ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುವರ್ಣ ಮಹೋತ್ಸವ ಹೊಸ್ತಿಲಲ್ಲಿ ಶಾಲೆ: ಕಾಡುತ್ತಿದೆ ಸಿಬ್ಬಂದಿ ಕೊರತೆ

1973ರಲ್ಲಿ ಪ್ರಾರಂಭವಾದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಾಲೇಜು ವಿಭಾಗದಲ್ಲಿಲ್ಲ ಅಗತ್ಯ ಸಿಬ್ಬಂದಿ
Last Updated 30 ಸೆಪ್ಟೆಂಬರ್ 2021, 3:45 IST
ಅಕ್ಷರ ಗಾತ್ರ

ಆನವಟ್ಟಿ: ಇಲ್ಲಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ ಸುವರ್ಣ ಮಹೋತ್ಸವ ಹೊಸ್ತಿಲಲ್ಲಿದೆ. ಆದರೆ ಶಿಕ್ಷಕರು, ಸಿಬ್ಬಂದಿ ಕೊರತೆಯಿಂದ ನಲುಗುತ್ತಿದೆ.

1973ರಲ್ಲಿ ಪ್ರಾರಂಭವಾದಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಾಲೇಜು ವಿಭಾಗದಲ್ಲಿ ಕಳೆದ ವರ್ಷ ಪ್ರಥಮ ಪಿಯುಸಿಗೆ 793 ವಿದ್ಯಾರ್ಥಿಗಳು ದಾಖಲಾಗಿದ್ದರೆ, ಈ ವರ್ಷ 1050 ವಿದ್ಯಾಥಿಗಳು ಪ್ರವೇಶ ಪಡೆದಿದ್ದಾರೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬೋಧಕರು ಇಲ್ಲ. ಒಬ್ಬರೂ ಕಾಯಂ ‘ಡಿ’ ದರ್ಜೆ ನೌಕರರು ಇಲ್ಲ. ಇದರಿಂದ ಉಪನ್ಯಾಸಕರೇ ಕಸ ಗುಡಿಸುವ ಕೆಲಸ ಮಾಡಬೇಕಾಗಿದೆ.

ಗುತ್ತಿಗೆ ಆಧಾರದ ಮೇಲೆ ಇಬ್ಬರು ‘ಡಿ’ ದರ್ಜೆ ನೌಕರರು ಸೇರಿ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡುತ್ತಿದ್ದಾರೆ. ಸರ್ಕಾರದಿಂದ ನೇಮಕವಾದ ಕಾಯಂ ಎಸ್‍ಡಿಎ, ಕಂಪ್ಯೂಟರ್ ಆಪರೇಟರ್, ಅಂಟೆಂಡರ್, ಜವಾನ ಸೇರಿ ಒಬ್ಬರೂ ಸಿಬ್ಬಂದಿ ಇಲ್ಲ.

ಕಳೆದ ವರ್ಷಕ್ಕಿಂತ 300 ವಿದ್ಯಾರ್ಥಿಗಳ ಪ್ರವೇಶ ಹೆಚ್ಚಳವಾಗಿದ್ದು, ಪ್ರಥಮ ಹಾಗೂ ದ್ವಿತೀಯ ಪಿಯುಸಿ ಸೇರಿ ಒಟ್ಟು 1803 ವಿದ್ಯಾರ್ಥಿಗಳು ಇದ್ದಾರೆ. ಜಿಲ್ಲೆಯಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ 2ನೇ ಕಾಲೇಜು ಎಂಬ ಹೆಗ್ಗಳಿಕೆ ಈ ಕಾಲೇಜಿಗಿದೆ.

ಕಾಲೇಜಿನಲ್ಲಿ 18 ಕಾಯಂ ಉಪನ್ಯಾಸಕರು ಹಾಗೂ 16 ಅತಿಥಿ ಉಪನ್ಯಾಸಕರು ಇದ್ದಾರೆ. ವಿದ್ಯಾರ್ಥಿಗಳ ಬೋಧನೆಗೆ ಯಾವುದೇ ತೊಂದರೆ ಆಗದಂತೆ ಉಪನ್ಯಾಸಕರು ಹೆಚ್ಚುವರಿ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಕಾಲೇಜು ಅಭಿವೃದ್ಧಿ ಸಮಿತಿಯವರು.

ಬೇಕಿರುವ ಸಿಬ್ಬಂದಿ‌:

8 ಉಪನ್ಯಾಸಕರು, 2 ಎಸ್‍ಡಿಎ, 4 ಜವಾನರು, 1 ಕಂಪ್ಯೂಟರ್ ಆಪರೇಟರ್, 2 ಅಟೆಂಡರ್ ಕಾಯಂ ಹುದ್ದೆ ನೇಮಕವಾಗಬೇಕಿದೆ.‘ಡಿ’ ದರ್ಜೆ ನೌಕರರು ಇಲ್ಲದೇ ಕಾಲೇಜು ಸ್ವಚ್ಛತೆ ನಿರ್ವಹಣೆ ಕಷ್ಟವಾಗಿದ್ದು, ವಿದ್ಯಾರ್ಥಿಗಳು ಸೇರಿ ಕೆಲವೊಮ್ಮೆ ಉಪನ್ಯಾಸಕರು ಕಸ ಗುಡಿಸಿಕೊಳ್ಳಬೇಕಾದ ಅನಿವಾರ್ಯ ಇದೆ.

ಈ ಕಾಲೇಜಿಗೆ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಬಂದ ಎಚ್. ಜಯಪ್ಪ ಅವರು 12 ವರ್ಷ ಉಪನ್ಯಾಸಕರಾಗಿ ಮತ್ತು 16 ವರ್ಷ ಪ್ರಾಂಶುಪಾಲರಾಗಿ 28 ವರ್ಷಗಳ ಕಾಲ ಶಿಸ್ತುಬದ್ಧ ಶಿಕ್ಷಣಕ್ಕೆ ಒತ್ತು ನೀಡಿದರು. ಅವರ ಜೊತೆ ಉಪನ್ಯಾಸಕರ ವೃಂದದ ಪರಿಶ್ರಮದಿಂದ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಗುರತಿಸಿಕೊಂಡಿದೆ ಜೂನಿಯರ್ ಕಾಲೇಜು ವಿಭಾಗ.

ಇದೇ ಪರಂಪರೆಯನ್ನು ಉಳಿಸಿಕೊಂಡು ಹೋಗುತ್ತಿರುವ ಪ್ರಾಂಶುಪಾಲ ಜಾನ್ಯಾನಾಯ್ಕ ಹಾಗೂ ಉತ್ತಮ ಬೋಧಕರ ವೃಂದ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ಪಕ್ಕದ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ವಿದ್ಯಾರ್ಥಿಗಳು ಆನವಟ್ಟಿ ಕೆಪಿಎಸ್ ಶಾಲೆಗೆ ಸೇರುತ್ತಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ, ಡೆಸ್ಕ್ ಹಾಗೂ ಕೊಠಡಿಗಳ ಕೊರತೆ ಇದೆ ಎನ್ನುತ್ತಾರೆ ಕಾಲೇಜು ಅಭಿವೃದ್ಧಿ ಸಮಿತಿಯವರು.

ಶಾಸಕ ಕುಮಾರ್ ಬಂಗಾರಪ್ಪ ಅವರು ಆನವಟ್ಟಿಯನ್ನು ಮಾದರಿ ಶೈಕ್ಷಣಿಕ ಕೇಂದ್ರ ಮಾಡುವ ನಿಟ್ಟಿನಲ್ಲಿ, ಈಗಾಗಲೇ ₹ 9 ಲಕ್ಷ, ಇತರ ಕೆಲಸಗಳಿಗೆ ₹ 10 ಲಕ್ಷ, ಹಾಗೂ ನೂತನ ಕೊಠಡಿಗಳ ನಿರ್ಮಾಣಕ್ಕೆ ₹ 2 ಕೋಟಿ ಅನುದಾನ ಮಂಜೂರು ಮಾಡಿಸಿದ್ದಾರೆ.
ಮಧುಕೇಶ್ವರ,ಸಿಡಿಸಿ ಸದಸ್ಯ

ಉಪನ್ಯಾಸಕರ ಹಾಗೂ ವಿವಿಧ ಸಿಬ್ಬಂದಿ ಕೊರತೆ ಬಗ್ಗೆ ಇಲಾಖೆ ಹಾಗೂ ಶಾಸಕರ ಗಮನಕ್ಕೆ ತಂದಿದ್ದು, ಶಾಸಕ ಕುಮಾರ್ ಬಂಗಾರಪ್ಪ ಅವರು ಸಿಬ್ಬಂದಿ ಕೊರತೆ ನೀಗಿಸುವ ಎಂದು ಭರವಸೆ ನೀಡಿದ್ದಾರೆ.
ಜಾನ್ಯಾನಾಯ್ಕ,ಪ್ರಾಂಶುಪಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT