ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ಜನ, ವಾಹನ ಸಂಚಾರಕ್ಕೆ ತೊಂದರೆ

ಪ್ರಮುಖ ರಸ್ತೆ ಬದಿಯಲ್ಲೇ ತರಕಾರಿ, ಹಣ್ಣು ಮಾರಾಟಕ್ಕೆ ಅವಕಾಶ
Published 24 ಜೂನ್ 2023, 7:01 IST
Last Updated 24 ಜೂನ್ 2023, 7:01 IST
ಅಕ್ಷರ ಗಾತ್ರ

ಸಾಗರ: ನಗರದ ಹೃದಯ ಭಾಗದಲ್ಲಿರುವ ಚಾಮರಾಜಪೇಟೆ ಬಡಾವಣೆಯ ಗಾಂಧಿ ಮಂದಿರದ ಎದುರಿನ ರಸ್ತೆ ಬದಿಯಲ್ಲಿಯೇ ತರಕಾರಿ, ಹಣ್ಣು ಮಾರಾಟಕ್ಕೆ ಅವಕಾಶ ಕೊಟ್ಟಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಭಾಗದಲ್ಲಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು, ರಸ್ತೆ ಬದಿಯಲ್ಲೇ ವ್ಯಾಪಾರಕ್ಕೆ ಅವಕಾಶ ಕೊಟ್ಟಿರುವುದರಿಂದ ವ್ಯಾಪಾರಸ್ಥರು ರಸ್ತೆಯ ಅರ್ಧ ಭಾಗವನ್ನು ತಮ್ಮ ವಹಿವಾಟಿಗೆ ಬಳಸಿಕೊಳ್ಳುತ್ತಿದ್ದು, ಜನ ಸಂಚಾರಕ್ಕೂ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.

ಆರಂಭದಲ್ಲಿ ಸಾಗರ ನಗರಕ್ಕೆ ಹೊಂದಿಕೊಂಡಂತೆ ಇರುವ ಹಳ್ಳಿಗಳಲ್ಲಿ ತಾಜಾ ತರಕಾರಿ ಬೆಳೆಯುವ ಕೆಲವು ರೈತರಿಗೆ ಮಾತ್ರ ಇಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು. ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ ಮಾತ್ರ ಸಮಯ ನಿಗದಿಪಡಿಸಲಾಗಿತ್ತು. ಅವರಿಗೆ ಉತ್ತಮ ವ್ಯಾಪಾರವಾಗುತ್ತಿತ್ತು. ಇದನ್ನು ಗಮನಿಸಿದ ಪೇಟೆಯ ಕೆಲವು ವ್ಯಾಪಾರಿಗಳು ರೈತರ ಸೋಗಿನಲ್ಲಿ ಇಲ್ಲಿಗೆ ಬಂದು ವ್ಯಾಪಾರ ಆರಂಭಿಸಿದ್ದಾರೆ. ಇದರಿಂದ ಕೆಲವೇ ರೈತರು ವ್ಯಾಪಾರ ಮಾಡುತ್ತಿದ್ದ ಸ್ಥಳದಲ್ಲಿ ಪ್ರತಿದಿನ ತರಕಾರಿ, ಹಣ್ಣು ಮಾರಾಟಕ್ಕಾಗಿ ನೂಕುನುಗ್ಗಲು ಉಂಟಾಗುತ್ತಿದೆ. ಗಾಂಧಿ ಮಂದಿರದ ಎದುರಿನ ವೃತ್ತದಿಂದ ಪುರಸಭೆ ಕಚೇರಿಯ ಒಂದು ಪ್ರವೇಶ ದ್ವಾರದ ಎದುರಿನವರೆಗೂ ವ್ಯಾಪಾರಸ್ಥರ ಸಾಲು ಬೆಳೆದಿದೆ.

ತರಕಾರಿ, ಹಣ್ಣು ಖರೀದಿಸುವವರು ತಮ್ಮ ವಾಹನಗಳನ್ನು ರಸ್ತೆಯ ಒಂದು ಬದಿಗೆ ನಿಲ್ಲಿಸದೆ ವ್ಯಾಪಾರಸ್ಥರ ಎದುರೇ ನಿಲ್ಲಿಸಿಕೊಂಡು ವಹಿವಾಟು ಮಾಡುತ್ತಿದ್ದಾರೆ. ಪೊಲೀಸರು ಅನೇಕ ಬಾರಿ ಎಚ್ಚರಿಸಿದರೂ ಈ ಪ್ರವೃತ್ತಿ ಮುಂದುವರಿದಿದೆ. ಇದರಿಂದಾಗಿ ಜನರು, ವಾಹನಗಳು ಓಡಾಡಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ರಸ್ತೆಯ ಬದಿಯಲ್ಲಿ ಗ್ರಾಮೀಣ ಭಾಗದ ರೈತರಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ನೀಡಬೇಕು. ಅವರ ಸಂಖ್ಯೆ ಹೆಚ್ಚಾದಲ್ಲಿ ನಗರದ ಹೃದಯ ಭಾಗದ ರಸ್ತೆಯ ಬದಿ ಬದಲು ಬದಲಿ ವ್ಯವಸ್ಥೆ ಮಾಡುವತ್ತ ಸ್ಥಳೀಯ ಆಡಳಿತ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಚಾಮರಾಜಪೇಟೆ ಬಡಾವಣೆಯ ರಸ್ ಬದಿಯಲ್ಲಿ ವ್ಯಾಪಾರಕ್ಕೆ ಅವಕಾಶ ಕೊಟ್ಟಿರುವುದರಿಂದ ಎದುರಿನ ಕಾಂಪ್ಲೆಕ್ಸ್‌ನಲ್ಲಿರುವ ವ್ಯಾಪಾರಸ್ಥರಿಗೆ ಕಿರಿಕಿರಿ ಉಂಟಾಗುತ್ತಿದೆ. ಗಣಪತಿ ಬ್ಯಾಂಕ್ ವೃತ್ತದಿಂದ ನೆಹರೂ ಮೈದಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡೂ ಬದಿಗಳಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು ಅಲ್ಲಿಗೆ ಇಲ್ಲಿನ ವ್ಯಾಪಾರಸ್ಥರನ್ನು ಸ್ಥಳಾಂತರಿಸುವುದು ಸೂಕ್ತ. ಪ್ರಕಾಶ್ ಮಾಲೀಕರು ಪ್ರಕಾಶ್ ಹ್ಯಾಂಡಿಕ್ರಾಫ್ಟ್ಸ್‌ ಸಾಗರ ರೈತರು ಮಾತ್ರ ರಸ್ತೆಯ ಬದಿಯಲ್ಲಿ ವ್ಯಾಪಾರ ನಡೆಸಿದರೆ ತೊಂದರೆಯಾಗುತ್ತಿರಲಿಲ್ಲ. ಆದರೆ ಕೆಲ ವ್ಯಾಪಾರಿಗಳೂಇಲ್ಲಿ ಸೇರಿಕೊಂಡಿದ್ದು ಪ್ರತಿದಿನ ವ್ಯಾಪಾರ ಸ್ಥಳಕ್ಕಾಗಿ ಪೈಪೋಟಿ ನಡೆಯುತ್ತಿರುವುದರಿಂದ ಅಸಹನೀಯ ವಾತಾವರಣ ನಿರ್ಮಾಣವಾಗಿದೆ. ಶೇಷಪ್ಪ ಮಾಲೀಕರು ಪಾಲೇಕರ್ ಫುಟ್‌ವೇರ್ ಸಾಗರ ತರಕಾರಿ ಹಣ್ಣು ಮಾರಾಟಗಾರರನ್ನು ರೈತರು ವ್ಯಾಪಾರಸ್ಥರು ಎಂದು ವಿಂಗಡಿಸುವುದು ಸರಿಯಲ್ಲ. ನಮಗೂ ಬದುಕಿದೆ. ನಮ್ಮ ವ್ಯಾಪಾರಕ್ಕೆ ಪರ್ಯಾಯ ಜಾಗ ಒದಗಿಸಿದರೆ ನಾವು ಅಲ್ಲಿಗೇ ತೆರಳಲು ಸಿದ್ಧರಿದ್ದೇವೆ.

-ಅಲ್ತಾಫ್ ತರಕಾರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT