ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ‘ಕಾಲು ಸಂಕ’: ತೂಗುಗತ್ತಿಯ ಮೇಲೆ ಕಾಡಂಚಿನ ಜನರ ನಡಿಗೆ

Published 7 ಆಗಸ್ಟ್ 2023, 7:10 IST
Last Updated 7 ಆಗಸ್ಟ್ 2023, 7:10 IST
ಅಕ್ಷರ ಗಾತ್ರ

ನಾಗರಾಜ ಹುಲಿಮನೆ

ಶಿವಮೊಗ್ಗ:‌ ಕಾಡು ತೊರೆಗಳ ಜಾಡು, ಸದಾ ಹಸಿರಿನಿಂದ ಕೂಡಿದ ಸಮೃದ್ಧಿಯ ಬೀಡು ಮಲೆನಾಡು. ಜಿಲ್ಲೆಯು ಕೃಷಿ, ಶಿಕ್ಷಣ, ಪ್ರವಾಸೋದ್ಯಮ, ವೈದ್ಯಕೀಯ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ‌ಆದರೆ ಮಳೆಗಾಲದಲ್ಲಿ ಜಿಲ್ಲೆಯ ಒಳ ಹಳ್ಳಿಗಳ ಜನರ ದಿನನಿತ್ಯದ ಬದುಕಿನ ನಡಿಗೆ ತೂಗುಗತ್ತಿಯ ಮೇಲಿದೆ.

ಇಲ್ಲಿಯ ಕಾಡಂಚಿನ ನಿವಾಸಿಗಳು ಇಂದಿಗೂ ಮೂಲಸೌಲಭ್ಯಗಳ ಕೊರತೆಯಿಂದ ಹೊಂದಾಣಿಕೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಕೊರತೆಯಲ್ಲಿ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಕಾಲು ಸಂಕವೂ ಒಂದು. 

ಜಿಲ್ಲೆಯ ಬಹುತೇಕ ಹಳ್ಳಿಗಳಿಗೆ ಕಾಲುಸಂಕಗಳ ಕೊರತೆ ಇದೆ. ಕೆಲವು ಭಾಗದಲ್ಲಿ ನಿರ್ವಹಣೆ ಇಲ್ಲದೆ ಸಂಕಗಳು ಹಾಳಾಗಿವೆ. ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳ, ಕೊಳ್ಳ, ತೊರೆಗಳನ್ನು ದಾಟುವವರು ಜೀವ ಕೈಯಲ್ಲಿ ಹಿಡಿದು ಕಾಲು ಸಂಕ ದಾಡುವ ಸ್ಥಿತಿ ಇದೆ. ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಕಾಲುಸಂಕಗಳ ಸಮಸ್ಯೆ ಹೆಚ್ಚಾಗಿದೆ.

ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಇಲ್ಲಿ ಹರಿಯುವ ತುಂಗಭದ್ರಾ, ಶರಾವತಿ, ಕುಮುದ್ವತಿ ಮತ್ತು ವರದಾ ನದಿಗಳು ಜಿಲ್ಲೆಯ ನೈಸರ್ಗಿಕ ಸೌಂದರ್ಯ ಹೆಚ್ಚಿಸಿವೆ. ಅದೇ ರೀತಿ ಮಳೆಗಾಲದಲ್ಲಿ ಕಾಲು ಸಂಕಗಳು ಕಾಡು, ಬೆಟ್ಟ, ಹಳ್ಳ–ಕೊಳ್ಳಗಳ ಆಚೆ ಜನವಸತಿ ಇರುವ ಕಾಡ ನಡುವಿನ ವಾಸಿಗಳಿಗೆ ಆಸರೆಯ ಊರು ಗೋಲುಗಳಾಗಿ ನೆರವಾಗಿವೆ. ಆದರೆ ಕೆಲವೊಮ್ಮೆ ಅಪಾಯವನ್ನೂ ತಂದೊಡ್ಡಿವೆ.

ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿ ಮತ್ತು ಮಲೆನಾಡಿನ ಕಾಡಂಚಿನಲ್ಲಿ ಅಂದಾಜು 4,954 ಕುಗ್ರಾಮಗಳಿವೆ. ಜನವಸತಿ ಗುಡ್ಡಗಾಡು ಪರ್ವತ ಭಾಗದಲ್ಲಿ ಹೆಚ್ಚಾಗಿ ಇರುವುದರಿಂದ ಮಳೆಗಾಲದಲ್ಲಿ ತುಂಬಿ ಹರಿಯುವ ಸಣ್ಣ ತೊರೆಗಳನ್ನು ಶಾಲಾ– ಕಾಲೇಜು ಮಕ್ಕಳು ಸ್ಥಳೀಯ ಕಾಲು ಸೇತುವೆಗಳ ಮೇಲೆ ದಾಟುವುದು ಕಷ್ಟಕರ ಮತ್ತು ಸವಾಲಾಗಿದೆ.

ಚಿಕ್ಕ ಚಿಕ್ಕ ಸಂಕಗಳ ಮೂಲಕ ನದಿ, ಹಳ್ಳಗಳನ್ನು ದಾಟುವುದೇ ಹರಸಾಹಸ. ಕಾಲು ಜಾರಿದರೆ ಅಪಾಯ ಖಚಿತ. ಇಂತಹ ಕಾಲು ಸಂಕಗಳಿಂದ ಬಿದ್ದು ಮಕ್ಕಳು, ಮಹಿಳೆಯರು ಸೇರಿದಂತೆ ಹಲವು ಜೀವಗಳು ಬಲಿಯಾಗಿವೆ. 

ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2022ರಲ್ಲಿ ಕಾಲುಸಂಕಗಳ ನಿರ್ಮಾಣಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದರು. ಬೈಂದೂರು ಸೇರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 634 ಕಾಲುಸಂಕಗಳ ನಿರ್ಮಾಣಕ್ಕೆ ₹ 35 ಕೋಟಿ ಅನುದಾನ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ಕೂಡ ನೀಡಿದೆ ಎಂದು ಹೇಳಲಾಗಿತ್ತು. ಆದರೆ ವರ್ಷ ಕಳೆದರೂ ಜಿಲ್ಲೆಯ ಬಹುತೇಕ ಕಾಡಂಚಿನ ಹಳ್ಳಿಗಳು ಕಾಲು ಸಂಕಗಳ ಸೌಲಭ್ಯ ಕಾಣದೆ ಸಮಸ್ಯೆಯಲ್ಲಿ ದಿನ ದೂಡುತ್ತಿವೆ.

ಕಾಸರವಳ್ಳಿ ಶ್ರೀನಿವಾಸ್‌
ಕಾಸರವಳ್ಳಿ ಶ್ರೀನಿವಾಸ್‌
ಬೇಳೂರು ಗೋಪಾಲಕೃಷ್ಣ
ಬೇಳೂರು ಗೋಪಾಲಕೃಷ್ಣ
ಕಾರ್ಗಲ್‌ ಸಮೀಪದ ಮೂಡವಳ್ಳಿ ಗ್ರಾಮದ ಕಾಲು ಸಂಕ (ಸಂಗ್ರಹ ಚಿತ್ರ)
ಕಾರ್ಗಲ್‌ ಸಮೀಪದ ಮೂಡವಳ್ಳಿ ಗ್ರಾಮದ ಕಾಲು ಸಂಕ (ಸಂಗ್ರಹ ಚಿತ್ರ)
ಸಾಗರ ತಾಲ್ಲೂಕಿನ ಪಡುಬೀಡು ಗ್ರಾಮದ ಕಾಲು ಸಂಕ (ಸಂಗ್ರಹ ಚಿತ್ರ)
ಸಾಗರ ತಾಲ್ಲೂಕಿನ ಪಡುಬೀಡು ಗ್ರಾಮದ ಕಾಲು ಸಂಕ (ಸಂಗ್ರಹ ಚಿತ್ರ)
ಹಳ್ಳಿಗಾಡು ಪ್ರದೇಶದ ಜನ ಜೀವನಕ್ಕೆ ಆಸರೆ ಆದ ಕಾಲು ಸಂಕ ಸಮಸ್ಯೆಗೆ ಯೋಜನೆ ರೂಪಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆ ವತಿಯಿಂದ ವರದಿ ತರಿಸಿಕೊಂಡು ಕ್ರಮಕ್ಕೆ ಸೂಚಿಸಲಾಗುವುದು.
ಲೋಖಂಡೆ ಸ್ನೇಹಲ್ ಸುಧಾಕರ್ ಜಿ.ಪಂ. ಸಿಇಒ
ಹೊಸನಗರ ತಾಲ್ಲೂಕಿನ ಕಾಲು ಸಂಕದ ಸಮಸ್ಯೆ ಹೆಚ್ಚಿದೆ. ಅವುಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಬಗ್ಗೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಲ್ಲಿ ಚರ್ಚಿಸಲಾಗಿದೆ. 100ಕ್ಕೂ ಹೆಚ್ಚು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ಗೋಪಾಲಕೃಷ್ಣ ಬೇಳೂರು ಶಾಸಕ
ಕಾಲುಸಂಕ ನಿರ್ಮಾಣ ಕಾಮಗಾರಿ ವಿಳಂಬಗೊಳ್ಳುತ್ತಿದೆ. ತಕ್ಷಣ ರಾಜ್ಯ ಸರ್ಕಾರ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಬೇಕು.
ಕಾಸರವಳ್ಳಿ ಶ್ರೀನಿವಾಸ್‌ ಜಿ.ಪಂ. ಮಾಜಿ ಸದಸ್ಯ ತೀರ್ಥಹಳ್ಳಿ

ಇಂದಿಗೂ ಕಾಲಸಂಕವೇ ಸಂಪರ್ಕ ಸಾಧನ ರವಿ ನಾಗರಕೊಡಿಗೆ ಹೊಸನಗರ: ಗುಡ್ಡಗಾಡು ಪ್ರದೇಶವನ್ನು ಹೊಂದಿರುವ ತಾಲ್ಲೂಕಿನಲ್ಲಿ ಕಾಲು ಸಂಕದ ಸಂಕಟ ಹೇಳತೀರದು. ಇಂದಿಗೂ ಹತ್ತಾರು ಹಳ್ಳಿಗಳ ಸಂಪರ್ಕಕ್ಕೆ ಕಾಲಸಂಕವೇ ಸಾಧನವಾಗಿದೆ. ಹತ್ತು ವರ್ಷದ ಹಿಂದೆ ಶಾಲಾ ಬಾಲಕಿಯೊಬ್ಬಳು ಸಂಕದಿಂದ ಬಿದ್ದು ಹಳ್ಳ ಪಾಲಾದ ನಂತರ ಕಾಲು ಸಂಕ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದ್ದರೂ ಇನ್ನೂ ಪರಿಣಾಮಕಾರಿ ಪ್ರಗತಿ ಸಾಧಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಗ್ರಾಮ ಪಂಚಾಯಿತಿ ಆದಿಯಾಗಿ ಜಿಲ್ಲಾ ಪಂಚಾಯಿತಿ ಕೂಡ ಈ ವಿಚಾರದಲ್ಲಿ ಅಸಡ್ಡೆ ತೋರಿದ್ದು ಸಂಪರ್ಕ ಮಾರ್ಗವಿಲ್ಲದೆ ಕಾಲು ಸಂಕದಲ್ಲೇ ಗ್ರಾಮಸ್ಥರು ಸರ್ಕಸ್‌ನಂತೆ ನಡೆಯಬೇಕು ಎಂಬುದು ಜನರ ದೂರು. ತಾಲ್ಲೂಕಿನಲ್ಲಿ 96 ಕಾಲುಸಂಕವನ್ನು ಗುರುತಿಸಲಾಗಿದ್ದು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ 26 ಕಾಲುಸಂಕದ ಕಾಮಗಾರಿ ಮುಗಿದು ಸಂಚಾರಕ್ಕೆ ಮುಕ್ತವಾಗಿದೆ. ಇನ್ನೂ 67 ಸಂಕಗಳ ಕಾಮಗಾರಿ ತೆವಳುತ್ತ ಸಾಗಿದೆ. ಇದನ್ನು ಹೊರತು ಪಡಿಸಿ ಶಾಲಾ ಮಕ್ಕಳ ಓಡಾಟದ ರೈತರ ಹೊಲಗದ್ದೆ ನಡುವೆ ಸಂಪರ್ಕಕ್ಕೆ ನೂರಾರು ಸಂಕಗಳು ಇವೆ. ತಾಲ್ಲೂಕಿನ ಕುಗ್ರಾಮಗಳಲ್ಲಿ ಕಾಲು ಸಂಕದಲ್ಲೇ ಶಾಲಾ ಮಕ್ಕಳ ದಿನನಿತ್ಯದ ಓಡಾಡಬೇಕಿದೆ. ಇವುಗಳನ್ನು ಆದ್ಯತೆ ಮೇರೆಗೆ ನರೇಗಾದಲ್ಲಿ ಸೇರಿಸಲಾಗಿದ್ದರೂ ಪ್ರಗತಿ ಕಂಡುಬಂದಿಲ್ಲ. ಜಾರಿ ಬಿದ್ದು ಸಾವು: ತಾಲ್ಲೂಕಿನಲ್ಲಿ ಕಾಲುಸಂಕ ದುರಂತದಲ್ಲಿ ಇಬ್ಬರು ಸಾವು ಕಂಡಿದ್ದಾರೆ. ಎರಡು ವರ್ಷಗಳ ಹಿಂದೆ ಚಿಕ್ಕಜೇನಿಯಲ್ಲಿ ಶಾಲಾ ಬಾಲಕಿಯೊಬ್ಬಳು ಸಂಕ ದಾಟುವ ವೇಳೆ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಳು. ಹತ್ತು ವರ್ಷಗಳ ವರ್ಷದ ಹಿಂದಷ್ಟೆ ಮುಂಬಾರು ಬಳಿ ವೆಂಕಟನಾಯ್ಕ ಎಂಬ ವೃದ್ಧ ತಮ್ಮ ಜಮೀನಿಗೆ ಹೋಗುತ್ತಿದ್ದಾಗ ಕಾಲು ಜಾರಿ ಬಿದ್ದು ಅಸುನೀಗಿದ್ದ ಘಟನೆ ನಡೆದಿದೆ. ಆದರೂ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡಿಲ್ಲ.

ನಿರ್ಮಾಣ ಸಾಮಗ್ರಿ ಪೂರೈಕೆಗೆ ಗುತ್ತಿಗೆದಾರರ ಹಿಂದೇಟು ನಿರಂಜನ ವಿ. ತೀರ್ಥಹಳ್ಳಿ: ತಾಲ್ಲೂಕಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕಾಲುಸಂಕ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ನರೇಗಾ ಅನುದಾನದಲ್ಲಿ ಶೇ 40ರಷ್ಟು ನಿರ್ಮಾಣ ಸಾಮಗ್ರಿ ಕೊಂಡುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾಗುತ್ತಿದ್ದು ಗುತ್ತಿಗೆದಾರರು ಸಾಮಗ್ರಿ ಪೂರೈಕೆಗೆ ಹಿಂದೇಟು ಹಾಕುತ್ತಿದ್ದಾರೆ. ಮಲೆನಾಡಿನಲ್ಲಿ ಅನಾದಿಕಾಲದಿಂದ ಇರುವ ಮರದ ದಿಮ್ಮಿ ಹಲಗೆ ಹಗ್ಗ ಚಪ್ಪಡಿ ಕಾಲುಸಂಕಕ್ಕೆ ಮುಕ್ತಿ ಸಿಕ್ಕಿಲ್ಲ. ಶಾಲಾ ಮಕ್ಕಳು ಪ್ರತಿನಿತ್ಯ ಇಂತಹ ಸಂಕಗಳನ್ನು ದಾಟಿ ಪಟ್ಟಣವನ್ನು ಸೇರಬೇಕಾಗಿದೆ. ಪ್ರತಿ ವರ್ಷದ ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದ ಜನರು ಆತಂಕದಲ್ಲಿ ಜೀವನ ದೂಡುವ ಪರಿಸ್ಥಿತಿ ಇಂದಿಗೂ ಜೀವಂತ. 2022ರಲ್ಲಿ ಸುರಿದ ಅಕಾಲಿಕ ಮಳೆಗೆ ಮೇಲಿನ ತೂದೂರು ಗ್ರಾಮದ ರೈತ ಶಂಕರಪ್ಪ ಕಾಲುಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟಿದ್ದರು. 2021ರಲ್ಲಿ ಅಗಸರಕೊಪ್ಪ ಗ್ರಾಮದ ಮರಡಿಹಳ್ಳ ದಾಟುವಾಗ ಜೋಸ್ಪಿನ್‌ ಮಚಾದೋ ಎಂಬ ಮಹಿಳೆ ಮೃತಪಟ್ಟಿದ್ದರು. ಇಂತಹ ಹತ್ತಾರು ಪ್ರಕರಣಗಳು ಜೀವನ್ಮರಣ ಹೋರಾಟಗಳು ತಾಲ್ಲೂಕಿನಲ್ಲಿ ಸಂಭವಿಸಿವೆ. ಜಾನುವಾರುಗಳು ಹಳ್ಳದಲ್ಲಿ ತೇಲಿ ಹೋದ ಬಹಳಷ್ಟು ಪ್ರಕರಣಗಳು ವರದಿಯಾಗಿವೆ. ಅನೇಕ ವರ್ಷಗಳಿಂದ ಬೇಡಿಕೆ ಇದ್ದರೂ ವಿಧಾನಸಭೆಯಲ್ಲಿ ಕಾಲುಸಂಕದ ಬಗ್ಗೆ ಅಷ್ಟಾಗಿ ಚರ್ಚೆಗಳು ನಡೆದಿರಲಿಲ್ಲ. ಆಗುಂಬೆ ಸಮೀಪದ ಕೆಂದಳಬೈಲು ಗ್ರಾಮದಲ್ಲಿ 2020ರಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಆಶಿಕಾ ದೊಡ್ಲು ಹಳ್ಳ ದಾಟುವಾಗ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ರಾಜ್ಯದಲ್ಲಿಯೇ ಸುದ್ದಿಯಾಗಿತ್ತು. ಆಶಿಕಾ ಸಾವು ಅಧಿವೇಶನದಲ್ಲಿ ಚರ್ಚೆಯಾಗುತ್ತಿದ್ದಂತೆ ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ₹ 100 ಕೋಟಿ ಅನುದಾನವನ್ನು ನೀಡುವ ಮೂಲಕ ಕಾಲುಸಂಕ ಅಭಿವೃದ್ಧಿಗೆ ಆದ್ಯತೆ ನೀಡಿದ್ದರು. 3 ವರ್ಷಗಳಿಂದ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 170ಕ್ಕೂ ಹೆಚ್ಚು ಕಾಲುಸಂಕ ಬೇಡಿಕೆ ಇದೆ. ಇಲ್ಲಿಯವರೆಗೆ 30 ಕಾಲು ಸಂಕಗಳ ಕಾಮಗಾರಿ ಪೂರ್ಣಗೊಂಡಿದೆ. ಹಣಗೆರೆ ಬಾಂಡ್ಯ ಸಾಲೂರು ಬೆಜ್ಜವಳ್ಳಿ ಹೆಗ್ಗೋಡು ಗುಡ್ಡೇಕೊಪ್ಪ ತ್ರಿಯಂಬಕಪುರ ಆಗುಂಬೆ ಹೊನ್ನೇತ್ತಾಳು ಪಂಚಾಯಿತಿಗಳಲ್ಲಿ ಹೆಚ್ಚು ಸಂಕಗಳು ಬೇಡಿಕೆ ಇವೆ. ನರೇಗಾ ಅನುದಾನದಲ್ಲಿ 6 ಅಡಿ ಅಗಲದ ಕಾಲುಸಂಕ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT