ಶನಿವಾರ, ಫೆಬ್ರವರಿ 4, 2023
28 °C
ಡಬಲ್ ಎಂಜಿನ್ ಸರ್ಕಾರದ ವೈಫಲ್ಯ: ಸಿದ್ದರಾಮಯ್ಯ l ಶರಾವತಿ ಸಂತ್ರಸ್ತರ ಪರ ನಡೆದ ಜನಾಕ್ರೋಶ ಪಾದಯಾತ್ರೆ

ಶರಾವತಿ ಸಂತ್ರಸ್ತರ ಸಂಕಷ್ಟ ಕೇಳಲು ನ್ಯಾಯಾಲಯಕ್ಕೂ ಆಗಲಿಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡಿಸಲು ಡಬಲ್ ಎಂಜಿನ್ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ. ಅವರನ್ನು ಪ್ರತಿವಾದಿ ಗಳನ್ನಾಗಿ ಮಾಡದ ಕಾರಣ ವಿಚಾರಣೆ ವೇಳೆ ಸಂತ್ರಸ್ತರ ಸಂಕಷ್ಟ ಕೇಳಲು ನ್ಯಾಯಾಲಯಕ್ಕೂ ಆಗಲಿಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಶರಾವತಿ ಸಂತ್ರಸ್ತರ ಪರವಾಗಿ ಸೋಮವಾರ ಕೆಪಿಸಿಸಿ ಹಿಂದುಳಿದ ವರ್ಗಗಳ ಅಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ಪಕ್ಷದಿಂದ ಆಯೋಜಿಸಿದ್ದ ಜನಾಕ್ರೋಶ ಪಾದಯಾತ್ರೆ ನಂತರ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಶರಾವತಿ ಸಂತ್ರಸ್ತರ ಸಮಸ್ಯೆ ಬಹಳ ವರ್ಷಗಳದ್ದು. ಅದನ್ನು ಬಗೆಹರಿಸಲು ನಮ್ಮ ಸರ್ಕಾರದ ಅವಧಿಯಲ್ಲಿ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನಗೋಪಾಲ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದೆವು. 7,000 ಸಂತ್ರಸ್ತ ಕುಟುಂಬಗಳಿಗೆ 9,945 ಎಕರೆ ಅರಣ್ಯ ಜಮೀನು ಕೊಡಲು ಸಿದ್ಧತೆ ನಡೆದಿತ್ತು. ಅರಣ್ಯ ಸಂರಕ್ಷಣೆ ಕಾಯ್ದೆ ಜಾರಿಗೆ ಮುನ್ನವೇ ಸಂತ್ರಸ್ತರು ಅಲ್ಲಿ
ವಾಸವಿರುವುದರಿಂದ ಅವರಿಗೆ ಹಕ್ಕುಪತ್ರ ಕೊಡಲು ಕೇಂದ್ರದ ಅನುಮತಿ ಬೇಕಿಲ್ಲ ಎಂದು ಸಮಿತಿ ಶಿಫಾರಸು ಮಾಡಿತ್ತು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಾರದ ಕಾರಣ ಅವರಿಗೆ ಹಕ್ಕುಪತ್ರ ಕೊಡಲು ಆಗಲಿಲ್ಲ’ ಎಂದು ಅವರು ತಿಳಿಸಿದರು.

ಭೂಮಿ ಹಕ್ಕು ಕೊಟ್ಟರೆ ಶೇ 40ರಷ್ಟು ಕಮಿಷನ್ ಸಿಗುವುದಿಲ್ಲ. ಅದೇ
ರಸ್ತೆ ಮಾಡಿದರೆ ಸಿಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿಯವರದ್ದು. ಅಂತೆಯೇ ಸಂತ್ರಸ್ತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೋರ್ಟಿಗೆ ಅಲೆಸಿದ್ದು ಸಾಧನೆ: ‘ಅರಣ್ಯ ಸಮಿತಿ ಮುಂದೆ ಬಂದ 93,000 ಬಗರ್‌ಹುಕುಂ ಅರ್ಜಿಗಳ ಪೈಕಿ 73,000 ಅರ್ಜಿದಾರರಿಗೆ ನೋಟಿಸ್ ಕೊಟ್ಟು ಬೆಂಗಳೂರಿನ ಕೋರ್ಟಿಗೆ ಅಲೆದಾಡಿಸಿದ್ದೇ ಬಿಜೆಪಿಯವರ ಸಾಧನೆ’ ಎಂದು ಮಧು ಬಂಗಾರಪ್ಪ ದೂರಿದರು.

ಅಡಿಕೆಗೆ ಪ್ರತ್ಯೇಕ ಮಂಡಳಿ: ಡಿಕೆಶಿ

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಅಡಿಕೆಗೆ ಪ್ರತ್ಯೇಕ ಮಂಡಳಿ ರಚಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದರು.

‘ಹಸಿರು ಶಾಲು ಹಾಕಿಕೊಂಡು ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದವರು ಕೈಗಾರಿಕೆಗಳ ಸ್ಥಾಪನೆಗೆ ಅರಣ್ಯ ಭೂಮಿ ಕೊಡುತ್ತಾರೆ. ಆದರೆ, ಶರಾವತಿ ಸಂತ್ರಸ್ತರಿಗೆ ಇರುವ ಭೂಮಿ ಉಳಿಸಿಕೊಡಲಿಲ್ಲ. ಮಲೆನಾಡಿನ ರೈತರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ಬಗ್ಗೆ ಕೆಪಿಸಿಸಿಯಿಂದ ರಚಿಸಿದ್ದ ಸಮಿತಿ ವರದಿ ನೀಡಿದೆ. ಪಕ್ಷ ಅಧಿಕಾರಕ್ಕೆ ಬಂದರೆ ಆದ್ಯತೆ ಮೇಲೆ ಪರಿಹರಿಸಲಿದ್ದೇವೆ’ ಎಂದು ಹೇಳಿದರು.

ಪಾದಯಾತ್ರೆಗೆ ಭಾರಿ ಸ್ಪಂದನೆ

ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಮುಂದಿಟ್ಟುಕೊಂಡು ಶಿವಮೊಗ್ಗ ತಾಲ್ಲೂಕಿನ ಆಯನೂರಿನಿಂದ ಶಿವಮೊಗ್ಗಕ್ಕೆ ಸೋಮವಾರ ಬೆಳಿಗ್ಗೆ ನಡೆದ ಜನಾಕ್ರೋಶ ಪಾದಯಾತ್ರೆಗೆ ಭರ್ಜರಿ ಸ್ಪಂದನೆ ದೊರೆಯಿತು.

ಸಾವಿರಾರು ಜನರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. 21.5 ಕಿ.ಮೀ ದೂರದ ಈ ಪಾದಯಾತ್ರೆಗೆ ಆಯನೂರಿನಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಚಾಲನೆ ನೀಡಿದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೆಜ್ಜೆ ಹಾಕಿದರು.

ಮುಳುಗಡೆ ಸಂತ್ರಸ್ತರ ಕುಟುಂಬದವರು, ಕಾಂಗ್ರೆಸ್ ಸದಸ್ಯರು, ಪದಾಧಿಕಾರಿಗಳು ಹಾಗೂ ಮುಖಂಡರು ಮಧು ಬಂಗಾರಪ್ಪ ಅವರ ಜೊತೆಗೆ ಹೆಜ್ಜೆ ಹಾಕಿದರು. ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು