ ವಾಸಿಸುತ್ತಿರುವ 35 ಕುಟುಂಬಗಳು 1965ರಲ್ಲಿ ಲಿಂಗನಮಕ್ಕಿ ಆಣೆಕಟ್ಟಿನಿಂದಾಗಿ ಜಮೀನು ಮುಳುಗಡೆಗೊಂಡು ಸರ್ಕಾರದ ಎಲ್ಲಾ ಅನುದಾನಗಳಿಂದ ವಂಚಿತರಾಗಿದ್ದಾರೆ. ಇವರಿಗೆ ಉತ್ತಮ ರಸ್ತೆಯೂ ಮರೀಚಿಕೆಯಾಗಿದೆ.

ಮುಳುಗಡೆ ಪ್ರದೇಶಗಳಿಂದ ಬಂದ ನಂತರ ಈ ಗ್ರಾಮಗಳಲ್ಲಿ ಹರಸಾಹಸಪಟ್ಟು ಬದುಕನ್ನು ಕಟ್ಟಿಕೊಂಡಿದ್ದಾರೆ. ಇಲ್ಲಿಯ ಜನರು ವ್ಯವಹಾರಕ್ಕಾಗಿ ತ್ಯಾಗರ್ತಿ ಹಾಗೂ ಸಾಗರವನ್ನು ಅವಲಂಬಿಸಿದ್ದಾರೆ. ಮುತ್ತಾಳಗದ್ದೆಯಿಂದ ತ್ಯಾಗರ್ತಿ ಮುಖ್ಯರಸ್ತೆಗೆ ಬರಲು ಸುಮಾರು 10 ಕಿ.ಮೀ. ಅಸಮರ್ಪಕ ರಸ್ತೆಯಲ್ಲೇ ಕ್ರಮಿಸಬೇಕಾಗುತ್ತದೆ. ಮಕ್ಕಳು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣಕ್ಕಾಗಿ ತ್ಯಾಗರ್ತಿಗೆ ಬರಬೇಕಾಗಿದ್ದು, ಪದವಿ ಪೂರ್ವ ಹಾಗೂ ಪದವಿ ವಿದ್ಯಾಭ್ಯಾಸಕ್ಕೆ ಸಾಗರಕ್ಕೆ ಹೋಗಬೇಕು‌. ಮಳೆಗಾಲದಲ್ಲಿ ಗದ್ದೆಯಂತಾಗುವ ಈ ರಸ್ತೆಯಲ್ಲಿ ಮಕ್ಕಳು ಹೋಗುವುದು ಕಷ್ಟಕರ. ಆದರೂ ಈ ಗ್ರಾಮದ ಕೆಲವು ಮಕ್ಕಳು ಕೆಎಎಸ್, ಎಸ್‍ಡಿಸಿ, ಎಫ್‍ಡಿಸಿ, ಶಿಕ್ಷಕ ಹಾಗೂ ಎಂಜಿನಿಯರಿಂಗ್ ಮುಗಿಸಿ ನೌಕರಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ.

‘ಮುತ್ತಾಳಗದ್ದೆ ಗ್ರಾಮದವನಾದ ನಾನು ತಂದೆ–ತಾಯಿಯ ಶ್ರಮ ಶಿಕ್ಷಕರ ಸಹಕಾರದಿಂದ ಕೆಎಎಸ್ ಮುಗಿಸಿ ಇಂದು ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನಂತೆಯೇ ಉನ್ನತ ವಿಧ್ಯಾಭ್ಯಾಸ ಪಡೆಯುವ ಆಸೆ ಹೊಂದಿರುವ ಮಕ್ಕಳಿಗೆ ಸಹಕಾರಿಯಾಗುವಂತೆ ಸಮರ್ಪಕ ರಸ್ತೆಯನ್ನು ನಿರ್ಮಿಸಲು ಅಗತ್ಯ ಸಹಕಾರ ನೀಡುತ್ತೇನೆ’ ಎನ್ನುತ್ತಾರೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ‌ ಮಂಜುನಾಥಸ್ವಾಮಿ.

ಈ ವರ್ಷದ ಅತಿಯಾದ ಮಳೆಯಿಂದ ಗ್ರಾಮಗಳ ಸಂಪರ್ಕದ ರಸ್ತೆಯೂ ಕೊಚ್ಚಿಹೋಗಿದೆ. ಶಾಲೆ ಪ್ರಾರಂಭಗೊಂಡರೆ ಮಕ್ಕಳನ್ನು ವಿದ್ಯಾ‌ಭ್ಯಾಸಕ್ಕೆ ಕಳುಹಿಸುವುದು ಹೇಗೆ ಎಂಬುದು ಪೋಷಕರ ಚಿಂತೆ. ರೈತರು ಬೆಳೆದ ಬೆಳೆಗಳ ಸಾಗಣೆ, ವೃದ್ಧರು ಅನಾರೋಗ್ಯಕ್ಕೀಡಾದಾಗ ಅವರನ್ನು ವಾಹನದಲ್ಲಿ ಕರೆದೊಯ್ಯಲು ಹರಸಾಹಸಪಡಬೇಕು. ಸಮರ್ಪಕ ರಸ್ತೆ ನಿರ್ಮಿಸಿ ಎಂಬುದು ಮುಳುಗಡೆ ಸಂತ್ರಸ್ತರ ಆಗ್ರಹ.

***

ನಗರದ ಬಹುತೇಕ ಬಡಾವಣೆಗಳಲ್ಲಿ ಟಾರು ಹಾಕದ, ಗುಂಡಿ ಬಿದ್ದ, ಕಳಪೆ ಕಾಮಗಾರಿಯ ರಸ್ತೆಗಳು ಕಾಣಸಿಗುತ್ತವೆ. ಅಧಿಕಾರಿಗಳು, ಜನಪ್ರತಿನಿಧಿಗಳು ದುರಸ್ತಿಗೆ ಕ್ರಮ ಕೈಗೊಂಡಿಲ್ಲ.

ಎಚ್‌.ಪಿ.ಗಿರೀಶ್‌, ವಿನೋಬನಗರ

***

ಮಳೆಗೆ ಊರೊಳಗೆ ಸಂಚರಿಸುವುದೇ ಕಷ್ಟವಾಗಿದೆ. ಮಳೆಗಾಲದಲ್ಲಿ ದ್ವಿಚಕ್ರ ಮತ್ತು ಸಣ್ಣ ವಾಹನಗಳು ಸಂಚಾರಕ್ಕೆ ಪರದಾಡಬೇಕಾದ ಸ್ಥಿತಿ ಇದೆ. ಜನಪ್ರತಿನಿಧಿಗಳ ಗಮನಕ್ಕೆ ಬಂದರೂ ಸಮಸ್ಯೆ ಬಗೆಹರಿದಿಲ್ಲ.

ಸದಾಶಿವ, ವಿಠಗೊಂಡನಕೊಪ್ಪ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು